ಚಿಕ್ಕಮಗಳೂರು: ಚಿಕ್ಕಮಗಳೂರು: ವಿಶ್ವಹಿಂದೂ ಪರಿಷತ್-ಬಜರಂಗದಳ ವತಿಯಿಂದ ಡಿಸೆಂಬರ್ ೧೨ ರಿಂದ ೧೪ ರ ವರೆಗೆ ನಡೆಯಲಿರುವ ದತ್ತ ಜಯಂತಿ ಕಾರ್ಯಕ್ರಮಗಳಿಗೆ ಜಿಲ್ಲಾಡಳಿತದ ವತಿಯಿಂದ ಸಕಲ ಸಿದ್ಧತೆ ಕೈಗೊಳ್ಳಲಳಾಗಿದೆ ಎಂದು ಜಿಲ್ಲಾಧಿಕಾರಿ ಸಿ.ಎನ್.ಮೀನಾ ನಾಗರಾಜ್ ತಿಳಿಸಿದ್ದಾರೆ.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದತ್ತಪೀಠದಲ್ಲಿ ಬೆಳಗ್ಗೆ ೭ ರಿಂದ ಸಂಜೆ ೬ ರವರೆಗೆ ದತ್ತಪಾದುಕೆಗಳ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಎಲ್ಲಾ ಇಲಾಖೆಗಳನ್ನು ಒಳಗೊಂಡಂತೆ ಸುಸಜ್ಜಿತವಾಗಿ ಕುಡಿಯುವ ನೀರು, ಮೊಬೈಲ್ ಶೌಚಾಲಯ, ಸ್ವಚ್ಛತೆ, ವೈದ್ಯಕೀಯ ವ್ಯವಸ್ಥೆ ಸೇರಿದಂತೆ ಮೂಲ ಸೌಕರ್ಯಗಳನ್ನು ದತ್ತಪೀಠದ ಮಾರ್ಗ ಮತ್ತು ಪೀಠದ ಪರಿಸರದಲ್ಲಿ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ದತ್ತಪೀಠ ಮಾರ್ಗದ ಕವಿಕಲ್ ಗಂಡಿ ಬಳಿ ಅಧಿಕ ಮಳೆಯಿಂದಾಗಿ ರಸ್ತೆ ಹಾನಿಯಾಗಿದೆ. ನಿರಂತರ ಮಳೆ ಕಾರಣ ಪೂರ್ಣ ಪ್ರಮಾಣದಲ್ಲಿ ದುರಸ್ಥಿ ಸಾಧ್ಯವಾಗಿಲ್ಲ. ಈ ಹಿನ್ನೆಲೆಯಲ್ಲಿ ಅಲ್ಲಿ ಒಮ್ಮುಖ ಸಂಚಾರ ಮಾಧ್ಯ ಸಾಧ್ಯವಾಗಿರುವುದರಿಂದ ಭಕ್ತಾಧಿಗಳು ಉದ್ದ ಛಾಸಿ ಬಸ್ಗಳು ಇನ್ನಿತರೆ ವಾಹನಗಳಲ್ಲಿ ಬರಬಾರದು ಎಂದು ಸೂಚಿಸಲಾಗಿದೆ. ಇದರ ನಡುವೆಯೂ ಯಾವುದಾದರೂ ವಾಹನ ಬಂದರೆ ಕೈಮರದ ಚೆಕ್ ಪೋಸ್ಟ್ನಿಂದ ಬೇರೆ ವಾಹನಗಳಲ್ಲಿ ಕಳಿಸಿಕೊಡಲು ಕ್ರಮ ಕೈಗೊಳ್ಳಲಾಗಿದೆ ಎಂದರು.
ಡಿಸೆಂಬರ್ ೧೧ ರಿಂದ ೧೪ ರ ಸಂಜೆ ವರೆಗೆ ದತ್ತಪೀಠ ಹಾಗೂ ಗಿರಿ ಭಾಗದ ಪ್ರವಾಸಿ ತಾಣಗಳಿಗೆ ಹೊರಗಿನಿಂದ ಬರುವ ಪ್ರವಾಸಿಗರಿಗೆ ನಿರ್ಬಂಧ ಹೇರಲಾಗಿದೆ. ಹೋಂಸ್ಟೇ, ರೆಸಾರ್ಟ್ಗಳಿಗೆ ಈ ಮೊದಲೇ ಬುಕ್ಕಿಂಗ್ ಮಾಡಿರುವ ಪ್ರವಾಸಿಗರಿಗೆ ಯಾವುದೇ ನಿರ್ಬಂಧ ಇರುವುದಿಲ್ಲ. ಆದರೂ ದತ್ತ ಜಯಂತಿ ಕಾರ್ಯಕ್ರಮದ ೩ ದಿನ ಪೀಠಕ್ಕೆ ತೆರಳದೆ ಬೇರೆ ಸ್ಥಳಗಳಿಗೆ ಭೇಟಿ ನೀಡುವುದು ಸೂಕ್ತ ಎಂದರು.
ಭಕ್ತಾಧಿಗಳಿಗೆ ಡಿಸೆಂಬರ್ ೧೪ ರಂದು ಮಧ್ಯಾಹ್ನ ೨ ಗಂಟೆ ವರೆಗೆ ಮಾತ್ರ ಪೀಠಕ್ಕೆ ತೆರಳಲು ಅವಕಾಶವಿರುತ್ತದೆ. ನಂತರ ಬರುವ ವಾಹನಗಳನ್ನು ಕೈಮರ ಚೆಕ್ ಪೋಸ್ಟ್ನಿಂದ ಮುಂದಕ್ಕೆ ಬಿಡಲಾಗುವುದಿಲ್ಲ. ಸಂಘಟನೆಗಳಿ ಈ ವಿಚಾರ ತಿಳಿಸಿದ್ದೇವೆ ಎಂದರು. ಮಾಲಾಧಾರಿಗಳು ಪೀಠಕ್ಕೆ ಆಗಮಿಸುವ ಮಾರ್ಗಗಳಲ್ಲಿ ಸಸ್ಯಹಾರಿ ಹೋಟೆಲ್ಗಳನ್ನು ಹೊರತು ಪಡಿಸಿ ಉಳಿದೆಲ್ಲಾ ಅಂಗಡಿ ಮುಂಗಟ್ಟುಗಳನ್ನು ಮುಚ್ಚಲು ಸೂಚಿಸಲಾಗಿದೆ ಎಂದರು.
ಕಾನೂನು ಸುವ್ಯವಸ್ಥೆ ಕಾಪಾಡುವ ಸಲುವಾಗಿ ಡಿಸೆಂಬರ್ ೧೩ ಮತ್ತು ೧೪ ರಂದು ಎರಡು ದಿನಗಳ ಕಾಲ ಜಿಲ್ಲೆಯಾದ್ಯಂತ ಮದ್ಯ ಮಾರಾಟ ನಿಷೇಧಿಸಲಾಗಿದೆ. ಪೀಠದಲ್ಲಿ ಪ್ಲಾಸ್ಟಿಕ್ ಬಳಕೆಗೆ ನಿಷೇಧ ಹೇರಲಾಗಿದೆ ಎಂದರು. ಗುಹೆಯ ಒಳಭಾಗದಲ್ಲಿ ವೀಡಿಯೋ ಚಿತ್ರೀಕರಣ ಮಾಡುವಂತಿಲ್ಲ. ಮೊಬೈಲ್ಗಳನ್ನು ಕೊಂಡೊಯ್ಯಲು ನಿಷೇಧ ಹೇರಲಾಗಿದೆ. ಭಕ್ತರು ಈ ವಿಚಾರದಲ್ಲೂ ಸಹಕರಿಸಬೇಕು ಎಂದರು.
ಈ ಬಾರಿ ದತ್ತ ಜಯಂತಿ ವೇಳೆ ಪೀಠದಲ್ಲಿ ಮೂರು ದಿನಗಳ ಕಾಲ ಹೋಮ, ಹವನ, ಧಾರ್ಮಿಕ ಕಾಯಾಕ್ರಮಗಳಿಗೆ ಅವಕಾಶ ಮಾಡಿಕೊಡಬೇಕು ಎಂದು ವಿಶ್ವಹಿಂದೂ ಪರಿಷತ್-ಬಜರಂಗದಳ ಸಂಘಟನೆಗಳು ಮನವಿ ಮಾಡಿವೆ. ಆದರೆ ಈ ವಿಚಾರ ಉಚ್ಛ ನ್ಯಾಯಾಲಯದ ಮುಂದಿದೆ. ಇನ್ನೂ ಅಂತಿಮ ತೀರ್ಮಾನ ಆಗಿಲ್ಲ. ಈ ಹಿನ್ನೆಲೆಯಲ್ಲಿ ಈ ವರೆಗೆ ಇದ್ದ ರೀತಿಯ ಕಾರ್ಯಕ್ರಮಗಳು ನಡೆಯಲಿವೆ. ಇದರ ನಡುವೆ ಗುರು ದತ್ತಾತ್ರೇಯಪೀಠ ಬಾಬಾಬುಡನ್ ದರ್ಗಾ ವ್ಯವಸ್ಥಾಪನ ಸಮಿತಿಯ ನಡವಳಿಗಳನ್ನು ಸರ್ಕಾರಕ್ಕೆ ಕಳಿಸಲಾಗಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ವಿಕ್ರಮ ಅಮಟೆ, ಜಿ.ಪಂ. ಸಿಇಓ ಎಚ್.ಎಸ್.ಕೀರ್ತನಾ ಉಪಸ್ಥಿತರಿದ್ದರು.
೪೦೦೦ ಮಂದಿ ಪೊಲೀಸ್ ಸಿಬ್ಬಂಧಿಗಳನ್ನು ನಿಯೋಜನೆ : ಈ ಬಾರಿ ದತ್ತಜಯಂತಿ ಕಾರ್ಯಕ್ರಮಕ್ಕೆ ೪೦೦೦ ಮಂದಿ ಪೊಲೀಸ್ ಸಿಬ್ಬಂಧಿಗಳನ್ನು ನಿಯೋಜನೆ ಮಾಡಲಾಗುತ್ತಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ವಿಕ್ರಮ ಅಮಟೆ ತಿಳಿಸಿದ್ದಾರೆ.
ಒಬ್ಬರು ಎಸ್ಪಿ, ೭ ಮಂದಿ ಎಸ್ಪಿ ರ್ಯಾಂಕ್ನ ಅಧಿಕಾರಿಗಳು, ೨೭ ಮಂದಿ ಡಿವೈಎಸ್ಪಿ ೬೭ ಇನ್ಸ್ಪೆಕ್ಟರ್ಗಳು, ೩೦೦ ಮಂದಿ ಪಿಎಸ್ಐ, ೫೦೦ ಮಂದಿ ಹೋಂ ಗಾರ್ಡ್ಸ್, ೨೦ ಕೆಎಸ್ಆರ್ಪಿ ತುಕಡಿಗಳು, ೨೮ ಡಿಎಆರ್ ತುಕಡಿಗಳು, ಇನ್ನುಳಿದಂತೆ ಪೊಲೀಸ್ ಪೇದೆಗಳು ಮತ್ತು ಲೋಹ ಪರಿಶೋಧಕ ತಂಡಗಳು ಇರುತ್ತವೆ ಎಂದು ತಿಳಿಸಿದರು.
ಇದರೊಂದಿಗೆ ಸಿಆರ್ಪಿಎಫ್ನ ರ್ಯಾಪಿಡ್ ಆಕ್ಷನ್ ಪೊರ್ಸ್(ಆರ್ಎಫ್)ನ ತಂಡವನ್ನು ವಿಶೇಷವಾಗಿ ಕರೆಸಾಗಿದೆ. ಸೂಕ್ಷ್ಮ ಪ್ರದೇಶಗಳಲ್ಲಿ ಪಥ ಸಂಚಲನ ನಡೆಸಿ ಸಾರ್ವಜನಿಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸ್ಥಳೀಯವಾಗಿ ಆಂತರಿಕ ಸುರಕ್ಷತೆಗೆ ಅಗತ್ಯ ಮಾಹಿತಿ ಸಂಗ್ರಹಿಸಿ ಅಗತ್ಯ ಕ್ರಮ ಕೈಗೊಳ್ಳುವರು. ಈ ತಂಡದಲ್ಲಿ ಸೆಕೆಂಡೆಂಡ್ ಕಮಾಂಡೆಂಟ್, ಅಸಿಸ್ಟೆಂಟ್ ಕಮಾಂಡೆಂಟ್ಗಳು ನೇತೃತ್ವ ವಹಿಸಿರುತ್ತಾರೆ. ತಂಡದಲ್ಲಿ ೩೦ ಮಂದಿ ಸಿಬ್ಬಂದಿ ಇರುತ್ತಾರೆ ಎಂದರು.
ಈ ಬಾರಿ ಡ್ರೋನ್ ಕ್ಯಾಮೆರಾಗಳ ಸಂಖ್ಯೆ ಹೆಚ್ಚು ಮಾಡಲಾಗಿದೆ. ಸೂಕ್ಷ್ಮ ಪ್ರದೇಶಗಳಲ್ಲಿ ಡ್ರೋನ್ ವಿಚಕ್ಷಣೆ ನಡೆಸಲಾಗುತ್ತಿದೆ. ಇದರೊಂದಿಗೆ ೪೦೦ ಸಿಸಿ ಕ್ಯಾಮೆರಾಗಳನ್ನು ವಿವಿಧೆಡೆ ಅಳವಡಿಸಲಾಗುತ್ತಿದೆ ಎಂದು ತಿಳಿಸಿದರು.
ಜಿಲ್ಲೆಯಾದ್ಯಂತ ವಿವಿಧೆಡೆ ಪೊಲೀಸ್ ಇಲಾಖೆಯೊಂದಿಗೆ ೩೦ ಮಂದಿ ವಿಶೇಷ ಕಾರ್ಯನಿರ್ವಾಹಕ ದಂಡಾಧಿಕಾರಿಗಳನ್ನು ನೇಮಿಸಲಾಗಿದೆ. ಎಲ್ಲಾ ಠಾಣೆಗಳಲ್ಲಿ ಅಧಿಕಾರಿಗಳೆ ಸುಮಾರು ೧೦೦ ಬಾಡಿ ಕ್ಯಾಮೆರಾಗಳನ್ನು ಬಳಸಲಾಗುತ್ತಿದೆ. ಕ್ಯಾಮೆರಾಗಳಲ್ಲಿ ಕಾರ್ಯಕ್ರಮದ ಎಲ್ಲಾ ಚಟುವಟಿಕೆಗಳು ರೆಕಾರ್ಡಿಂಗ್ ಆಗುತ್ತಿರುತ್ತದೆ ಎಂದು ತಿಳಿಸಿದರು.
ಈ ಬಾರಿ ಜಿಲ್ಲೆಯಾದ್ಯಂತ ೨೮ ಚೆಕ್ ಪೋಸ್ಟ್ಗಳನ್ನು ಸ್ಥಾಪಿಸಲಾಗಿದೆ. ಅವುಗಳನ್ನು ಸಿಸಿ ಕ್ಯಾಮೆರಾ ಅಳವಡಿಸಿ ಬಲವರ್ಧನೆಗೊಳಿಸಲಾಗಿದೆ. ಪ್ರತಿ ಚೆಕ್ ಪೋಸ್ಟ್ಗಳಲ್ಲಿ ಎಲ್ಲಾ ವಾಹನ ತಪಾಸಣೆ ನಡೆಸಲಾಗುತ್ತದೆ. ನಮ್ಮ ಜಿಲ್ಲೆಗೆ ಹೊಂದಿಕೊಂಡಿರುವ ದಾವಣಗೆರೆ, ಶಿವಮೊಗ್ಗ, ಚಿತ್ರದುರ್ಗ, ಹಾಸನ, ಉಡುಪಿ ಜಿಲ್ಲೆ ಎಸ್ಪಿಗಳಿಗೆ ಮನವಿ ಮಾಡಿದ್ದು, ಅವರೂ ಒಂದೊಂದು ಚೆಕ್ ಪೋಸ್ಟ್ ತೆರೆಯಲು ಒಪ್ಪಿದ್ದಾರೆ ಎಂದರು.
ಈ ಬಾರಿ ಸುಮಾರು ೨೫ ಸಾವಿರ ಮಂದಿ ಮಾಲಾಧಾರಿಗಳು ಪೀಠಕ್ಕೆ ಬರುತ್ತಾರೆಂದು ನಿರೀಕ್ಷಿಸಲಾಗಿದೆ. ಈ ಬಾರಿ ಭಕ್ತಾಧಿಗಳು ಏನು ಮಾಡಬಹುದು, ಏನನ್ನು ಮಾಡುವಂತಿಲ್ಲ ಎನ್ನುವ ಬಗ್ಗೆ ಚೆಕ್ ಪೋಸ್ಟ್ನಲ್ಲಿ ಕರಪತ್ರಗಳನ್ನು ನೀಡಲಾಗುತ್ತದೆ ಎಂದರು.
ಈಗಾಗಲೇ ಠಾಣಾ ಮಟ್ಟ, ಉಪ ವಿಭಾಗ ಮಟ್ಟ ಮತ್ತು ಜಿಲ್ಲಾ ಮಟ್ಟದಲ್ಲಿ ಸಂಘಟಕರುಗಳನ್ನು ಕರೆದು ಶಾಂತಿ ಸಭೆಗಳನ್ನು ನಡೆಸಲಾಗಿದೆ. ಶಾಂತಿ, ಸುವ್ಯವಸ್ಥೆ ಕಾಪಾಡು ಸಹಕಾರವನ್ನು ಕೋರಲಾಗಿದೆ ಎಂದು ತಿಳಿಸಿದರು.
ರಕ್ಷಣೆಗೆ ಆಗಮಿಸುವ ಸಿಬ್ಬಂದಿಗಳಿಗೆ ಈ ಬಾರಿ ಬಿಸಿ ನೀರು, ಉತ್ತಮ ಊಟ, ಉಪಹಾರ ಮತ್ತು ವಸತಿ ವ್ಯವಸ್ಥೆ ಸೇರಿದಂತೆ ಅಗತ್ಯ ಮೂಲ ಸೌಕರ್ಯ ಕಲ್ಪಿಸಲು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ತಿಳಿದರು. ಈ ಬಾರಿ ತುಮಕೂರು, ರಾಮನಗರ, ಚಿಕ್ಕಬಳ್ಳಾಪುರ, ಕೋಲಾರ, ಕೆಜಿಎಫ್, ಮತ್ತು ಹಾಸನ, ಮಂಡ್ಯ, ಚಾಮರಾಜ ನಗರ ಮತ್ತು ಮೈಸೂರು ಜಿಲ್ಲೆಗಳಿಂದ ಪೊಲೀಸ್ ಸಿಬ್ಬಂದಿಗಳನ್ನು ಕರೆಸಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.
District administration fully prepared for Datta Jayanti programs