ಚಿಕ್ಕಮಗಳೂರು: ಶ್ರೀಗಂಧ ಬೆಳೆಗಾರರಿಗೆ ಅರಣ್ಯ ಇಲಾಖೆ ವಿನಾಕಾರಣ ತೊಂದರೆ ನೀಡುತ್ತಿದ್ದು ಇಂತಹ ರೈತ ವಿರೋಧಿ ನೀತಿ ಮುಂದುವರಿದಲ್ಲಿ ಅರಣ್ಯ ಇಲಾಖೆ ಮತ್ತು ಸಚಿವ ಈಶ್ವರ ಖಂಡ್ರೆ ಮನೆಮುಂದೆ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದೆಂದು ಅಖಿಲ ಕರ್ನಾಟಕ ಶ್ರೀಗಂಧ ಮತ್ತು ವನಕೃಷಿ ಬೆಳೆಗಾರರ ಸಂಘ ಎಚ್ಚರಿಸಿದೆ.
ಪತ್ರಿಕಾಗೋಷ್ಠಿಯಲ್ಲಿಂದು ಸಂಘದ ಜಿಲ್ಲಾಧ್ಯಕ್ಷ ಡಾ. ಕೆ.ಸುಂದರಗೌಡ ಮಾತನಾಡಿ, ಹಾಸನ ಜಿಲ್ಲೆ ಹೊಳೆನರಸೀಪುರ ತಾಲೂಕಿನ ಹೊನ್ನೇನಹಳ್ಳಿ ಗ್ರಾಮದ ನಿವೃತ್ತ ಶಿಕ್ಷಕ ಚಂದ್ರಪ್ಪ ಎಂಬುವರು ಶ್ರೀಗಂಧ ಬೆಳೆದಿದ್ದಾರೆ. ಆ ಮರಗಳು ಕಟಾವಿಗೆ ಬಂದಿದ್ದು ಕಡಿಯಲು ಅರಣ್ಯ ಇಲಾಖೆ ಬಳಿ ಅನುಮತಿಗಾಗಿ ನಾಲ್ಕಾರು ಬಾರಿ ಕಚೇರಿ ಅಲೆದಿದ್ದಾರೆ. ಆದರೆ ಅರಣ್ಯ ಇಲಾಖೆ ಅನೇಕ ಸಬೂಬು ಹೇಳಿ ಅನಮತಿ ನೀರಾಕರಿಸಿದೆ ಎಂದು ದೂರಿದರು.
ಹೀಗಾಗಿ ಕಳ್ಳರ ಕಾಟದಿಂದ ಶ್ರೀಗಂಧದ ಮರಗಳನ್ನು ರಕ್ಷಿಸುವ ಉದ್ದೇಶದಿಂದ ರೈತ ಚಂದ್ರಪ್ಪ ಶ್ರೀಗಂಧ ಮರಗಳನ್ನು ಕಟಾವು ಮಾಡಿಸಿ ಅರಣ್ಯ ಇಲಾಖೆ ಅನುಮತಿ ಸಿಗುವವರೆಗೆ ಮನೆಯಲ್ಲಿ ಸಂಗ್ರಹಿಸಿಡೋಣ ಎಂಬ ಉದೇಶದಿಂದ ಮರ ಕಡಿಸಿದ್ದಾರೆ. ಈ ಮಾಹಿತಿ ತಿಳಿದ ಅರಣ್ಯ ಅಧಿಕಾರಿಗಳಾದ ಆರ್ಎಫ್ಒ ಮತ್ತು ಡಿಆರ್ಎಫ್ಒ ಅವರು ೭೯ ವರ್ಷದ ಚಂದ್ರಪ್ಪ ಅವರನ್ನು ಕಚೇರಿಗೆ ಕರೆಸಿ ಅವರ ವಿರುದ್ಧ ಪ್ರಕರಣ ದಾಖಲಿಸಿ ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂದು ಆರೋಪಿಸಿದರು.
ಲಂಚ ನೀಡಲು ನಿರಾಕರಿಸಿದಾಗ ಅರಣ್ಯ ಇಲಾಖೆ ಅಧಿಕಾರಿಗಳು ನಿವೃತ್ತ ಶಿಕ್ಷಕರ ವಿರುದ್ಧ ದೌರ್ಜನ್ಯ ಎಸಗಿದ್ದಾರೆ. ಈ ವಿಚಾರವನ್ನು ಅರಣ್ಯ ಸಚಿವರ ಗಮನಕ್ಕೂ ತರಲಾಗಿದೆ. ಈ ಹಿನ್ನೆಲೆಯಲ್ಲಿ ಈ ಪ್ರಕರಣದಲ್ಲಿ ಕರ್ತವ್ಯಲೋಪ ಎಸಗಿರುವ ಅರಣ್ಯ ಅಧಿಕಾರಿಗಳನ್ನು ಅಮಾನತು ಮಾಡಬೇಕು ಎಂದು ಒತ್ತಾಯಿಸಿದರು.
ಶಿಕ್ಷಕ ಚಂದ್ರಪ್ಪ ಅವರ ಮೇಲಿನ ಕೇಸು ವಾಪಸ್ಸು ಪಡೆಯಬೇಕು. ಶ್ರೀಗಂಧ ಮತ್ತು ವನಕೃಷಿ ಮೇಲಿರುವ ಅರಣ್ಯ ಇಲಾಖೆಯ ಹಿಡಿತ ತಪ್ಪಿಸಿ ತೋಟಗಾರಿಕೆ ಇಲಾಖೆಗೆ ವಹಿಸಬೇಕು ಎಂದು ಆಗ್ರಹಿಸಿದರು. ನಮ್ಮ ಬೇಡಿಕೆ ಈಡೇರದಿದ್ದಲ್ಲಿ ಅರಣ್ಯ ಸಚಿವ ಈಶ್ವರ ಖಂಡ್ರೆ ಅವರ ಮನೆ ಮುಂದೆ ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ರೈತ ಸಂಘದ ಹೆಚ್.ಎಸ್ ಸೋಮಶೇಖರ್ ರಾಜ್ಯ ಸಂಚಾಲಕ ವಿಶುಕುಮಾರ್, ಮುಖಂಡರಾದ ದೀಪು, ಎಸ್.ಮೂರ್ತಿ, ಹೆಚ್,ಎಂ ನವೀನ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.
Sandalwood growers protest in front of Forest Minister Ishwar Khandre’s house