ಚಿಕ್ಕಮಗಳೂರು: ನಮ್ಮ ಬಾಲ್ಯದಲ್ಲಿ ಸಂಗೀತದ ಪ್ರಜ್ಞೆಯನ್ನು ಕಾಪಾಡಿಕೊಂಡು ಬರಲು ಮೊಹಮ್ಮದ್ ರಫಿಯಂತಹ ಗಾಯಕರ ಗಾಯನ ಹಾಗೂ ಚಿತ್ರಗೀತೆಗಳು ನಮ್ಮ ಮೇಲೆ ಪ್ರಭಾವ ಬೀರಿವೆ ಎಂದು ಸಾಹಿತಿ ಕಲ್ಕಟ್ಟೆ ಪುಸ್ತಕದ ಮನೆಯ ನಾಗರಾಜರಾವ್ ಕಲ್ಕಟ್ಟೆ ಅಭಿಪ್ರಾಯ ವ್ಯಕ್ತಪಡಿಸಿದರು.
ಪೂರ್ವಿ ಸುಗಮ ಸಂಗೀತ ಅಕಾಡೆಮಿ ಟ್ರಸ್ಟ್ ಹಾಗೂ ಯುರೇಕಾ ಅಕಾಡೆಮಿಯ ಆಶ್ರಯದಲ್ಲಿ ನಗರದ ಕುವೆಂಪು ಕಲಾಮಂದಿರದಲ್ಲಿ ಶನಿವಾರ ಸಂಜೆ `ಏಕ್ ಶಾಮ್ ರಫಿ ಕೇ ನಾಮ್’ ಶೀರ್ಷಿಕೆಯಡಿ ಪೂರ್ವಿ ಗಾನಯಾನ-೧೦೨ ರ ಅನ್ವಯ ಆಯೋಜಿಸಿದ್ದ ಮೊಹಮ್ಮದ್ ರಫಿ ಗಾಯನದ ಹಿಂದಿ ಚಿತ್ರಗೀತೆಗಳ ಗಾಯನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ನಾವು ಬಾಲ್ಯದಲ್ಲಿ ರಾತ್ರಿ ೧೦ ಗಂಟೆಯವರೆಗೆ ಓದು ಮುಗಿಸಿದ ನಂತರ ರೇಡಿಯೋವನ್ನು ಕೇಳಬೇಕಿತ್ತು. ರೇಡಿಯೋದಲ್ಲಿ ವಿವಿಧ ಭಾರತಿಯ ಕನ್ನಡ ಚಿತ್ರಗೀತೆಯ ಬಳಿಕ ಹಿಂದಿಯ ಮೊಹಮ್ಮದ್ ರಫಿ, ಮುಖೇಶ್, ಲತಾ ಮಂಗೇಶ್ಕರ್ ಮುಂತಾದವರ ಗೀತೆಗಳನ್ನು ಕೇಳುತ್ತಾ ತಡರಾತ್ರಿ ನಾವು ನಿದ್ರಿಸುತ್ತಿದ್ದೆವು. ನಮ್ಮಮ್ಮ ಎಚ್ಚರವಾದಾಗ ಮಕ್ಕಳು ರೇಡಿಯೋ ಆರಿಸಿಲ್ಲ ಎಂದು ತಿಳಿದು ಬೆಳಗಿನ ಜಾವ ೩ ಗಂಟೆಗೊ, ೪ ಗಂಟೆಗೊ ಬಂದು ರೇಡಿಯೋ ನಿಲ್ಲಿಸುತ್ತಿದ್ದ ಪ್ರಸಂಗಗಳು ನಡೆಯುತ್ತಿದ್ದವು ಎಂದು ನೆನಪಿಸಿಕೊಂಡರು.
ಎಂ.ಎಸ್.ಸುಧೀರ್ರವರು ಮೊಹಮ್ಮದ್ ರಫಿ ತಮ್ಮ ಆರಾಧ್ಯ ದೈವ ಎಂದರು. ಇದೇ ಮಾತನ್ನು ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರು ಸಹ ನಿರಂತರವಾಗಿ ಹೇಳುತ್ತಿದ್ದರು. ಎಸ್ಪಿಬಿ ಮೊಹಮ್ಮದ್ ರಫಿಯವರ ಮೇಲಿಟ್ಟಿದ್ದ ಒಂದು ದೈವಿಕ ಪ್ರಜ್ಞೆ ಏನಿದೆ ಅದು ಅವರನ್ನು ಆ ಎತ್ತರಕ್ಕೆ ಕೊಂಡೊಯ್ಯಿತು. ಅದು ವ್ಯಕ್ತಿಯ ಮೇಲಿನ ಪ್ರಜ್ಞೆ ಎನ್ನುವುದಕ್ಕಿಂತ ಹೆಚ್ಚಾಗಿ ವ್ಯಕ್ತಿಯ ಸಾಧನೆಯ ಕುರಿತಾಗಿ ಅವರಿಗಿದ್ದಂತಹ ಗೌರವ. ಹಾಗೆಯೇ ಈ ಸಾಧನೆಗೆ ಸುಧೀರ್ ಹಾಗೂ ತಂಡದವರಿಗೆ ಅಷ್ಟೆಲ್ಲಾ ಸಾಧಿಸುವ ಛಲ ಬಂದಿದ್ದು ಸಂಗೀತ, ಸಂಗೀತಗಾರರು ಹಾಗೂ ಕಲಾ ರಸಿಕರ ಬಗ್ಗೆ ಇರುವ ಅವರು ಇರಿಸಿಕೊಂಡಿರುವ ಗೌರವ ಮತ್ತು ಶ್ರದ್ಧೆಯೇ ಕಾರಣ ಎಂದರು.
ಅಧ್ಯಕ್ಷತೆ ವಹಿಸಿದ್ದ ಯುರೇಕಾ ಅಕಾಡೆಮಿಯ ಸಂಸ್ಥಾಪಕ ದೀಪಕ್ ದೊಡ್ಡಯ್ಯ ಮಾತನಾಡಿ, ಮೊಹಮ್ಮದ್ ರಫಿ ಅವರು ಈ ನಾಡು, ದೇಶ ಕಂಡ ಅಪ್ರತಿಮ ಗಾಯಕ. ಅವರ ಸಂಗೀತ ಮಕ್ಕಳಿಂದ ಹಿಡಿದು ವೃದ್ಧರವರೆಗೂ ಪ್ರಿಯವಾದುದು. ಅವರಿಗೆ ಐದು ಫಿಲಂಫೇರ್ ಅವಾರ್ಡ್ಗಳು ಬಂದಿದ್ದವು. ರಫಿ ಅವರು ನಮ್ಮ ಜೊತೆ ಇಲ್ಲ. ಆದರೆ ಅವರು ಹಾಡಿರುವ ಹಾಡುಗಳು ಈಗಲೂ ಮುಂದೆಯೂ ನಮ್ಮೊಂದಿಗೆ ಇರುತ್ತವೆ ಎಂದು ಬಣ್ಣಿಸಿದರು.
ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದ ಪೂರ್ವಿ ಸುಗಮ ಸಂಗೀತ ಅಕಾಡೆಮಿ ಟ್ರಸ್ಟ್ನ ಅಧ್ಯಕ್ಷ ಎಂ.ಎಸ್.ಸುಧೀರ್, ಮೊಹಮ್ಮದ್ ರಫಿ ೨೫ ಸಾವಿರಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ್ದಾರೆ. ಲಘು ಶಾಸ್ತ್ರೀಯ, ರೋಮ್ಯಾಂಟಿಕ್, ಕವ್ವಾಲಿ, ಭಜನೆಗಳು – ಹೀಗೆ ಆಡು ಮುಟ್ಟದ ಸೊಪ್ಪಿಲ್ಲ ಎನ್ನುವಂತೆ ಅವರು ಎಲ್ಲಾ ಪ್ರಕಾರಗಳಲ್ಲಿ ಹಾಡಿದ್ದಾರೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಕಲಾಪೋಷಕ ರಾಮ ಹಾಸ್ಯಗಾರ ಕಾರ್ಯಕ್ರಮಕ್ಕೆ ಶುಭ ಕೋರಿದರು. ಉರ್ದು ಅದಬ್ ಮುಖ್ಯಸ್ಥ ಜಂಷೀಡ್, ನಿವೃತ್ತ ಪ್ರಾಚಾರ್ಯ ಕೆ.ಮೊಹಮ್ಮದ್ ಜಾಫರ್ ವೇದಿಕೆಯಲ್ಲಿದ್ದರು. ಜ್ಯೋತಿ ಸಂತೋಷ್ ವಂದಿಸಿದರು.
ಎಂ.ಎಸ್.ಸುಧೀರ್ ಸಾರಥ್ಯದಲ್ಲಿ ನಡೆದ ಗಾಯನ ಕಾರ್ಯಕ್ರಮದಲ್ಲಿ ಶಿವಮೊಗ್ಗದ ಸುರೇಖಾ ಹೆಗಡೆ, ಹಾಸನದ ಚೇತನ್ರಾಮ್, ಸಾರಥಿ ವೆಂಕಟೇಶ್, ವಿಷ್ಣು ಭಾರದ್ವಾಜ್, ರೂಪಾ ಅಶ್ವಿನ್, ಅನುಷ, ರುಕ್ಸಾನಾ ಕಾಚೂರ್, ಚೈತನ್ಯ ಕೃಷ್ಣ, ಪೃಥ್ವಿಶ್ರೀ ವಿವಿಧ ಒಟ್ಟು ೧೮ ಗೀತೆಗಳಿಗೆ ಧ್ವನಿಯಾದರು. ಇದೇ ವೇಳೆ ವಿಶೇಷ ನೃತ್ಯ ಪ್ರದರ್ಶನದಲ್ಲಿ ಕೆ.ಎಸ್.ಚಿನ್ಮಯಿ, ಸಿರಿ,ಸುರಭಿ, ತೇಜಸ್ವಿನಿ, ಸ್ವರ, ಸ್ಮಯ ಗಮನ ಸೆಳೆದರು. ರೂಪಾ ನಾಯ್ಕ್ ಹಾಗೂ ಜ್ಯೋತಿ ಸಂತೋಷ್ ನಿರೂಪಿಸಿದರು.
`Ek Sham Rafi Ke Naam’ Purvi Ganayana-102