ಚಿಕ್ಕಮಗಳೂರು: ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಸೇವೆ ಬಹಳ ಅನನ್ಯವಾಗಿದ್ದು, ಜನಪ್ರತಿನಿಧಿಗಳು ಹಾಗೂ ಸ್ಥಳೀಯರು ಸಹಕಾರ ನೀಡುವುದು ಅಗತ್ಯವಾಗಿದೆ ಎಂದು ಶಾಸಕ ಹೆಚ್.ಡಿ ತಮ್ಮಯ್ಯ ಅಭಿಪ್ರಾಯಿಸಿದರು.
ಅವರು ಇಂದು ನಗರದ ವಿವಿಧ ವಾರ್ಡ್ಗಳಲ್ಲಿ ಸುಮಾರು ೧.೧೫ ಕೋಟಿ ರೂ ವೆಚ್ಚದಲ್ಲಿ ನಿರ್ಮಿಸಲಾಗಿರುವ ದಿಢೀರ್ ನಗರ, ಹಕ್ಕಿಪಿಕ್ಕಿ ಕಾಲೋನಿ, ಐ.ಜಿ ಬಡಾವಣೆ, ಶಾಂತಿನಗರ-೨, ಕುಪ್ಪೇನಹಳ್ಳಿ, ಕಲ್ಯಾಣನಗರ ಈ ನೂತನ ಅಂಗನವಾಡಿ ಕೇಂದ್ರಗಳ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ಅಂಗನವಾಡಿ ಕಾರ್ಯಕರ್ತೆಯರಿಗೆ ಸ್ಥಳೀಯರ ಸಹಕಾರ ದೊರೆತಾಗ ಉತ್ತಮ ಸೇವೆ ಸಲ್ಲಿಸಲು ಸಹಕಾರಿಯಾಗಲಿದೆ ಎಂದ ಅವರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮೂಲಕ ಅಂಗನವಾಡಿ ಕೇಂದ್ರಗಳಿಗೆ ಅಗತ್ಯ ವಸ್ತುಗಳನ್ನು ಪೂರೈಸುವುದು ಸರ್ಕಾರದ ಕರ್ತವ್ಯ ಮತ್ತು ಜವಾಬ್ದಾರಿ ಎಂದರು.
ಕೆಆರ್ಡಿಎಲ್ ಮತ್ತು ನಿರ್ಮಿತಿ ಕೇಂದ್ರದಿಂದ ನಿರ್ಮಾಣ ಮಾಡಿರುವ ಅಂಗನವಾಡಿ ಕೇಂದ್ರಗಳು ಉತ್ತಮ ಗುಣಮಟ್ಟಗಳಿಂದ ಕೂಡಿದ್ದು, ಕೇಂದ್ರಗಳಲ್ಲಿ ಬಡವರ ಮಕ್ಕಳು ಅಭ್ಯಾಸ ಮಾಡುವುದರಿಂದ ತೊಂದರೆಯಾಗದಂತೆ ತಲಾ ೨೦ ಲಕ್ಷ ರೂ ವೆಚ್ಚದಲ್ಲಿ ಅಂಗನವಾಡಿ ಕೇಂದ್ರಗಳನ್ನು ನಿರ್ಮಿಸಲಾಗಿದೆ ಎಂದು ಹೇಳಿದರು.
ನೂತನ ಅಂಗನವಾಡಿ ಕೇಂದ್ರಗಳ ಸುತ್ತ ಕಾಂಪೌಂಡ್ ನಿರ್ಮಾಣ ಮಾಡಲು ನಗರಸಭೆ ಪೌರಾಯುಕ್ತರಿಗೆ ಸೂಚಿಸಿದ್ದೇನೆ, ನಿವೇಶನ ದೊರೆತ ಬಳಿಕ ಕಾಂಪೌಂಡ್ ನಿರ್ಮಿಸಲಿದ್ದು, ಸ್ಥಳೀಯರು ಸೇರಿ ಅಂಗನವಾಡಿ ಕೇಂದ್ರದ ಮುಂಭಾಗದಲ್ಲಿ ಹಣ್ಣು, ತರಕಾರಿ ಗಿಡ ನೆಟ್ಟು ಕೈತೋಟ ಮಾಡಿದರೆ ಪೋಷಕಾಂಶಗಳ ತರಕಾರಿಗಳು ಬೆಳೆಯಬಹುದಾಗಿದ್ದು, ಇದರ ಸದುಪಯೋಗವನ್ನು ಸ್ಥಳೀಯ ನಿವಾಸಿಗಳು ಪಡೆಯಬೇಕೆಂದು ಮನವಿ ಮಾಡಿದರು
ಬಡವರ ಬದುಕಿನ ಬಗ್ಗೆ ಹಾಗೂ ವ್ಯವಸ್ಥೆ ಕುರಿತು ಹೇಳುತ್ತೇನೆ. ಬಣ್ಣದ ಮಾತುಗಳನ್ನಾಡಿ ಮರುಳು ಮಾಡುವ ಅಗತ್ಯ ಇಲ್ಲ. ಸರ್ವರೂ ಕಷ್ಟ-ಸುಖಗಳನ್ನು ಹಂಚಿಕೊಂಡು ಬಾಳುವುದು ಒಳಿತು ಎಂದರು.
ಪಕ್ಷ, ಜಾತಿ, ಧರ್ಮ ಮಾಡದೆ ಎಲ್ಲಾ ವರ್ಗದ ಬಡವರೇ ಪಕ್ಷ, ಜಾತಿ ಆಗಿದ್ದು ಅವರುಗಳ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದು ಭರವಸೆ ನೀಡಿದ ಅವರು, ರಸ್ತೆ, ಚರಂಡಿಗಿಂತ ಮಿಗಿಲಾಗಿ ಒಳ್ಳೆಯ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಇನ್ನೆರಡು ವರ್ಷದಲ್ಲಿ ಸಾರ್ವಜನಿಕ ಸೇವೆಗೆ ಮುಕ್ತವಾಗಲಿದೆ ಎಂದು ಭರವಸೆ ನೀಡಿದರು.
ಸಮಾರಂಭದಲ್ಲಿ ನಗರಸಭಾಧ್ಯಕ್ಷೆ ಸುಜಾತ ಶಿವಕುಮಾರ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ನಯಾಜ್ ಅಹಮದ್, ಜಿ.ಪಂ ಮಾಜಿ ಅಧ್ಯಕ್ಷೆ ರೇಖಾ ಹುಲಿಯಪ್ಪಗೌಡ, ನಗರಸಭೆ ಸದಸ್ಯರುಗಳಾದ ಮಣಿಕಂಠ, ಮುನೀರ್ ಅಹಮದ್, ಖಲಂದರ್, ಗುರುಮಲ್ಲಪ್ಪ, ಇಂದಿರಾಶಂಕರ್, ಪೌರಾಯುಕ್ತರಾದ ಬಿ.ಸಿ ಬಸವರಾಜು, ಗುಣವತಿ, ಸಿಡಿಪಿಓ ರಂಗನಾಥ್, ಅಧಿಕಾರಿಗಳಾದ ಅಶ್ವಿನಿ ಗಂಗಾಧರ್ ಉಪಸ್ಥಿತರಿದ್ದರು.
Inauguration of new Anganwadi centers in various wards of Chikkamagaluru city