ಚಿಕ್ಕಮಗಳೂರು: ವಿಶ್ವಹಿಂದೂ ಪರಿಷತ್-ಬಜರಂಗದಳ ವತಿಯಿಂದ ನಡೆಯುತ್ತಿರುವ ದತ್ತ ಜಯಂತಿ ಅಂಗವಾಗಿ ಗುರುವಾರ ನಗರದಲ್ಲಿ ಸಹಸ್ರಾರು ಮಹಿಳೆಯರಿಂದ ಬೃಹತ್ ಸಂಕಿರ್ತನಾ ಯಾತ್ರೆ ನಡೆಯಿತು. ಬೆಳಗ್ಗೆ ಬೋಳರಾಮೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಮಹಿಳೆಯರು ದೇವಸ್ಥಾನದ ಆವರಣದಲ್ಲಿ ಸಮಾವೇಶಗೊಂಡು ಧಾರ್ಮಿಕ ಸಭೆಯಲ್ಲಿ ಪಾಲ್ಗೊಂಡರು.
ಕೇಸರಿ ರುಮಾಲು, ಶಾಲುಗಳನ್ನು ಧರಿಸಿದ್ದ ಮಹಿಳೆಯರು ಭಗವಾಧ್ವಜ ಹಿಡಿದು ಶ್ರೀಗುರು ದತ್ತಾತ್ರೇಯರು, ಶ್ರೀರಾಮ, ಭಾರತ ಮಾತೆಗೆ ಜಯಕಾರ ಕೂಗುತ್ತಾ ಮೆರವಣಿಗೆಯಲ್ಲಿ ಸಾಗಿ ಬಂದರು. ದಾರಿಯುದ್ದಕ್ಕೂ ದತ್ತಾತ್ರೇಯರ ಸಂಕೀರ್ತನೆಗಳನ್ನು ಹಾಡಿದರು. ಪುಟಾಣಿಗಳ ತಂಡವೊಂದು ಮೆರವಣಿಗೆಯ ಮುಂಚೂಣಿಯಲ್ಲಿ ದೇವರ ಕೀರ್ತನೆಯೊಂದಿಗೆ ನೃತ್ಯ ಮಾಡುತ್ತಾ ಸಾಗಿದ್ದು ಗಮನ ಸೆಳೆಯಿತು.
ಯುವಕರ ತಂಡವೊಂದು ದತ್ರಾತ್ರೇಯರ ಮೂರ್ತಿಯನ್ನೊಳಗೊಂಡ ಅಡ್ಡೆಯನ್ನು ಹೊತ್ತು ಮೆರವಣಿಗೆಯುದ್ದಕ್ಕೂ ಘೋಷಣೆಗಳನ್ನು ಕೂಗುತ್ತಾ ಸಾಗಿ ಬಂದರು. ವಿಶ್ವಹಿಂದೂ ಪರಿಷತ್-ಬಜರಂಗದಳ ಸಂಘಟನೆಗಳ ಮುಖಂಡರೊಂದಿಗೆ ನಗರಸಭೆ ಸದಸ್ಯರು, ಜಿ.ಪಂ., ತಾ.ಪಂ. ಮಾಜಿ ಸದಸ್ಯರುಗಳು, ಗ್ರಾ.ಪಂ. ಅಧ್ಯಕ್ಷರು, ಸದಸ್ಯರುಗಳು ಸೇರಿದಂತೆ ಹಲವು ಮಂದಿ ಚುನಾಯಿತ ಪ್ರತಿನಿಧಿಗಳು ಭಾಗವಹಿಸಿದ್ದು ವಿಶೇಷವಾಗಿತ್ತು.
ಈ ಬಾರಿ ಹುಬ್ಬಳ್ಳಿಯ ತೇಜೋಮಯಿ ಮಾತಾಜಿ, ಆದಿಶಕ್ತಿ ನಗರದ ಶುಭವ್ರತ ಪ್ರಾಣಾ ಮಾತಾಜಿ ಅವರುಗಳು ಸಂಕೀರ್ತನಾ ಯಾತ್ರೆಯನ್ನು ಮುನ್ನಡೆಸಿದರು. ವಿಧಾನ ಸಭೆ ಸದಸ್ಯ ಸಿ.ಟಿ.ರವಿ ಅವರು ಸಂಕೀರ್ತನೆಗಳನ್ನು ಹಾಡುತ್ತಾ ಯಾತ್ರೆಯಲ್ಲಿ ಭಾಗವಹಿಸಿದರು. ಅವರೊಂದಿಗೆ ನಗರಸಭೆ ಅಧ್ಯಕ್ಷೆ ಸುಜಾತ ಶಿವಕುಮಾರ್, ರಾಜ್ಯ ಬಿಜೆಪಿ ಮಹೀಳಾ ಮೋರ್ಚಾ ಅಧ್ಯಕ್ಷೆ ಮಂಜುಳಾ, ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ಜಸಿಂತಾ ಅನಿಲ್ ಕುಮಾರ್, ವೀಣಾ ಶೆಟ್ಟಿ ಇನ್ನಿತರೆ ಪ್ರಮುಖರು ಮೆರವಣಿಗೆಯಲ್ಲಿ ಭಾಗವಹಿಸಿದರು.
ಅನಸೂಯಾ ಜಂಯಂತಿ: ಆರ್ಜಿ ರಸ್ತೆಯ ಸರ್ಕಾರಿ ಪಾಲಿಟೆಕ್ನಿಕ್ ವರೆಗೆ ಯಾತ್ರೆಯಲ್ಲಿ ತೆರಳಿದ ಮಹಿಳೆಯರು ನಂತರ ವಾಹನಗಳಲ್ಲಿ ದತ್ತಪೀಠಕ್ಕೆ ತೆರಳಿ ಅನಸೂಯಾ ಜಯಂತಿ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ದತ್ತ ಪಾದುಕೆಗಳ ದರ್ಶನ ಪಡೆದರು. ಅನಸೂಯಾ ಜಯಂತಿ ಅಗವಾಗಿ ಪೀಠದಲ್ಲಿ ಬೆಳಗ್ಗೆ ಗಣಪತಿ ಹೋಮ, ಪುಣ್ಯಾಹವಾಚನ, ಋತ್ವಿಗ್ವರ್ಣ, ನವಗ್ರಹ ಹೋಮ, ದುರ್ಗಾ ಹೋಮಗಳು ನಡೆದವು.
ಬೋಳರಾಮೇಶ್ವರ ದೇವಸ್ಥಾನ ಆವರಣದಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಹುಬ್ಬಳ್ಳಿಯ ತೇಜೋಮಯಿ ಮಾತಾಜಿ ಆಶೀರ್ವಚನ ನೀಡಿ, ದತ್ತಾತ್ರೇಯರ ಅವತಾರ ಅದ್ಭುತವಾದದ್ದು, ಶಿವ, ವಿಷ್ಣು ಹಾಗೂ ಭ್ರಹ್ಮ ಮೂರೂ ಮಂದಿ ಒಮ್ಮೆಲೆ ಅವತಾರವೆತ್ತಿದ್ದ ವಿಶೇಷ ಅದಾಗಿದ್ದು, ಅದು ನಮ್ಮ ಕರ್ನಾಟಕದಲ್ಲಿ ಆಗಿರುವುದು ಅತ್ಯಂತ ವಿಶೇಷವಾದದ್ದು ಎಂದು ಹೇಳಿದರು.
ಶುಭವ್ರತ ಪ್ರಾಣಾ ಮಾತಾಜಿ ಅವರು ಆಶೀರ್ವಚನ ನೀಡಿ, ಅನಸೂಯ ದೇವಿ ಅವರ ಆದರ್ಶಗಳನ್ನು ಕೇಳಿದರೆ ಸಾಲದು ಅದನ್ನು ಜೀವನದಲ್ಲಿ ಅನುಭವಕ್ಕೆ ತರಬೇಕು. ಆಧ್ಯಾರ್ತಿಕ ಎನ್ನುವುದು ತತ್ವವಲ್ಲ ಅದು ದರ್ಶನ ಎಂದು ಋಷಿ ಮುನಿಗಳು ಹೇಳಿದ್ದಾರೆ. ಅದನ್ನು ನಾವು ನಮ್ಮ ಜೀವನದಲ್ಲಿ ಅಳವಡಿಸಿ ಅನುಭವಿಸಬೇಕು ಎಂದರು.
ತನ್ಮಯಿ ಪ್ರೇಂ ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿಶ್ವಹಿಂದೂ ಪರಿಷತ್ ಜಿಲ್ಲಾಧ್ಯಕ್ಷ ಶ್ರೀಕಾಂತ್ ಪೈ, ಮುಖಂಡರುಗಳಾದ ರಘು ಸಕಲೇಶಪುರ, ಶಶಾಂಕ್ ಹೆರೂರು, ಜಿಲ್ಲಾ ಬಿಜೆಪಿ ಅಧ್ಯಕ್ಷ ದೇವರಾಜ ಶೆಟ್ಟಿ, ಡಾ. ನರೇಂದ್ರ ಇತರರು ಭಾಗವಹಿಸಿದ್ದರು.
A massive Sankirtana Yatra by women on the occasion of Datta Jayanti