ಚಿಕ್ಕಮಗಳೂರು: ಬೆಂಗಳೂರಿನ ಜಕ್ಕೂರು ಬೇರು ಭೂಮಿ ಸಂಸ್ಥೆ ವತಿಯಿಂದ ಅಜ್ಜಂಪುರ ತಾಲ್ಲೂಕು ಶಿವನಿ ಹೋಬಳಿಯ ಜವೂರು ನಾರಾಯಣಸ್ವಾಮಿ ದೇಸ್ಥಾನದ ಸ್ವಚ್ಛತಾ ಕಾರ್ಯಕ್ರಮವು ಡಿ.೩೧ ರಂದು ಹಾಗೂ ಜ.೧ ರಂದು ನಡೆಯಲಿದೆ ಎಂದು ಸಂಸ್ಥೆಯ ಸದಸ್ಯ ಮಧು ತಿಳಿಸಿದರು.
ಇಂದು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಸುಮಾರು ೯೦೦ ವರ್ಷ ಇತಿಹಾಸವುಳ್ಳ ಹೊಯ್ಸಳರ ಕಾಲದ ನಾರಾಯಣಸ್ವಾಮಿ ದೇವಾಲಯ ಸ್ವಚ್ಛತೆ ಕಾರ್ಯಕ್ರಮಕ್ಕೆ ಊರಿನ ಜನರು ಹಾಗೂ ಸ್ಥಳೀಯ ಗ್ರಾ.ಪಂ, ಜಿಲ್ಲಾ ಪುರಾತತ್ವ ಇಲಾಖೆ ಸಹಕಾರ ನೀಡುತ್ತಿದೆ ಎಂದು ಹೇಳಿದರು.
ಇದೇ ರೀತಿ ಹೊಯ್ಸಳರ ಕಾಲದ ದೇವಾಲಯಗಳು ಊರಿನ ಸುತ್ತಮುತ್ತ ಇದ್ದಲ್ಲಿ ಯುವಕ, ಯುವತಿಯರು ಕೈಜೋಡಿಸಿ ಸ್ವಚ್ಛಪಡಿಸಿಕೊಳ್ಳುವ ಮೂಲಕ ನಮ್ಮ ರಾಜರು ಆಳ್ವಿಕೆ ನಡೆಸಿದ ದೇವಾಲಯಗಳನ್ನು ಉಳಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.
ಇಂದು ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಕುರಿತು ಮುಂದಿನ ಜನಾಂಗಕ್ಕೆ ಮಾರ್ಗದರ್ಶನವಾಗಬೇಕಾದ ಅಗತ್ಯವಿದೆ. ಸಂಸ್ಕೃತಿಯನ್ನು ಎತ್ತಿ ಹಿಡಿಯುವ ದೇವಾಲಯಗಳನ್ನು ರಕ್ಷಿಸಿಕೊಳ್ಳಬೇಕಾದ ಅನಿವಾರ್ಯತೆ ಇದೆ. ಈ ಹಿನ್ನೆಲೆಯಲ್ಲಿ ಸಂಸ್ಥೆಯು ಪುರಾತನ ದೇವಸ್ಥಾನಗಳನ್ನು ಆಯ್ಕೆ ಮಾಡಿಕೊಂಡು ಸ್ವಚ್ಛತೆಗೆ ಮುಂದಾಗುತ್ತಿದೆ ಎಂದು ವಿವರಿಸಿದರು.
ರಾಜ, ಮಹಾರಾಜರು ಕನ್ನಡ ನಾಡು-ನುಡಿ ಸಂಸ್ಕೃತಿಗೆ ಕೈಗನ್ನಡಿಯಾಗಿ ಹಲವಾರು ದೇವಾಲಯಗಳು ಉಳಿದುಕೊಂಡಿವೆ. ಅವುಗಳು ಇಂದು ಸರಿಯಾದ ಪಾಲನೆ ಇಲ್ಲದೆ ಸೊರಗುತ್ತಿವೆ. ಈ ಬಗ್ಗೆ ಜಾಗೃತಿ ಮೂಡಿಸುವ ಕೆಲಸವನ್ನು ಸಂಸ್ಥೆ ಮಾಡುತ್ತಿದೆ ಎಂದು ಹೇಳಿದರು.
ಹೊಸವರ್ಷದ ಅಂಗವಾಗಿ ಇದೀಗ ಜವೂರಿನ ನಾರಾಯಣಸ್ವಾಮಿ ದೇವಸ್ಥಾನದ ಸ್ವಚ್ಛತೆ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗಿದೆ. ಹೆಮ್ಮೆಯ ಕೆಲಸಕ್ಕೆ ಹಿರಿಯರು ರಾಜರು, ಕವಿಗಳು, ಕನ್ನಡ ಪ್ರೇಮಿಗಳು ಒಂದಾಗಿ ಕೈಜೋಡಿಸುತ್ತಿದ್ದಾರೆ ಎಂದರು.
ಸಂಸ್ಥೆ ವತಿಯಿಂದ ಮೂಡಿಗೆರೆ ತಾಲ್ಲೂಕಿನ ಎತ್ತಿನಭುಜ ಪ್ರವಾಸಿ ತಾಣದಲ್ಲಿ ಸ್ವಚ್ಛತೆ ಗೊಳಿಸುವ ಮೂಲಕ ಪ್ರವಾಸಿಗರಲ್ಲಿ ಅರಿವು ಮೂಡಿಸಲಾಗಿದೆ. ಅದೇ ರೀತಿ ಜಿಲ್ಲೆಯಾದ್ಯಂತ ಪ್ರವಾಸಿ ಕೇಂದ್ರಗಳಲ್ಲಿ ಪ್ಲಾಸ್ಟಿಕ್, ಬಾಟಲಿ ಎಸೆದು ಮಾಲಿನ್ಯ ಮಾಡದಂತೆ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಹೇಳಿದರು.
Cleanliness program at Jawoor Narayanaswamy Temple