ಚಿಕ್ಕಮಗಳೂರು: ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಇ- ಸ್ವತ್ತು ದಾಖಲಾತಿ ನಿಯಮ ಸರಳೀಕರಣಗೊಳಿಸುವಂತೆ ತಾಲೂಕಿನ ಮುಗುಳವಳ್ಳಿ ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷ ಎಂ.ಎ. ರಘುನಂದನ್ ಅವರು ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ.
ಹಳ್ಳಿಗಳಲ್ಲಿರುವ ಗ್ರಾಮ ಠಾಣಾ ಜಾಗವನ್ನು ಇ- ಖಾತೆ ಮಾಡಿಸಿಕೊಳ್ಳಲು ಅನಾನುಕೂಲವಾಗಿದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಗ್ರಾಮ ಠಾಣಾ ಆಸ್ತಿಗಳಿಗೆ ಸಂಬಂಧಿಸಿದಂತೆ ಈ ಹಿಂದೆ ಮೋಜಿನಿ ಗ್ರಾಮ ಠಾಣಾ ನಕ್ಷೆಗಳನ್ನು ಮುಖ್ಯ ದಾಖಲೆಯನ್ನಾಗಿ ಪರಿಗಣಿಸಿ ಇಂಢೀಕರಣ ಮಾಡಿದರೆ ನಮೂನೆ – 9 ಮತ್ತು ನಮೂನೆ- 11ಎ ದಾಖಲಿಸಿ ವಿತರಣೆ ಮಾಡಬಹುದಾಗಿತ್ತು. ಆದರೆ, ಇ-ಸ್ವತ್ತು ತಂತ್ರಾಂಶದಲ್ಲಿ ಹಲವಾರು ಬದಲಾವಣೆ ತಂದ ಕಾರಣ, ಗ್ರಾಮ ಠಾಣಾ ಜಾಗಗಳಿಗೆ ಇ-ಸ್ವತ್ತು ದಾಖಲಿಸಲು ಕಷ್ಟವಾಗುತ್ತಿದೆ ಎಂದರು.
ಗ್ರಾಮ ಠಾಣಾ ಸ್ವತ್ತಿಗೆ ಗ್ರಾಮ ಠಾಣಾ ನಕ್ಷೆಯ ಜತೆಗೆ ಸೇಲ್ ಡೀಡ್ ಸೇರಿದಂತೆ ಇತರೆ ದಾಖಲೆಗಳನ್ನು ನೀಡಬೇಕೆಂದು ಕಡ್ಡಾಯಗೊಳಿಸಲಾಗಿದೆ. ಆದರೆ, ಗ್ರಾಮ ಠಾಣಾ ಆಸ್ತಿಗಳಲ್ಲಿ ಹಲವಾರು ವರ್ಷಗಳಿಂದ ಅನುಭವದಾರರಾದ ಗ್ರಾಮಸ್ಥರು ಯಾವುದೇ ದಾಖಲೆಯನ್ನು ಹೊಂದಿರುವುದಿಲ್ಲ ಎಂದು ಹೇಳಿದರು.
ಗ್ರಾಮ ಪಂಚಾಯ್ತಿಗಳಲ್ಲಿ ಭೌತಿಕವಾಗಿ ನಿರ್ವಹಿಸುತ್ತಿರುವ ನಮೂನೆ 9 ಅಪ್ಲೋಡ್ ಮಾಡಲು ಅವಕಾಶ ನೀಡಿದರೆ ಗ್ರಾಮೀಣ ಭಾಗದಲ್ಲಿ ಇ-ಸ್ವತ್ತು ದಾಖಲಾತಿ ನೀಡಲು ಅನುಕೂಲವಾಗಲಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಮುಗುಳವಳ್ಳಿ ಗ್ರಾಪಂ ಅಧ್ಯಕ್ಷೆ ಸವಿತಾ, ಉಪಾಧ್ಯಕ್ಷ ಎಂ.ಡಿ. ಉಮೇಶ್, ಮಾಜಿ ಅಧ್ಯಕ್ಷ ಶೇಖರ್, ಹರಿಹರದಳ್ಳಿ ಗ್ರಾಪಂ ಅಧ್ಯಕ್ಷೆ ಸ್ವಪ್ನ ಹಾಗೂ ಜಿಪಂ ಮಾಜಿ ಸದಸ್ಯ ಮುಗುಳವಳ್ಳಿ ನಿರಂಜನ್ ಉಪಸ್ಥಿತರಿದ್ದರು.
Simplification of e-asset registration rules