ಚಿಕ್ಕಮಗಳೂರು: ನಗರದ ಜಿಲ್ಲಾ ಪದವೀಧರ ಪತ್ತಿನ ಸಹಕಾರ ಸಂಘದಲ್ಲಿ ಕಾನೂನು ಗಾಳಿಗೆ ತೂರಿ ಭ್ರಷ್ಟಾಚಾರ ಹಾಗೂ ಅವ್ಯವಹಾರ ನಡೆದಿದೆ ಎಂದು ಈ ಕುರಿತು ತನಿಖೆ ನಡೆಸುವಂತೆ ಸಂಘದ ನಿರ್ದೇಶಕ ಬಿ.ಟಿ.ಗೋಪಾಲಗೌಡ ಮಾಡಿರುವ ಆರೋಪ ನಿರಾಧಾರ ಮತ್ತು ಉದ್ದೇಶಪೂರ್ವಕವಾಗಿದೆ ಎಂದು ಸಂಘದ ಸಂಸ್ಥಾಪಕ ಅಧ್ಯಕ್ಷ ಬಿ.ಸಿ.ಲೋಕಪ್ಪಗೌಡ ಸ್ಪಷ್ಟಪಡಿಸಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತ, ಸಂಘದಲ್ಲಿ ಯಾವುದೇ ತರಹದ ಅಕ್ರಮಗಳು, ಅವ್ಯವಹಾರಗಳು ನಡೆದಿಲ್ಲ. ಸಂಘವು ಅತ್ಯುತ್ತಮವಾಗಿ ಅಭಿವೃದ್ಧಿ ಹೊಂದುತ್ತಿರುವುದನ್ನು ಸಹಿಸದೆ ಸದಸ್ಯರು ಹಾಗೂ ಖಾತೆದಾರರಲ್ಲಿ ತಪ್ಪು ತಿಳಿವಳಿಕೆ ಮೂಡಿಸುವ ಪ್ರಯತ್ನ ಎಂದು ಆರೋಪಿಸಿದರು.
ಸಂಘವು ಸ್ವಂತ ಕಟ್ಟಡವನ್ನು ೨೦೧೯ ರ ಸೆ.೨೩ ರಂದು ಯೋಜನಾ ನಿರ್ದೇಶಕರು ಇ-ಪ್ರೊಕ್ಯೂರ್ಮೆಂಟ್ ಸೆಲ್, ಬೆಂಗಳೂರು ಇವರಿಗೆ ಉದ್ದೇಶಿತ ಕಟ್ಟಡದ ಇ-ಟೆಂಡರ್ನ್ನು ಪ್ರಚಾರಪಡಿಸುವ ಮೂಲಕ ಸ್ಥಳೀಯ ಪತ್ರಿಕೆಯೊಂದರಲ್ಲಿ ೨೧.೧೧.೨೦೧೯ ರಲ್ಲಿ ಪ್ರಕಟಣೆ ಮಾಡಲಾಗಿದ್ದು, ಯಾರೂ ಸಹ ಬಿಡ್ ಮಾಡದೇ ಇರುವುದರಿಂದ ಕಟ್ಟಡ ಸಮಿತಿಯಲ್ಲಿ ತಾವೂ ಸೇರಿದಂತೆ ವೆಂಕಟೇಶ್ ಪೈ, ಎಸ್.ವಿ ಬಸವರಾಜಪ್ಪ, ಡಾ. ಡಿ.ಎಲ್.ವಿಜಯ್ಕುಮಾರ್ ಮುಂತಾದವರು ಆಡಳಿತ ಮಂಡಳಿಯಲ್ಲಿ ಚರ್ಚಿಸಿ ನಿರ್ಧರಿಸಲಾಗಿದೆ ಎಂದು ತಿಳಿಸಿದರು.
ಸಂಘವು ೧೦೧ ಸದಸ್ಯರಿಂದ ಷೇರು ಹಣ ೫೦೫೦೦ ರೂ ಸ್ವೀಕರಿಸಿ ಪ್ರಾರಂಭಿಸಿದ್ದು, ಇಂದು ಸುಮಾರು ೪೦ ಕೋಟಿಗೂ ಹೆಚ್ಚು ವಹಿವಾಟು ನಡೆಸಲಾಗುತ್ತಿದೆ. ೧.೨೨ ಕೋಟಿ ರೂ ವೆಚ್ಚದಲ್ಲಿ ಸ್ವಂತ ಕಟ್ಟಡವನ್ನು ನಿರ್ಮಿಸಲಾಗಿದ್ದು ಈ ಸಂದರ್ಭದಲ್ಲಿ ಆರೋಪ ಮಾಡಿರುವ ಗೋಪಾಲಗೌಡ ಸಹ ಭಾಗವಹಿಸಿದ್ದರೆಂದು ಹೇಳಿದರು.
ಈಗಾಗಲೇ ೧ ಕೋಟಿ ೨೧ ಲಕ್ಷ ರೂ ವೆಚ್ಚದಲ್ಲಿ ವಿವಿಧ ಸವಲತ್ತುಗಳನ್ನು ಸಂಘಕ್ಕೆ ಪಡೆದುಕೊಳ್ಳಲು ವ್ಯಯಿಸಲಾಗಿದ್ದು, ಸರ್ಕಾರದ ಮಾರ್ಗದರ್ಶನದಂತೆ ನೊಂದಾಯಿತ ಲೆಕ್ಕ ಪರಿಶೋಧಕರನ್ನು ನೇಮಿಸಿ ಕಳೆದ ೧೬ ವರ್ಷಗಳಿಂದ ಸಂಘದ ಲೆಕ್ಕಪರಿಶೋಧನೆಯನ್ನು ಮಾಡಿ ಎ ಗ್ರೇಡ್ ಹೊಂದಿದ್ದು, ಸದಸ್ಯರಿಗೆ ಶೇ.೧೦ ರಷ್ಟು ಡಿವಿಡೆಂಟ್ ನೀಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಸಂಘವು ಪ್ರಾರಂಭದಿಂದ ಈವರೆಗೆ ಲಾಭದಲ್ಲಿ ನಡೆಯುತ್ತಿದ್ದು, ೨೦೦೩, ೨೦೧೪,೨೦೧೯ ಹಾಗೂ ೨೦೨೨ ನೇ ಸಾಲಿನಲ್ಲಿ ಜಿಲ್ಲೆಯ ಉತ್ತಮ ಸಹಕಾರ ಸಂಘ ಪ್ರಶಸ್ತಿ ಗಳಿಸಲು ಸಾಧ್ಯವಾಗಿದೆ ಎಂದು ಮಾಹಿತಿ ನೀಡಿದರು. ಸಂಘದ ನಿರ್ದೇಶಕರಲ್ಲಿ ಒಬ್ಬರಾದ ಬಿ.ಟಿ ಗೋಪಾಲಗೌಡ ಅವರು ಸರ್ಕಾರದ ನಿಯಮದಂತೆ ಸಹಕಾರ ಸಂಘದಲ್ಲಿ ಕನಿಷ್ಟ ವ್ಯವಹಾರ ಮಾಡದೇ ಇರುವುದರಿಂದ ಮತದಾರರ ಪಟ್ಟಿಯಿಂದ ಅನರ್ಹಗೊಂಡಿದ್ದು, ಚುನಾವಣೆಯಲ್ಲಿ ಭಾಗವಹಿಸಲು ಅರ್ಹತೆ ಇಲ್ಲದ ಕಾರಣ ಮಾನಸಿಕವಾಗಿ ಸಂಘದ ಬಗ್ಗೆ ಇಲ್ಲಸಲ್ಲದ ಆರೋಪವನ್ನು ಮಾಡಿದ್ದಾರೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಪದವೀಧರ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಡಾ. ಡಿ.ಎಲ್ ವಿಜಯಕುಮಾರ್, ಉಪಾಧ್ಯಕ್ಷ ಸಿ.ಆರ್ ಪ್ರೇಮಕುಮಾರ್, ನಿರ್ದೇಶಕರುಗಳಾದ ಎಂ.ಸಿ ಶಿವಾನಂದಸ್ವಾಮಿ, ಗಂಗಣ್ಣ, ಗೀತಾ, ವೆಂಕಟೇಶ್ ಪೈ, ಸಿಇಓ ನಾರಾಯಣಸ್ವಾಮಿ ಉಪಸ್ಥಿತರಿದ್ದರು.
Allegations of illegality in the Graduate Card Cooperative Society are baseless.