ಚಿಕ್ಕಮಗಳೂರು: ತಾಲೂಕಿನ ಆಲ್ದೂರು ಗ್ರಾಮದಲ್ಲಿ ವಿವಾದಿತ ಜಾಗಕ್ಕೆ ಸಂಬಂಧಿಸಿದಂತೆ ದಲಿತ ಸಮಾಜ ಹಾಗೂ ಒಕ್ಕಲಿಗ ಸಮಾಜದ ನಡುವಿನ ಗಲಾಟೆ ತೀವ್ರವಾಗಿದ್ದು, ವಿವಾದಿತ ಸ್ಥಳದಲ್ಲೇ ಇಂದು ದಲಿತರು ಪಾರ್ಥೀವ ಶರೀರದ ಅಂತ್ಯ ಸಂಸ್ಕಾರ ನಡೆಸಿದ್ದಾರೆ. ಈ ವೇಳೆ ಒಕ್ಕಲಿಗ ಸಮುದಾಯ ಹಾಗೂ ದಲಿತರ ನಡುವೆ ವಾಗ್ದಾಳಿ ನಡೆದಿದ್ದಲ್ಲದೆ ಒಕ್ಕಲಿಗ ಸಮುದಾಯದ ಮಹಿಳೆಯರು ಶವ ಸಂಸ್ಕಾರದ ಗುಂಡಿಯೊಳಗೆ ಇಳಿದು ಪ್ರತಿಭಟನೆ ನಡೆಸಿದ ಘಟನೆಯೂ ನಡೆದಿದೆ.
ಆಲ್ದೂರು ಗ್ರಾಮದ ರಸ್ತೆ ಪಕ್ಕದ ಜಾಗದ ಬಗ್ಗೆ ಹಿಂದಿನಿಂದಲೂ ವಿವಾದವಿತ್ತು. ದಲಿತರು ಈ ಜಾಗ ನಮ್ಮ ಸ್ಮಶಾನಕ್ಕೆ ಸೇರಿದ್ದು ಎಂದರೆ, ಒಕ್ಕಗಲಿರು ಇದು ಒಕ್ಕಲಿಗರ ಸಮುದಾಯ ಭವನಕ್ಕೆ ಸೇರಿದ ಜಾಗ ಎಂದು ಹೇಳುತ್ತಲೇ ಬಂದಿದ್ದರು. ಹೀಗಾಗಿ ದಶಕಗಳಿಂದಲೂ ಈ ಜಾಗ ವಿವಾದಿತ ಪ್ರದೇಶವೇ ಆಗಿತ್ತು.
ಈ ನಡುವೆ ಶುಕ್ರವಾರ ಆಲ್ದೂರು ಗ್ರಾಮದಲ್ಲಿ ದಲಿತ ಮಹಿಳೆಯೋರ್ವರು ಮೃತಪಟ್ಟಿದ್ದು, ವಿವಾದಿತ ಜಾಗದಲ್ಲೇ ಗುಂಡಿ ತೆಗೆದು ಮಹಿಳೆ ಅಂತ್ಯ ಸಂಸ್ಕಾರಕ್ಕೆ ದಲಿತರು ಮುಂದಾಗಿದ್ದರು. ವಿಷಯ ತಿಳಿದ ಒಕ್ಕಲಿಗ ಸಮುದಾಯದವರು ಸ್ಥಳಕ್ಕೆ ತೆರಳಿ ಅಂತ್ಯ ಸಂಸ್ಕಾರ ಮಾಡಲು ಮುಂದಾದವರೊಂದಿಗೆ ವಾಗ್ವಾದಕ್ಕಿಳಿದಿದ್ದಾರೆ. ಜಾಗ ಒಕ್ಕಲಿಗರ ಸಮುದಾಯ ಭವನಕ್ಕೆ ಸೇರಿದೆ. ಸದರಿ ಜಾಗದ ಬಗ್ಗೆ ವಿವಾದವಿದೆ. ಈ ಪ್ರಕರಣ ನ್ಯಾಯಾಲಯದಲ್ಲಿದ್ದು ಯಾವ ಕಾರಣಕ್ಕೂಇಲ್ಲಿ ಅಂತ್ಯ ಸಂಸ್ಕಾರ ನಡೆಸಬಾರದು ಎಂದು ಪಟ್ಟು ಹಿಡಿದರು. ಈ ವೇಳೆ ಎರಡು ಸಮುದಾಯದವರ ನಡುವೆ ವಾಕ್ಸಮರ ನಡೆದಿದೆ.
ಇದೇ ವೇಳೆ ಆಲ್ದೂರು ಗ್ರಾಪಂ ಮಾಜಿ ಅಧ್ಯಕ್ಷೆ ಪೂರ್ಣಿಮಾ ಶ್ರೀನಿವಾಸ್ ಸೇರಿದಂತೆ ಮೂರ್ನಾಲ್ಕು ಮಹಿಳೆಯರು ಸ್ಮಶಾನದ ಗುಂಡಿಗೆ ಇಳಿದು ಇಲ್ಲಿ ಶವ ಸಂಸ್ಕಾರ ಮಾಡಬಾರದು ಎಂದು ಪಟ್ಟು ಹಿಡಿದರು. ಆಗ ಪರಿಸ್ಥಿತಿ ಕೈಮೀರದಂತೆ ತಡೆಯಲು ಪೊಲೀಸರು ಮಹಿಳೆಯನ್ನು ಗುಂಡಿಯಿಂದ ಹೊರಗೆ ಕರೆತಂದಿದ್ದಾರೆ.
ಆಗ ದಲಿತ ಸಮಾಜದವರು ಗುಂಡಿಯ ಸುತ್ತಲೂ ಮಾನವ ಸರಪಳಿ ನಿರ್ಮಾಣ ಮಾಡಿಕೊಂಡು ನಿಂತು ಮಹಿಳೆಯ ಪಾರ್ಥೀವ ಶರೀರದ ಅಂತ್ಯ ಸಂಸ್ಕಾರದ ವಿಧಿವಿದಾನ ಪೂರ್ಣಗೊಳಿಸಿದ್ದಾರೆ. ಇದರಿಂದಾಗಿ ಆಲ್ದೂರಿನಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.
ಇದರಿಂದ ಕೆರಳಿದ ಒಕ್ಕಲಿಗ ಸಮಾಜದವರು ಆಲ್ದೂರು ಪೊಲೀಸ್ ಠಾಣೆಗೆ ತೆರಳಿ ಪ್ರತಿಭಟನೆ ನಡೆಸಿದ್ದಾರೆ. ಸ್ಥಳಕ್ಕೆ ಕಂದಾಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಎರಡು ಸಮುದಾಯದ ಜನರ ಅಹವಾಲು ಆಲಿಸಿದ್ದಾರೆ. ಆದರೂ ಪರಿಸ್ಥಿತಿ ಇನ್ನೂ ಬೂದಿ ಮುಚ್ಚಿದ ಕೆಂಡದಂತೆಯೇ ಇದೆ. ಪೊಲೀಸ್ ಠಾಣೆಯಲ್ಲಿ ಎರಡು ಸಮುದಾಯದ ಕಡೆಯವರು ಜಮಾಯಿಸಿದ್ದರಿಂದ ಆಲ್ದೂರಿನಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
ಕಠಿಣ ಕ್ರಮ : ಸ್ಮಶಾನದ ಜಾಗದ ವಿವಾದಕ್ಕೆ ಸಂಬಂಧಿಸಿದಂತೆ ಕಾನೂನು ವ್ಯವಸ್ಥೆಗೆ ಧಕ್ಕೆ ತಂದಲ್ಲಿ ಕಠಿಣ ಕ್ರಮ ಕೈಗೊಳ್ಳುವುದಾಗಿ ಜಿಲ್ಲಾ ರಕ್ಷಣಾಧಿಕಾರಿ ವಿಕ್ರಂ ಆಮ್ಟೆ ಎಚ್ಚರಿಕೆ ನೀಡಿದ್ದಾರೆ. ಘಟನೆ ಹಿನ್ನೆಲೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಆಲ್ದೂರು ಸರ್ವೆ ನಂಬರ್ 108 ರಲ್ಲಿ ದಲಿತ ಮಹಿಳೆಯ ಅಂತ್ಯಸಂಸ್ಕಾರ ನಡೆಸಲು ಕೆಲವರು ಅಡ್ಡಿಪಡಿಸಿದ ಹಿನ್ನೆಲೆಯಲ್ಲಿ ಗೊಂದಲ ಸೃಷ್ಟಿಯಾಗಿತ್ತು ಎಂದರು.
ಪಹಣಿ ದಾಖಲೆ ಪ್ರಕಾರ ಸ್ಮಶಾನ ಎಂದು ಇದ್ದರೂ 2013 ರಿಂದ ವಿವಾದ ಸೃಷ್ಟಿಯಾಗಿದೆ.2013 ರ ನಂತರ ಗ್ರಾಮ ಪಂಚಾಯಿತಿಯಲ್ಲಿ ಒಂದು ಸಮುದಾಯದ (ಒಕ್ಕಲಿಗ) ಪರವಾಗಿ ನಿರ್ಣಯ ಮಾಡಲಾಗಿದ್ದು, ಜಾಗಕ್ಕೆ ಸಂಬಂಧಿಸಿದಂತೆ ತಡೆ ಆದೇಶ, ಇಂಜೆಕ್ಷನ್ ಇಲ್ಲ ಎಂದು ತಿಳಿಸಿದರು.
ದಲಿತ ಸಮುದಾಯದ ಮಹಿಳೆಯ ಅಂತ್ಯಕ್ರಿಯೆ ನಡೆಸಲು ಬಂದಾಗ ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇದರಿಂದ ವಾಗ್ವಾದ ಗಲಾಟೆಯೂ ನಡೆದಿದ್ದು, ಪೊಲೀಸ್ /ತಹಸೀಲ್ದಾರ್, ಪಂಚಾಯತಿ ಅಧಿಕಾರಿಗಳ ಸಮ್ಮುಖದಲ್ಲಿ ಅಂತ್ಯಕ್ರಿಯ ನಡೆಸಲಾಯಿತು ಎಂದರು.
ವಿವಾದಕ್ಕೆ ಸಂಬಂಧಿಸಿದಂತೆ ದೂರು- ಪ್ರತಿ ದೂರನ್ನು ನೀಡಿದ್ದು, ಉಭಯ ಬಣ್ಣಗಳ ಮುಖ್ಯಸ್ಥರನ್ನು ಕರೆದು ಚರ್ಚಿಸಿ ಶಾಂತಿ ಕಾಯ್ದುಕೊಳ್ಳಲು ತಿಳಿಸಲಾಗಿದೆ ಎಂದು ಹೇಳಿದರು. ಮತ್ತೆ ಸಭೆ ನಡೆಸಿ ದಾಖಲೆಗಳನ್ನು ಪರಿಶೀಲಿಸಿ ಸಮಸ್ಯೆ ಬಗೆಹರಿಸಿ ಗೊಂದಲಕ್ಕೆ ತೆರೆ ಎಳೆಯುವುದಾಗಿ ಹೇಳಿದರು.
ತಹಸೀಲ್ದಾರ್ ಡಾ.ಸುಮಂತ್, ಎಎಸ್ಪಿ ಕೃಷ್ಣಮೂರ್ತಿ, ಡಿವೈಎಸ್ಪಿ ಶೈಲೇಂದ್ರ ಸೇರಿದಂತೆ ಇತರೆ ಅಧಿಕಾರಿಗಳು ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದಾರೆ.
Controversy over cemetery land in Aldur village