ಚಿಕ್ಕಮಗಳೂರು: ಕಾಡಾನೆಗಳ ಹಿಂಡಿನ ಹಾವಳಿಯಿಂದ ಬೆಳೆ ಹಾನಿ, ಸಾವು, ನೋವು ಸಂಭವಿಸಿದರೂ ಜಿಲ್ಲಾ ಮಂತ್ರಿಗಳು ಸ್ಪಂದಿಸುತ್ತಿಲ್ಲ. ಅವರು ಕೇವಲ ಅವರ ತೋಟದ ಮಂತ್ರಿಯಾಗಿದ್ದಾರೆ ಎಂದು ಬಿಜೆಪಿ ರೈತ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಎಚ್.ಡಿ.ಕಲ್ಮರುಡಪ್ಪ ಆಕ್ರೋಶ ವ್ಯಕ್ತಪಡಿಸಿದರು.
ಅವರು ಕಾಡಾನೆಗಳ ಹಾವಳಿಯಿಂದ ಬೆಳೆ ಹಾನಿ ಸಂಭವಿಸಿರುವ ನಗರ ಹೊರ ವಲಯದ ಗ್ರಾಮಗಳಿಗೆ ಭೇಟಿ ನೀಡಿ ಸಂತ್ರಸ್ಥರ ಅಳಲು ಆಲಿಸಿ ನಂತರ ಮಾತನಾಡಿ ಜಿಲ್ಲಾ ಮಂತ್ರಿಗಳಾಗಲಿ, ಜಿಲ್ಲಾಧಿಕಾರಿಗಳಾಗಲಿ, ಡಿಎಫ್ಓಗಳಾಗಲಿ ಸಮಸ್ಯೆ ಕುರಿತು ಬಾಯನ್ನೇ ಬಿಡುತ್ತಿಲ್ಲ. ಸರ್ಕಾರ, ಜಿಲ್ಲಾಡಳಿತ ಇದೆಯೋ, ಇಲ್ಲವೋ ಎನ್ನುವ ಸಂಶಯ ಮೂಡಿಸುತ್ತಿದೆ. ಇಷ್ಟೆಲ್ಲಾ ತೊಂದರೆ ಆದರೂ ರೈತರಿಗೆ ಧೈರ್ಯ ತುಂಬುವ ಕೆಲಸ ಆಗುತ್ತಿಲ್ಲ ಎಂದು ದೂರಿದರು.
ಮೊನ್ನೆ ಜಿಲ್ಲಾ ಉಸ್ತುವಾರಿ ಸಚಿವರು ನಗರಕ್ಕೆ ಬಂದರೂ ಕೇವಲ ಎರಡು ಕಿ.ಮೀ.ದೂರದ ಗ್ರಾಮಗಳಿಗೆ ಭೇಟಿ ನೀಡಿ ರೈತರನ್ನು ಭೇಟಿ ಮಾಡಲಿಲ್ಲ. ಹೀಗಿದ್ದಮೇಲೆ ಜಿಲ್ಲಾ ಮಂತ್ರಿಯಾಗಿ ಯಾಕಿರಬೇಕು. ಜನರ ಸಮಸ್ಯೆ ಬಗ್ಗೆ ಧ್ವನಿ ಎತ್ತುವುದಿಲ್ಲ ಏಕೆ ಎಂದು ಪ್ರಶ್ನಿಸಿದರು.
ಆನೆಗಳ ಚಲನ ವಲನಗಳ ಬಗ್ಗೆ ಅಧ್ಯಯನ ಮಾಡಿದ ತಜ್ಞರಿದ್ದಾರೆ. ಅವರೊಂದಿ ಚರ್ಚಿಸಿ ಆನೆಗಳು ಏಕೆ ದಾಳಿ ಇಡುತ್ತಿವೆ, ಅವುಗಳಿಗೆ ಉಂಟಾಗಿರುವ ಆಹಾರದ ಸಮಸ್ಯೆ ಏನು ಎಲ್ಲವನ್ನೂ ತಿಳಿದುಕೊಂಡು ಅದಕ್ಕೆ ಪರಿಹಾರ ಕಲ್ಪಿಸುವ ಪ್ರಯತ್ನ ಮಾಡಬಾರದೇಕೆ ಎನ್ನುವ ಹತ್ತಾರು ಪ್ರಶ್ನೆಗಳ ಬಗ್ಗೆ ರೈತರು ಮಾತನಾಡುತ್ತಾರೆ ಆದರೆ ನಮ್ಮ ಜಿಲ್ಲಾ ಮಂತ್ರಿಗಳು, ಜಿಲ್ಲಾಧಿಕಾರಿಗಳಿಗೆ ಇದು ಗೊತ್ತಾಗುವುದಿಲ್ಲ ಎಂದು ಆಕ್ರೊಶ ವ್ಯಕ್ತಪಡಿಸಿದರು.
ಜಿಲ್ಲಾಧಿಕಾರಿಗಳಿಗೆ ಜಿಲ್ಲೆಯ ಸಮಸ್ಯೆಗಳ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲ. ಕೇವಲ ಟೈಂ ಪಾಸ್ ಮಾಡುತ್ತಿದ್ದಾರೆ. ಅವರ ವರ್ತನೆ ಇದೇ ರೀತಿ ಮುಂದುವರಿದಲ್ಲಿ ಗೋ ಬ್ಯಾಕ್ ಚಳುವಳಿ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು. ಜಿಲ್ಲಾಡಳಿತ, ಅರಣ್ಯ ಇಲಾಖೆ, ರಾಜ್ಯ ಸರ್ಕಾರ ಕೂಡಲೇ ಎಚ್ಚೆತ್ತುಕೊಂಡು ಬೆಳೆ ಹಾನಿಯಿಂದ ನಷ್ಟಕ್ಕೊಳಗಾದ ರೈತರಿಗೆ ಪರಿಹಾರ ದೊರಕಿಸಬೇಕು ಹಾಗೂ ಕಾಡಾನೆಗಳ ಹಾವಳಿ ನಿಯಂತ್ರಣಕ್ಕೆ ಶಾಶ್ವತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಗ್ರಾಮ ಪಂಚಾಯ್ತಿ ಅಧ್ಯಕ್ಷ ಉಮೇಶ್ ಶೆಟ್ಟಿ ಮಾತನಾಡಿ, ಎಂಎಂಡಿ ಹಳ್ಳಿ ಭಾಗದಲ್ಲಿ ಕಳೆದ ಒಂದು ತಿಂಗಳಿನಿಂದ ಆನೆಗಳು ಬೀಡುಬಿಟ್ಟಿದ್ದರೂ ಅವುಗಳನ್ನು ಹಿಮ್ಮೆಟ್ಟಿಸುವ ಕೆಲಸ ಜಿಲ್ಲಾಡಳಿತದಿಂದಾಗುತ್ತಿಲ್ಲ. ಇತ್ತೀಚೆಗೆ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಅವರು ಅರಣ್ಯಾಧಿಕಾರಿಗಳ ಜೊತೆ ಮಾತನಾಡಿ ಪರಿಹಾರಕ್ಕೆ ಸೂಚಿಸಿದರೂ ಪ್ರಯೋಜನವಾಗಿಲ್ಲ. ನಂತರ ಶಾಸಕ ತಮ್ಮಯ್ಯ ಅವರು ಬಂದು ಭರವಸೆ ಕೊಟ್ಟರೂ ಅವರಿಂದಲೂ ಏನೂ ಮಾಡಲಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಈ ಭಾಗದಲ್ಲಿ ಸಣ್ಣ ರೈತರೇ ಹೆಚ್ಚಿದ್ದೇವೆ. ಆನೆಗಳಿಂದಾಗಿರುವ ಹಾನಿಯಿಂದ ರೈತರು ಅನುಭವಿಸುತ್ತಿರುವ ಗೋಳು ಕೇಳುವವರಿಲ್ಲ. ಒಂದು ಹಿಡಿ ಭತ್ತ ಕೈಗೆ ಸಿಗುತ್ತಿಲ್ಲ. ಒಂದೂ ಅಡಿಕೆ ಗಿಡವನ್ನೂ ಬಿಡದೆ ಆನೆಗಳು ಮುರಿದಿವೆ. ಆನೆ ಹಾವಳಿಗೆ ಶಾಶ್ವತ ಪರಿಹಾರಕ್ಕೆ ತುಂಬಾ ಒತ್ತಾಯ ಮಾಡಿದ್ದರೂ ಪ್ರಯೋಜನವಾಗಿಲ್ಲ. ಕೂಡಲೇ ರೈತರಿಗಾಗಿರುವ ನಷ್ಟಕ್ಕೆ ಪರಿಹಾರ ಕೊಡಿಸಬೇಕು ಎಂದು ಒತ್ತಾಯಿಸಿದರು.
ರೈತ ಲಂಬೋಧರ ಮಾತನಾಡಿ, ಇಂದಿನ ಸ್ಥಿತಿಯಲ್ಲಿ ರೈತರು ಭತ್ತವನ್ನು ಬೆಳೆಯುವುದೇ ಕಷ್ಟವಾಗಿದೆ. ಹೀಗಿದ್ದರೂ ಬೆಳೆದು ನಿಂತ ಫಸಲನ್ನು ಆನೆಗಳು ಸಂಪೂರ್ಣ ಹಾನಿಪಡಿಸಿವೆ. ನಾವೆಲ್ಲ ಸಣ್ಣ ರೈತರು ಮೂರ್ನಾಲ್ಕು ಹಸುಗಳನ್ನೂ ಸಾಕಿದ್ದೇವೆ. ಅದಕ್ಕೆ ಮೇವು ಸಹ ಸಿದಗದ ರೀತಿ ಆನೆಗಳು ಹಾನಿಪಡಿಸಿವೆ ಎಂದರು.
ಗ್ರಾಮಸ್ಥರುಗಳಾದ ಪ್ರಸಾದ್, ಮಂಜುನಾಥ್, ವೀರೇಶ್, ಕಾಂತರಾಜ್, ಚಂದ್ರಶೇಖರ್, ಷಣ್ಮುಖ ಇತರರು ಇದ್ದರು.
District ministers are not responding to crop damage caused by wild elephants