ಚಿಕ್ಕಮಗಳೂರು: ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆಯಡಿ ತರಬೇತಿ ಪಡೆದ ಅಭ್ಯರ್ಥಿಗಳಿಗೆ ಟೂಲ್ ಕಿಟ್ಗಳನ್ನು ಒದಗಿಸಿ ಅರ್ಹ ಫಲಾನುಭವಿಗಳಿಗೆ ಸಾಲ ಮಂಜೂರು ಮಾಡಿ ಕರಕುಶಲ ಮತ್ತು ಕುಶಲಕರ್ಮಿಗಳ ಕೈ ಬಲಪಡಿಸಲು ಅಗತ್ಯ ಕ್ರಮ ವಹಿಸಿ ಎಂದು ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದರಾದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ನಗರದ ಜಿಲ್ಲಾ ಪಂಚಾಯಿತಿ ಮಿನಿ ಸಭಾಂಗಣದಲ್ಲಿ ಇಂದು ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆಯ ಪ್ರಗತಿ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದು ಅವರು ಮಾತನಾಡಿ ಕೇಂದ್ರ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಯಾದ ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆಯನ್ನು ಗ್ರಾಮೀಣ ಹಾಗೂ ನಗರ ಪ್ರದೇಶದಲ್ಲಿನ ಕರಕುಶಲ ಮತ್ತು ಕುಶಲ ಕರ್ಮಿಗಳನ್ನು ಆರ್ಥಿಕವಾಗಿ ಬಲಪಡಿಸಿ ಅವರ ಸ್ವ ಉದ್ಯೋಗಕ್ಕೆ ಪ್ರೋತ್ಸಾಹ ನೀಡಿ, ನಿರುದ್ಯೋಗ ಸಮಸ್ಯೆಯನ್ನು ಹೋಗಲಾಡಿಸುವ ಉದ್ದೇಶದಿಂದ ಜಾರಿಗೆ ತರಲಾಗಿದೆ. ಈ ಯೋಜನೆಯ ಫಲವನ್ನು ಪ್ರತಿಯೊಬ್ಬ ಅರ್ಹ ಫಲಾನುಭವಿಗಳು ಪಡೆದುಕೊಳ್ಳುವಂತೆ ಕ್ರಮವಹಿಸಬೇಕು ಎಂದರು.
ಯೋಜನೆಯಡಿಯಲ್ಲಿ ಅರ್ಜಿ ಸಲ್ಲಿಸಿದ ಬಡಗಿಗಳು, ಶಿಲ್ಪಿಗಳು, ಕಮ್ಮಾರರು, ಮರಗೆಲಸಗಾರರು, ಕುಂಬಾರಿಕೆ, ಮಾಲಾಕಾರರು, ಮೇಸ್ತ್ರಿಗಳು ಸೇರಿದಂತೆ ೧೮ ವೃತ್ತಿಗಳನ್ನೊಳಗೊಂಡ ಕುಶಲಕರ್ಮಿಗಳಿಗೆ ಗುಣಮಟ್ಟದ ತರಬೇತಿ ನೀಡಿ ಆಧುನಿಕತೆಗೆ ಅನುಗುಣವಾಗಿ ತಮ್ಮ ಕೌಶಲ್ಯದಲ್ಲಿ ತೊಡಗಿಕೊಳ್ಳುವಂತೆ ಪ್ರೋತ್ಸಾಹಿಸಲು ತರಬೇತಿ ಸಮಯದಲ್ಲಿ ದಿನಕ್ಕೆ ರೂ. ೫೦೦ ಸ್ಟೇ ಪಂಡ್ ಹಾಗೂ ತರಬೇತಿ ನಂತರದಲ್ಲಿ ರೂ. ೧೫,೦೦೦/- ಉಚಿತ ಟೂಲ್ ಕಿಟ್ಗಳನ್ನು ಒದಗಿಸಿ ಸಾಲದ ಅವಶ್ಯಕತೆ ಇರುವ ಅರ್ಹ ಅಭ್ಯರ್ಥಿಗಳಿಗೆ ಸಾಲ ಮಂಜೂರು ಮಾಡಿ ಅವರ ಸ್ವ ಉದ್ಯೋಗಕ್ಕೆ ಪ್ರೋತ್ಸಾಹ ನೀಡಬೇಕು ಎಂದರು
ಸಾಲಕ್ಕಾಗಿ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳ ಅರ್ಜಿಗಳನ್ನು ಬಾಕಿ ಮಾಡದಂತೆ ಶೀಘ್ರವಾಗಿ ಪ್ರತಿಯೊಬ್ಬರಿಗೂ ಸಾಲ ಮಂಜೂರು ಮಾಡಲು ಅಗತ್ಯ ಕ್ರಮವಹಿಸಬೇಕು. ಜಿಲ್ಲೆಯಲ್ಲಿರುವ ಎಲ್ಲಾ ತರಬೇತಿ ಕೇಂದ್ರಗಳಲ್ಲಿ ತರಬೇತಿ ಪ್ರಾರಂಭಿಸಿ ಗುಣಮಟ್ಟದ ತರಬೇತಿ ನೀಡಬೇಕು ಎಂದ ಅವರು ಯೋಜನೆಯ ಫಲವನ್ನು ಪ್ರತಿಯೊಬ್ಬರು ಪಡೆದುಕೊಳ್ಳುವಂತೆ ತಿಳಿಸಿದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಾಹಣಾಧಿಖಾರಿ ಹೆಚ್.ಎಸ್ ಕೀರ್ತನಾ ಮಾತನಾಡಿ ಪಿಎಂ ವಿಶ್ವಕರ್ಮ ಯೋಜನೆಯು ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆ, ಯೋಜನೆಯಾಗಿದ್ದು ಕುಶಲಕರ್ಮಿಗಳನ್ನು ಬಲಪಡಿಸುವುದು ಹಾಗೂ ಅವರ ಕೌಶಲ್ಯವನ್ನು ಹೆಚ್ಚಿಸುವ ಸಲುವಾಗಿ ಸೂಕ್ತ ತರಬೇತಿ ನೀಡುವುದರೊಂದಿಗೆ ಶೇ.೫ ರಷ್ಟು ಬಡ್ಡಿ ದರದಲ್ಲಿ ಬ್ಯಾಂಕುಗಳ ಮೂಲಕ ನೀಡಲಾಗುತ್ತದೆ. ಇಲ್ಲಿಯವರೆಗೆ ಜಿಲ್ಲೆಯಲ್ಲಿ ಒಟ್ಟು ೪೬೯೯೦ ಅರ್ಜಿಗಳು ಸ್ವೀಕೃತವಾಗಿದ್ದು, ಇವರೆಗೆ ೨೪೨೨ ಅಭ್ಯರ್ಥಿಗಳಿಗೆ ತರಬೇತಿ ನೀಡಲಾಗಿದೆ.
ಜಿಲ್ಲೆಯಲ್ಲಿ ಒಟ್ಟು ೯ ತರಬೇತಿ ಕೇಂದ್ರಗಳಿದ್ದು ೫ ತರಬೇತಿ ಕೇಂದ್ರಗಳು ಕಾರ್ಯರೂಪದಲ್ಲಿವೆ ಶೀಘ್ರವಾಗಿ ಎಲ್ಲಾ ತರಬೇತಿ ಕೇಂದ್ರಗಳಲ್ಲಿ ತರಬೇತಿ ಪ್ರಾರಂಭಿಸಲು ಕ್ರಮವಹಿಸಲಾಗಿದೆ. ಇವರೆಗೆ ಜಿಲ್ಲೆಯಲ್ಲಿ ಸಾಲಕ್ಕಾಗಿ ೨೪೨೨ ಅರ್ಜಿಗಳು ಬಂದಿದ್ದು ೯೯೦ ಅಭ್ಯರ್ಥಿಗಳಿಗೆ ಸಾಲ ಮಂಜೂರಾಗಿದೆ. ಇತರೆ ತಾಂತ್ರಿಕ ದೋಷಗಳಿಂದ ಬಾಕಿಯಾಗಿರುವ ಅರ್ಜಿಗಳಲ್ಲು ಪರಿಶೀಲಿಸಿ ಅರ್ಹರಿಗೆ ಸಾಲ ಮಂಜೂರಾಗುವಂತೆ ಕ್ರಮ ವಹಿಸಲಾಗುವುದು ಎಂದರು.
ಸಭೆಯಲ್ಲಿ ಜಿಲ್ಲಾ ಕೈಗಾರಿಕಾ ಕೇಂದ್ರ ಉಪನಿರ್ದೇಶಕ ಚಂದ್ರಶೇಖರ್, ಲೀಡ್ ಬ್ಯಾಂಕ್ ವ್ಯವಸ್ಥಾಪಕ ಮಹೇಶ್, ವಿಶ್ವ ಕರ್ಮ ಯೋಜನೆ ಸಲಹಾ ಸಮಿತಿ ಸದಸ್ಯರು ಸೇರಿದಂತೆ ವಿವಿಧ ಬ್ಯಾಂಕ್ ಹಾಗೂ ಇಲಾಖೆ ಅಧಿಕಾರಿಗಳು ಹಾಜರಿದ್ದರು.
Sanction loans to eligible beneficiaries under PM Vishwakarma Yojana