ಚಿಕ್ಕಮಗಳೂರು: ಹಿಟ್ ಅಂಡ್ ರನ್ ಅಪಘಾತ ಪ್ರಕರಣದಲ್ಲಿ ಮಹಿಳೆಯೊಬ್ಬರ ಸಾವಿಗೆ ಕಾರಣವಾಗಿದ್ದ ಆರೋಪಿಯನ್ನು ಪತ್ತೆ ಹಚ್ಚಿ ಬಂಧಿಸುವಲ್ಲಿ ಯಶಸ್ವಿಯಾದ ಸಂಚಾರಿ ಠಾಣೆ ಸಿಬ್ಬಂದಿಗಳನ್ನು ವಿಧಾನ ಪರಿಷತ್ ಮಾಜಿ ಸದಸ್ಯೆ ಗಾಯತ್ರಿ ಶಾಂತೇಗೌಡ ಅವರು ಸನ್ಮಾನಿಸಿದರು.
ಹರಿಹರದಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಹುಲಿ ಚಿಕ್ಕನಹಳ್ಳಿಯ ೫೧ ವರ್ಷದ ಮಹಿಳೆ ಯಲ್ಲಮ್ಮ ಅವರು ನವೆಂಬರ್ ೩೦ ರ ರಾತ್ರಿ ೧೦.೩೦ ರ ಸಮಯದಲ್ಲಿ ಎಐಟಿ ಸರ್ಕಲ್ ಬಳಿ ನಡೆದು ಬರುವಾಗ ಅಪರಿಚಿತ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಮೃತಪಟ್ಟಿದ್ದರು. ಚಾಲಕನು ಕಾರಿನೊಂದಿಗೆ ಪರಾರಿಯಾಗಿದ್ದ.
ನಗರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಠಾಣಾಧಿಕಾರಿ ಬಿ.ಸಿ.ಧನಂಜಯ್ ನೇತೃತ್ವದಲ್ಲಿ ಸಿಬ್ಬಂದಿಗಳಾದ ಧನಪಾಲ ನಾಯಕ್ ಮತ್ತು ರಘು ಅವರು ಶ್ರಮ ಪಟ್ಟು ಪ್ರಕರಣವನ್ನು ಬೇಧಿಸಿ ಕಾರು ಚಾಲಕನನ್ನು ಬಂಧಿಸಿದ್ದರು. ಅವರಿಗೆ ಮೆಕ್ಯಾನಿಕ್ ಪ್ರವೀಣ್ ಎಂಬುವವರು ಸಹಕಾರ ನೀಡಿದ್ದರು.
ಅಪಘಾತದಲ್ಲಿ ಮೃತಪಟ್ಟ ಯಲ್ಲಮ್ಮ ಅವರಿಗೆ ನ್ಯಾಯ ಸಿಗಬೇಕು ಎನ್ನುವುದು ನಮ್ಮ ಒತ್ತಾಯವಾಗಿತ್ತು ಎಂದು ತಿಳಿಸಿದ ಗಾಯತ್ರಿ ಶಾಂತೇಗೌಡ ಅವರು, ಈ ನಿಟ್ಟಿನಲ್ಲಿ ಪೊಲೀಸರು ಉತ್ತಮ ಕಾರ್ಯನಿರ್ವಹಿಸಿದ್ದಾರೆ. ಇದರಿಂದ ಯಲ್ಲಮ್ಮ ಅವರ ಕುಟುಂಬದವರಿಗೆ ನ್ಯಾಯ ಸಿಗುವಂತಾಗಿದೆ. ಈ ಕಾರಣಕ್ಕೆ ಪೊಲಿಸರನ್ನು ಠಾಣೆಗೆ ಬಂದು ಅಭಿನಂದಿಸುವ ಕೆಲಸ ಮಾಡಿದ್ದೇವೆ.
ಯಲ್ಲಮ್ಮ ಅವರ ಮಕ್ಕಳು ಮತ್ತು ಊರಿನ ಹಿರಿಯರು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹಂಪಾಪುರ ಮಂಜೇಗೌಡ, ಹೋಬಳಿ ಕಾಂಗ್ರೆಸ್ ಅಧ್ಯಕ್ಷ ವಿಜಯಕುಮಾರ್, ಸಂತೋಷ್ಹಾಲಪ್ಪ, ಪುಟ್ಟೇಗೌಡ, ಕುಮಾರ್, ತೀರ್ಥ ಇತರರು ಬಂದಿದ್ದಾರೆ ಎಂದರು.ಈ ವೇಳೆ ಠಾಣಾಧಿಕಾರಿ ಧನಂಜಯ್ ಮತ್ತು ಸಿಬ್ಬಂದಿಗಳು ಹಾಜರಿದ್ದರು.
Traffic police personnel who successfully tracked down and arrested the accused honored