ಚಿಕ್ಕಮಗಳೂರು: ತನ್ನ ಬದುಕನ್ನು ಯಾರು ಸಾರ್ಥಕ ಮಾಡಿಕೊಂಡಿರುತ್ತಾರೋ ಅವರು ಚಿರಂಜೀವಿಯಾಗಿರುತ್ತಾರೆ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಪ್ರಧಾನ ಕಾರ್ಯದರ್ಶಿ ಎಂ.ಎಲ್.ಮೂರ್ತಿ ತಿಳಿಸಿದರು.
ಅವರು ಶುಕ್ರವಾರ ನಗರದ ಜಿಲ್ಲಾ ಕಾಂಗ್ರೆಸ್ ಕಛೇರಿಯಲ್ಲಿ ಚಿಕ್ಕಮಗಳೂರು ಬ್ಲಾಕ್ ಕಾಂಗ್ರೆಸ್ ಮತ್ತು ಜಿಲ್ಲಾ ಕಾಂಗ್ರೆಸ್ ವತಿಯಿಂದ ಆಯೋಜಿಸಿದ್ದ ಮಾಜಿ ಪ್ರಧಾನಮಂತ್ರಿ ಡಾ.ಮನಮೋಹನ್ ಸಿಂಗ್ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದರು.
ಹಿರಿಯ ರಾಜಕಾರಣಿ, ಮುತ್ಸದ್ದಿ, ಆರ್ಥಿಕ ತಜ್ಞ, ದೇಶದ ಪ್ರಧಾನಮಂತ್ರಿಗಳಾಗಿ ೧೦ ವರ್ಷಗಳ ಕಾಲ ಸುಧೀರ್ಘವಾಗಿ ದೇಶವನ್ನು ಮುನ್ನಡೆಸಿದ ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ಅವರ ಆದರ್ಶ ಮೌಲ್ಯಗಳನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
ದೇಶ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತವನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ದ ಕೀರ್ತಿ ಡಾ,ಮನಮೋಹನ್ ಸಿಂಗ್ ಅವರಿಗೆ ಸಲ್ಲುತ್ತದೆ. ಭಾರತದ ಹಣಕಾಸು ನೀತಿಯನ್ನು ಮೆಚ್ಚಿ ಅಮೇರಿಕಾ ಅಧ್ಯಕ್ಷರಾದ ಬರಾಕ್ ಒಬಾಮ ಅವರು ಡಾ.ಮನಮೋಹನ್ ಸಿಂಗ್ ಸಲಹೆಯನ್ನು ಪಡೆದಿರುವುದು ಇತಿಹಾಸ ಎಂದರು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರೇಖಾ ಹುಲಿಯಪ್ಪಗೌಡ ಮಾತನಾಡಿ, ಮಾಜಿ ಪ್ರಧಾನಮಂತ್ರಿ ಡಾ.ಮನಮೋಹನ್ ಸಿಂಗ್ ಅವರು ಪ್ರಧಾನಿ ಆದ ಸಂದರ್ಭದಲ್ಲಿ ದೇಶದಲ್ಲಿ ಉತ್ತಮವಾದ ಜನಪರವಾದ ಕಾರ್ಯಕ್ರಮಗಳನ್ನು ರೂಪಿಸಿದ್ದು, ಅವುಗಳು ಇಂದು ಮನೆ ಮಾತಾಗಿ ಅಚ್ಚಳಿಯದೆ ಉಳಿದಿವೆ ಎಂದು ಹೇಳಿದರು.
ದೇಶದ ಎಲ್ಲಾ ಜನರಿಗೂ ಉತ್ತಮವಾದ ಶಿಕ್ಷಣ ದೊರೆಯಬೇಕು ಎಂಬ ಉದ್ದೇಶದಿಂದ ಮನಮೋಹನ್ ಸಿಂಗ್ ಅವರು ಸರ್ವ ಶಿಕ್ಷಣಾ ಅಭಿಯಾನ ಕಾರ್ಯಕ್ರಮವನ್ನು ಜಾರಿಗೆ ತಂದರು. ಗ್ರಾಮೀಣ ಪ್ರದೇಶದಲ್ಲಿ ಶಾಲೆಗಳನ್ನು ತೆರೆಯುವ ಮೂಲಕ ದೇಶದಲ್ಲಿ ಕ್ರಾಂತಿಕಾರಕ ಬದಲಾವಣೆಗಳನ್ನು ಮಾಡಿದ್ದಾರೆ ಎಂದರು.
ಚಿಕ್ಕಮಗಳೂರು ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಹೆಚ್.ಪಿ.ಮಂಜೇಗೌಡ ಅಧ್ಯಕ್ಷತೆ ವಹಿಸಿ ಮಾತನಾಡಿ, ಗ್ರಾಮೀಣ ಪ್ರದೇಶದ ಜನರ ಆರ್ಥಿಕ ಸುಧಾರಣೆಯನ್ನು ತರುವಲ್ಲಿ ಡಾ.ಮನಮೋಹನ್ ಸಿಂಗ್ ಅವರು ತನ್ನದೇ ಆದ ಕೊಡುಗೆಯನ್ನು ನೀಡಿದ್ದಾರೆ ಎಂದು ಹೇಳಿದರು.
ಡಾ.ಮನಮೋಹನ್ ಸಿಂಗ್ ಅವರು ಪ್ರಧಾನಮಂತ್ರಿ ಆದ ಸಂದರ್ಭದಲ್ಲಿ ವಿರೋಧ ಪಕ್ಷದ ನಾಯಕರು ಸೇರಿದಂತೆ ಎಲ್ಲಾ ಮುಖಂಡರೊಂದಿಗೆ ದೇಶದ ಅಭಿವೃದ್ಧಿಯ ಬಗ್ಗೆ ಚರ್ಚಿಸಿ ಉತ್ತಮವಾದ ಕಾರ್ಯಕ್ರಮಗಳನ್ನು ದೇಶಕ್ಕೆ ಕೊಟ್ಟಿದ್ದಾರೆ. ಅವರ ನೇತೃತ್ವದಲ್ಲಿ ಭಾರತ ದೇಶ ಅಭಿವೃದ್ಧಿಯ ಪಥದಲ್ಲಿ ಸಾಗಿರುವುದು ನಾವೆಲ್ಲರೂ ಕಂಡಿದ್ದೇವೆ ಎಂದರು.
ಶ್ರದ್ಧಾಂಜಲಿ ಸಭೆಯಲ್ಲಿ ನಗರಸಭೆ ಸದಸ್ಯ ಪ್ರಕಾಶ್ ರೈ, ಸಿಡಿಎ ಸದಸ್ಯರಾದ ಶೃದೀಪ್, ರಾಘವೇಂದ್ರ, ನಗರ ಆಶ್ರಯ ಸಮಿತಿ ಸದಸ್ಯ ಪ್ರಸಾದ್ ಅಮಿನ್, ಕೆಪಿಸಿಸಿ ಎಸ್.ಸಿ ಘಟಕ ರಾಜ್ಯ ಸಂಚಾಲಕಿ ನೇತ್ರಾವತಿ, ಎನ್ಎಸ್ಯುಐ ಜಿಲ್ಲಾಧ್ಯಕ್ಷ ಸುಮಂತ್, ಕಿಸಾನ್ ಘಟಕದ ಮಧು, ಕೆಡಿಪಿ ಸದಸ್ಯ ಸಂತೋಷ್, ಮುಖಂಡರಾದ ಮಂಜುನಾಥ್, ಹೆಚ್.ಎಸ್.ಜಗದೀಶ್, ಸುರೇಶ್, ನೂರಿ, ಕುಸುಮಾ ಭರತ್, ಶಬುದ್ದೀನ್, ಉಮೇಶ್ ಶೆಟ್ಟಿ, ಜಗದೀಶ್ ಗೌಡ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಡಾ.ಮನಮೋಹನ್ ಸಿಂಗ್ ಭಾವಚಿತ್ರಕ್ಕೆ ಮುಖಂಡರೆಲ್ಲರೂ ಸೇರಿ ಸಾಮೂಹಿಕವಾಗಿ ಪುಷ್ಪ ನಮನ ಸಲ್ಲಿಸಿ, ಒಂದು ನಿಮಿಷ ಮೌನ ಆಚರಿಸಿದರು.
Tributes paid to Dr. Manmohan Singh at Congress office