ಚಿಕ್ಕಮಗಳೂರು: ಪ್ರತಿ ವರ್ಷದಂತೆ ಈ ಬಾರಿಯೂ ಮೂಡಿಗೆರೆ ಪಟ್ಟಣದಲ್ಲಿ ಜ.೧ ರಂದು ಮೂರನೇ ವರ್ಷದ ಭೀಮ್ ಕೊರೆಂಗಾವ್ ವಿಜಯೋತ್ಸವ ಆಚರಿಸಲಾಗುವುದು ಎಂದು ಭೀಮ್ ಕೊರೆಗಾವ್ ಆಚರಣಾ ಸಂಘ ತಿಳಿಸಿದೆ.
ಇಂದು ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಸಂಘದ ಅಧ್ಯಕ್ಷ ಸುಂದ್ರೇಶ್ ಕನ್ನಾಪುರ ಭೀಮ ಕೊರೆಂಗಾವ್ ವಿಜಯೋತ್ಸವ ಯಶಸ್ವಿಗೆ ಪ್ರತಿ ಹಳ್ಳಿಯಲ್ಲಿ ಪ್ರಚಾರಾಂದೋಲನ ನಡೆಸುತ್ತಿದ್ದೇವೆ. ಜಿಲ್ಲೆಯ ಪ್ರತಿ ತಾಲೂಕಿನಿಂದಲೂ ದಲಿತಪರ ಸಂಘಟನೆಯ ಮುಖಂಡರು, ಕಾರ್ಯಕರ್ತರು, ಅಲ್ಪಸಂಖ್ಯಾತರು, ಆದಿವಾಸಿ ಬುಡಕಟ್ಟು ಸಂಘಟನೆಗಳು, ಕನ್ನಡಪರ ಸಂಘಟನೆಗಳು, ವಿವಿಧ ಮಹಿಳಾ ಸಂಘಟನೆಗಳ ಸುಮಾರು ೫ ಸಾವಿರಕ್ಕೂ ಹೆಚ್ಚುಮಂದಿ ಕಾರ್ಯಕರ್ತರು ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ನಿರೀಕ್ಷೆ ಇದೆ ಎಂದು ಹೇಳಿದರು.
ಕಾರ್ಯಕ್ರಮದ ಯಶಸ್ವಿಗೆ ಪೂರ್ವ ಸಿದ್ಧತೆಗಳು ಭರದಿಂದ ನಡೆದಿವೆ. ಮೂಡಿಗೆರೆ ಪಟ್ಟಣದ ಪ್ರಮುಖ ಬೀದಿಯಲ್ಲಿ ಮಧ್ಯಾಹ್ನ ೨ ಗಂಟೆಗೆ ಮೆರವಣಿಗೆ ಆಯೋಜಿಸಿದ್ದು, ನಾಸಿಕ್ಡೋಲ್, ಗೊಂಬೆ ಕುಣಿತ, ಮಲೆನಾಡು ವಾದ್ಯ, ಜಾನಪದ ಕಲಾತಂಡಗಳೊಂದಿಗೆ ಮೆರವಣಿಗೆ ಸಾಗಲಿದೆ. ನಂತರ ಮೂಡಿಗೆರೆ ಲಯನ್ಸ್ ವೃತ್ತದಲ್ಲಿ ಸಾರ್ವಜನಿಕ ಕಾರ್ಯಕ್ರಮ ನಡೆಯಲಿದ್ದು, ಶಾಸಕರಾದ ನಯನಾ ಮೋಟಮ್ಮ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆಂದರು.
ಸುಂದ್ರೇಶ್ ಆದ ನಾನು ಅಧ್ಯಕ್ಷತೆ ವಹಿಸಲಿದ್ದೇನೆ ಮುಖ್ಯಭಾಷಣಕಾರರಾಗಿ ಡಾ.ವಿಠಲ್ ವಗ್ಗನ್, ಚಿತ್ರ ನಟ ದುನಿಯಾ ವಿಜಯ್ ಕಾರ್ಯಕ್ರಮದ ಮುಖ್ಯ ಆಕರ್ಷಣೆಯಾಗಲಿದ್ದು ಮಾಜಿ ಸಚಿವರಾದ ಮೋಟಮ್ಮ, ಬಿ.ಬಿ.ನಿಂಗಯ್ಯ, ಮಾಜಿ ಶಾಸಕ ಎಂ.ಪಿ.ಕುಮಾರಸ್ವಾಮಿ, ಉಪಸಭಾಪತಿ ಎಂ.ಕೆ.ಪ್ರಾಣೇಶ್, ಬಿಜೆಪಿ ಮುಖಂಡ ವಿಜಯ್ಕುಮಾರ್, ದೀಪಕ್ದೊಡ್ಡಯ್ಯ, ಜೆಡಿಎಸ್ ನ ರಂಜನ್ ಅಜಿತ್ಕುಮಾರ್, ಸಿಪಿಐಎಂಎಲ್ ಬಿ. ರುದ್ರಯ್ಯ, ಎಸ್ಡಿಪಿಐ ಅಂಗಡಿ ಚಂದ್ರು, ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಗೀತಾ ರಂಜನ್ಅಜಿತ್ಕುಮಾರ್ ಮತ್ತಿತರೆ ಗಣ್ಯರು ಭಾಗವಹಿಸಲಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಆಚರಣಾ ಸಂಘದ ಉಪಾಧ್ಯಕ್ಷ ಹರೀಶ್ ಕೆಲ್ಲೂರು, ಕಾರ್ಯದರ್ಶಿ ಸುಂದ್ರೇಶ್ ಹೊಯ್ಸಳಲು, ಖಜಾಂಚಿ ಭಾನುಪ್ರಕಾಶ್, ಕೆಳಗೂರು ರಮೇಶ್, ಜಗದೀಶ್, ರುದ್ರೇಶ್, ಮಂಜುನಾಥ್ ಕಡಿದಾಳ್, ಅರುಣ್ ಮತ್ತಿತರರು ಇದ್ದರು.
Third annual Bhim Korengaon Victory Day celebrations on January 1