ಚಿಕ್ಕಮಗಳೂರು: ಚಿಕ್ಕಮಗಳೂರು – ಮಲ್ಲಂದೂರು ಮಾರ್ಗದಲ್ಲಿ ಹಾಲಿ ಎಕ್ಸ್ಪ್ರೆಸ್ ವಿದ್ಯುತ್ ಲೈನ್ ಇದೆ. ಹಾಗಾಗಿ ಆಲ್ದೂರು – ಮಲ್ಲಂದೂರು ಹೊಸ ವಿದ್ಯುತ್ ಲೈನ್ ಪ್ರಸ್ತಾವನೆಯನ್ನು ಕೈಬಿಡಬೇಕೆಂದು ಕಾಫಿ ಬೆಳೆಗಾರರು ಆಗ್ರಹಿಸಿದ್ದಾರೆ.
ಈ ಸಂಬಂಧ ಚಿಕ್ಕಮಗಳೂರು ಉಪ ವಿಭಾಗಾಧಿಕಾರಿಗಳಿಗೆ ಸಭೆಯಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ. ಇದೊಂದು ಅವೈಜ್ಞಾನಿಕ ನಿರ್ಧಾರ ಎಂದು ಕಾಫಿ ಬೆಳೆಗಾರರಾದ ರಾಜೇಂದ್ರ ಅವರು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಆಲ್ದೂರಿನಲ್ಲಿರುವ ವಿದ್ಯುತ್ ವಿತರಣಾ ಉಪ ಕೇಂದ್ರದಿಂದ ಮಲ್ಲಂದೂರಿನಲ್ಲಿರುವ ವಿದ್ಯುತ್ ಉಪ ಕೇಂದ್ರಕ್ಕೆ ಸಂಪರ್ಕ ಕಲ್ಪಿಸಲು ಉದ್ದೇಶಿಸಲಾಗಿದೆ. ಈ ಎರಡು ಸ್ಥಳಗಳ ನಡುವಿನ ಅಂತರ 21.68 ಕಿ.ಮೀ. ಇಷ್ಟು ದೂರದವರೆಗೆ 60 ಅಡಿ ಅಗಲ ವಿದ್ಯುತ್ ಲೈನ್ ಹಾದು ಹೋಗಲಿದೆ. ಒಂದೊಂದು ಪಿಲ್ಲರ್ ನಿರ್ಮಾಣಕ್ಕೆ 5 ಗುಂಟೆ ಜಾಗವನ್ನು ಬಳಸಿಕೊಳ್ಳಲಾಗುವುದು. ಇದರಿಂದ ಕಾಫಿ ತೋಟಗಳು ಮಾತ್ರವಲ್ಲ, ಅಪಾರ ಪ್ರಮಾಣದಲ್ಲಿ ಕಾಡು ನಾಶವಾಗಲಿದೆ ಎಂದು ಹೇಳಿದರು.
ಸಾರ್ವಜನಿಕರಿಗೆ ಯೋಜನೆಯ ಬಗ್ಗೆ ಮಾಹಿತಿ ನೀಡದೆ ಜಾರಿಗೆ ತರಲಾಗುತ್ತಿದೆ. ಈ ವಿದ್ಯುತ್ ಲೈನ್ ಭದ್ರಾ ಅಭಯಾರಣ್ಯದೊಳಗೆ 4 ಕಿ.ಮೀ. ಹಾದು ಹೋಗಲಿದೆ. ಇದರಿಂದ ಪ್ರಾಣಿ ಪಕ್ಷಿಗಳಿಗೆ ಹಾನಿ ಉಂಟಾಗಲಿದೆ. ಇದೊಂದು ಅತಿ ಸೂಕ್ಷ್ಮವಾದ ಪ್ರದೇಶ. ಹಲವಾರು ಜಾತಿಯ ಕಾಡು ಮರ, ಕಾಫಿ, ಮೆಣಸು, ಅಡಿಕೆ ಮರಗಳಿಗೆ ತುಂಬಾ ಹಾನಿಯಾಗಲಿದೆ ಎಂದರು.
ಈ ಯೋಜನೆಯಿಂದಾಗಿ ಕೃಷಿಯೇತರ ಚಟುವಟಿಕೆ ಹೆಚ್ಚಾಗಲಿದೆ. ರೈತರಿಗೆ ಸರಿಯಾದ ಮಾಹಿತಿಯನ್ನು ನೀಡದೆ ಅವರ ಬ್ಯಾಂಕ್ ಖಾತೆಗೆ ಪರಿಹಾರ ಧನ ಆನ್ ಲೈನ್ ಮೂಲಕ ಜಮಾ ಮಾಡುವುದಾಗಿ ಹೇಳಿ ಕೆಪಿಟಿಸಿಎಲ್ ಅಧಿಕಾರಿಗಳು ಆಧಾರ್ ಕಾರ್ಡ್, ಪಾನ್ ಕಾರ್ಡ್, ಪಾಸ್ ಬುಕ್ಗಳ ನಕಲು ಪಡೆದುಕೊಂಡಿದ್ದಾರೆ. ಕೂಡಲೇ ಈ ಅವೈಜ್ಞಾನಿಕವಾದ ಯೋಜನೆಯನ್ನು ಕೈಬಿಡಬೇಕು ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಕಾಫಿ ಬೆಳೆಗಾರರಾದ ಮಲ್ಲೇಶ್, ಶ್ರೀದೇವ್ ಹುಲಿಕೆರೆ, ನಟರಾಜ್, ಲತೀಶ್ಕುಮಾರ್, ಶಿವಕುಮಾರ್ ಹಾಗೂ ಹುಣಸೇಮಕ್ಕಿ ಲಕ್ಷ್ಮಣ್ ಉಪಸ್ಥಿತರಿದ್ದರು.
Opposition to the construction of the new Aldur-Mallandur power line