ಚಿಕ್ಕಮಗಳೂರು: ಜಿಲ್ಲಾ ಕೇಂದ್ರದಲ್ಲಿರುವ ಕೆಎಸ್ಆರ್ಟಿಸಿ ಬಸ್ ನಿಲ್ದಾಣ ಅವ್ಯವಸ್ಥೆಯ ಆಗರವಾಗಿದ್ದು, ಇದರ ನಿರ್ವಹಣೆಯಲ್ಲಿ ವಿಫಲವಾಗಿರುವ ಸಾರಿಗೆ ಜಿಲ್ಲಾ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ ಕೈಗೊಳ್ಳುವಂತೆ ಶಿಫಾರಸ್ಸು ಮಾಡಿ ಸರ್ಕಾರಕ್ಕೆ ಪತ್ರ ಬರೆಯುವುದಾಗಿ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ರಾಜ್ಯ ಉಪಾಧ್ಯಕ್ಷರಾದ ಡಾ. ಪುಷ್ಪ ಅಮರನಾಥ್ ತಿಳಿಸಿದರು.
ಇಂದು ಜಿಲ್ಲೆಗೆ ಆಗಮಿಸಿದ್ದ ಅವರು ನಗರದ ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಸ್ಥಿತಿಗತಿಗಳ ಬಗ್ಗೆ ಪರಿಶೀಲಿಸಿ ನಂತರ ಪ್ರೆಸ್ಕ್ಲಬ್ ಆವರಣದಲ್ಲಿ ಏರ್ಪಡಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿ ಪಂಚ ಗ್ಯಾರಂಟಿಗಳ ಪೈಕಿ ಪ್ರಮುಖ ಯೋಜನೆಯಾಗಿರುವ ಶಕ್ತಿ ಯೋಜನೆ ಕುರಿತಂತೆ ಸಾರಿಗೆ ಸಂಸ್ಥೆಗಳಲ್ಲಿ ಕೈಗೊಂಡಿರುವ ಕ್ರಮಗಳ ಬಗ್ಗೆ ಪರಿಶೀಲಿಸಲು ಬಸ್ ನಿಲ್ದಾಣಕ್ಕೆ ಭೇಟಿನೀಡಿದಾಗ ಹಲವಾರು ನ್ಯೂನತೆಗಳು ತಮ್ಮ ಗಮನಕ್ಕೆ ಬಂದಿರುವುದಾಗಿ ಹೇಳಿದರು.
ಈ ಬಸ್ ನಿಲ್ದಾಣದಲ್ಲಿರುವ ಶೌಚಾಲಯದಲ್ಲಿ ದುಬಾರಿ ಹಣ ವಸೂಲಿ ಮಾಡುವ ಮೂಲಕ ಹಗಲು ದರೋಡೆ ನಡೆಸಲಾಗುತ್ತಿದೆ. ರಾಜ್ಯ ಸರ್ಕಾರದ ಪ್ರಮುಖ ಯೋಜನೆಗಳಲ್ಲಿ ಒಂದಾದ ತಾಯಿ ಮಗುವಿಗೆ ಹಾಲುಣಿಸುವ ಮಡಿಲು ಕೇಂದ್ರವನ್ನು ಗೋದಾಮು ಮಾಡಿಕೊಳ್ಳಲಾಗಿದೆ ಎಂದು ಆರೋಪಿಸಿದರು.
ವಿಶೇಷ ಚೇತನ ಮಹಿಳೆಯರಿಗೆ ಉಚಿತವಾಗಿ ಶೌಚಾಲಯ ಬಳಕೆಗೆ ಅವಕಾಶ ಮಾಡಿಕೊಡಬೇಕು. ಆದರೆ ೫ ರೂ ಹಣ ವಸೂಲಿಮಾಡಲಾಗುತ್ತಿದೆ. ಈ ಎಲ್ಲಾ ಅವ್ಯವಸ್ಥೆಗಳ ಬಗ್ಗೆ ಕೆಎಸ್ಆರ್ಟಿಸಿ ಅಧಿಕಾರಿಗಳು ಗಮನಹರಿಸಿಲ್ಲ. ಬಸ್ ನಿಲ್ದಾಣದ ಒಳಗಿರುವ ಅಂಗಡಿಗಳಲ್ಲಿ ನಿಗದಿತ ಬೆಲೆಗಿಂತ ದುಬಾರಿ ಬೆಲೆಗೆ ತಿಂಡಿ-ತಿನಿಸುಗಳನ್ನು ಮಾರಾಟ ಮಾಡುತ್ತಿರುವ ಬಗ್ಗೆ ಸಾರ್ವಜನಿಕರು ದೂರು ಹೇಳಿದ್ದು, ಈ ಬಗ್ಗೆ ಟೆಂಡರ್ದಾರರಿಗೆ ನೋಟೀಸ್ ನೀಡುವಂತೆ ಸೂಚಿಸುವುದಾಗಿ ತಿಳಿಸಿದರು.
ಶಕ್ತಿ ಯೋಜನೆಯಡಿ ಪ್ರಯಾಣಿಸುವ ಮಹಿಳೆಯರಿಗೆ ಅಸಭ್ಯವಾಗಿ ವರ್ತಿಸದಂತೆ ಸೀಟು ಕಾಯ್ದಿರಿಸುವ ಕುರಿತು ಸೌಜನ್ಯದಿಂದ ನಡೆದುಕೊಳ್ಳುವಂತೆ ನಿರ್ವಾಹಕರಿಗೆ ಸೂಚಿಸಬೇಕೆಂದು ಅಧಿಕಾರಿಗಳಿಗೆ ತಿಳಿಸಿದ್ದು, ಸಧ್ಯದಲ್ಲೇ ನಿರ್ವಾಹಕರಿಗೆ ಕಾರ್ಯಾಗಾರವನ್ನು ಏರ್ಪಡಿಸಿ ತಿಳುವಳಿಕೆ ನೀಡಲಾಗುವುದೆಂದರು.
ಬಸ್ ನಿಲ್ದಾಣದ ಒಳಗಿರುವ ಹೋಟೆಲ್ನಲ್ಲಿ ಶುಚಿತ್ವ ಹಾಗೂ ರುಚಿ ಉತ್ತಮವಾಗಿದ್ದು, ತಾವು ಉಪಹಾರ ಸೇವಿಸಿ ಮೆಚ್ಚಿಗೆ ವ್ಯಕ್ತಪಡಿಸಿದ ಪುಷ್ಪ ಅವರು, ಜಿಲ್ಲೆಯ ಎಲ್ಲಾ ಕೆಎಸ್ಆರ್ಟಿಸಿ ಬಸ್ ನಿಲ್ದಾಣಗಳಲ್ಲಿ ಉತ್ತಮ ನಿರ್ವಹಣೆ ಮಾಡುವಂತೆ ಸೂಚನೆ ನೀಡಿದ್ದಲ್ಲದೆ ಗ್ಯಾರಂಟಿ ಯೋಜನೆಗಳ ತಂಡ ಜಿಲ್ಲೆಯ ಎಲ್ಲಾ ಬಸ್ ನಿಲ್ದಾಣಗಳಿಗೆ ಭೇಟಿ ನೀಡಿ ಪರಿಶೀಲಿಸಲಿದೆ ಎಂದು ಹೇಳಿದರು.
ಕೆಎಸ್ಆರ್ಟಿಸಿ ಅಧಿಕಾರಿಗಳ ನಿರ್ಲಕ್ಷ್ಯ ಹಾಗೂ ಬೇಜವಾಬ್ದಾರಿಗೆ ರಾಜ್ಯ ಸರ್ಕಾರದ ಯೋಜನೆಗಳು ಹಳ್ಳ ಹಿಡಿಯುವಂತಾಗಿದ್ದು, ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ಪತ್ರ ಬರೆಯುವುದಾಗಿ ಎಚ್ಚರಿಸಿದರು.
ಇತ್ತೀಚೆಗೆ ನಡೆದ ಮೂರು ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಅಭೂತಪೂರ್ವ ಗೆಲುವು ಆಗಿದ್ದು, ಇದು ಗ್ಯಾರಂಟಿ ಯೋಜನೆಗಳ ಗೆಲುವು ಮತ್ತು ಜನರ ಗೆಲುವು ಆಗಿದ್ದು ದೇಶಕ್ಕೆ ಒಳ್ಳೆಯ ಸಂದೇಶ ನೀಡಿದೆ. ಇದಕ್ಕಾಗಿ ಎಲ್ಲಾ ಮತದಾರರಿಗೆ ಗ್ಯಾರಂಟಿ ಯೋಜನೆಗಳ ಪರವಾಗಿ ಧನ್ಯವಾದ ಅರ್ಪಿಸಿದರು.
ಇದೇ ತಿಂಗಳ ೫ ರಂದು ಹಾಸನದಲ್ಲಿ ಪಕ್ಷದ ಸ್ವಾಭಿಮಾನಿ ಸಮಾವೇಶ ಆಯೋಜಿಸಲಾಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಕಾರ್ಯಕ್ರಮದ ಕೇಂದ್ರಬಿಂದು ಆಗಿದ್ದಾರೆ. ಇದನ್ನು ಸ್ವಾಭಿಮಾನಿ ಜನ ಕಲ್ಯಾಣ ಸಮಾವೇಶವಾಗಿ ನಡೆಸುತ್ತಿದ್ದು, ಈ ಜಿಲ್ಲೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ಭಾಗವಹಿಸಬೇಕೆಂದು ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಗ್ಯಾರಂಟಿ ಅನುಷ್ಠಾನ ಸಮಿತಿಯ ಜಿಲ್ಲಾಧ್ಯಕ್ಷ ಎಂ.ಸಿ. ಶಿವಾನಂದಸ್ವಾಮಿ, ತಾಲ್ಲೂಕು ಅಧ್ಯಕ್ಷ ಮಲ್ಲೇಶ ಸ್ವಾಮಿ, ಸದಸ್ಯರುಗಳಾದ ಜೇಮ್ಸ್, ಹೇಮಾವತಿ, ಸಮೀಉಲ್ಲಾ ಶರೀಫ್, ಬಸವರಾಜ್ ಉಪಸ್ಥಿತರಿದ್ದರು.
The KSRTC bus stand in the district center is in chaos.