ಚಿಕ್ಕಮಗಳೂರು: ಭಗವಂತನ ತತ್ವ, ಆತ್ಮನ ಸ್ವರೂಪ, ಜೀವ, ಜಗತ್ತು, ಈಶ್ವರ ಇವುಗಳ ನಡುವಿನ ಸಂಬಂಧದ ಸತ್ಯವನ್ನು ತಾತ್ವಿಕವಾಗಿ, ಅತ್ಯಂತ ಅರ್ಥಪೂರ್ಣವಾಗಿ, ರಚನಾತ್ಮಕವಾಗಿ, ಯೋಜನಾ ಬದ್ಧವಾಗಿ ಮನುಷ್ಯನ ಅಂತರಂಗಕ್ಕೆ ಬರುವಂತೆ ಉಪನಿಷತ್ತುಗಳು ಬಿಚ್ಚಿಡುತ್ತವೆ ಎಂದು ಹರಿಹರಪುರ ಶ್ರೀಮಠದ ಶ್ರೀ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತೀ ಸ್ವಾಮೀಜಿ ಹೇಳಿದರು.
ನಗರದ ಬ್ರಹ್ಮಸಮುದ್ರ ರಂಗಣ್ಣನ ಛತ್ರದಲ್ಲಿ ಭಾನುವಾರ ಉದ್ಭವ ಪ್ರಕಾಶನ ಟ್ರಸ್ಟ್, ಬೆಂಗಳೂರಿನ ಋಷ್ಯಶೃಂಗ ಪ್ರತಿಷ್ಠಾನ ಹಾಗೂ ಚಿಕ್ಕಮಗಳೂರಿನ ಬ್ರಾಹ್ಮಣ ಮಹಾಸಭಾದಿಂದ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಡಾ.ಬೆಳವಾಡಿ ಹರೀಶ್ ಭಟ್ಟ ವಿರಚಿತ ನೂರಾರು ಉಪನಿಷತ್ತುಗಳ ಅಧ್ಯಯನದ ಎರಡು ಸಂಪುಟಗಳ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಸಾನ್ನಿಧ್ಯವಹಿಸಿ ಶ್ರೀಗಳು ಆಶೀರ್ವಚನ ನೀಡಿದರು.
ಭಾರತೀಯ ಸಂಸ್ಕೃತಿಯಲ್ಲಿ ವಿಶೇಷವಾಗಿರುವ ದರ್ಶನ ಶಾಸ್ತ್ರಗಳಲ್ಲಿ ಉಪನಿಷತ್ತನ್ನು ಒಳಗೊಂಡಿರುವ ಉತ್ತರ ಮೀಮಾಂಸೆ ದಕ್ಷಿಣ ಶಾಸ್ತ್ರವು ಅಗ್ರಸ್ಥಾನದಲ್ಲಿದೆ. ಹಿರಿಯರ ಪ್ರಕಾರ ಮನುಷ್ಯನ ಬೌದ್ಧಿಕ ವಿಕಾಸವು ಯಾವಾಗ ಅಂತಿಮ ಸ್ಥಿತಿಯನ್ನು ತಲುಪುತ್ತದೆಯೋ ಆಗ ಉಪನಿಷತ್ತಿನ ಸತ್ಯಗಳು ಅಂತರಂಗದಲ್ಲಿ ಸ್ಫುರಣೆಯನ್ನು ಕಾಣುತ್ತವೆ ಎಂದು ಹೇಳಿದರು.
ಅನಾದಿಕಾಲದಿಂದಲೂ ಸಾವಿನ ನಂತರ ನಮಗೆ ಬದುಕು ಇದೆಯೇ? ಇಲ್ಲವೇ? ಎನ್ನುವ ಜಿಜ್ಞಾಸೆ ಇರುತ್ತದೆ. ಬದುಕು ನಿಶ್ಚಯವಾಗಿರತಕ್ಕಂತಹ ಸವಾಲುಗಳನ್ನು ಪ್ರತಿಕ್ಷಣವೂ ನಮಗೆ ಕೊಡುತ್ತಿರುತ್ತದೆ. ನಮಗೆ ನಮ್ಮ ಹಾದಿಯ ಪಯಣದಲ್ಲಿ ನಿರ್ದಿಷ್ಟ ಗುರಿ ಗೊತ್ತಿರುತ್ತದೆ. ಮಾರ್ಗವೂ ಗೊತ್ತಿರುತ್ತದೆ. ಆದರೆ ಜೀವನದ ಹಾದಿಯಲ್ಲಿ ಮನುಷ್ಯನಿಗೆ ಪ್ರತಿಕ್ಷಣವೂ ಪರೀಕ್ಷೆಯೆ. ಬಂಧು-ಬಾಂಧವರ ವಿಯೋಗ ದುಃಖ, ವೃದ್ಧಾಪ್ಯದ ದುಃಖ, ಮರಣದ ದುಃಖ, ರೋಗದ ದುಃಖ-ಇವುಗಳಿಂದಲೇ ತಪ್ಪಿಸಿಕೊಳ್ಳಲು ಸಾಧ್ಯವಾಗದು. ಮರಣದಾಚೆಯ ಬದುಕಿನಲ್ಲಿ ನಮಗೆ ಅಸ್ತಿತ್ವ ಇದೆ. ಬದುಕಿನ ಪಯಣಕ್ಕೆ ಪೂರ್ಣ ವಿರಾಮವಿಲ್ಲ. ದೇಹತ್ಯಾಗ ಎನ್ನುವುದು ಅಲ್ಪವಿರಾಮ ಮಾತ್ರ. ಋಷಿ ಮುನಿಗಳಲ್ಲಿ ಈ ಚಿಂತನೆ ಬಂದಾಗ ಅವರು ತಮ್ಮ ಬೌದ್ಧಿಕ ವಿಕಾಸವನ್ನು ಪರಿಪೂರ್ಣಗೊಳಿಸಿ ಉಪನಿಷತ್ತುಗಳ ಸತ್ಯವನ್ನು ಜಗತ್ತಿಗೆ ಕೊಟ್ಟಿದ್ದಾರೆ ಎಂದರು.
ಉಪನಿಷತ್ತುಗಳು ಮನುಷ್ಯ ಕುಲಕ್ಕೆ ಜ್ಞಾನದೃಷ್ಟಿ ಮಾತ್ರವಲ್ಲ, ವೈಜ್ಞಾನಿಕ ದೃಷ್ಟಿ ಕೂಡ ಹೌದು. ಅವು ಮಾನವ ಜನಾಂಗಕ್ಕೆ ಬೆಳಕಿನ ಮಾರ್ಗವನ್ನು ತೋರಿಸುತ್ತವೆ. ದ್ವಂದ್ವ ವಿಷಯಗಳನ್ನು ತಟಸ್ಥಭಾವದಿಂದ ವಿಚಾರ ಮಾಡಿದಾಗ ಮಾತ್ರ ಈ ಸತ್ಯವು ಮನುಷ್ಯನಿಗೆ ಯಥಾರ್ಥವಾಗಿ ಸ್ಫುರಿಸುತ್ತದೆ. ಒಂದು ಸತ್ಯದ ಅಸ್ತಿತ್ವವನ್ನು ನಮ್ಮ ಅನುಭವಕ್ಕೆ ಬಂದಿಲ್ಲವೆನ್ನುವ ಕಾರಣಕ್ಕೆ ನಿರಾಕರಿಸುವುದು ಮೂರ್ಖತನ. ಇದು ಉಪನಿಷತ್ತು ಪ್ರತಿಪಾದಿಸುವ ಅಂಶ ಎಂದು ಹೇಳಿದರು.
ಕಾರ್ಯಕ್ರಮ ಉದ್ಘಾಟಿಸಿದ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಅಶೋಕ್ ಹಾರ್ನಳ್ಳಿ ಮಾತನಾಡಿ, ಜ್ಞಾನದ ತತ್ವ ನೀಡುವ ಉಪನಿಷತ್ತುಗಳು ಮನುಷ್ಯನ ಬದುಕಿನ ಒಳಾರ್ಥಗಳನ್ನು ತಿಳಿಸುತ್ತವೆ. ಭೂಮಿಯ ಹುಟ್ಟು, ಜೀವಸಂಕುಲದ ಹುಟ್ಟಿನ ಬಗ್ಗೆ ಸಹ ತಿಳಿಸುತ್ತವೆ ಎಂದರು.
ಇದುವರೆಗೂ ೧೦ ಉಪನಿಷತ್ತುಗಳನ್ನು ಮಾತ್ರ ಓದಿದ್ದ ನಮ್ಮ ಮುಂದೆ ೧೫೦ ಉಪನಿಷತ್ತುಗಳನ್ನು ಡಾ.ಹರೀಶ್ ಭಟ್ಟರು ತೆರೆದಿಟ್ಟಿದ್ದಾರೆ. ಅವುಗಳನ್ನು ಅವರು ದೇಶ-ವಿದೇಶಗಳಿಂದ ಸಂಗ್ರಹ ಮಾಡಿದ್ದಾರೆ. ಸಂಸ್ಕೃತದಲ್ಲಿದ್ದ ಅವುಗಳಿಗೆ ಕನ್ನಡದಲ್ಲಿ ವಿವರವಾದ ಅರ್ಥವನ್ನು ನೀಡಿ ಜನಸಾಮಾನ್ಯರು ತಿಳಿದುಕೊಳ್ಳುವಂತೆ ಮಾಡಿದ್ದಾರೆ. ಉಪನಿಷತ್ತುಗಳನ್ನು ಸಂಗ್ರಹಿಸುವಾಗ ವಿದೇಶಗಳಲ್ಲಿ ಇತಿಹಾಸ ಗ್ರಂಥಗಳನ್ನು ಉಳಿಸಬೇಕು ಎನ್ನುವ ಕಾಳಜಿ ಇರುವುದನ್ನು ಡಾ.ಹರೀಶ್ ಅವರು ಗಮನಿಸಿದ್ದಾರೆ. ಈ ನಿಟ್ಟಿನಲ್ಲಿ ಹಳೆಯ ಗ್ರಂಥಗಳನ್ನು ಉಳಿಸಲು ಪ್ರತಿಯೊಬ್ಬರೂ ಮುಂದಾಗಬೇಕು ಎಂದು ಸಲಹೆ ನೀಡಿದರು.
ಸಂಪುಟಗಳನ್ನು ಪರಿಚಯಿಸಿದ ಸಂಸ್ಕೃತಿ ಚಿಂತಕಿ ಡಾ.ವೀಣಾ ಬನ್ನಂಜೆ ಮಾತನಾಡಿ, ಯಾವುದು ಹತ್ತಿರಕ್ಕೆ ಮತ್ತು ಎತ್ತರಕ್ಕೆ ಕರೆದುಕೊಂಡು ಹೋಗುತ್ತದೆಯೊ ಅದು ಉಪನಿಷತ್ತು. ಭಗವಂತನ ಸನಿಹಕ್ಕೆ ಕರೆದುಕೊಂಡು ಹೋಗಬಲ್ಲ ಅಷ್ಟೂ ಸಾಧ್ಯತೆ ಉಪನಿಷತ್ತುಗಳಲ್ಲಿವೆ. ನಮ್ಮ ಪರಂಪರೆಯಲ್ಲಿ ಭಗವಂತನ ಎತ್ತರವನ್ನು ತಿಳಿಸಲಾರದ ಧರ್ಮಶಾಸ್ತ್ರವೇ ಇಲ್ಲ. ಉಪನಿಷತ್ತುಗಳಲ್ಲಿ ಈ ಅಂಶ ರಹಸವಾಗಿವೆ. ಈ ವಿಚಾರಗಳನ್ನು ಬಿಚ್ಚಿಟ್ಟು ಹೇಳಿಲ್ಲ.
ಹಾಗೆಂದ ಮಾತ್ರಕ್ಕೆ ಬಹಳ ಮುಚ್ಚಿಟ್ಟಿದ್ದಾರೆ ಎಂದೂ ಅರ್ಥವಲ್ಲ. ಕೆಲವರಿಗೆ ಮಾತ್ರ ಈ ಕೃತಿಗಳು ಎಂದು ದೂರ ಇಟ್ಟರೆ ಹರೀಶ್ ಅವರು ಮಾಡಿದ ಇಷ್ಟೂ ಪ್ರಯತ್ನ ವ್ಯರ್ಥವಾದೀತು. ೧೫೦ ಉಪನಿಷತ್ತು ಮೂಲ ಕೃತಿಗಳನ್ನು ಅನುವಾದಿಸುವ ಹೊತ್ತಿಗೆ ಅವರಿಗಾದ ಅನುಭವ ಇದೆಯಲ್ಲ, ಅದನ್ನು ಈ ಅಲ್ಪ ವೇಳೆಯಲ್ಲಿ ಪರಿಚಯಿಸಲು ಸಾಧ್ಯವಿಲ್ಲ. ಅವರು ತೆಲುಗಿನಿಂದಲೂ ಉಪನಿಷತ್ತುಗಳನ್ನು ಸಂಗ್ರಹಿಸಿದ್ದು, ಒಟ್ಟಾರೆಯಾಗಿ ಮೂಲಕ್ಕೆ ದೋಷವಾಗದಂತೆ ಸರಳ ಹಾಗೂ ಪುಟ್ಟ ಪುಟ್ಟ ವಾಕ್ಯಗಳಲ್ಲಿ ಅನುವಾದಿಸಿ ನಿರೂಪಿಸಿದ್ದಾರೆ. ಅದರಲ್ಲಿ ಭಾಷೆ ಮೇಲಿನ ಅವರ ಹಿಡಿತ, ಪ್ರಬುದ್ಧತೆ ಎಷ್ಟಿದೆ ಎನ್ನುವುದು ಅರ್ಥವಾಗುತ್ತದೆ. ನಮ್ಮ ಉಪನಿಷತ್ತುಗಳು ಋಷಿಗಳ ದಾರ್ಶನಿಕತೆ. ಅವುಗಳಲ್ಲಿ ಒಂದೇ ಒಂದು ಸುಳ್ಳಿಲ್ಲದ್ದರಿಂದ ಇವತ್ತಿನವರೆಗೂ ಉಳಿದಿವೆ. ಹರೀಶ ಭಟ್ಟರು ಆ ಸತ್ಯದ ಜೊತೆ ಅನುಸಂಧಾನ ಮಾಡಿದ್ದಾರೆ ಎಂದರು.
ಕೃತಿಗಳ ಕರ್ತೃ ಡಾ.ಹರೀಶ ಭಟ್ಟರು ಮಾತನಾಡಿ, ಉಪನಿಷತ್ತುಗಳು ಹಲವಾರು ವಿಷಯಗಳನ್ನು ಬಹಳ ಗೋಪ್ಯವಾಗಿ ಹೇಳುತ್ತವೆ. ವೇದಗಳು ಕೂಡ ಹಾಗೆಯೆ. ನೇರವಾಗಿ ಒಮ್ಮೆ ಓದಿದ ಮಾತ್ರಕ್ಕೆ, ಕೇಳಿದ ಮಾತ್ರಕ್ಕೆ ಅರ್ಥಮಾಡಿಕೊಳ್ಳಲಾಗದ ವಿಷಯಗಳಿದ್ದರೆ ಅದು ವೇದೋಪನಿಷತ್ತುಗಳು. ಇಂತಹ ೧೫೦ ಉಪನಿಷತ್ತುಗಳನ್ನು ಸಂಗ್ರಹಿಸಿ ಅವುಗಳಿಗೆ ನನ್ನ ಬುದ್ಧಿಮತ್ತೆಗೆ ಅನುಗುಣವಾಗಿ ಅನುವಾದಿಸಲಾಗಿದೆ. ಉಪನಿಷತ್ತುಗಳ ಒಟ್ಟು ಸಾರ ಜೀವನದ ಆದರ್ಶಕ್ಕೆ ಹೊರತು ಆಡಂಬರಕ್ಕಲ್ಲ. ಇದರ ಪ್ರಯೋಜನ ಪಡೆಯಬೇಕೇ ಹೊರತು ಪ್ರಚಾರಕ್ಕಲ್ಲ. ಉಪನಿಷತ್ತುಗಳ ಅಂಶ ಅರ್ಥಪೂರ್ಣತೆಗೇ ಹೊರತು ವ್ಯರ್ಥಕ್ಕಲ್ಲ. ಬಾಗಿ ಬದಲಾಗುವುದಕ್ಕೇ ಹೊರತು ಬೀಗಲು ಅಲ್ಲ. ಮನೋವಿಕಾಸಕ್ಕೇ ಹೊರತು ಮನೋರಂಜನೆಗಲ್ಲ. ಜೀವನದ ಸಾರ್ಥಕತೆಗೇ ಹೊರತು ಸ್ವಾರ್ಥಕ್ಕಲ್ಲ ಎಂದು ಸ್ಪಷ್ಟವಾಗಿ ಹೇಳಬಹುದು ಎಂದರು.
ತಾಳೆಗರಿಗಳನ್ನು ತಲಕಾಡಿನ ಶ್ರೀಗಳು ನೀಡಿದ್ದರೆ, ಕುಷ್ಠಗಿ ತಾಲ್ಲೂಕಿನ ಕುಗ್ರಾಮದ ಮೃತ್ಯುಂಜಯ ರುದ್ರಭಟ್ ಪುರೋಹಿತ ೨ ಚೀಲ ಹಳೆಯ ತಾಳೆಗರಿಗಳು, ನಾಗರಕ್ಷಕರ ಗ್ರಂಥಗಳನ್ನು, ಕೊಪ್ಪಳ ತಾಲ್ಲೂಕು ತಳಕಲ್ ಗ್ರಾಮದ ತಮ್ಮ ಬಾಲ್ಯದ ಸಹಪಾಠಿ ಗುರುನಾಥ ರುದ್ರಭಟ್ ಪುರೋಹಿತ ಹಲವಾರು ಗ್ರಂಥಗಳನ್ನು ಒದಗಿಸಿದ್ದಾರೆ ಎಂದು ನೆನಪಿಸಿಕೊಂಡರು.
ಕಾರ್ಯಕ್ರಮದಲ್ಲಿ ೧ನೇ ಸಂಪುಟವನ್ನು ಕಾಫಿ ಬೆಳೆಗಾರ ಎಂ.ಆರ್.ಗುರುಮೂರ್ತಿ, ೨ನೇ ಸಂಪುಟವನ್ನು ಉದ್ಭವ ಪ್ರಕಾಶನದ ಅಧ್ಯಕ್ಷ ಡಾ.ಜೆ.ಪಿ.ಕೃಷ್ಣೇಗೌಡ ಲೋಕಾರ್ಪಣೆ ಮಾಡಿ ಮಾತನಾಡಿದರು. ಉದ್ಭವ ಪ್ರಕಾಶನ ಟ್ರಸ್ಟ್ನ ಮ್ಯಾನೇಜಿಂಗ್ ಟ್ರಸ್ಟಿ ಡಿ.ಎಚ್.ನಟರಾಜ್ ಹಾಗೂ ಚಿಕ್ಕಮಗಳೂರು ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ಪಿ.ಮಂಜುನಾಥ ಜೋಷಿ ಮಾತನಾಡಿದರು.
ಹಿರಿಯ ಪತ್ರಕರ್ತ ಸ.ಗಿರಿಜಾಶಂಕರ ಪ್ರಾಸ್ತಾವಿಕ ಮಾತನಾಡಿದರು. ಡಾ.ಹರೀಶ ಭಟ್ಟ ಹಾಗೂ ಅಭಿನವ ವಸಿಷ್ಠ ವೇದಘೋಷ, ಚಿಕ್ಕಮಗಳೂರು ಬ್ರಾಹ್ಮಣ ಮಹಾಸಭಾದ ಕಾರ್ಯದರ್ಶಿ ಎನ್.ಕೆ.ಅಶ್ವಿನ್ ಸ್ವಾಗತ, ಸಾಹಿತಿ ಡಾ.ಬೆಳವಾಡಿ ಮಂಜುನಾಥ ನಿರೂಪಣೆ, ಸಾಂಸ್ಕೃತಿಕ ಸಂಘದ ಆನಂದ ಕುಮಾರಶೆಟ್ಟಿ ವಂದನಾರ್ಪಣೆ ನೆರವೇರಿಸಿದರು.
Two volumes of a study of hundreds of Upanishads written by Dr. Belavadi Harish Bhatta released