ಚಿಕ್ಕಮಗಳೂರು: ದತ್ತಜಯಂತಿ ಕಾರ್ಯಕ್ರಮಗಳು ಡಿ. ೧೨ರಿಂದ ಆರಂಭವಾಗುವ ಹಿನ್ನೆಲೆಯಲ್ಲಿ ದತ್ತಪೀಠದಲ್ಲಿ ಆಗಮೋಕ್ತವಾಗಿ ೩ ದಿನ ಧಾರ್ಮಿಕ ವಿಧಿವಿಧಾನಗಳು ನಡೆಯಲಿವೆ ಎಂದು ದತ್ತಪೀಠ ವ್ಯವಸ್ಥಾಪನಾ ಸಮಿತಿಯ ಸದಸ್ಯ ಸುಮಂತ್ನೆಮ್ಮಾರ್ ಹೇಳಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ದತ್ತಪೀಠದಲ್ಲಿ ತ್ರಿಕಾಲ ಪೂಜೆಗಾಗಿ ಅರ್ಚಕರ ನೇಮಕವಾಗಿದೆ. ಡಿ.೧೨ ರಂದು ಅನುಸೂಯದೇವಿ ಜಯಂತಿ ಇದೆ. ಅಂದು ವಿವಿಧ ಹೋಮ ಹವನ ಆಗಮೋಕ್ತವಾಗಿ ಧಾರ್ಮಿಕ ಕಾರ್ಯಗಳು ನಡೆಯಲಿವೆ ಎಂದು ತಿಳಿಸಿದರು.
ಡಿ.೧೩ ರಂದು ಬೆಳಗ್ಗೆ ರುದ್ರಹೋಮ, ಕಲಾಹೋಮ ನಡೆಯುತ್ತವೆ. ಡಿ.೧೪ ರಂದು ದತ್ತಾತ್ರೇಯ ಮೂಲಮಂತ್ರ ಯಾಗ, ತಂತ್ರಿಗಳಿಂದ ಆಗಮೋಕ್ತವಾಗಿ ಪೂಜೆ ನಡೆಯಲಿದೆ. ಎಲ್ಲ ಧಾರ್ಮಿಕ ಕಾರ್ಯಕ್ರಮಗಳು ಪ್ರದೀಪ್ಭಟ್ ಕಮ್ಮರಡಿ ಅವರ ನೇತೃತ್ವದಲ್ಲಿ ನಡೆಯಲಿವೆ ಎಂದು ಮಾಹಿತಿ ನೀಡಿದರು.
ದತ್ತಪೀಠಕ್ಕೆ ಈ ಬಾರಿ ೧೫ಸಾವಿರಕ್ಕೂ ಹೆಚ್ಚು ಸಂಖ್ಯೆಯಲ್ಲಿ ಬರುವ ಭಕ್ತರಿಗೆ ಪ್ರಸಾದವಾಗಿ ಲಾಡು, ಮಧ್ಯಾಹ್ನದ ಬೋಜನದ ವ್ಯವಸ್ಥೆ ಇದೆ. ಮಳೆ ಬಂದರೆ ರಕ್ಷಣೆಗೆ ವ್ಯವಸ್ಥೆ ಮಾಡಿದ್ದೇವೆ. ಪಾರ್ಕಿಂಗ್, ಕುಡಿವನೀರು, ಶೌಚಾಲಯ ಮತ್ತಿತರೆ ಮೂಲಭೂತಸೌಕರ್ಯ ಕಲ್ಪಿಸಲಾಗಿದೆ ಎಂದು ಜಿಲ್ಲಾಡಳಿತ ಹೇಳಿದೆ ಎಂದರು.
ಪ್ರತಿ ವರ್ಷ ಒಂದು ದಿನ ಮಾತ್ರ ಗುಹೆ ಮುಂಭಾಗದಲ್ಲಿ ಹೋಮಹವನ ನಡೆಯುತ್ತಿತ್ತು. ಉಳಿದ ಎರಡು ದಿನ ಹೊರವಲಯದ ಶೆಡ್ನಲ್ಲಿ ಹೋಮ ನಡೆಯುತ್ತಿತ್ತು. ಈ ಬಾರಿ ಮೂರೂ ದಿನವೂ ಗುಹೆಯ ಮುಂಭಾಗದಲ್ಲೇ ಅವಕಾಶ ಕೊಡಬೇಕು ಎಂದು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದ್ದೇವೆ. ಸರಕಾರಕ್ಕೆ ಈ ಬಗ್ಗೆ ಪತ್ರ ಬರೆದಿರುವುದಾಗಿ ಜಿಲ್ಲಾಧಿಕಾರಿಗಳು ಹೇಳಿದ್ದು, ಸರಕಾರದ ಆದೇಶದ ನಿರೀಕ್ಷೆಯಲ್ಲಿದ್ದೇವೆ ಎಂದು ತಿಳಿಸಿದರು.
ಸಮಿತಿಯ ಅಧ್ಯಕ್ಷ ಹೇಮಂತ್ಕುಮಾರ್, ಸದಸ್ಯರಾದ ಎಸ್.ಎಂ ಭಾಷಾ, ಶೀಲಾ, ಗುರುವೇಶ್, ಚೇತನ್, ಸತೀಶ್, ಇದ್ದರು
Religious rituals to be held at Datta Peetha from today onwards