ಚಿಕ್ಕಮಗಳೂರು: ಎಲೆ ಮರೆಯ ಕಾಯಿಯಂತೆ ಬದುಕುತ್ತಿರುವ ಜಾನಪದ ಕಲಾವಿದರನ್ನು ಗುರುತಿಸಿ ಅವರನ್ನು ಪ್ರೋತ್ಸಾಹಿಸುವ ಕೆಲಸವನ್ನು ಸರ್ಕಾರ ಮಾಡಬೇಕು ಎಂದು ಸಮ್ಮೇಳನಾಧ್ಯಕ್ಷ ಶಂಕರಪ್ಪ ಸಲಹೆ ಮಾಡಿದರು.
ಅಜ್ಜಂಪುರ ತಾಲೂಕಿನ ಶ್ರೀಶೈಲ ಶಾಖಾ ಮಠ. ಹಣ್ಣೆಮಠದಲ್ಲಿ ಕರ್ನಾಟಕ ಜಾನಪದ ಪರಿಷತ್ ಭಾನುವಾರ ಆಯೋಜಿಸಿದ್ದ ನಾಲ್ಕನೇ ತಾಲೂಕು ಮಟ್ಟದ ಜಾನಪದ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಎಲೆ ಮರೆಯ ಕಾಯಿಯಂತೆ ಗ್ರಾಮೀಣ ಭಾಗದಲ್ಲಿ ದುಡಿಯುತ್ತಿರುವ ಜಾನಪದ ಕಲಾವಿದರಿಂದಾಗಿ ತಲತಲಾಂತರದಿಂದ ಜಾನಪದ ಸಾಹಿತ್ಯ ಕಲೆ ಸಂಸ್ಕೃತಿ ಉಳಿದು ಬಂದಿದೆ. ಸರ್ಕಾರಗಳು ಮತ್ತು ಸಮಾಜ ಅವರನ್ನು ಗುರುತಿಸಿ ಬಡತನದಲ್ಲಿರುವ ಅವರಿಗೆ ಆರ್ಥಿಕ ಸಹಕಾರ ನೀಡಿದಲ್ಲಿ ಜಾನಪದ ಮತ್ತಷ್ಟು ಬೆಳೆಯುತ್ತದೆ ಎಂದು ಕಿವಿ ಮಾತು ಹೇಳಿದರು.
ಜಾನಪದ ಈ ನೆಲದ ಸಂಸ್ಕೃತಿಯ ತಾಯಿಬೇರು ತಲತಲಾಂತರದಿಂದ ನಮ್ಮ ಹಿರಿಯರು ಉಳಿಸಿಕೊಂಡು ಬಂದಿರುವ ಅದನ್ನು ಜತನದಿಂದ ಕಾಪಾಡಿ ಮುಂದಿನ ಪೀಳಿಗೆಗೆ ಹಸ್ತಾಂತರಿಸುವ ಮಹತ್ತರವಾದ ಹೊಣೆಗಾರಿಕೆ ನಮ್ಮೆಲ್ಲರ ಮೇಲಿದೆ ಎಂದು ತಿಳಿಸಿದರು.
ನಾಲ್ಕು ದಶಕಗಳ ತಮ್ಮ ಸೇವೆಯನ್ನು ಗುರುತಿಸಿ ತಮ್ಮನ್ನು ಜಾನಪದ ಸಮ್ಮೇಳನಾಧ್ಯಕ್ಷರನ್ನಾಗಿ ಮಾಡಿರುವುದು ತಮ್ಮ ಬದುಕಿಗೆ ಸಾರ್ಥಕತೆ ತಂದಿದೆ. ಮತ್ತಷ್ಟು ಕೆಲಸ ಮಾಡುವ ಹುರುಪು ತಂದಿದೆ ಎಂದು ಹೇಳಿದರು.
ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಧ್ರುವಕುಮಾರ್ ಜಾನಪದ ಕಲೆ ಸಾಹಿತ್ಯ ಮತ್ತು ಸಂಸ್ಕೃತಿ ನಮ್ಮನ್ನು ಸುಸಂಸ್ಕೃತ ರನ್ನಾಗಿ ಮಾಡುತ್ತವೆ. ಆರೋಗ್ಯವಂತ. ಶ್ರೀಮಂತ ಸಮಾಜವನ್ನು ನಿರ್ಮಾಣ ಮಾಡುತ್ತವೆ ಎಂದರು.
ಸಮಾರಂಭದ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ಹಣ್ಣೇ ಮಠದ ಶ್ರೀ ಮರುಳಸಿದ್ಧ ಪಂಡಿತಾರಾಧ್ಯ ಸ್ವಾಮೀಜಿ ಸಾರ್ವಜನಿಕ ಕಾರ್ಯಕ್ರಮಗಳ ವೇದಿಕೆಗಳಲ್ಲಿ ಜಾನಪದ ಕಲೆ ಸಾಹಿತ್ಯದ ಪ್ರದರ್ಶನಕ್ಕೆ ಅವಕಾಶ ನೀಡಿದರೆ ಮಾತ್ರ ಜಾನಪದ ಉಳಿದು ಬೆಳೆಯುತ್ತದೆ ಎಂದು ಸಲಹೆ ಮಾಡಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾಧ್ಯಕ್ಷ ಜಿ.ಬಿ. ಸುರೇಶ್ ಜಾನಪದ ಕಲೆ ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಕಜಾಪ ನಿರಂತರವಾಗಿ ಶ್ರಮಿಸುತ್ತಿದೆ. ಹತ್ತು ಹಲವು ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಇಂದಿನ ಪೀಳಿಗೆಯಲ್ಲಿ ಜಾನಪದದ ಸೊಗಡನ್ನು ಬಿತ್ತುತ್ತಿದೆ ಎಂದು ತಿಳಿಸಿದರು.
ಜಾನಪದವೆಂದರೆ ಕೇವಲ ಹಾಡು ಮತ್ತು ನೃತ್ಯಗಳಲ್ಲ ಅದೊಂದು ಸುಸಂಸ್ಕೃತ ಸಮಾಜವನ್ನು ನಿರ್ಮಾಣ ಮಾಡುವ ಗ್ರಂಥ ಭಂಡಾರ. ಅದನ್ನು ಉಳಿಸಿ ಬೆಳೆಸಿದರೆ ಭಾರತೀಯ ಸಂಸ್ಕೃತಿ ಇನ್ನಷ್ಟು ಮತ್ತಷ್ಟು ಎತ್ತರಕ್ಕೆ ಬೆಳೆಯುತ್ತದೆ ಎಂದರು.
ಸಮ್ಮೇಳನಕ್ಕೆ ಮುನ್ನ ವಿವಿಧ ಜಾನಪದ ಕಲಾತಂಡಗಳ ನಡುವೆ ಸಮ್ಮೇಳನಾಧ್ಯಕ್ಷರ ಮೆರವಣಿಗೆ ಗ್ರಾಮದಲ್ಲಿ ಅದ್ಧೂರಿಯಾಗಿ ನಡೆಯಿತು. ಹಿರಿಯ ಜಾನಪದ ಕಲಾವಿದರನ್ನು ಸನ್ಮಾನಿಸಿ ಗೌರವಿಸಲಾಯಿತು. ಜಾನಪದ ಕಲೆಗಳ ಪ್ರದರ್ಶನ. ವಿವಿಧ ಗೋಷ್ಠಿಗಳು ನಡೆದವು.
ಸಾಹಿತಿಗಳಾದ ಲಕ್ಷ್ಮಣಗೌಡ. ರಾಜಪ್ಪ. ಹೊಸೂರು ಪುಟ್ಟರಾಜು. ಬಸವರಾಜ ನೆಲ್ಲಿ ಸರ. ಎ.ಸಿ. ಚಂದ್ರಪ್ಪ. ಹಿರಿಯ ವೀರಗಾಸೆ ಕಲಾವಿದ ಡಾ. ಮಾಳೇನಹಳ್ಳಿ ಬಸಪ್ಪ. ಗೊಂಡೇದಹಳ್ಳಿ ತಿಪ್ಪೇಶ್. ಎ. ಆರ್. ನಾಗೇಶ್. ಮರುಳ ಸಿದ್ದಪ್ಪ. ಹೆಚ್. ಸಿ. ಚಂದ್ರಪ್ಪ. ತಡಗ ಶಿವಕುಮಾರ್. ಮಹಾದೇವಪ್ಪ. ಎಲ್ ಐ ಸಿ ಶಿವಕುಮಾರ್. ನಾರಾಯಣಪುರ ರಾಜಣ್ಣ. ದೇವರಾಜ್. ಚಿಕ್ಕನಲ್ಲೂರು ಜಯಣ್ಣ ಉಪಸ್ಥಿತರಿದ್ದರು.
The government should recognize and encourage folk artists.