ಚಿಕ್ಕಮಗಳೂರು: ವಿಧಾನಮಂಡಲದ ಅಧಿವೇಶನದಲ್ಲಿ ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ಅವರು ಆಡಿರುವ ಮಾತುಗಳು ಸಂವಿಧಾನಿಕ ನಡವಳಿಕೆಗೆ ಮಾಡಿರುವ ಅಪಚಾರವಾಗಿದೆ. ಇಂಥ ನಡವಳಿಕೆಯನ್ನು ಕಾಂಗ್ರೆಸ್ ಪಕ್ಷ ಖಂಡಿಸುತ್ತದೆ ಎಂದು ಕೆ.ಪಿ.ಸಿ.ಸಿ ವಕ್ತಾರ ರವೀಶ್ ಕ್ಯಾತನಬೀಡು ತಿಳಿಸಿದರು.
ನಗರದ ಪ್ರೆಸ್ ಕ್ಲಬ್ ನಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿಟಿ ರವಿ ಅವರು ಇಂತಹ ಅವಶ್ಯಕತೆಗಳನ್ನು ಅನೇಕ ಬಾರಿ ವಿಧಾನ ಪರಿಷತ್ ಅಧಿವೇಶನ ನಡೆಯುವಾಗ ಉಚ್ಚರಿಸಿರುವ ಉದಾಹರಣೆಗಳು ಇವೆ. ಕಳೆದ ಬಾರಿ ನಿತ್ಯ ಸುಮಂಗಲಿಯರು ಎನ್ನುವ ಅಸಂವಿಧಾನಿಕ ಪದವನ್ನು ಬಳಸಿದ್ದರು. ಇದೀಗ ಒಬ್ಬ ಮಹಿಳಾ ಸಚಿವರ ಬಗ್ಗೆ ಕೆಟ್ಟ ಪದ ಉಪಯೋಗಿಸಿರುವುದು ಕನ್ನಡ ನೆಲದ ಸ್ವಾಭಿಮಾನಿ ಹೆಣ್ಣು ಕುಲಕ್ಕೆ ಮಾಡಿರುವ ಬಹುದೊಡ್ಡ ಅಪಮಾನವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿ ನಾಯಕರು ಮಾತನಾಡುವಾಗ ಸಂಸ್ಕಾರ, ಸಂಸ್ಕೃತಿ, ಮಾತೆ, ತಾಯಿ ಹೀಗೆ ಉದ್ದುದ್ದ ಭಾಷಣ ಮಾಡುತ್ತಾರೆ. ಆದರೆ ನಿರಂತರವಾಗಿ ಮಹಿಳೆಯರನ್ನು ಅಪಮಾನಿಸುವ ಸಿ.ಟಿ. ರವಿ ಅವರನ್ನು ನೋಡಿದರೆ ಸಂಘ ಪರಿವಾರ ಬಿಜೆಪಿ ನಾಯಕರಿಗೆ ಕಲಿಸಿರುವ ಪಾಠ ಏನು ಎಂಬುದು ಗೊತ್ತಾಗುತ್ತದೆ. ಇಲ್ಲಿಯವರೆಗೆ ಯಾವೊಬ್ಬ ಬಿಜೆಪಿ ನಾಯಕರು ರವಿ ಅವರ ಮಾತನ್ನು ಖಂಡಿಸದಿರುವುದನ್ನು ನೋಡಿದರೆ ಆ ಪಕ್ಷದ ಸಂಸ್ಕಾರ ಎಂತಹದ್ದು ಎಂಬುದು ತಿಳಿಯುತ್ತದೆ ಎಂದು ದೂರಿದರು.
ಈ ಹಿಂದೆಯೂ ಸಿಟಿ ರವಿ ಅವರು ಯಡಿಯೂರಪ್ಪ, ದೇವೇಗೌಡ ಹಾಗೂ ಸಿದ್ದರಾಮಯ್ಯ ಅವರ ಬಗ್ಗೆ ಹಗುರವಾಗಿ ಮಾತನಾಡಿದರು. ಇದೆಲ್ಲವನ್ನು ಗಮನಿಸಿದರೆ ಸಿಟಿ ರವಿ ಅವರು ವಿವೇಕ ಕಳೆದುಕೊಂಡಿದ್ದಾರೆ ಎನಿಸುತ್ತಿದೆ. ಕನ್ನಡ ನೆಲದ ವಚನಕಾರರು ಸೂಳೆಯರನ್ನು ಶರಣರನ್ನಾಗಿ ರೂಪಿಸಿರುವ ಚರಿತ್ರೆ ಈ ನೆಲಕ್ಕಿದೆ. ಮಲೆನಾಡಿನ ಸಂಸ್ಕೃತಿಗೆ ಧಕ್ಕೆ ತರುವಂತಿರುವ ಸಿ.ಟಿ. ರವಿ ಅವರು ಚಿಕ್ಕಮಗಳೂರು ಜಿಲ್ಲೆಗೆ ಅವಮಾನ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಲೋಕಸಭೆಯಲ್ಲಿ ಗೃಹ ಮಂತ್ರಿ ಅಮಿತ್ ಷಾ ಅವರು ಡಾ. ಅಂಬೇಡ್ಕರ್ ಬಗ್ಗೆ ಹಗುರವಾಗಿ ಮಾತನಾಡಿರುವುದು ಭಾರತದ ಸಂವಿಧಾನ, ಬ್ರಾತೃತ್ವಕ್ಕೆ ಮಾಡಿರುವ ಅಪಚಾರ. ಜೀವನದ ಆಚರಣೆ, ಆಚಾರ, ನಡವಳಿಕೆ ಹಾಗೂ ನೈತಿಕ ಮೌಲ್ಯಗಳಿಂದ ಸ್ವರ್ಗದಂತ ವಾತಾವರಣವನ್ನು ಸೃಷ್ಟಿಸಬಹುದು.
ವಚನಕಾರರು ಹೇಳುವಂತೆ ಆಚಾರವೇ ಸ್ವರ್ಗ. ಇಂಥ ನಡವಳಿಕೆಗಳನ್ನೇ ಮರೆತು ಸಂವಿಧಾನದ ಆಶಯಕ್ಕೆ ವಿರುದ್ಧವಾಗಿ ನಡೆದು ಭಾರತದ ಅಸ್ಮಿತೆಯನ್ನು ಗೃಹ ಸಚಿವರು ಹರಾಜು ಹಾಕುತ್ತಿದ್ದಾರೆ. ಬಿಜೆಪಿಗೆ ಸಂವಿಧಾನದ ಮೇಲೆ ನಂಬಿಕೆ ಹಾಗೂ ಗೌರವ ಇಲ್ಲ ಎನ್ನುವುದು ಆ ಪಕ್ಷದ ನಾಯಕರ ಮಾತುಗಳಿಂದಲೇ ಗೊತ್ತಾಗುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಅಂಬೇಡ್ಕರ್ ಅವರ ಬಗ್ಗೆ ಹಗುರವಾಗಿ ಮಾತನಾಡಿದ ಅಮಿತ್ ಷಾ ಹಾಗೂ ಮಹಿಳಾ ಸಚಿವರ ವಿರುದ್ಧ ಅವಾಚ್ಯ ಶಬ್ದ ಬಳಸಿ ನಿಂದಿಸಿದ ಸಿಟಿ ರವಿ ವಿರುದ್ಧ ಕ್ರಮ ಕೈಗೊಳ್ಳಬೇಕು. ಕೂಡಲೇ ಈ ಇಬ್ಬರು ನಾಯಕರನ್ನು ಬಿಜೆಪಿ ಪಕ್ಷದಿಂದ ಉಚ್ಚಾಟಿಸಬೇಕು ಎಂದು ಆಗ್ರಹಿಸಿದರು.
ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಿ.ಟಿ.ರವಿ ಅವರಿಗೆ ಉಪನ್ಯಾಸ ನೀಡಲು ಅವಕಾಶ ನೀಡಲಾಗಿತ್ತು. ಆದರೆ ಮಹಿಳಾ ಸಚಿವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸುವ ಮೂಲಕ ರಾಜ್ಯದ ಮಹಿಳೆಯರಿಗೆ ಅಪಮಾನ ಮಾಡಿರುವ ಸಿ.ಟಿ.ರವಿ ಅವರಿಗೆ ಸಾಹಿತ್ಯ ಸಮ್ಮೇಳನದಲ್ಲಿ ಉಪನ್ಯಾಸ ನೀಡಲು ಅವಕಾಶ ನೀಡದಿರಲು ಕನ್ನಡ ಸಾಹಿತ್ಯ ಪರಿಷತ್ ತೀರ್ಮಾನ ಕೈಗೊಂಡು, ಇದನ್ನು ಕೂಡಲೇ ಘೋಷಣೆ ಮಾಡಬೇಕು.
ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ನಗರಾಧ್ಯಕ್ಷ ತನೋಜ್ ಕುಮಾರ್ ನಾಯ್ಡು, ಕಾಂಗ್ರೆಸ್ ಜಿಲ್ಲಾ ಕಾರ್ಯದರ್ಶಿ ಎನ್. ಡಿ.ಚಂದ್ರಪ್ಪ, ಜಿಲ್ಲಾ ಉಪಾಧ್ಯಕ್ಷ ನಟರಾಜ್ ಎಸ್ ಕೊಪ್ಪಲು, ತಾಲೂಕು ಕೆಡಿಪಿ ಸದಸ್ಯ ಸಂತೋಷ್ ಲಕ್ಯಾ, ಪ್ರಮುಖರಾದ ಪಿಳ್ಳೆನಹಳ್ಳಿ ವಿಜಯ್ ಕುಮಾರ್, ರಘು ಉಪಸ್ಥಿತರಿದ್ದರು.
CT Ravi’s speech is a disservice to the Constitution.