ಚಿಕ್ಕಮಗಳೂರು: ಕಾಫಿ ಬೆಳೆಗಾರರು, ರೈತರ ಬಗ್ಗೆ ಕಾಳಜಿ ಇಲ್ಲದ ಜಿಲ್ಲಾಡಳಿತ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಸೇರಿದಂತೆ ಆಡಳಿತ ಪಕ್ಷದ ಜಿಲ್ಲೆಯ ಎಲ್ಲಾ ಶಾಸಕರ ವಿರುದ್ಧ ಗೋಬ್ಯಾಕ್ ಚಳುವಳಿಯನ್ನು ಸಧ್ಯದಲ್ಲೇ ಹಮ್ಮಿಕೊಳ್ಳುವುದಾಗಿ ರೈತಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಹೆಚ್.ಸಿ ಕಲ್ಮರುಡಪ್ಪ ತಿಳಿಸಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕಳೆದ ೨೦ ದಿನಗಳಿಂದ ನಗರದ ಸುತ್ತಮುತ್ತ ಎರಡು ಮೂರು ಕಿ.ಮೀ ವ್ಯಾಪ್ತಿಯಲ್ಲಿ ಮೆಣಸಿನ ಮಲ್ಲೇದೇವರಹಳ್ಳಿ, ಆಲದಗುಡ್ಡೆ, ವಸ್ತಾರೆ, ಕೆಸವಿನ ಮನೆ, ಮೂಗ್ತಿಹಳ್ಳಿ, ಕದ್ರಿಮಿದ್ರಿ, ಕಂಚಿಹಳ್ಳಿ, ಕೆ.ಆರ್ ಪೇಟೆ, ಕಂಬೀಹಳ್ಳಿ ಸೇರಿದಂತೆ ಸುಮಾರು ೨೫ ಆನೆಗಳ ಗುಂಪು ದಾಂಧಲೆ ನಡೆಸಿ ರೈತರ ಬೆಳೆಹಾನಿ ಮಾಡಿದೆ ಎಂದು ಆರೋಪಿಸಿದರು.
ಕಾಡಾನೆಗಳ ದಂಡು ರೈತರು ಬೆಳೆದ ಭತ್ತ, ಜೋಳ, ರಾಗಿ, ಶುಂಠಿ, ಕಾಫಿ, ಅಡಿಕೆ ಸೇರಿದಂತೆ ಅನೇಕ ಬೆಳೆಗಳು ಹಾನಿ ಮಾಡಿವೆ, ಅತೀವೃಷ್ಟಿ ಹಾನಿಯಿಂದ ಈಗಾಗಲೇ ನಲುಗಿರುವ ರೈತರು ಕಾಡಾನೆ ಹಾವಳಿಯಿಂದ ಮತ್ತಷ್ಟು ಜರ್ಝರಿತವಾಗಿದ್ದಾರೆ ಎಂದು ಹೇಳಿದರು.
ಈ ಸಂಬಂಧ ಜಿಲ್ಲಾಡಳಿತ, ಜನಪ್ರತಿನಿಧಿಗಳು ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿಲ್ಲ ಎಂದು ಆರೋಪಿಸಿದ ಅವರು, ಕೂಡಲೇ ಜಿಲ್ಲಾಧಿಕಾರಿಗಳು, ಅರಣ್ಯ ಇಲಾಖೆ, ಪೊಲೀಸ್ ವರಿಷ್ಠಾಧಿಕಾರಿಗಳು, ಕಂದಾಯ ಇಲಾಖೆ ಅಧಿಕಾರಿಗಳು ರಾಜಕೀಯ ಪಕ್ಷಗಳ ಮುಖಂಡರು, ಸಂಘಸಂಸ್ಥೆಗಳ ಪ್ರಮುಖರನ್ನೊಳಗೊಂಡ ಸಭೆಯನ್ನು ಕರೆದು ಈ ಸಮಸ್ಯೆಗೆ ಸೂಕ್ತ ಪರಿಹಾರ ಕಂಡುಕೊಳ್ಳುವುದರ ಜೊತೆಗೆ ಬೆಳೆಹಾನಿ ಆಗಿರುವ ರೈತರಿಗೆ ವೈಜ್ಞಾನಿಕ ಪರಿಹಾರ ನೀಡಬೇಕೆಂದು ಒತ್ತಾಯಿಸಿದರು.
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸುಮಾರು ೩೫೦೦ ಕಡತಗಳು ವಿಲೇವಾರಿ ಅಗದೇ ಬಾಕಿ ಇದ್ದು, ಜಿಲ್ಲಾಧಿಕಾರಿಗಳು ಆನ್ಲೈನ್ ಮೀಟಿಂಗ್ನಲ್ಲಿ ಕಾಲಹರಣ ಮಾಡುತ್ತಿದ್ದಾರೆ. ಕಚೇರಿಯಲ್ಲಿ ಇದ್ದು ಕೆಲಸ ಮಾಡುವುದು ಕಡಿಮೆಯಾಗಿದೆ ಎಂದು ಸಾರ್ವಜನಿಕರು ದೂರುತ್ತಿದ್ದಾರೆ ಎಂದು ಹೇಳಿದರು.
ನಿಷ್ಕ್ರಿಯ ಜಿಲ್ಲಾಡಳಿತ ಹಾಗೂ ಜನಪ್ರತಿನಿಧಿಗಳ ವಿರುದ್ಧ ಜನತೆ ಆಕ್ರೋಶ ವ್ಯಕ್ತಪಡಿಸುತ್ತಿದ್ದು ಕೂಡಲೇ ಜಿಲ್ಲಾಡಳಿತ ಆನೆ ಹಾವಳಿಯಿಂದ ನಲುಗಿರುವ ರೈತರು ಹಾಗೂ ಬೆಳೆಗಾರರಿಗೆ ಸಾಂತ್ವಾನ ಹೇಳುವ ಜೊತೆಗೆ ಬೆಳೆಹಾನಿಗೆ ಸೂಕ್ತ ಪರಿಹಾರ ಕೊಡಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಕಾಡು ಪ್ರಾಣಿಗಳ ಅಧ್ಯಯನ ನಡೆಸಿ ಅದರ ಚಲನವಲನಗಳ ಬಗ್ಗೆ ತಿಳಿದಿರುವ ಪರಿಣಿತರ ತಂಡವನ್ನು ಜಿಲ್ಲೆಗೆ ಆಹ್ವಾನಿಸಿ ಜೀವಹಾನಿ ಆಗುವುದಕ್ಕೆ ಮೊದಲೇ ಕಾಡಾನೆಗಳನ್ನು ಅವರ ಸ್ವಸ್ಥಾನಕ್ಕೆ ತಲುಪಿಸುವ ವ್ಯವಸ್ಥೆ ಮಾಡಬೇಕೆಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಮುಖಂಡರಾದ ಸೀತಾರಾಂಭರಣ್ಯ, ಹೆಚ್.ಎಸ್ ಪುಟ್ಟಸ್ವಾಮಿ, ದಿನೇಶ್, ಸಚಿನ್, ರತನ್, ಉಮೇಶ್, ನಾಗರಾಜ್ ಮತ್ತಿತರರು ಉಪಸ್ಥಿತರಿದ್ದರು.
Go-back movement against ministers and legislators if elephant menace not stopped