ಚಿಕ್ಕಮಗಳೂರು: ಶ್ರೀಸಾಯಿ ಬಾಬಾ ಅವರ ೯೯ನೆಯ ಹುಟ್ಟುಹಬ್ಬದ ಪ್ರಯುಕ್ತ ಪುಷ್ಪಾಲಂಕೃತ ಭಾವಚಿತ್ರದ ಮೆರವಣಿಗೆ ನಗರದ ರಾಜಬೀದಿಗಳಲ್ಲಿ ನಿನ್ನೆ ಸಂಜೆ ನಡೆಯಿತು.
ಕಾಮಧೇನು ಗಣಪತಿ ದೇವಸ್ಥಾನದಿಂದ ಸಂಜೆ ಮಂಗಳವಾದ್ಯದೊಂದಿಗೆ ಆರಂಭಗೊಂಡ ಶ್ರೀಸತ್ಯಸಾಯಿ ಬಾಬಾರ ಮೆರವಣಿಗೆಯಲ್ಲಿ ಸಮವಸ್ತ್ರಧಾರಿ ಸಾಯಿಭಕ್ತರು ನೂರಾರು ಸಂಖ್ಯೆಯಲ್ಲಿ ಶಿಸ್ತುಬದ್ಧವಾಗಿ ಭಜನೆ ಸಂಕೀರ್ತನೆಯೊಂದಿಗೆ ಹೆಜ್ಜೆ ಹಾಕಿದರು. ರತ್ನಗಿರಿರಸ್ತೆ, ಎಂ.ಜಿ.ರಸ್ತೆ ಮೂಲಕ ಸಾಯಿಮಂದಿರ ತಲುಪಿದ ಮೆರವಣಿಗೆಯಲ್ಲಿ ಜನ್ಮದಿನೋತ್ಸವ ಸಮಿತಿ ಅಧ್ಯಕ್ಷ ಎಂ.ಆರ್.ನಾಗರಾಜ್, ಶ್ರೀಸತ್ಯಸಾಯಿ ಸೇವಾ ಸಂಸ್ಥೆಗಳ ಅಧ್ಯಕ್ಷ ಬಿ.ಪಿ.ಶಿವಮೂರ್ತಿ, ಜಿಲ್ಲಾ ಮಹಿಳಾ ಸಂಯೋಜಕಿ ಶಶಿಕಲಾ, ದಿವಾಕರ್ ಮುಂಚೂಣಿಯಲ್ಲಿದ್ದರು.
ಸಾಯಿ ಮಧುವನ ಬಡಾವಣೆಯ ಶ್ರೀಸತ್ಯಸಾಯಿ ಸೇವಾಕ್ಷೇತ್ರದಲ್ಲಿ ಶ್ರೀಸಾಯಿ ಬಾಬಾ ಅವರು ೯೯ನೆಯ ಜನ್ಮ ದಿನೋತ್ಸವವನ್ನು ಪ್ರಶಾಂತಿ ಧ್ವಜಾರೋಹಣ ನೆರವೇರಿಸಿ ಮಂದಿರದಲ್ಲಿ ಜ್ಯೋತಿ ಪ್ರಜ್ವಲನಗೊಳಿಸಿ ಶನಿವಾರ ಬೆಳಗ್ಗೆ ೫.೩೦ಕ್ಕೆ ಆರಂಭಗೊಂಡ ವಿವಿಧ ಕಾರ್ಯಕ್ರಮಗಳು ತಡರಾತ್ರಿ ರhಲಾದೊಂದಿಗೆ ಪೂರ್ಣಗೊಂಡಿತು. ಝಗಮಗಿಸುವ ವಿದ್ಯುದ್ದೀಪಾಲಂಕಾರ, ರಂಗವಲ್ಲಿಯ ರತ್ನಗಂಬಳಿ, ಪುಷ್ಪಾಲಂಕೃತ ಮಂಟಪದ ವಿಶೇಷ ಅಲಂಕಾರ ಗಮನಸೆಳೆಯಿತು.
ಶ್ರೀ ಸಾಯಿ ಸತ್ಯನಾರಾಯಣಸ್ವಾಮಿ ಸಾಮೂಹಿಕಪೂಜೆ ೩೬ದಂಪತಿಗಳು ನೆರವೇರಿಸಿದರು. ಸೇವಾಕ್ಷೇತ್ರದ ಕಾರ್ಯದರ್ಶಿ ಟಿ.ಪಿ.ಭೋಜೇಗೌಡ ಜನ್ಮದಿನೋತ್ಸವದ ಅಂಗವಾಗಿ ನವೆಂಬರ್ ೧೭ರಿಂದ ೨೩ರವರೆಗೆ ಗಾಳಿಪೂಜೆಯಲ್ಲಿ ನಡೆದ ಬೃಹತ್ ಆರೋಗ್ಯ ಶಿಬಿರ, ಆಧ್ಯಾತ್ಮ ಸಾಧನಾಶಿಬಿರ ಹಾಗೂ ಅನ್ನಪೂರ್ಣ ವೃದ್ಧಾಶ್ರಮದಲ್ಲಿ ನಡೆದ ಸೇವಾ ಕಾರ್ಯದ ವರದಿ ನೀಡಿದರು. ಮಧ್ಯಾಹ್ನ ನಾರಾಯಣಸೇವೆ, ವಸ್ತ್ರವಿತರಣೆ, ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು.
ಸಂಜೆ ಭಜನೆ, ಭಕ್ತಿಗೀತೆಗಳ ಸಂಕೀರ್ತನೆ ನಡಯಿತು. ಬಾಲವಿಕಾಸ ಮಕ್ಕಳತಂಡ ಶಿವನ ಒಡ್ಡೋಲಗದಲ್ಲಿ ಶಿರಡಿಸಾಯಿ, ಸತ್ಯಸಾಯಿ ಮತ್ತು ಪ್ರೇಮಸಾಯಿ ಅವತಾರಗಳನ್ನು ವಿವರಿಸುವ ರೂಪಕ ಜನಮನ ಸೆಳೆಯಿತು. ಈ ಹಿಂದೆ ಬೆಂಗಳೂರಿಗೆ ಭೇಟಿ ನೀಡಿದ್ದ ಶ್ರೀಸತ್ಯಸಾಯಿ ಬಾಬಾ ಅವರು ಕನ್ನಡ ಭಾಷೆಯಲ್ಲಿ ನೀಡಿದ್ದ ದಿವ್ಯೋಪನ್ಯಾಸದ ವಿಡಿಯೋ ಪ್ರದರ್ಶನ ಮಾಡಲಾಯಿತು.
ಅಹಂಕಾರ, ದೂರಾಲೋಚನೆಗಳು ಮಾನವೀಯತೆಯಿಂದ ನಮ್ಮನ್ನು ದೂರ ಮಾಡುತ್ತದೆ. ಕ್ರೋಧ ದೂರವಾದರೆ ಸೌಖ್ಯ. ಅಲ್ಪವಾದ ನಾವು ಅನಂತವಾದ ಜಗತ್ತಿನಲ್ಲಿ ಅಹಂಕಾರ ಪಡಬಾರದು. ಅಭಿಷ್ಟೆಗಳು ಹಿತಿಮಿತಿಯಲ್ಲಿರಲಿ. ಲೋಭತ್ವ ಬೇಡ, ತ್ಯಾಗ ಇರಲಿ, ಭೋಗವೇ ದೊಡ್ಡರೋಗ, ತ್ಯಾಗವೇ ನಿಜ ಆರೋಗ್ಯ. ಪರೋಪಕಾರವೇ ಪುಣ್ಯ, ಅಪಕಾರವೇ ಪಾಪ. ನಿಸ್ವಾರ್ಥಭಾವದಿಂದ ನಿರ್ಮಲ ಚಿಂತನೆಯಿಂದ ಭಗವಂತನನ್ನು ಧ್ಯಾನಿಸಬೇಕು. ಅವನಲ್ಲಿರುವ ಶಾಶ್ವತ ಶಾಂತಿ ಮತ್ತು ಆನಂದವನಷ್ಟೇ ಕೇಳಬೇಕೆ ಹೊರತು ಹಣ, ಐಶ್ವರ್ಯ ಮತ್ತಿತರರ ಕ್ಷುಲ್ಲಕ ಬೇಡಿಕೆಗಳನ್ನಿಟ್ಟು ಭಿಕ್ಷುಕರಾಗಬಾರದು ಎಂಬ ದಿವ್ಯಸಂದೇಶ ಬಾಬಾ ನೀಡಿದರು.
ವಿಧಾನಪರಿಷತ್ ಸದಸ್ಯ ಎಸ್.ಎಲ್.ಭೋಜೇಗೌಡ ಮಂದಿರಕ್ಕೆ ಭೇಟಿ ನೀಡಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದು, ಶ್ರೀ ಸತ್ಯಸಾಯಿ ಸೇವಾಸಮಿತಿಗಳ ಜಿಲ್ಲಾಧ್ಯಕ್ಷ ಬಿ.ಪಿ.ಶಿವಮೂರ್ತಿ, ಟ್ರಸ್ಟ್ ಅಧ್ಯಕ್ಷ ಎಂ.ಆರ್.ನಾಗರಾಜ್, ಉಪಾಧ್ಯಕ್ಷ ಡಾ.ಚಂದ್ರಶೇಖರ್ ಮತ್ತು ಡಾ.ಜೆ.ಪಿ.ಕೃಷ್ಣೇಗೌಡ, ಕಾರ್ಯದರ್ಶಿ ಎಲ್.ಎಚ್.ಅಂಕೋಲೇಕರ್, ಟಿ.ಪಿ.ಭೋಜೇಗೌಡ, ವೆಂಕಟೇಶ್ ಮತ್ತಿತರರು ಗೌರವ ಸಮರ್ಪಿಸಿದರು.
Grand procession of Sri Sathya Sai Baba