ಚಿಕ್ಕಮಗಳೂರು: : ವಿರೋಧ ಪಕ್ಷ ಬಿಜೆಪಿ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಟೀಕೆಮಾಡುವುದನ್ನು ಬಿಟ್ಟರೆ, ರಚನಾತ್ಮಕ ಕಾರ್ಯಗಳ ಬಗ್ಗೆ, ಜ್ವಲಂತ ಸಮಸ್ಯೆಗಳನ್ನು ಕುರಿತು ಮಾತನಾಡುತ್ತಿಲ್ಲ ಎಂದು ಕೆಪಿಸಿಸಿ ವಕ್ತಾರ ಎಚ್.ಎಚ್.ದೇವರಾಜ್ ಆರೋಪಿಸಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ ವಿಪಕ್ಷ ರಚನಾತ್ಮಕವಾಗಿ ಕೆಲಸ ಮಾಡಬೇಕು. ಭೌದ್ಧಿಕ ಮತ್ತು ಸೈದ್ದಾಂತಿಕವಾಗಿ ಬಿಜೆಪಿ ಪಕ್ಷ ದಿವಾಳಿಯಾಗಿದ್ದು, ಇಂತಹ ವಿಪಕ್ಷವನ್ನು ಇದುವರೆಗೂ ನೋಡಿರಲಿಲ್ಲ. ವಿಜಯೇಂದ್ರ, ಬಸವನಗೌಡ ಪಾಟೀಲ್ ಯತ್ನಾಳ್, ರೇಣುಕಾಚಾರ್ಯ ತಂಡವಾಗಿ ಬಿ.ವೈ.ವಿಜಯೇಂದ್ರ ಹಾಗೂ ಬಿ.ಎಸ್.ಯಡಿಯೂರಪ್ಪ ವಿರುದ್ಧ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಶಿಸ್ತುಕ್ರಮ ಕೈಗೊಳ್ಳುವಲ್ಲಿ ರಾಷ್ಟ್ರೀಯ ಮುಖಂಡರು ಮತ್ತು ರಾಜ್ಯ ಮುಖಂಡರು ವಿಫಲರಾಗಿದ್ದಾರೆಂದು ದೂರಿದರು.
ಶಿಸ್ತಿನ ಪಕ್ಷವೆನ್ನುತ್ತಿದ್ದ ಬಿಜೆಪಿ ಪಕ್ಷ ಒಡೆದ ಮನೆಯಾಗಿದೆ. ನಾಲ್ಕು ಗುಂಪುಗಳಾಗಿದ್ದು, ರಾಷ್ಟ್ರೀಯ ಅಧ್ಯಕ್ಷರಾಗಲಿ, ರಾಜ್ಯಾಧ್ಯಕ್ಷರಾಗಲಿ ಗುಂಪುಗಾರಿಕೆಗೆ ಕಡಿವಾಣ ಹಾಕುವಲ್ಲಿ, ಕ್ರಮಕೈಗೊಳ್ಳುವಲ್ಲಿ ವಿಫಲರಾಗಿದ್ದಾರೆಂದು ಗೇಲಿ ಮಾಡಿದರು.
ವಿಪಕ್ಷ ಸಿದ್ದರಾಯಯ್ಯ ಅವರ ವೈಯಕ್ತಿಕ ವಿಚಾರ ಹಾಗೂ ಮೂಡಾ ಮತ್ತು ವಕ್ಛ್ಬೋರ್ಡ್ ವಿಚಾರವನ್ನು ಮಾತ್ರ ಪ್ರಸ್ತಾಪಿಸುತ್ತಿದ್ದಾರೆ. ರಾಜ್ಯದಲ್ಲಿ ರೈತರು, ಕಾರ್ಮಿಕರು, ಮಹಿಳೆಯರು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದು, ಸಮಸ್ಯೆಗಳ ಬಗ್ಗೆ ಚಕಾರ ಎತ್ತುತ್ತಿಲ್ಲ. ಶಿಸ್ತಿನ ಪಕ್ಷದಲ್ಲಿ ಮನೆಯೊಂದು ಮೂರು ಬಾಗಿಲಾಗಿದೆ ಎಂದು ಟೀಕಿಸಿದರು.
ವಿಶ್ವ ಒಕ್ಕಲಿಗರ ಸಂಘದ ಚಂದ್ರಶೇಖರ ಸ್ವಾಮೀಜಿ ಆರ್ಎಸ್ಎಸ್ ಪ್ರಾಯೋಜಿತ ಭಾರತೀಯ ಕಿಸಾನ್ ಸಂಘದ ಕಾರ್ಯಕ್ರಮದಲ್ಲಿ ಮುಸ್ಲಿಮರಿಗೆ ಮತದಾನದ ಹಕ್ಕು ಕೊಡಬಾರದು ಎಂದು ಹೇಳಿರುವುದು ವಿಷಾಧನೀಯ. ಇದು ಸಂವಿಧಾನ ಮತ್ತು ಅಂಬೇಡ್ಕರ್ ಅವರಿಗೆ ಮಾಡಿದ ಅಪಮಾನವಾಗಿದ್ದು, ಸ್ವಾಮೀಜಿ ಬಹಿರಂಗ ಕ್ಷಮೆಯಾಚಿಸಬೇಕೆಂದು ಒತ್ತಾಯಿಸಿದರು.
ಸ್ವಾಮೀಜಿಗಳು ಸಮಾಜವನ್ನು ತಿದ್ದಿ ಸರಿದಾರಿಗೆ ತರುವ ಕೆಲಸ ಮಾಡಬೇಕು. ಸಮಾಜವನ್ನು ಪ್ರಚೋದಿಸಿ, ಸಾಮರಸ್ಯ ಹಾಳು ಮಾಡುವ ಕೆಲಸ ಮಾಡಬಾರದು ಎಂದರು.
ಮಲೆನಾಡು ಭಾಗದಲ್ಲಿ ಆನೆಗಳ ಉಪಟಳ ಹೆಚ್ಚಾಗಿದೆ. ಕಾಡಿನಲ್ಲಿ ಆಹಾರ ಸಿಗದೆ ನಾಡಿಗೆ ಲಗ್ಗೆ ಇಡುತ್ತಿವೆ. ಶಾಲಾ ಮಕ್ಕಳು, ಸಾರ್ವಜನಿಕರು, ಕೂಲಿ ಕಾರ್ಮಿಕರು ಜೀವಭಯದಲ್ಲಿ ಓಡಾಡಬೇಕಾಗಿದೆ. ಅರಣ್ಯ ಇಲಾಖೆ ಗಂಭೀರವಾಗಿ ಪರಿಗಣಿಸಿ ಆನೆಗಳನ್ನು ಸ್ವಸ್ಥಾನಕ್ಕೆ ಕಳಿಸುವ ಕ್ರಮಕೈಗೊಳ್ಳಬೇಕು. ಬೆಳೆಗಾರರು ಮತ್ತು ಕೃಷಿಕರು ಅನುಭವಿಸಿರುವ ನಷ್ಟದ ನಾಲ್ಕುಪಟ್ಟು ಪರಿಹಾರ ನೀಡಬೇಕು ಎಂದ ಅವರು, ಡಿ.೯ರಿಂದ ನಡೆಯುವ ಚಳಿಗಾಲದ ಅಧಿವೇಶನದಲ್ಲಿ ಆನೆಗಳ ನಿಯಂತ್ರಣಕ್ಕೆ ನಿರ್ಣಾಯ ಕೈಗೊಳ್ಳಬೇಕು ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಹಿಂದುಳಿದ ವರ್ಗಗಳ ವಿಭಾಗದ ಡಿ.ಸಿ ಪುಟ್ಟೇಗೌಡ, ಅಲ್ಪಸಂಖ್ಯಾತರ ವಿಭಾಗದ ಕೆ.ಮಹಮದ್, ಲೋಕೇಶ್, ಸಂತೋಷ ಲಕ್ಯಾ, ಶಾಂತಕುಮಾರ್, ಜಯರಾಜ್ ಅರಸ್, ಲೋಬೋ, ಹಿರೇಮಗಳೂರು ರಾಮಚಂದ್ರ ಇದ್ದರು.
The opposition BJP’s job is to criticize Chief Minister Siddaramaiah.