ಚಿಕ್ಕಮಗಳೂರು: ಒಕ್ಕಲಿಗರ ಸಂಸ್ಕೃತಿ, ಸಂಸ್ಕಾರವನ್ನು ಯುವ ಪೀಳಿಗೆಗು ಕಲಿಸಿ ಸಮಾಜಮುಖಿ ಕೆಲಸಗಳನ್ನು ಮಾಡಬೇಕೆಂದು ನಾಗಮಂಗಲ ಆದಿಚುಂಚನಗಿರಿ ಮಹಾ ಸಂಸ್ಥಾನ ಪೀಠಾಧ್ಯಕ್ಷರಾದ ಶ್ರೀ ಡಾ. ನಿರ್ಮಲಾನಂದನಾಥ ಸ್ವಾಮೀಜಿ ತಿಳಿಸಿದರು.
ನಗರದ ಎಐಟಿ ಸರ್ಕಲ್ನಲ್ಲಿ ಚಿಕ್ಕಮಗಳೂರು ಜಿಲ್ಲಾ ಒಕ್ಕಲಿಗರ ಸಂಘದ ಬೆಳ್ಳಿ ಮಹೋತ್ಸವ ಮತ್ತು ನೂತನವಾಗಿ ನಿರ್ಮಿಸಿರುವ ವಾಣಿಜ್ಯ ಮಳಿಗೆ ಬೆಳ್ಳಿ ಭವನವನ್ನು ಉದ್ಘಾಟಿಸಿ ಮಾತನಾಡಿ ಒಕ್ಕಲಿಗರ ಸಂಘಕ್ಕೆ ೨೫ ವರ್ಷ ತುಂಬಿರುವ ನೆನೆಪಿನಾರ್ಥ ಬೆಳ್ಳಿ ಭವನ ನಿರ್ಮಿಸಲಾಗಿದೆ. ಸಮುದಾಯದ ಘಟಾನುಘಟಿಗಳು ತಮ್ಮ ಬದುಕಿನ ಕ್ಷಣಗಳನ್ನು ಮರೆತು, ತಮ್ಮ ಮನೆಯ ಹಣ ತಂದು ಬಿಕ್ಷೆ ಬೇಡಿ ಇಷ್ಟು ದೊಡ್ಡ ಜಾಗ ಮಾಡಿ ದೊಡ್ಡ ಸಂಘವನ್ನು ಕಟ್ಟಿದ್ದಾರೆ. ಕೆ.ಎಚ್.ರಾಮಯ್ಯ ಸೇರಿದಂತೆ ನಮ್ಮ ಹಿರಿಯರು ಸಮುದಾಯಕ್ಕೆ ಒಂದು ಸಂಘಟನೆ ಪ್ರಾರಂಭಮಾಡಿ ಆ ಸಂಘಟನೆ ಮೂಲಕ ಸಮಾಜದ ಸಾಮಾನ್ಯರನ್ನು ಒಗ್ಗೂಡಿಸುವ ಪ್ರಯತ್ನ ಮಾಡಿದ್ದಾರೆ ಎಂದರು.
ವಿಘಟನಾತ್ಮಕವಾದ ಸಮಾಜ ಒಗ್ಗೂಡಿದಾಗ ಶಕ್ತಿ ಬರುತ್ತದೆ. ಹೀಗಾಗಿ ಆ ಸಮುದಾಯದ ಶಕ್ತಿ ಸಂಘಟನಾತ್ಮಕವಾಗಿ, ರಚನಾತ್ಮವಾಗಿ ಬೆಳೆಯಲು ಸಾಧ್ಯವಾಗಿದೆ. ಈ ಮೂಲಕ ಮಾನವ ಸಂಪನ್ಮೂಲ ಅಭಿವೃದ್ಧಿ ಕಡೆಗೆ ಹೋಗಿದ್ದೇ ಆದಲ್ಲಿ ಉದ್ಧಾರ ಆಗುವುದು ದೇಶ ಎಂದ ಅವರು ಈ ಸಂದರ್ಭದಲ್ಲಿ ಸಮುದಾಯದ ಎಲ್ಲ ಹಿರಿಯರನ್ನು ನೆನಪಿಸಿಕೊಳ್ಳುವುದು ನಮ್ಮ ಕರ್ತವ್ಯ ಎಂದರು.
ಒಕ್ಕಲಿಗ ಜನಾಂಗವದರು ಸಂಘ ಸಂಘಟನೆಯ ಮೂಲಕ ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯವಾಗಿಯು ಬೆಳೆದು ಸಮಾಜಮುಖಿ ಕೆಲಸಗಳನ್ನು ಮಾಡಬೇಕೆಂದು ತಿಳಿಸಿದರು. ರಾಜ್ಯದಲ್ಲಿಯೇ ಚಿಕ್ಕಮಗಳೂರು ಒಕ್ಕಲಿಗರ ಸಂಘ ಮಾದರಿಯಾಗಿದ್ದು ಇತರರಿಗೆ ಆದರ್ಶವಾಗಿದೆ ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ ಜಾರ್ಜ್ ಬೆಳ್ಳಿ ಬಾಗಿನ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಿ ಮಾತನಾಡಿ ಚಿಕ್ಕಮಗಳೂರಿಗೆ ಸಾಕಷ್ಟು ಪ್ರವಾಸಿಗರು ಬರುತ್ತಿದ್ದಾರೆ. ಇಲ್ಲಿ ಪ್ರವಾಸೋದ್ಯಮ ಬೆಳೆಸುವಲ್ಲಿ ಸಂಘಸಂಸ್ಥೆ ಸಾರ್ವಜನಿಕ ಅಭಿಪ್ರಾಯ ಪಡೆಯುತ್ತಿದ್ದೇವೆ. ಸ್ವಾಮೀಜಿಗಳು ತಮ್ಮ ಮಾರ್ಗದರ್ಶನ, ಸಲಹೆ ನೀಡಬೇಕು ಎಂದರು.
ಆದಿಚುಂಚನಗಿರಿ ಮಠಕ್ಕೆ ನೂರಾರು ವರ್ಷದ ಇತಿಹಾಸವಿದೆ. ಆದರೆ, ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಮಠದ ಜವಾಬ್ದಾರಿ ಹೊತ್ತ ಮೇಲೆ ಸಾಕಷ್ಟು ಬೆಳವಣಿಗೆ ಆಗಿದೆ. ಸ್ವಾಮೀಜಿ ಅವರು ಅಂದು ಚಿಕ್ಕಮಗಳೂರಿನಲ್ಲಿ ಎಂಜಿನಿಯರಿಂಗ್ ಕಾಲೇಜು ಸ್ಥಾಪಿಸಲು ಜಾಗ ಕೇಳಿದ್ದರು. ಅಂದು ನಾನೂ ಸಚಿವನಾಗಿದ್ದೆ, ಶ್ರೀಕಂಠಯ್ಯ ಅವರು ಕಂದಾಯ ಮಂತ್ರಿಯಾಗಿದ್ದರು. ಅದೇ ವರ್ಷ ಮಠಕ್ಕೆ ಜಾಗ ಮಂಜೂರು ಮಾಡಲಾಯಿತು. ಶ್ರೀ ಬಾಲಗಂಗಾಧರ ಸ್ವಾಮೀಜಿ ಅವರು ದೂರ ದೃಷ್ಟಿ ಹೊಂದಿದ್ದರು. ಅವರು ಹಾಕಿದ ಅಭಿವೃದ್ಧಿಯ ಅಡಿಪಾಯ ಇಂದು ಬಹುಮಹಡಿಯಾಗಿ ಬೆಳೆದಿದೆ ಎಂದರು.
ವಿಧಾನ ಪರಿಷತ್ ಶಾಸಕರಾದ ಸಿ.ಟಿ ರವಿ ಮಾತನಾಡಿ ಸಂಘ ಪ್ರಾರಂಭವಾಗಿ ೮೭ ವರ್ಷ ಆಯಿತು, ಸಮಜವನ್ನು ಸಂಘಟಿಸಬೇಕು ಎಂದು ಆಲೋಚಿಸಿ ೧೯೩೭ ರಲ್ಲಿ ಹುಲಿಕೆರೆ ದೇವೇಗೌಡರ ನೇತೃತ್ವದಲ್ಲಿ ವಿದ್ಯಾರ್ಥಿನಿಲಯ ಪ್ರಾರಂಭಿಸಿ ಸಮಾಜ ಸಂಘಟಿಸುವ ಕೆಲಸಕ್ಕೆ ಅಡಿ ಇಟ್ಟಿದ್ದಾರೆ. ಆದಾದ ನಂತರ ನಗರದಲ್ಲಿ ಸಮುದಾಯ ಭವನವನ್ನೂ ನಿರ್ಮಿಸಿ ಸಮಾಜದ ಹಿರಿಯರು ದುಡಿದಿದ್ದಾರೆ. ಈಗಿನ ತಂಡ ಕೂಡ ಉತ್ತಮ ಕೆಲಸ ಮಾಡುತ್ತಿದೆ. ಒಕ್ಕಲಿಗರೇ ಕೃಷಿ ಸಂಸ್ಕೃತಿಯ ರೂವಾರಿಗಳು. ಒಕ್ಕಲಿಗರು ಸಮುಷ್ಠಿ ಹಿತವನ್ನು ಬಯಸುವವರು. ಪ್ರಾಣಿಪಕ್ಷಿಗಳ ಬಗ್ಗೆ ಆಲೋಚಿಸುವವರು. ಒಕ್ಕಲಿಗ ಸಂಸ್ಕೃತಿ ಬೇಧಭಾವ ಮಾಡಿದ ಸಮಾಜವಲ್ಲ. ಉದ್ಧಾತ್ತ ಸಂಸ್ಕೃತಿಯ ವಾರಸುದಾರರು ನಾವು ಎಂದರು.
ವಿಧಾನ ಪರಿಷತ್ ಉಪ ಸಭಾಪತಿ ಎಂ.ಕೆ.ಪ್ರಾಣೇಶ್ ಮಾತನಾಡಿ ನಮ್ಮ ಒಕ್ಕಲಿಗರ ಸಮಾಜದ ಜನಾಂಗ ಮನಸ್ಸು ಮಾಡಿದರೆ ಏನು ಬೇಕಾದರು ಸಾಧಿಸಲು ಸಾಧ್ಯ ಎಂಬುವುದಕ್ಕೆ ಸುಂದರವಾದ ಕಟ್ಟಡ ನಿರ್ಮಾಣಗೊಂಡು ಉದ್ಘಾಟನೇಗೊಳ್ಳುತ್ತಿರುವುದೇ ಸಾಕ್ಷಿ, ಹಲವಾರು ಯೋಜನೆಗಳ ಯೋಚನೆಗಳ ಚಿಂತನೆಗಳ ಅಡಿಯಲ್ಲಿ ಒಕ್ಕಲಿಗ ಸಂಘ ಮುಂದೆ ಸಾಗುತ್ತಿದೆ ಎಂದರು.
ಹಿರಿಯರ ಆಶೀರ್ವಾದ, ಕಿರಿಯರ ಸಹಕಾರ, ನಿರ್ದೇಶಕರ ಶ್ರಮ, ಅಧ್ಯಕ್ಷರ ಪರಿಶ್ರಮಗಳೋಂದಿಗೆ ಇಂದು ಸಂಘವು ಏಳಿಗೆಯನ್ನು ಕಾಣುತ್ತಿದೆ, ಪರಮ ಪೂಜ್ಯ ಬಾಲಗಂಗಾಧರನಾಥ ಸ್ವಾಮೀಜಿಯವರು ಆರ್ಥಿಕ ಪರಿಸ್ಥಿತಿಯಲ್ಲೂ ಒಕ್ಕಲಿಗರ ಸಮಾಜವನ್ನು ಗಟ್ಟಿಯಾಗಿ ಕಟ್ಟಬೇಕು ಎಂಬ ಉದ್ದೇಶದಿಂದ ನಿರಂತರ ಪ್ರಯತ್ನಗಳನ್ನು ಮಾಡಿಕೊಂಡು ಬಂದರು ಎಂದರು.
ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಟಿ.ರಾಜಶೇಖರ್ ಮಾತನಾಡಿ ಸಂಘದ ಸರ್ವ ಸದಸ್ಯರ ಸಹಕಾರದಿಂದ ಬೆಳ್ಳಿ ಭವನ ಕಟ್ಟಡ ಅತಿ ಕಡಿಮೆ ಅವಧಿಯಲ್ಲಿ ಆಧುನಿಕ ತಂತ್ರಜ್ಞಾನವನ್ನು ಬಳಸಿ ನಿರ್ಮಿಸಲಾಗಿದೆ ಒಕ್ಕಲಿಗರ ಸಂಘದಲ್ಲಿ ಪ್ರಸ್ತುತ ೧೦ ಸಾವಿರ ಸದಸ್ಯರನ್ನು ಹೊಂದಿದ್ದು, ಜಿವಿಎಸ್ ಶಾಲೆಯಲ್ಲಿ ಕಲೆ, ಸಾಹಿತ್ಯ, ಸಂಸ್ಕೃತಿ ಕಲಿಸಲು ಹೆಚ್ಚು ಆದ್ಯತೆ ನೀಡಲಾಗಿದ್ದು, ಶಾಲೆಯ ೨ ಹಳೇಯ ಬಸ್ಸಿನ ಜೊತೆಗೆ ಪ್ರಸ್ತುತ ೨ ಹೊಸ ಬಸ್ಸುಗಳನ್ನು ಖರೀದಿಸಿದ್ದೇವೆ ಎಂದರು.
ತಮ್ಮ ಅಧಿಕಾರವಧಿಯಲ್ಲಿ ಸರ್ವ ಜನಾಂಗದವರು ಮೃತಪಟ್ಟಾಗ ಮೃತ ದೇಹ ಸಾಗಿಸಲು ೧ ಮಾರುತಿ ಇಕೋ ಶಾಂತಿ ವಾಹನವನ್ನು ಖರೀದಿಸಲಾಗಿದ್ದು, ಅಗತ್ಯವಿದ್ದಾಗ ಸಾರ್ವಜನಿಕರು ಇದನ್ನು ಉಪಯೋಗಿಸಿಕೊಳ್ಳುವಂತೆ ಮನವಿ ಮಾಡಿದರು.
ನೂತನ ಬೆಳ್ಳಿ ಭವನ ಉದ್ಘಾಟನೆ ನಂತರ ಬರುವ ಬಾಡಿಗೆಯಲ್ಲಿ ಜಿವಿಎಸ್ ಶಾಲೆಯಲ್ಲಿ ಓದುತ್ತಿರುವ ಬಡ ವಿದ್ಯಾರ್ಥಿಗಳಿಗೆ ಮುಂದಿನ ದಿನಗಳಲ್ಲಿ ಪ್ರೋತ್ಸಾಹಧನ ನೀಡಲು ನಿರ್ಧರಿಸಲಾಗಿದ್ದು ಹಾಗೂ ಸಂಘದ ಜನಾಂಗದ ಅಭಿವೃದ್ಧಿಗೆ ವ್ಯಯಿಸಲು ತೀರ್ಮಾನಿಸಿರುವುದಾಗಿ ಹೇಳಿದರು.
ಈ ಸಂದರ್ಭದಲ್ಲಿ ಶೃಂಗೇರಿ ಶಾಖಾ ಮಠದ ಶ್ರೀ ಗುಣನಾಥ ಸ್ವಾಮೀಜಿ, ಶಾಸಕ ಟಿ.ಡಿ ರಾಜೇಗೌಡ, ಎಸ್.ಎಲ್.ಬೋಜೇಗೌಡ, ಮಾಜಿ ಸಚಿವರಾದ ಬಿ.ಎನ್.ಜೀವರಾಜ್, ಶಿವಮೊಗ್ಗ ಭದ್ರಾಕಾಡ ಅಧ್ಯಕ್ಷರಾದ ಡಾ. ಅಂಶುಮಂತ್, ಕಾಫಿ ಮಂಡಳಿ ಅಧ್ಯಕ್ಷರಾದ ಎಂ.ಕೆ ದಿನೇಶ್, ಜಿಲ್ಲಾ ಒಕ್ಕಲಿಗರ ಸಂಘದ ಉಪಾಧ್ಯಕ್ಷ ಲಕ್ಷ್ಮಣ್ ಗೌಡ, ಗೌರವ ಕಾರ್ಯದರ್ಶಿ ಎಂ.ಸಿ ಪ್ರಕಾಶ್, ಮಹಿಳಾ ಸಂಘದ ಅಧ್ಯಕ್ಷೆ ರೀನಾಸುಜೇಂದ್ರ, ಸುಜಿತ್, ಮೇಘನಾ ಸಂಘದ ನಿರ್ದೇಶಕರು, ಮಾಜಿ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು ಉಪಸ್ಥಿತರಿದ್ದರು. ಕಾರ್ಯಕ್ರಮಕ್ಕೂ ಮುನ್ನ ಬೋಳರಾಮೇಶ್ವರ ದೇವಸ್ಥಾನದಿಂದ ಬೈಕ್ ಜಾಥಾ ನೆಡೆಯಿತು. ಯುಪಿಎಸ್ಸಿ ರ್ಯಾಂಕ್ ಬಂದಿರುವ ಮೇಘನಾ ಅವರನ್ನು ಸನ್ಮಾನಿಸಲಾಯಿತು.
Inauguration of the commercial store of the District Vokkaligara Sangha Belli Bhavan