ಬಾಳೆಹೊನ್ನೂರು: ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಅವರು ರಂಭಾಪುರಿ ಮಠಕ್ಕೆ ಪ್ರಾಣಿದಯಾ ಸಂಘ ‘ಪೆಟಾ’ ವತಿಯಿಂದ ಸುಮಾರು ₹10 ಲಕ್ಷ ಮೌಲ್ಯದ ರೊಬೊಟಿಕ್ ಆನೆಯನ್ನು ಕೊಡುಗೆಯಾಗಿ ನೀಡಿದ್ದಾರೆ.
ರೊಬೊಟಿಕ್ ಆನೆಯನ್ನು ರಂಭಾಪುರಿ ಪೀಠದ ವೀರ ಸೋಮೇಶ್ವರ ಸ್ವಾಮೀಜಿ ಮಠಕ್ಕೆ ಬರಮಾಡಿಕೊಂಡು ಚಾಲನೆ ನೀಡಿದರು.
ನೋಡಲು ನೈಜ ಆನೆಯಂತೆ ಕಾಣುವ ಈ ರೊಬೊಟಿಕ್ ಆನೆಯು, ಮಠದ ಆವರಣದಲ್ಲೇ ಇರಲಿದ್ದು, ಮಠಕ್ಕೆ ಬರುವ ಭಕ್ತರನ್ನು ಆಶೀರ್ವದಿಸಲಿದೆ. ಮಠದ ಆವರಣದಲ್ಲಿ ಈ ಆನೆಗಾಗಿ ಪ್ರತ್ಯೇಕ ಕಟ್ಟಡ ನಿರ್ಮಿಸಲಾಗಿದೆ. ಕಣ್ಣು ತೆರೆದು, ತಲೆ, ಸೊಂಡಿಲು ಹಾಗೂ ಬಾಲವನ್ನು ಅಲುಗಾಡಿಸುತ್ತಿರುವ ಆನೆಯನ್ನು ನೋಡಿದರೆ ನಿಜವಾದ ಆನೆಯೇ ಎದುರಿಗಿದ್ದಂತೆ ಭಾಸವಾಗುತ್ತದೆ.
‘ನಟಿ ಶಿಲ್ಪಾಶೆಟ್ಟಿ ರಂಭಾಪುರಿ ಮಠಕ್ಕೆ ನಿಜವಾದ ಆನೆಯನ್ನೇ ಕೊಡುವ ಯೋಚನೆ ಹೊಂದಿದ್ದರು. ಆದರೆ, ಕಾನೂನಿನ ತೊಡಕಾಗಬಹುದು ಎಂದು, ರೊಬೊಟಿಕ್ ಆನೆಯನ್ನು ಕೊಡುಗೆಯಾಗಿ ನೀಡಿದ್ದಾರೆ’ ಎಂದು ಪೆಟಾ ಸಂಸ್ಥೆಯ ಕಾರ್ಯಕರ್ತರು ಹೇಳಿದರು.
ಮಠಕ್ಕೆ ಬಂದಿದ್ದ ಭಕ್ತರು ರೊಬೊಟಿಕ್ ಆನೆಯ ಜತೆಗೆ ಸೆಲ್ಫಿ ತೆಗೆದುಕೊಂಡು ಖುಷಿಪಟ್ಟರು.
Actress Shilpa Shetty donates robotic elephant to Rambhapuri Math