ಚಿಕ್ಕಮಗಳೂರು: ಸಹಸ್ರಾರು ಮಾಲಾಧಾರಿಗಳು ಪೀಠಕ್ಕೆ ಭೇಟಿ ನೀಡಿ ದತ್ತಪಾದುಕೆಗಳ ದರ್ಶನ ಮಾಡುವ ಮೂಲಕ ವಿಶ್ವಹಿಂದೂ ಪರಿಷತ್-ಬಜರಂಗದಳ ವತಿಯಿಂದ ಆಯೋಜಿಸಲಾಗಿದ್ದ ಈ ಬಾರಿಯ ದತ್ತ ಜಯಂತಿ ಉತ್ಸವ ಶಾಂತಿಯುತವಾಗಿ ಸಂಪನ್ನಗೊಂಡಿತು.
ರಾಜ್ಯದ ಮೂಲೆ ಮೂಲೆಗಳಿಂದ ಶನಿವಾರ ದತ್ತಾತ್ರೇಯನ ಭಜನೆ ಮಾಡುತ್ತ ದತ್ತಪೀಠಕ್ಕೆ ಆಗಮಿಸಿದ ಮಾಲಾಧಾರಿಗಳು, ಹೋಮ, ಹವನ ಇನ್ನಿತರೆ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಇರುಮುಡಿ ಅರ್ಪಿಸಿ ಹಿಂತಿರುಗಿದರು.
ಪಾದುಕೆಗಳ ದರ್ಶನ: ವಾಹನಗಳಿಗೆ ಕೇಸರಿ ಹಾಗೂ ಭಗವಾಧ್ವಜಗಳನ್ನು ಕಟ್ಟಿ, ಧ್ವನಿವರ್ಧಕಗಳಲ್ಲಿ ಶ್ರೀರಾಮ, ಆಂಜನೇಯನ ಗೀತೆಗಳನ್ನು ಹಾಕಿಕೊಂಡು, ಘೋಷಣೆಗಳನ್ನು ಕೂಗುತ್ತಾ, ಪೀಠಕ್ಕೆ ಆಗಮಿಸಿದ ಭಕ್ತರು, ಬ್ಯಾರಿಕೇಡ್ನಲ್ಲಿ ಸರತಿಯಲ್ಲಿ ಸಾಗಿ ಪಾದುಕೆಗಳ ದರ್ಶನ ಪಡೆದರು. ನಂತರ ಈ ಬಾರಿ ದತ್ತ ಪಾದುಕೆಗಳಿರುವ ಗುಹೆ ಎದುರು ಭಾಗದ ಆವರಣದಲ್ಲೇ ನಡೆದ ಹೋಮ ಹವನಗಳನ್ನು ಕಣ್ತುಂಬಿಕೊಂಡು ಹೊರ ಆವರಣದ ಶೆಡ್ನಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಭಾಗವಹಿಸಿ ಅಲ್ಲಿಯೇ ಇರುಮುಡಿ ಅರ್ಪಿಸಿದರು.
ಸರ್ಕಾರದಿಂದ ನೇಮಿಸಲ್ಪಟ್ಟಿರುವ ಅರ್ಚಕರು ಗುಹೆಯಲ್ಲಿ ಪಾದುಕೆಗಳಿಗೆ ಶಾಸ್ತ್ರೋಕ್ತವಾಗಿ ಪೂಜೆ, ಪುನಸ್ಕಾರಗಳನ್ನು ನೆರವೇರಿಸಿದರು. ಪೀಠದ ಆವರಣದಲ್ಲಿ ನಡೆದ ಗಣಹೋಮ, ದತ್ತ ತಾರಕ ಹೋಮ, ದತ್ತಾತ್ರೇಯ ಮೂಲ ಮಂತ್ರ ಯಾಗ, ತಂತ್ರಿಗಳಿಂದ ಆಗಮೋಕ್ತವಾಗಿ ಪೂಜೆ, ಮಹಾ ರುದ್ರ ಹೋಮ ಇನ್ನಿತರೆ ಧಾರ್ಮಿಕ ಕಾರ್ಯಕ್ರಮಗಳನ್ನು ಕಮ್ಮರಡಿ ಪ್ರದೀಪ್ ತಂತ್ರಿ, ಖಾಂಡ್ಯ ಪ್ರವೀಣ್, ಸುಮಂತ್ ಭಟ್, ಅರಣ್ ಭಟ್, ಮಧು ಭಟ್, ಮತ್ತಿತರರ ತಂಡ ನೆರವೇರಿಸಿತು.
ಸ್ವಾಮೀಜಿಗಳಿಂದ ಆಶೀರ್ವಚನ: ಇದೇ ವೇಳೆ ನಡೆದ ಧಾರ್ಮಿಕ ಸಭೆಯಲ್ಲಿ ಕಡೂರು ಎಳನಡು ಮಠದ ಶ್ರೀ ಜ್ಞಾನ ಪ್ರಭು ಸಿದ್ದರಾಮ ದೇಶೀಕೇಂದ್ರ ಸ್ವಾಮೀಜಿ, ಬೀರೂರಿನ ಬಾಳೆಹೊನ್ನೂರು ರಂಭಪುರಿ ಖಾಸಾ ಮಠದ ಶ್ರೀ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ, ಹುಣಸಘಟ್ಟ ಹಾಲ ಸ್ವಾಮಿ ಮಠದ ಶ್ರೀ ಗುರುಮೂರ್ತಿ ಶಿವಾಚಾರ್ಯ ಸ್ವಾಮೀಜಿ, ಚಿಕ್ಕಮಗಳೂರು ವಿಶ್ವಧರ್ಮ ಪೀಠದ ಶ್ರೀ ಜಯಬಸವಾನಂದ ಸ್ವಾಮೀಜಿಯವರು ಆಶೀರ್ವಚನ ನೀಡಿದರು.
ಸರ್ಕಾರ ನೇಮಿಸಿರುವ ಗುರು ದತ್ತಾತ್ರೇಯ ಬಾಬಾಬುಡನ್ ದರ್ಗಾದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹೇಮಂತ್ಕುಮಾರ್, ಸದಸ್ಯರಾದ ಎಸ್.ಎಂ ಭಾಷಾ, ಶೀಲಾ, ಗುರುವೇಶ್, ಚೇತನ್, ಸತೀಶ್ ನೇತೃತ್ವದಲ್ಲಿ ಕಾರ್ಯಕ್ರಮದ ಉಸ್ತುವಾರ ನಡೆಯಿತು. ವಿಶ್ವಹಿಂದೂ ಪರಿಷತ್ ಪ್ರಾಂತ ಸಹಕಾರ್ಯದರ್ಶಿ ರಘು ಸಕಲೇಶಪುರ, ಜಿಲ್ಲಾಧ್ಯಕ್ಷ ಶ್ರೀಕಾಂತ್ ಪೈ, ಉಪಾಧ್ಯಕ್ಷ ಯೋಗೀಶ್ ರಾಜ್ ಅರಸ್, ಜರಂಗದಳ ಪ್ರಾಂತ ಸಂಯೋಜಕ ಪ್ರಭಂಜನ್ ಸೂರ್ಯ, ಶರಣ್ ಪಂಪ್ವೆಲ್, ವಿಹೆಚ್ಪಿ ಹಾಸನ ವಿಭಾಗ ಸಹ ಕಾರ್ಯದರ್ಶಿ ಆರ್.ಡಿ.ಮಹೇಂದ್ರ, ಶಶಾಂಕ್ ಹೆರೂರು, ಹೈಕೋರ್ಟ್ ವಕೀಲ ಜಗದೀಶ್ ಬಾಳಿಗ, ಶ್ರೀರಾಮ ಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಇತರರು ಭಾಗವಹಿಸಿದ್ದರು.
ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ, ಕಾರ್ಕಳ ಶಾಸಕ ವಿ.ಸುನೀಲ್ ಕುಮಾರ್ ಸೇರಿದಂತೆ ಬಿಜೆಪಿ ಹಲವು ಮುಖಂಡರು, ಚುನಾಯಿತ ಪ್ರತಿನಿಧಿಗಳು ಭಾಗವಹಿಸಿದ್ದರು.
ಟ್ರಾಫಿಕ್ ಜಾಮ್: ಕಡೂರು ತಾಲ್ಲೂಕು ಹಾಗೂ ಹಾಸನ ಜಿಲ್ಲೆಗಳಿಂದ ನೂರಾರು ವಾಹನಗಳಲ್ಲಿ ಮಾಲಾಧಾರಿಗಳು ಏಕ ಕಾಲದಲ್ಲಿ ಪೀಠದತ್ತ ಆಗಮಿಸಿದ ಹಿನ್ನೆಲೆಯಲ್ಲಿ ಮಧ್ಯಾಹ್ನ ಗಿರಿ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಉಂಟಾಯಿತು. ಕೆಲವು ಜಿಲ್ಲೆಗಳಿಂದ ಭಕ್ತರು ಬಸ್ಗಳಲ್ಲಿ ಆಗಮಿಸಿದ್ದ ಕಾರಣ ಸಂಚಾರಕ್ಕೆ ತೊಡಕಾಯಿತು. ಒಂದು ಹಂತದಲ್ಲಿ ಹೊನ್ನಮ್ಮನ ಹಳ್ಳದಿಂದ ಮುಳ್ಳಯ್ಯನಗಿರಿ ಕ್ರಾಸ್ ವರೆಗೆ ಟ್ರಾಫಿಕ್ ಜಾಮ್ ಉಂಟಾಗಿತ್ತು.
ಪೊಲೀಸ್ ಸರ್ಪಗಾವಲು: ದತ್ತಪೀಠದ ಮಾರ್ಗದುದ್ದಕ್ಕೂ ಹಾಗೂ ಪೀಠದ ಪರಿಸರದಲ್ಲಿರುವ ಎಲ್ಲ ಗೋರಿಗಳ ಬಳಿಯೂ ಬಿಗಿ ಪೊಲೀಸ್ ಪಹರೆ ಏರ್ಪಡಿಸಲಾಗಿತ್ತು. ನಗರದ ಸೂಕ್ಷ್ಮ ಪ್ರದೇಶಗಳಲ್ಲೂ ಪೊಲೀಸರನ್ನು ನಿಯೋಜಿಸಲಾಗಿತ್ತು. ಜಿಲ್ಲಾಧಿಕಾರಿ ಮೀನಾ ನಾಗರಾಜ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ವಿಕ್ರಮ್ ಅಮಟೆ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣ ಅಧಿಕಾರಿ ಕೀರ್ತನಾ ಉಪಸ್ಥಿತರಿದ್ದರು.
Datta Jayanti festival ends peacefully