ಚಿಕ್ಕಮಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಸಚಿವ ಪ್ರಿಯಾಂಕ ಖರ್ಗೆ ಅವರು ಪ್ರಜಾಪ್ರಭುತ್ವದ ದೇಗುಲ ಸುವರ್ಣ ಸೌಧದಲ್ಲಿ ಬಿಜೆಪಿ ಅಧ್ಯಕ್ಷ ವಿಜಯೇಂದ್ರ ಅವರು ಅನ್ವರ್ ಮಾಣಿಪ್ಪಾಡಿ ಅವರಿಗೆ ೧೫೦ ಕೋಟಿ ರೂ. ಆಮಿಷ ಒಡ್ಡಿದಾರೆ ಎಂದು ಸುಳ್ಳು ಆರೋಪ ಮಾಡಿದ್ದು, ಈ ಪ್ರಕರಣವನ್ನು ಸರಕಾರ ಸಿಬಿಐಗೆ ವಹಿಸಬೇಕು ಎಂದು ಬಿಜೆಪಿ ರೈತ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಎಚ್.ಸಿ ಕಲ್ಮರುಡಪ್ಪ ಒತ್ತಾಹಿಸಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿ ೧೫೦ ಕೋಟಿ ರೂ. ಆಮಿಷ ಒಡ್ಡಿರುವ ಸಾಕ್ಷ್ಯಾಧಾರಗಳಿದ್ದರೆ ಅದರ ಬಗ್ಗೆ ಖಚಿತ ಮಾಹಿತಿ ಮಖ್ಯಮಂತ್ರಿಗೆ ಇದ್ದರೆ ಅವರು ದಯಮಾಡಿ, ಈ ಪ್ರಕರಣವನ್ನು ಸಿಬಿಐಗೆ ವಹಿಸಲೇಬೇಕು. ಇಲ್ಲದಿದ್ದರೆ ಜನರ ಗಮನವನ್ನು ಬೇರೆಡೆಗೆ ಸೆಳೆಯಲು ಮಾಡಿರುವ ಸುಳ್ಳು ಆರೋಪ ಎಂದು ಭಾವಿಸಬೇಕಾಗುತ್ತದೆ ಎಂದು ಆರೋಪಿಸಿದರು.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಕರ್ನಾಟಕದಲ್ಲಿ ಪಕ್ಷ ಸಂಘಟನೆಯನ್ನು ಉತ್ತಮವಾಗಿ ಮಾಡುತ್ತಿದ್ದಾರೆ. ಅದಕ್ಕೆ ಹೆದರಿ ಅವರ ವಿರುದ್ಧ ಈ ಆರೋಪ ಮಾಡಿದ್ದಾರೆ. ವಿಜಯೇಂದ್ರ ಅವರು ಯಾವ ಉದ್ದೇಶಕ್ಕಾಗಿ ಮಾಣಿಪ್ಪಾಡಿಗೆ ಹಣದ ಆಮಿಷ ಒಡ್ಡುತ್ತಾರೆ, ಇದರಲ್ಲಿ ಅವರ ಪಾತ್ರ ಏನಿದೆ ಎಂದು ಪ್ರಶ್ನಿಸಿದರು.
ಈ ಹಿಂದೆ ಕಾಂಗ್ರೆಸ್ಸಿಗರು ವಕ್ಫ್ ಆಸ್ತಿಯನ್ನು ಕಬಳಿಸಿದ್ದಾರೆ ಎಂದು ಮಾಣಿಪ್ಪಾಡಿ ವರದಿ ನೀಡಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ವರದಿಯ ಬಗ್ಗೆ ೨ ಬಾರಿ ಸಿಎಂ ಆದರೂ ತನಿಖೆಗೆ ಒಳಪಡಿಸಲಿಲ್ಲ. ಈಗಾದರೂ ಈ ವರದಿಯನ್ನು ಸಿಬಿಐಗೆ ಕೊಡಬೇಕು. ಇಲ್ಲದಿದ್ದರೆ ಅವರನ್ನು ಭ್ರಷ್ಟ, ಪುಕ್ಕಲ ಮುಖ್ಯಮಂತ್ರಿ ಎಂದು ಜನ ನೋಡಲಿದ್ದಾರೆ ಎಂದು ಹೇಳಿದರು.
ಮುಖ್ಯಮಂತ್ರಿಗಳು ಪ್ರಾಮಾಣಿಕರೆ ಆಗಿದ್ದರೆ ೧೫೦ ಕೋಟಿ ರೂ.ಹಗರಣದ ಜತೆಗೆ ತಮ್ಮ ವಿರುದ್ಧ ಇರುವ ಮುಡಾ, ವಾಲ್ಮೀಕಿ, ಅಬಕಾರಿ ಹಾಗೂ ಪ್ರಿಯಾಂಕ ಖರ್ಗೆ ಅವರು ಸರಕಾರದಿಂದ ೫ ಎಕರೆ ಜಮೀನು ಪಡೆದು ಮತ್ತೆ ಹಿಂದಿರುಗಿಸಿದ ಪ್ರಕರಣದ ಜತೆ ಬಿಜೆಪಿ ಸರಕಾರದ ಕೋವಿಡ್ ಹಗರಣವನ್ನೂ ಸಿಬಿಐಗೆ ಒಪ್ಪಿಸಬೇಕು. ಎಲ್ಲರ ಬಣ್ಣ ಬಯಲಾಗಲಿ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ನಗರಮಂಡಲ ಅಧ್ಯಕ್ಷ ಪುಷ್ಪರಾಜ್, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಈಶ್ವರ ಹಳ್ಳಿ ಮಹೇಶ್, ಮುಖಂಡರಾದ ಸಚಿನ್ಗೌಡ, ಕೇಶವ ಉಪಸ್ಥಿತರಿದ್ದರು.
Government should hand over Rs 150 crore lure case to CBI