ಚಿಕ್ಕಮಗಳೂರು: ಭಾರತದ ಬೆಳಕು, ಆಧುನಿಕ ಭಾರತದ ನಿರ್ಮಾತೃ ಡಾ. ಬಿ.ಆರ್ ಅಂಬೇಡ್ಕರ್ ಅವರ ಆರ್ಥಿಕ, ಸಾಮಾಜಿಕ, ರಾಜಕೀಯ ಚಿಂತನೆಗಳು ದೇಶದ ಅಭಿವೃದ್ಧಿಗೆ ಸಹಕರಿಸುತ್ತದೆ ಎಂದು ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದ ಶಾಸಕ ಹೆಚ್.ಡಿ ತಮ್ಮಯ್ಯ ಹೇಳಿದರು.
ಡಾ. ಬಿ.ಆರ್ ಅಂಬೇಡ್ಕರ್ ಅವರ ೬೮ನೇ ಪರಿನಿರ್ವಾಣ ದಿನದ ಅಂಗವಾಗಿ ನಗರದ ಜಿಲ್ಲಾ ಪಂಚಾಯಿತಿ ಕಚೇರಿ ಆವರಣದಲ್ಲ್ಲಿ ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಪುಷ್ಪ ನಮನ ಸಲ್ಲಿಸಿ ಅವರು ಮಾತನಾಡಿದರು.
ಪ್ರಪಂಚ ಕಂಡ ಅತ್ಯಂತ ಪ್ರಭುದ್ಧ ಮಾನವತಾವಾದಿ ಬಾಬಾ ಸಾಹೇಬ್ ಡಾ. ಬಿ.ಆರ್ ಅಂಬೇಡ್ಕರ್. ಸಮಾಜ ಸುಧಾರಕ, ನ್ಯಾಯಶಾಸ್ತ್ರಜ್ಞ, ಅರ್ಥಶಾಸ್ತ್ರಜ್ಞ, ಬಹುಭಾಷಾ ವಾಗ್ಮಿ ಹಾಗೂ ಸಾಮಾಜಿಕ ಚಿಂತಕ ಬಹು ಪ್ರತಿಭೆಯುಳ್ಳ ಬಾಬಾ ಸಾಹೇಬರು ಸಮಾಜದಲ್ಲಿನ ಅಸ್ಪೃಶ್ಯತೆ, ಜಾತಿವಾದ, ಅಸಮಾನತೆಯಂತಹ ಸಾಮಾಜಿಕ ಪಿಡುಗುಗಳ ಕತ್ತಲನ್ನು ಹೋಗಲಾಡಿಸಿ ಸಮಾನತೆ, ಸಹಿಷ್ಣುತೆ, ಸಹೋದರತ್ವ, ಸಾರ್ವಭೌಮತ್ವದ ದೀಪ ಹಚ್ಚಿ ಭಾರತದ ಸಂವಿಧಾನ ರಚಿಸಿ ದೇಶದ ಬೆಳಕಾಗಿ ನಿಂತವರು. ಅವರ ವಿಚಾರ ದಾರೆಗಳು ಸದಾ ಜೀವಂತವಾದುದು ಎಂದರು.
ಸಮಾಜದ ಶೋಷಿತ ವರ್ಗದವರ ಧ್ವನಿಯಾಗಿ ಅವರ ಬದುಕನ್ನು ಸುಧಾರಿಸಲು ಮತ್ತು ಸಮಾನತೆ, ಸ್ವಾತಂತ್ರ್ಯದಿಂದ ಜೀವಿಸುವ ಹಕ್ಕನ್ನು ನೀಡಲು ಹಲವಾರು ಹೋರಾಟಗಳನ್ನು ಮಾಡಿ ನೊಂದ ಜೀವಗಳ ಪರ ನಿಂತ ಅವರು ಮಹಿಳೆಯರಿಗೆ ಮತದಾನದ ಹಕ್ಕನ್ನು ನೀಡುವುದರೊಂದಿಗೆ ಲಿಂಗ ತಾರತಮ್ಯವನ್ನು ಹೋಗಲಾಡಿಸಿದರು. ಬಡತನದಲ್ಲಿದ್ದರು ಶಿಕ್ಷಣದ ಮೂಲಕ ಪ್ರಪಂಚದ ಹಲವಾರು ಸಂವಿಧಾನಗಳನ್ನು ಓದಿ ಭಾರತದ ಸಂವಿಧಾನ ಶಿಲ್ಪಿಯಾದರು. ಭಾರತದಲ್ಲಿ ಪೂರ್ವಗ್ರಹ ಮತ್ತು ಜಾತಿ ತಾರತಮ್ಯವನ್ನು ಎದುರಿಸಿ ಸಾಮಾಜಿಕ ನ್ಯಾಯ ಹಾಗೂ ರಾಷ್ಟ್ರೀಯ ಪುನರುಜ್ಜೀವನದ ಹರೀಕಾರರಾದರು ಎಂದ ಅವರು ಅಂಬೇಡ್ಕರ್ ಅವರ ಜೀವನ ಮತ್ತು ಸಾಧನೆಗಳು ಪ್ರತಿಯೊಬ್ಬರಿಗೂ ಸ್ಪೂರ್ತಿದಾಯಕವಾದುದು ಎಂದರು.
ವಿಧಾನ ಪರಿಷತ್ ಶಾಸಕ ಸಿ.ಟಿ ರವಿ ಮಾತನಾಡಿ ಭಾರತದ ಸುಭದ್ರತೆಯನ್ನು ಕಾಪಾಡಲು ಸಂವಿಧಾನದ ಮೂಲಕ ಪ್ರತಿಯೊಬ್ಬರಿಗೂ ಸಮಾನತೆಯನ್ನು ನೀಡಿದರು. ಅಂಬೇಡ್ಕರ್ ಅವರು ಕಾಯವಾಗಿ ಅಲ್ಲದೆ ತತ್ವಗಳು, ಚಿಂತನೆಗಳ ಮೂಲಕ ಭಾರತದ ಜ್ಯೋತಿಯಾಗಿ ಸದಾ ಅಭಿವೃದ್ಧಿ ಕಾರ್ಯಗಳಿಗೆ ಬೆಳಕಾಗಿದ್ದಾರೆ. ಅಂಬೇಡ್ಕರ್ ಅವರ ಬೌದ್ಧಿಕ ಸಾಮರ್ಥ್ಯ ಅಸಾಧಾರಣವಾದುದು. ದೀನ ದಲಿತರ ರಾಜಕೀಯ ಹಕ್ಕುಗಳು ಮತ್ತು ಸಾಮಾಜಿಕ ಸ್ವಾತಂತ್ರ್ಯಕ್ಕಾಗಿ ದಣಿವಿನ ಅರಿವಿಲ್ಲದೆ ಶ್ರಮಿಸಿದರು.
ಅವರ ಜೀವನ ಮತ್ತು ಸಾಧನೆಗಳು, ತತ್ವ ಸಿದ್ಧಾಂತಗಳಿಗೆ ವಿಶ್ವವೇ ಮೆಚ್ಚಿ ತಲೆಬಾಗುತ್ತದೆ. ಪ್ರಬುದ್ಧ ಅರ್ಥಶಾಸ್ತ್ರಜ್ಞ ಮತ್ತು ಸಂಸ್ಥೆ ನಿರ್ಮಾಪಕರಾದ ಡಾ. ಬಿ.ಆರ್ ಅಂಬೇಡ್ಕರ್ ಅನೇಕ ವಿದ್ವತ್ಪೂರ್ಣ ಕೃತಿಗಳನ್ನು ರಚಿಸಿದ್ದಾರೆ. ಅರ್ಥಶಾಸ್ತ್ರದ ಕುರಿತಾದ ಅವರ ಗ್ರಂಥಗಳು ಭಾರತವು ಆರ್ಥಿಕ ಅಭಿವೃದ್ಧಿಯಲ್ಲಿ ವಿಶ್ವಗುರುವಾಗಲು ಸಹಕಾರಿಯಾಗಿದೆ ಎಂದ ಅವರು ಸರ್ಕಾರವು ಅವರ ಬದುಕಿನ ಸಾಧನೆಗಳನ್ನು ಸ್ಮಾರಕಗಳು, ಗ್ರಂಥಾಲಯಗಳನ್ನು ನಿರ್ಮಿಸುವ ಮೂಲಕ ಯುವ ಜನರಿಗೆ ಪರಿಚಯಿಸುವ ಕಾರ್ಯ ನಿರ್ವಹಿಸುತ್ತಿದೆ ಎಂದ ತಿಳಿಸಿದರು.
ಜಿಲ್ಲಾಧಿಕಾರಿ ಮೀನಾ ನಾಗರಾಜ್ ಸಿ.ಎನ್. ಮಾತನಾಡಿ ಅಂಬೇಡ್ಕರ್ ಅವರು ಪ್ರಪಂಚದಾದ್ಯಂತ ಲಕ್ಷಾಂತರ ಭಾರತೀಯರ ಸಮಾನತೆ ಮತ್ತು ಸಾಮಾಜಿಕ ನ್ಯಾಯದ ಪ್ರತಿಪಾದಕರಿಗೆ ಸ್ಪೂರ್ತಿಯಾಗಿದ್ದಾರೆ. ಅವರು ರಚಿಸಿಕೊಟ್ಟ ಸಂವಿಧಾನವನ್ನು ಪ್ರತಿಯೊಬ್ಬರು ಓದಿ ತಿಳಿದುಕೊಂಡು ತಮ್ಮ ಹಕ್ಕಗಳನ್ನು ಧೈರ್ಯದಿಂದ ಪಡೆದುಕೊಳ್ಳುವುದರ ಮೂಲಕ ಅವರಿಗೆ ಗೌರವ ನಮನ ಸಲ್ಲಿಸಬೇಕು ಎಂದ ಅವರು ಅವರ ಜೀವನ ಆದರ್ಶಗಳನ್ನು ತಮ್ಮಲ್ಲಿ ಅಳವಡಿಸಿಕೊಂಡು ಉತ್ತಮ ಪ್ರಜೆಗಳಾಗಿ ದೇಶದ ಅಭಿವೃದ್ಧಿಗೆ ಸಹಕರಿಸಿ ಎಂದರು.
ಕಾರ್ಯಕ್ರಮದಲ್ಲಿ ಜಿ.ಪಂ. ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಹೆಚ್.ಎಸ್. ಕೀರ್ತನಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಕ್ರಂ ಅಮಟೆ, ಅಪರ ಜಿಲ್ಲಾಧಿಕಾರಿ ನಾರಾಯಣ ರಡ್ಡಿ ಕನಕ ರಡ್ಡಿ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕಿ ಮಾಲತಿ, ಭದ್ರಾ ಕಾಡಾ ಶಿವಮೊಗ್ಗ ಅಧ್ಯಕ್ಷರಾದ ಡಾ. ಅಂಶುಮಂತ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ನಯಾಜ್ ಅಹಮ್ಮದ್, ನಗರಸಭೆ ಅಧ್ಯಕ್ಷೆ ಸುಜಾತ ಶಿವಕುಮಾರ್ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿ, ಸಿಬ್ಬಂದಿಗಳು ಹಾಗೂ ದಲಿತ ಸಂಘಟನೆಗಳ ಮುಖಂಡರುಗಳು, ಸಾರ್ವಜನಿಕರು ಉಪಸ್ಥಿತರಿದ್ದರು.
Dr. B.R. Ambedkar’s 68th Parinirvana