ಚಿಕ್ಕಮಗಳೂರು: ಜಾಮೀನು ದೊರೆತು ಬಿಡುಗಡೆಯಾದ ಬಳಿಕ ನಗರಕ್ಕೆ ಶನಿವಾರ ರಾತ್ರಿ ಬಂದ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಅವರಿಗೆ ಕಾರ್ಯಕರ್ತರು ಭವ್ಯ ಸ್ವಾಗತ ನೀಡಿದರು.
ತಾಲ್ಲೂಕಿನ ಮಾಗಡಿ ಹ್ಯಾಂಡ್ ಪೋಸ್ಟ್ ಬಳಿ ಪಟಾಕಿ ಸಿಡಿಸಿ ಹೂವಿನ ಹಾರ ಹಾಕಿ, ಸ್ವಾಗತ ಕೋರಿ ಸಂಭ್ರಮಿಸಿದರು. ಹಿರೇಮಗಳೂರು, ಕೋಟೆ ಸೇರಿ ಅಲ್ಲಲ್ಲಿ ಕಾರ್ಯಕರ್ತರು, ಅಭಿಮಾನಿಗಳು ತಡೆದು ಜೈಕಾರ ಮೊಳಗಿಸಿದರು. ಆಜಾದ್ ಪಾರ್ಕ್ ವೃತ್ತದಲ್ಲಿ ಮಹಿಳಾ ಕಾರ್ಯಕರ್ತರು, ಹೂವುಗಳಿಂದ ಸಿ.ಟಿ.ರವಿ ಅವರ ಹೆಸರು ಬರೆದು ಕಾದಿದ್ದರು. ಬಂದ ಕೂಡಲೇ ಜೈಕಾರ ಮೊಳಗಿಸಿದರು. ಕಾರ್ಯಕರ್ತರು ಜೆಸಿಬಿ ಮೇಲೆ ಹತ್ತಿ ಹೂಮಳೆ ಸುರಿಸಿದರು.
ನಂತರ ಎಂ.ಜಿ.ರಸ್ತೆಯಲ್ಲಿ ಮೆರವಣಿಗೆ ಸಾಗಿತು. ಹನುಮಂತಪ್ಪ ವೃತ್ತದಲ್ಲಿ ಬೃಹತ್ ಹೂವಿನ ಹಾರ ಹಾಕಿ ಕಾರ್ಯಕರ್ತರು ಸಂಭ್ರಮಿಸಿದರು. ಮೆರವಣಿಗೆ ಬರುವ ಮುನ್ನ ದಾರಿಯುದ್ದಕ್ಕೂ ಖಾಸಗಿ ಆಂಬುಲೆನ್ಸ್ಗಳ ಮೂಲಕ ಸೈರನ್ ಮೊಳಗಿಸಲಾಯಿತು. ಮನೆಗೆ ತೆರಳಿದಾಗ ಪತ್ನಿ ಪಲ್ಲವಿ ಅವರು ಆರತಿ ಎತ್ತಿ ಬಳಿಕ ತಬ್ಬಿಕೊಂಡು ಕಣ್ಣೀರಿಟ್ಟರು. ನಂತರ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಸಿ.ಟಿ.ರವಿ, ‘ಹೆದರಿ ಬದುಕುವುದನ್ನು ನನ್ನ ತಾಯಿ ಹೇಳಿಕೊಡಲಿಲ್ಲ. ದುಡಿದ ಬದುಕಲು ಹೇಳಿಕೊಟ್ಟಿದ್ದರು. ಅದರಂತೆ ನಡೆದುಕೊಂಡಿದ್ದೇನೆ’ ಎಂದರು.
ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ದೇವರಾಜಶೆಟ್ಟಿ, ರಾಜ್ಯ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಎಚ್.ಸಿ. ಕಲ್ಮರುಡಪ್ಪ, ಯುವ ಘಟಕದ ಅಧ್ಯಕ್ಷ ಸಂತೋಷ್ ಕೋಟ್ಯಾನ್ ಸೇರಿ ಹಲವು ಮುಖಂಡರು ಜತೆಯಲ್ಲಿದ್ದರು.
೭ ಆಂಬುಲೆನ್ಸ್ ವಿರುದ್ಧ ಪ್ರಕರಣ: ವಿಧಾನಪರಿಷತ್ ಸದಸ್ಯರಿಗೆ ಸ್ವಾಗತ ಕೋರಲು ಆಗಮಿಸಿದ್ದ ೭ ಆಂಬುಲೆನ್ಸ್ಗಳ ಮೇಲೆ ಪ್ರಕರಣ ದಾಖಲಾಗಿದೆ. ಬಿ.ಎನ್.ಎಸ್. ೧೭೭, ೨೮೫ ಹಾಗೂ ೨೯೨ರ ಅಡಿ ಪ್ರಕರಣ ದಾಖಲುಮಾಡಲಾಗಿದೆ.
ಮಾಗಡಿ ಕೈಮರದಿಂದ ಸೈರನ್ ಹಾಕಿಕೊಂಡು ಬಂದಿದ್ದ ಆಂಬುಲೆನ್ಸ್ಗಳು ರೋಗಿಗಳು ಇಲ್ಲದೆ ಸೈರನ್, ಟಾಪ್ ಲೈಟ್ ಹಾಕಿದ್ದಕ್ಕೆ ಪ್ರಕರಣ ದಾಖಲಾಗಿದೆ.
ಸೈರನ್ ಹಾಕಿಕೊಂಡು ಸಾರ್ವಜನಿಕರಿಗೆ ಕಿರಿಕಿರಿ ಎಂದು ಪ್ರಕರಣ ದಾಖಲುಮಾಡಲಾಗಿದ್ದು, ನಗರ ಠಾಣೆಯಲ್ಲಿ ೭ ಆಂಬುಲೆನ್ಸ್ ಗಳ ಮೇಲೆ ಎಫ್.ಐ.ಆರ್. ಆಗಿದೆ.
ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಅವಾಚ್ಯ ಶಬ್ದಗಳಿಂದ ನಿಂದಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರನ್ನು ಪೊಲೀಸರು ವಶಕ್ಕೆ ಪಡೆಯುತ್ತಿದ್ದಂತೆ ನಗರದ ಬಂದ್ ಸೇರಿದಂತೆ ಹಲವು ಕಾರಣಕ್ಕಾಗಿ ಬಿಜೆಪಿ ಜಿಲ್ಲಾಧ್ಯಕ್ಷ ಎಂ.ಆರ್.ದೇವರಾಜಶೆಟ್ಟಿ, ಯುವಮೋರ್ಚಾ ಜಿಲ್ಲಾಧ್ಯಕ್ಷ ಸಂತೋಷ್ಕೋಟ್ಯನ್ ಸೇರಿದಂತೆ ೨೦೦ಕ್ಕೂ ಹೆಚ್ಚು ಜನರ ವಿರುದ್ಧ ನಗರಠಾಣೆ ಮತ್ತು ಬಸವನಹಳ್ಳಿ ಠಾಣೆಯಲ್ಲಿ ೭ ಪ್ರಕರಣಗಳು ದಾಖಲಾಗಿದೆ.
A grand welcome for Legislative Council member C.T. Ravi