ಚಿಕ್ಕಮಗಳೂರು: ಬದುಕಿರುವ ವ್ಯಕ್ತಿಗೆ ಮರಣ ಪ್ರಮಾಣಪತ್ರ ನೀಡಿ ಆಸ್ತಿ ಅಕ್ರಮ ವರ್ಗಾವಣೆ ಸಂಚು ರೂಪಿಸಿರುವ ಕಂದಾಯ ಇಲಾಖೆಯ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಅಕ್ರಮ ಖಾತೆಯನ್ನು ರದ್ದುಮಾಡಿ ಮೂಲ ಖಾತೆದಾರರ ಹೆಸರಿಗೆ ಕಾನೂನುಬದ್ಧ ಖಾತೆಯನ್ನು ಬದಲಾವಣೆ ಮಾಡಿಕೊಡಬೇಕೆಂದು ಕರ್ನಾಟಕ ರಾಜ್ಯ ರೈತಸಂಘ ಜಿಲ್ಲಾಧಿಕಾರಿಗಳು ಹಾಗೂ ಉಪ ವಿಭಾಗಾಧಿಕಾರಿಗಳನ್ನು ಒತ್ತಾಯಿಸಿದೆ.
ಇಂದು ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಗುರುಶಾಂತಪ್ಪ ಅವರು ಕಡೂರು ತಾಲ್ಲೂಕು ಗುಂಡುಸಾಗರ ಗ್ರಾಮದಲ್ಲಿ ನಡೆದಿರುವ ಅಕ್ರಮ ಖಾತೆ ವರ್ಗಾವಣೆಯ ಸಂಚಿನಲ್ಲಿ ಸಖರಾಯಪಟ್ಟಣ, ಕಸಬಾ ಹೋಬಳಿ ರಾಜಸ್ವ ನಿರೀಕ್ಷಕರುಗಳು, ಗ್ರಾಮ ಲೆಕ್ಕಾಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಂಡು ಮೂಲ ಖಾತೆದಾರರ ಹೆಸರಿಗೆ ಖಾತೆ ಮಾಡಿಕೊಡಬೇಕೆಂದು ಆಗ್ರಹಿಸಿದರು.
ಗಂಗಮ್ಮ ಕೋಂ ರಾಮೇಗೌಡ ಇವರಿಗೆ ಮಕ್ಕಳಿರುವುದಿಲ್ಲ ಎಂದು ಹೇಳಿ ನಕಲಿ ದಾಖಲೆ ಸೃಷ್ಟಿಸಿ ೫ ಎಕರೆಯಷ್ಟು ಜಂಟಿ ಖಾತೆಯಲ್ಲಿದ್ದ ತಮ್ಮ ಜಮೀನನ್ನು ಖಾತೆ ಮಾಡಿಸಿಕೊಂಡಿದ್ದು ಇದಲ್ಲದೆ ಬದುಕಿರುವ ಗಂಗಮ್ಮ ನಿಧನ ಹೊಂದಿದ್ದಾರೆಂದು ಮರಣ ಪ್ರಮಾಣಪತ್ರ ಮಾಡಿಸಿದ್ದಾರೆಂದು ಆರೋಪಿಸಿದರು.
ಗಂಗಮ್ಮನ ಹೆಸರಿನಲ್ಲಿದ್ದ ದರಖಾಸ್ತು ೩ ಎಕರೆ ಜಮೀನನ್ನು ಗುಂಡಯ್ಯನ ಮಗ ಈರಪ್ಪನ ಪತ್ನಿ ಹೇಮಾವತಿ ಹೆಸರಿಗೆ ಮಾಡಿಸಿಕೊಂಡಿದ್ದು, ಈ ಎಲ್ಲಾ ಅಕ್ರಮಗಳಿಗೆ ಗ್ರಾಮ ಲೆಕ್ಕಿಗರು, ರಾಜಸ್ವ ನಿರೀಕ್ಷಕರುಗಳು ಕಾರಣರಾಗಿದ್ದು, ಕೂಡಲೇ ಇವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಈ ಹಿಂದೆ ನಿಡಘಟ್ಟ ಗ್ರಾಮದ ಹಳ್ಳಿಕೆರೆ ಕಾವಲು ಬಗರ್ಹಕ್ಕುಂ ಸಾಗುವಳಿ ಮಾಡುವ ಸಂದರ್ಭದಲ್ಲಿ ೧೬೦೦ ಎಕರೆ ಜಮೀನು ಮಂಜೂರು ಮಾಡುವಾಗ ಅಕ್ರಮ ನಡೆದಿರುವುದು ಬೆಳಕಿಗೆ ಬಂದಿದ್ದೆ. ಈ ಸಂದರ್ಭದಲ್ಲಿ ಇದ್ದ ಕಡೂರು ತಹಶೀಲ್ದಾರ್ ಹಾಗೂ ಕಚೇರಿ ಮಖ್ಯಸ್ಥರನ್ನು ಅಲ್ಲೇ ಮುಂದುವರೆಸಿರುವುದು ಅನುಮಾನ ಮೂಡಿಸುತ್ತಿದೆ ಎಂದರು.
ಸಂಬಂಧಿಸಿದ ಎಲ್ಲಾ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಅಕ್ರಮ ಖಾತೆ ಬದಲಾವಣೆಯನ್ನು ರದ್ದುಗೊಳಿಸಿ ಮೂಲ ಖಾತೆದಾರರ ಹೆಸರಿಗೆ ಕಾನೂನು ಬದ್ಧ ಖಾತೆ ಬದಲಾವಣೆ ಮಾಡಿಕೊಡಬೇಕೆಂದು ಮನವಿ ಮಾಡಿದರು.
ಈ ಹಿಂದೆ ಕಡೂರು ಮತ್ತು ಮೂಡಿಗೆರೆ ತಾಲ್ಲೂಕಿನಲ್ಲಿ ನಡೆದಿರುವ ಭೂಅಕ್ರಮ ಪ್ರಕರಣದಲ್ಲಿ ಸುಮಾರು ೧೩೦ ಅಧಿಕಾರಿಗಳು ಭಾಗಿಯಾಗಿದ್ದು, ಈ ಬಗ್ಗೆ ಸಮಗ್ರ ತನಿಖೆ ನಡೆಸಿ ಅಕ್ರಮವೆಸಗಿರುವ ಅಧಿಕಾರಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಸಮಿತಿ ಸದಸ್ಯ ಕೆ.ಕೆ.ಕೃಷ್ಣೇಗೌಡ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಿ.ಮಹೇಶ್, ಸಂತ್ರಸ್ಥರುಗಳಾದ ರಾಜಪ್ಪ, ಚಂದ್ರಮ್ಮ, ಮತ್ತಿಘಟ್ಟದ ಕೆ.ಎಸ್ ಲಕ್ಷ್ಮಣಪ್ಪ ಉಪಸ್ಥಿತರಿದ್ದರು.
Farmers’ union demands action against illegal property transfer