ಚಿಕ್ಕಮಗಳೂರು: ಸಮಾಜದಲ್ಲಿ ಪ್ರತಿಯೊಬ್ಬರಿಗೂ ಮುಕ್ತ ಹಾಗೂ ಸ್ವತಂತ್ರವಾಗಿ ಬದುಕುವ ಹಕ್ಕಿದೆ. ಹೆಚ್ಐವಿ ಬಾದಿತ ವ್ಯಕ್ತಿಯನ್ನು ಒಡನಾಟದಿಂದ ದೂರವಿಡದೆ ಅವರನ್ನು ಎಲ್ಲರಂತೆ ಭಾವಿಸುವುದು ಉತ್ತಮ ನಾಗರೀಕನ ಕರ್ತವ್ಯ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಸದಸ್ಯ ಕಾರ್ಯದರ್ಶಿ ವಿ. ಹನುಮಂತಪ್ಪ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಚಿಕ್ಕಮಗಳೂರು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಜಿಲ್ಲಾ ಆಸ್ಪತ್ರೆ, ಜಿಲ್ಲಾ ಏಡ್ಸ್ ತಡೆಗಟ್ಟುವ ಮತ್ತು ನಿಯಂತ್ರಣ ಘಟಕ ಹಾಗೂ ವಿವಿಧ ಸಂಘ ಸಂಸ್ಥೆಗಳ ವತಿಯಿಂದ ಇಂದು ನಗರದ ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದ್ದ ವಿಶ್ವ ಏಡ್ಸ್ ದಿನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಭಾರತದ ಸಂವಿಧಾನವೂ ದೇಶದ ಪ್ರತಿ ಪ್ರಜೆಗಳಿಗೆ ವ್ಯಕ್ತಿ ಗೌರವ ಹಾಗೂ ಏಕತೆ ಮನೋಭಾವದಿಂದ ಸ್ವತಂತ್ರವಾಗಿ ಜೀವಿಸುವ ಹಕ್ಕನ್ನು ನೀಡಿದೆ. ಯಾವುದೇ ಖಾಯಿಲೆಗಳಿಗೆ ಒಳಗಾಗಿ ಸಮುದಾಯದೊಂದಿಗೆ ಜೀವಿಸುತ್ತಿರುವ ವ್ಯಕ್ತಿಯನ್ನು ಅಥವಾ ಅಂಗವೈಕಲ್ಯದಿಂದ ಬಳಲುತ್ತಿರುವ ವಿಶೇಷ ಚೇತನರನ್ನು ಅಗೌರವಿಸದೆ ಮತ್ತು ಅಪಮಾನ ಮಾಡದಂತೆ ಸಮಾನತೆಯಿಂದ ಬದುಕುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದರು.
ಹೆಚ್ಐವಿ ಹಾಗೂ ಇತರೇ ಸಾಂಕ್ರಾಮಿಕ ರೋಗಗಳಿಗೆ ತುತ್ತಾಗಿ ಸಮುದಾಯದವರೊಂದಿಗೆ ತಮ್ಮ ಬದುಕನ್ನು ನಿರ್ವಹಿಸುತ್ತಿರುವ ವ್ಯಕ್ತಿಯು ಸಮಾಜದಲ್ಲಿ ಗೌರವಯುತವಾಗಿ ಜೀವನವನ್ನು ನಡೆಸಲು ಅನುಕೂಲವಾಗುವಂತೆ ಹಾಗೂ ಅವರ ರಕ್ಷಣೆಗಾಗಿ ಅನೇಕ ಕಾಯ್ದೆ ಕಾನೂನುಗಳನ್ನು ಜಾರಿ ಮಾಡಿದೆ. ಹೆಚ್ಐವಿ ಬಾದಿತ ವ್ಯಕ್ತಿಗಳಿಗೆ ಕರ್ತವ್ಯ ನಿರ್ವಹಿಸುವ ಸ್ಥಳಗಳಲ್ಲಿ ನಿಂದಿಸುವ ಹಾಗೂ ಅಪಮಾನ ಮಾಡುವವರ ವಿರುದ್ದ ಜುಲ್ಮಾನೆಯೊಂದಿಗೆ ಜೈಲುವಾಸ ಶಿಕ್ಷೆಯನ್ನು ನೀಡಲಾಗುವುದು. ಸಮಾಜದ ದುರ್ಬಲರು, ದಮನಿತರು ಹಾಗೂ ಶೋಷಿತ ವರ್ಗದವರ ರಕ್ಷಣೆಯೆ ಕಾನೂನು ರೂಪಿಸುವ ಉದ್ದೇಶವಾಗಿದೆ.
ಹೆಚ್ಐವಿ ಬಾದಿತರನ್ನು ಸಮಾನತೆಯಿಂದ ಅವರ ಹಕ್ಕುಗಳನ್ನು ರಕ್ಷಣೆ ಮಾಡಿ ಬಾದಿತರನ್ನು ಇನ್ನಷ್ಟು ನೋಯಿಸದೆ ಮನೋಧೈರ್ಯ ತುಂಬಿ ನಿರ್ಭಯದಿಂದ ಜೀವಿಸುವಂತೆ ಪ್ರೇರೇಪಿಸಬೇಕು ಎಂದ ಅವರು ಹೆಚ್ಐವಿ ಸೋಂಕಿತ ವ್ಯಕ್ತಿಗಳು ಯಾವುದೇ ಭಯವಿಲ್ಲದೇ ವೈದ್ಯರು ನೀಡುವ ಸಲಹೆ ಸೂಚನೆಗಳನ್ನು ಚಾಚು ತಪ್ಪದೆ ಪಾಲಿಸಿ ಸುರಕ್ಷಿತವಾಗಿರಿ ಎಂದು ತಿಳಿಸಿದರು.
ಜಿಲ್ಲಾ ಏಡ್ಸ್ ತಡೆಗಟ್ಟುವ ಮತ್ತು ನಿಯಂತ್ರಣ ಘಟಕ ಜಿಲ್ಲಾ ಕಾರ್ಯಕ್ರಮಾಧಿಕಾರಿ ಡಾ. ಹರೀಶ್ ಬಾಬು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ. ಜಿಲ್ಲೆಯಲ್ಲಿ ಹೆಚ್ಐವಿ ಸೋಂಕಿಗೆ ಒಳಗಾಗಿರುವ ವ್ಯಕ್ತಿಯನ್ನು ಸಮಗ್ರ ಆಪ್ತ ಸಮಾಲೋಚನೆ ಮತ್ತು ಪರೀಕ್ಷಾ ಕೇಂದ್ರಗಳಲ್ಲಿ ಸ್ನೇಹಪರ ಆಪ್ತ ಸಮಾಲೋಚನೆ ನಡೆಸಿ ಉಚಿತ ಪರೀಕ್ಷೆ ನಡೆಸಿ ಸ್ಥಳದಲ್ಲೆ ಫಲಿತಾಂಶ ನೀಡಿ ಹೆಚ್ಐವಿ ಖಚಿತಗೊಂಡಲ್ಲಿ ಮಾಹಿತಿಯನ್ನು ಗೌಪ್ಯವಾಗಿ ಇರಿಸಿ ಚಿಕಿತ್ಸೆ ನೀಡಲಾಗುವುದು.
ಬಹು ಸಂಗಾತಿಯೊಂದಿಗೆ ಅಸುರಕ್ಷಿತ ಲೈಂಗಿಕ ಸಂಪರ್ಕ, ಹೆಚ್ಐವಿ ಸೋಕಿತರ ರಕ್ತವನ್ನು ಪರೀಕ್ಷೆ ಮಾಡದೆ ಪಡೆಯುವುದು, ಸಂಸ್ಕರಣೆ ಮಾಡದ ಸೂಜಿ, ಸಿರಿಂಜ್ ಬಳಸುವುದರಿಂದ ಹಾಗೂ ಹೆಚ್ಐವಿ ಸೋಂಕಿತ ತಾಯಿಯಿಂದ ಮಗುವಿಗೆ ಗರ್ಭಾವಸ್ಥೆಯಲ್ಲಿ, ಹೆರಿಗೆ ಸಮಯದಲ್ಲಿ ಅಥವಾ ಎದೆ ಹಾಲೂಣಿಸುವ ಮೂಲಕ ಹೆಚ್ಐವಿ ಹರಡುತ್ತದೆ ಎಂದ ಅವರು ಸಾಂಕ್ರಮಿಕ ರೋಗಗಳಿಂದ ದೂರವಿರಲು ವೈದ್ಯರ ಸಲಹೆಗಳನ್ನು ಪಡೆದು ಮುನ್ನೆಚ್ಚರಿಕೆ ಕ್ರಮವನ್ನು ಅನುಸರಿಸಿ ಎಂದರು.
ಜಿಲ್ಲಾ ಸರ್ಜನ್ ಡಾ. ಮೋಹನ್ ಕುಮಾರ್ ಮಾತನಾಡಿ ಹೆಚ್ಐವಿ ಸೋಂಕು ಇರುವ ಮಹಿಳೆ ಗರ್ಭ ಧರಿಸಿದರೆ ಮಗುವಿಗೆ ಸೋಂಕು ತಗುಲುವ ಸಾಧ್ಯತೆ ಇದೆ. ಪಿಪಿಟಿಸಿಟಿ ಸೇವೆಯಿಂದ ತಂದೆ, ತಾಯಿಯ ಮೂಲಕ ಮಗುವಿಗೆ ಸೋಂಕು ಹರಡುವುದನ್ನು ತಡೆಗಟ್ಟಬಹುದಾಗಿದೆ. ಎಲ್ಲಾ ಗರ್ಭಿಣಿಯರು ತಪ್ಪದೇ ಹೆಚ್ಐವಿ ಪರೀಕ್ಷೆ ಮಾಡಿಸಿಕೊಳ್ಳಬೇಕು. ಕಡ್ಡಾಯವಾಗಿ ಸರ್ಕಾರಿ ಆಸ್ಪತ್ರೆಗಳಲ್ಲಿ ಹೆರಿಗೆ ಆಗಬೇಕು. ವೈದ್ಯರ ಸಲಹೆಯಂತೆ ಸೂಕ್ತ ಔಷಧೋಪಚಾರ ಪಡೆದು ಹುಟ್ಟುವ ಮಗುವನ್ನು ಹೆಚ್ಐವಿ ಯಿಂದ ರಕ್ಷಿಸಿ ಎಂದರು.
ಸಾಮಾಜಿಕ ಸಂಶೋಧನೆ ಮತ್ತು ಅಭಿವೃದ್ಧಿ ಪ್ರತಿಷ್ಠಾನ ಅಧ್ಯಕ್ಷ ರಾಜು ನರಸಯ್ಯ ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿ ಉಪನ್ಯಾಸ ನೀಡಿದರು ಕಾರ್ಯಕ್ರಮದಲ್ಲಿ ಜಿಲ್ಲಾ ಆಯುಷ್ ಅಧಿಕಾರಿ ಡಾ. ಗೀತಾ, ಕುಟುಂಬ ಕಲ್ಯಾಣಾಧಿಕಾರಿ ಡಾ. ಶಶಿಕಲಾ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ವೈ. ಎಮ್. ಲಲಿತ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿ ಸಿಬ್ಬಂದಿಗಳು, ಆಶಾ ಕಾರ್ಯಕರ್ತೆಯರು ಹಾಗೂ ವಿವಿಧ ಕಾಲೇಜು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
World AIDS Day program organized at Ambedkar Bhavan