ಚಿಕ್ಕಮಗಳೂರು: ದತ್ತಪೀಠವನ್ನು ಸಂಪೂರ್ಣ ಹಿಂದೂಗಳಿಗೆ ಬಿಟ್ಟು ಕೊಡಬೇಕು ಎಂಬುದು ನಮ್ಮ ಎರಡನೆ ಹಂತದ ಹೋರಾಟದ ಉದ್ದೇಶವಾಗಿದೆ ಎಂದು ವಿಶ್ವ ಹಿಂದೂ ಪರಿಷತ್ ಪ್ರಾಂತ ಸಹಕಾರ್ಯದರ್ಶಿ ಶರಣ್ ಪಂಪ್ವೆಲ್ ಹೇಳಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ದತ್ತಪೀಠ ಮುಕ್ತಿಯ ಹೋರಾಟಕ್ಕೆ ೨೫ ವರ್ಷ ಕಳೆದಿದೆ. ಹೋರಾಟದ ಫಲವಾಗಿ ದತ್ತಪೀಠದಲ್ಲಿ ಹಿಂದೂ ಅರ್ಚಕರ ನೇಮಕ, ತ್ರಿಕಾಲ ಪೂಜೆ ನಡೆಯುತ್ತಿದೆ. ದತ್ತಪೀಠವನ್ನು ಸಂಪೂರ್ಣ ಹಿಂದೂಗಳಿಗೆ ಬಿಟ್ಟುಕೊಡಬೇಕು ಎಂಬುದು ನಮ್ಮ ಮುಂದಿನ ಹೋರಾಟದ ಉದ್ದೇಶವಾಗಿದೆ ಎಂದರು.
ಇಲ್ಲಿನ ಜಿಲ್ಲಾಧಿಕಾರಿಗಳು ಸಂಘಟನೆ ಕೋರಿರುವ ವ್ಯವಸ್ಥೆಯನ್ನು ಕಲ್ಪಿಸುವಲ್ಲಿ ವಿಫಲವಾಗಿದೆ ಎಂದು ಆರೋಪಿಸಿದ ಅವರು, ದತ್ತಪೀಠದಲ್ಲಿ ಇರವ ಔದಂಬರ ವೃಕ್ಷ ಪರಿಕ್ರಮಕ್ಕೆ ಅವಕಾಶ, ದತ್ತಪೀಠದಿಂದ ಮುಜಾವರ್ ಅವರನ್ನು ಹೊರಹಾಕಬೇಕು. ದತ್ತ ಜಯಂತಿಗೆ ಬರುವ ಭಕ್ತರಿಗೆ ಜಿಲ್ಲಾಡಳಿತ ಅಗತ್ಯ ಮೂಲಸೌಕರ್ಯ ಒದಗಿಸಬೇಕು ಎಂದು ಒತ್ತಾಯಿಸಿದರು.
ದತ್ತಜಯಂತಿ ಸಂದರ್ಭದಲ್ಲಿ ದತ್ತಪೀಠದಲ್ಲಿ ಮೂರು ದಿನಗಳ ಕಾಲ ಹೋಮಹವನ ನಡೆಸಲು ಅವಕಾಶ ಮಾಡಿಕೊಡಬೇಕು ಎಂದು ಜಿಲ್ಲಾಧಿಕಾರಿಯನ್ನು ಕೋರಲಾಗಿತ್ತು. ಆದರೆ, ಈ ಬಗ್ಗೆ ಸರಕಾರಕ್ಕೆ ಪತ್ರ ಬರೆದಿದ್ದೇವೆ ಎಂದು ಹಾರಿಕೆ ಉತ್ತರ ನೀಡಿದ್ದಾರೆ. ಮೊಬೈಲ್ಗಳನ್ನು ತೆಗೆದುಕೊಂಡು ಹೋಗದಂತೆ ನಿರ್ಬಂಧ ಹೇರಿರುವುದು ಸರಿಯಲ್ಲ ಎಂದು ಹೇಳಿದರು.
ದತ್ತಪೀಠದ ಪವಿತ್ರ ಗರ್ಭಗುಡಿಯಲ್ಲಿ ದತ್ತಪಾದುಕೆ ಪೂಜೆ, ಹೋಮ ಹವನ ನಡೆಯುತ್ತಿದ್ದು ಈ ಕ್ಷೇತ್ರದಲ್ಲಿ ಗೋಮಾಂಸ ತಿಂದು ಓಡಾಡುತ್ತಿರುವುದು ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆ ತರುತ್ತಿದೆ. ಹೀಗಾಗಿ ಮುಜಾವರ್ಗಳನ್ನು ಪೀಠದಿಂದ ಹೊರಹಾಕಬೇಕು ಎಂದು ಆಗ್ರಹಿಸಿದರು.
ಬಜರಂಗದಳ ಮುಖಂಡ ಆರ್.ಡಿ.ಮಹೇಂದ್ರ ಮಾತನಾಡಿ, ದತ್ತಜಯಂತಿಗೆ ೨೫ ಸಾವಿರಕ್ಕೂ ಅಧಿಕ ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಲಿದ್ದಾರೆ. ಡಿ.೧೨ ರ ಸಂಕೀರ್ತನಾ ಯಾತ್ರೆಗೆ ೫ ಸಾವಿರ ಮಾತೆಯರು, ೧೩ರ ಶೋಭಾಯಾತ್ರೆಗೆ ೩೦ ಸಾವಿರಕ್ಕೂ ಹೆಚ್ಚಿನ ಮಂದಿ ಭಾಗಹಿಸಲಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ವಿಎಚ್ಪಿ ಜಿಲ್ಲಾಧ್ಯಕ್ಷ ಶ್ರೀಕಾಂತ್ಪೈ, ಬಜರಂಗದಳ ಪ್ರಾಂತ ಸಂಯೋಜಕ ಪ್ರಭಂಜನ್ ಸೂರ್ಯ, ಶ್ಯಾಮ್ ವಿ ಗೌಡ, ಶಶಾಂಕ್ ಇದ್ದರು.
Datta Peetha should be left entirely to Hindus.