ಚಿಕ್ಕಮಗಳೂರು: : ಒಬ್ಬ ರಾಜಕಾರಣಿ ಶಿಸ್ತು, ಸಂಯಮ, ಸಭ್ಯತೆಯನ್ನು ಹೇಗೆ ಇರಬೇಕೆಂಬುದನ್ನು ಮಾಜಿ ಮುಖ್ಯಮಂತ್ರಿ ಹಿರಿಯ ರಾಜಕೀಯ ಮುತ್ಸದ್ದಿ ಎಸ್.ಎಂ.ಕೃಷ್ಣ ಅವರು ಮೈಗೂಡಿಸಿಕೊಂಡು ಒಕ್ಕಲಿಗ ಸಮುದಾಯಕ್ಕೆ ಮೆರಗು ನೀಡಿದ ಹಿರಿಯ ಚೇತನ ಎಂದು ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಟಿ.ರಾಜಶೇಖರ್ ಹೇಳಿದರು.
ಅವರು ಇಂದು ಒಕ್ಕಲಿಗರ ಸಮುದಾಯ ಭವನದಲ್ಲಿ ಸಂಘದ ವತಿಯಿಂದ ಏರ್ಪಡಿಸಲಾಗಿದ್ದ ಎಸ್.ಎಂ.ಕೃಷ್ಣ ಅವರಿಗೆ ಶ್ರದ್ಧಾಂಜಲಿ ಸಭೆಯಲ್ಲಿ ಎಸ್.ಎಂ ಕೃಷ್ಣ ರವರ ಭಾವಚಿತ್ರಕ್ಕೆ ಪುಷ್ವನಮನ ಸಲ್ಲಿಸಿ ಮಾತನಾಡಿ ರಾಜ್ಯದ ಮುಖ್ಯಮಂತ್ರಿ, ಮಹಾರಾಷ್ಟ್ರದ ರಾಜ್ಯಪಾಲರಾಗಿದ್ದಾಗಲೂ ಸಾರ್ವಜನಿಕರೊಂದಿಗೆ ನಯ ವಿನಯದಿಂದ ಸಮಸ್ಯೆಗೆ ಸ್ಪಂದಿಸುತ್ತಿದ್ದ ಅವರು ಈಗಿನ ರಾಜಕಾರಣಿಗಳಿಗೆ ಮಾರ್ಗದರ್ಶಕರಾಗಿದ್ದಾರೆ. ಐಟಿಬಿಟಿಯನ್ನು ಸ್ಥಾಪಿಸುವ ಮೂಲಕ ಬೆಂಗಳೂರನ್ನು ವಿಶ್ವದಲ್ಲೇ ಗುರ್ತಿಸುವಂತೆ ಮಾಡಿದ ಕೀರ್ತಿ ಎಸ್.ಎಂ ಕೃಷ್ಣ ಅವರಿಗೆ ಸಲ್ಲುತ್ತದೆ ಎಂದರು.
ರಾಜಧಾನಿ ಬೆಂಗಳೂರಿಗೆ ಹೆಚ್ಚು ಆದಾಯ ತರುವ ನಿಟ್ಟಿನಲ್ಲಿ ಸೇವೆ ಸಲ್ಲಿಸಿದ ಅವರು, ಸಂಘ ಸದೃಢವಾಗಿದ್ದರೆ, ಮನೆ ಆನಂದದಿಂದ ಇರಬೇಕಾದರೆ ಇವೆಲ್ಲವಕ್ಕೂ ಆದಾಯ ಬಹುಮುಖ್ಯ ಎಂಬ ಪರಿಕಲ್ಪನೆಯನ್ನು ಹೊಂದಿದ್ದ ಅವರು ಐಟಿಬಿಟಿ ಸ್ಥಾಪನೆಗೆ ಮುಂದಾಗಿದ್ದರು ಎಂದು ಹೇಳಿದರು.
ರಾಜ್ಯದ ಅಭಿವೃದ್ಧಿಗೆ ವಿವಿಧ ರೀತಿಯ ಕೊಡುಗೆಯನ್ನು ನೀಡಿದ ಕೆಂಪೇಗೌಡ, ಎಸ್.ಎಂ.ಕೃಷ್ಣ ಸಲ್ಲಿಸಿದ ಸೇವೆಯಿಂದ ಜನಾಂಗದ ಹೆಸರು ಉತ್ತುಂಗಕ್ಕೇರಿದೆ. ಇಂದು ಓರ್ವ ಅದರ್ಶ ವ್ಯಕ್ತಿಯನ್ನು ಕಳೆದುಕೊಂಡಂತಾಗಿದೆ ಎಂದು ಕಂಬನಿ ಮಿಡಿದರು.
ಸರ್ವ ಜನಾಂಗದ ಅಭಿವೃದ್ಧಿಗೆ ಶ್ರಮಿಸಿದ ಎಸ್.ಎಂ.ಕೃಷ್ಣ ಅವರು ಮಂಡ್ಯದ ಸೋಮನಹಳ್ಳಿಯಲ್ಲಿ ಜನಿಸಿದ್ದು ಉತ್ತಮ ಸಂಸ್ಕಾರದ ಜೀವನ ನಡೆಸಿದ್ದಾರೆ. ಈ ನಿಟ್ಟಿನಲ್ಲಿ ಅವರ ಸಾಮಾಜಿಕ ಕಾರ್ಯಗಳು ಇನ್ನೂ ಜೀವಂತವಾಗಿವೆ ಎಂದು ಬಣ್ಣಿಸಿದರು.
ಸಂಘದ ಗೌರವ ಕಾರ್ಯದರ್ಶಿ ಎಂ.ಸಿ.ಪ್ರಕಾಶ್ ಮಾತನಾಡಿ, ಮಂಡ್ಯ ಜಿಲ್ಲೆ ಸೋಮನಹಳ್ಳಿ ಗ್ರಾಮದಲ್ಲಿ ೧೯೩೨ ರಲ್ಲಿ ಜನಿಸಿದ ಎಸ್.ಎಂ.ಕೃಷ್ಣ ಅವರು ಶಿಕ್ಷಣ ಮುಗಿಸಿದ ಬಳಿಕೆ ರಾಜಕೀಯ ಪ್ರವೇಶಿಸಿ ರಾಜಕೀಯದಲ್ಲಿ ಸಭ್ಯ ರಾಜಕಾರಣಿ ಎಂಬ ಹೆಸರಿನಿಂದ ಗುರ್ತಿಸಿಕೊಂಡ ಇವರು ವಿವಿಧ ಸ್ಥಾನಮಾನಗಳನ್ನು ಅತ್ಯಂತ ಕಿರಿಯ ವಯಸ್ಸಿನಲ್ಲಿ ಹೊಂದಿದ್ದರು ಎಂದು ಹೇಳಿದರು.
ರಾಜ್ಯದ ಎಲ್ಲಾ ಕ್ಷೇತ್ರದಲ್ಲಿ ಆಧುನಿಕತೆಯನ್ನು ತರುವಲ್ಲಿ ಶ್ರಮಿಸಿದ ಎಸ್.ಎಂ. ಕೃಷ್ಣ ಅವರು ತಮ್ಮ ಜೀವನದಲ್ಲಿಯೂ ಉತ್ತಮವಾದ ತುಂಬು ಜೀವನ ನಡೆಸಿದ್ದಾರೆ ಎಂದು ತಿಳಿಸಿದರು. ಮುಖ್ಯಮಂತ್ರಿಯಾಗಿದ್ದಾಗ ಸರ್ಕಾರಿ ಶಾಲೆಯಲ್ಲಿ ಬಿಸಿಯೂಟ ಯೋಜನೆ ಜಾರಿಮಾಡಿ ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ಪೂರಕವಾಗಿ ಸ್ಪಂದಿಸಿದ ಪರಿಣಾಮ ಸರ್ಕಾರಿ ಶಾಲೆಯಲ್ಲಿ ಮಕ್ಕಳ ಹಾಜರಾತಿ ಹೆಚ್ಚಳವಾಗಲು ಕಾರಣವಾಯಿತು. ಇಂದು ನಮ್ಮನ್ನಗಲಿದ್ದರೂ ಅವರ ಕಾಯಕ ಅಮರವಾಗಿದೆ ಎಂದು ಹೇಳಿದರು.
ಒಕ್ಕಲಿಗರ ಮಹಿಳಾ ಸಂಘದ ಜಿಲ್ಲಾಧ್ಯಕ್ಷೆ ರೀನಾಸುಜೇಂದ್ರ ಮಾತನಾಡಿ, ಹಿರಿಯ ಮುತ್ಸದ್ಧಿ ರಾಜಕಾರಣಿ ಎಸ್.ಎಂ.ಕೃಷ್ಣ ನಿಧನದಿಂದ ಒಕ್ಕಲಿಗರ ಸಮುದಾಯಕ್ಕೆ ಅಪಾರ ನಷ್ಟವಾಗಿದೆ. ಮುಖ್ಯಮಂತ್ರಿಯಾಗಿ, ರಾಜ್ಯಪಾಲರಾಗಿ, ವಿದೇಶಾಂಗ ಸಚಿವರಾಗಿ ಸೇವೆ ಸಲ್ಲಿಸಿದ್ದ ಅವರು ಇಂದು ವಯೋಸಹಜವಾಗಿ ಮೃತಪಟ್ಟಿದ್ದು ಅವರ ಕುಟುಂಬಕ್ಕೆ ದುಃಖವನ್ನು ಬರಿಸುವ ಶಕ್ತಿಯನ್ನು ಭಗವಂತ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ ಎಂದರು.
ಈ ಕಾರ್ಯಕ್ರಮದಲ್ಲಿ ಸಂಘದ ಉಪಾಧ್ಯಕ್ಷ ಲಕ್ಷ್ಮಣಗೌಡ, ನಿರ್ದೇಶಕರುಗಳಾದ ಕಳವಾಸೆ ರವಿ, ಪೃಥ್ವಿ, ದಿನೇಶ್, ಆನಂದ್, ಮಾಜಿ ಅಧ್ಯಕ್ಷೆ ಹರಿಣಾಕ್ಷಿ, ನಿರ್ದೇಶಕರುಗಳು ಭಾಗವಹಿಸಿದ್ದರು.
S.M. Krishna passes away tributes from Vokkaligara Sangha