ಚಿಕ್ಕಮಗಳೂರು: :ದತ್ತಪೀಠದಲ್ಲಿ ಮುಸಲ್ಮಾನರು ಹೊಸ ಹೊಸ ಪೂಜಾ ವಿಧಿ-ವಿಧಾನಗಳನ್ನು ಮಾಡುತ್ತಿರುವುದರಿಂದ ಗೊಂದಲ ಹಾಗೂ ಅಶಾಂತಿ ಸೃಷ್ಟಿಯಾಗುತ್ತಿದ್ದು, ಈ ಬಗ್ಗೆ ಜಿಲ್ಲಾಡಳಿತ, ಪೊಲೀಸ್ ಇಲಾಖೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ವಿಶ್ವ ಹಿಂದೂ ಪರಿಷತ್ ಬಜರಂಗದಳ ಜಿಲ್ಲಾ ಕಾರ್ಯದರ್ಶಿ ಟಿ.ರಂಗನಾಥ್ ಆಗ್ರಹಿಸಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತ, ಡಿ.೨೯ ರಂದು ಗುರುದತ್ತಾತ್ರೇಯ ಪೀಠಕ್ಕೆ ಆಗಮಿಸಿದ ಮುಸಲ್ಮಾನರು ರೋಟಿಬಾಜಿ ತಯಾರಿಸಿ ಮೆರವಣಿಗೆ ಮೂಲಕ ಘೋಷಣೆಗಳನ್ನು ಕೂಗುತ್ತ ದತ್ತಪೀಠದ ಗುಹೆ ಒಳಗೆ ಹೋಗಲು ಪ್ರಯತ್ನಿಸಿ ಮಾಮಾಜುಗ್ನಿಯವರಿಗೆ ಪಾತೇಹ ಪೂಜೆ ಸಲ್ಲಿಸಲು ಮುಂದಾಗಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಅಲ್ಲಿಯೇ ಇದ್ದ ಮುಜರಾಯಿ ಅಧಿಕಾರಿಗಳು ಮತ್ತು ಪೊಲೀಸರು ಇವರನ್ನು ತಡೆದು ಬೇಯಿಸಿದ ಪದಾರ್ಥಗಳನ್ನು ತೆಗೆದುಕೊಂಡು ಹೋಗಿ ಗುಹೆಯ ಒಳಗೆ ಪಾತೇಹ ಮಾಡಲು ಅವಕಾಶವಿಲ್ಲ ಎಂದು ತಿಳಿಸಿದಾಗ ಸರ್ಕಾರ, ಜಿಲ್ಲಾಧಿಕಾರಿಗಳು, ಮುಜುರಾಯಿ ಅಧಿಕಾರಿಗಳು ಹಾಗೂ ವ್ಯವಸ್ಥಾಪನ ಸಮಿತಿ ವಿರುದ್ಧ ಧಿಕ್ಕಾರ ಕೂಗಿ ಗೊಂದಲ ಸೃಷ್ಟಿಸಿದ್ದಾರೆ ಎಂದು ಆರೋಪಿಸಿದರು.
ಇಲ್ಲಿ ಪೂಜೆ ಸಲ್ಲಿಸುವ ಕುರಿತು ನ್ಯಾಯಾಲಯ, ಸರ್ಕಾರ ನಿರ್ಧಾರ ಮಾಡಿದ್ದು ಅದರಂತೆ ಪಾತೇಹ ಮಾಡಲು ಅವಕಾಶವಿದೆ, ಬೇಯಿಸಿದ ಪದಾರ್ಥಗಳ ಮೂಲಕ ಪಾತೇಹ ಮಾಡಲು ಅನುಮತಿ ಇಲ್ಲ ಎಂದು ತಿಳಿಸಿದ್ದಾರೆಂದು ವಿವರಿಸಿದರು. ಹಿಂದೂ ಧರ್ಮದ ಗುಹೆಯೊಳಗೆ ಆಗಮ ಶಾಸ್ತ್ರದ ಪ್ರಕಾರ ಪೂಜೆಯಾಗಬೇಕು, ಅದಕ್ಕೆ ಹೂವು ಹಣ್ಣುಹಂಪಲು, ತೆಂಗಿನಕಾಯಿ, ಹರಿಶಿನ ಕುಂಕುಮ, ಊದುಬತ್ತಿ, ಕರ್ಪೂರ, ನಂದಾದೀಪ ತೈಲ ಇವೆಲ್ಲಾ ತೆಗೆದುಕೊಂಡು ಹೋಗಿ ಪೂಜೆ ಸಲ್ಲಿಸಲು ಅವಕಾಶವಿದೆ ಎಂದು ಹೇಳಿದರು.
ಅದರಂತೆ ಮುಸಲ್ಮಾನರಿಗೂ ಪೂಜೆ ಮಾಡಲು ಹೂವು, ಬಾಳೇಹಣ್ಣು, ತೆಂಗಿನಕಾಯಿ, ಸಕ್ಕರೆ, ಬೂಂದಿ, ಊದುಬತ್ತಿ ಲೋಬಾನ ತೆಗೆದುಕೊಂಡು ಹೋಗಿ ಪೂಜೆ ಮಾಡಬಹುದಾಗಿದ್ದು, ಇದನ್ನು ಅರಿಯದೆ ಏಕಾಏಕಿ ಹೊಸ ಹೊಸ ಪೂಜಾ ಪದ್ದತಿಗಳನ್ನು ಮಾಡುತ್ತಿರುವುದರಿಂದ ಗೊಂದಲ ಉಂಟಾಗುತ್ತಿದೆ. ಅವರ ಇಚ್ಚೆಯಂತೆ ಪೂಜೆ ಸಲ್ಲಿಸಲು ನ್ಯಾಯಾಲಯದ ಅನುಮತಿ ಪಡೆಯಬೇಕೆಂದು ಆಗ್ರಹಿಸಿದರು.
ದತ್ತಪೀಠದ ಗುಹೆಯೊಳಗೆ ಪೂಜೆ ಮಾಡಲು ಹಿಂದೂ ಅರ್ಚಕರು ಮತ್ತು ಮುಸಲ್ಮಾನ ಮುಜಾವರ್ಗಳನ್ನು ನೇಮಕ ಮಾಡಲಾಗಿದ್ದು, ಗುಹೆಯೊಳಗೆ ಹೋಗಿ ಪೂಜೆ ಮತ್ತು ಪಾತೇಹ ಮಾಡಿಕೊಂಡು ಬರಲು ಎಲ್ಲರಿಗೂ ಮುಕ್ತ ಅವಕಾಶವಿದೆ ಎಂದು ಹೇಳಿದರು.
ಮುಸಲ್ಮಾನರು ಪಾತೇಹ ಮಾಡುವುದು ಸಮಾಧಿಗಳಿಗೆ ಮಾತ್ರ ಎಂಬುದಾಗಿದ್ದು, ದತ್ತಪೀಠದಲ್ಲಿ ದತ್ತಾತ್ರೇಯ ಪೀಠ ಹಾಗೂ ಪಾದುಕೆಗಳು, ಮಹಾಸತಿ ಅನುಸೂಯ ದೇವಿಯವರ ಪೀಠವಾಗಿದೆ ಎಂದು ವಿವರಿಸಿದರು. ಮುಸಲ್ಮಾನರು ತಮ್ಮ ಇಚ್ಚಾನುಸಾರ ಪೂಜೆ ಮಾಡುವುದಾದರೆ ನಾಗೇನಹಳ್ಳಿಯ ಬಾಬಾಬುಡನ್ ದರ್ಗಾಕ್ಕೆ ಹೋಗಿ ಪೂಜೆ ಸಲ್ಲಿಸಲಿ. ಇದಕ್ಕೆ ನಮ್ಮ ಯಾವುದೇ ಆಕ್ಷೇಪ ಇಲ್ಲ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ವಿಹೆಚ್ಪಿ ಬಜರಂಗದಳದ ಉಪಾಧ್ಯಕ್ಷ ಯೋಗೀಶ್ ರಾಜ್ ಅರಸ್, ಶಿವಣ್ಣ ಕುಪ್ಪೇನಹಳ್ಳಿ, ಅಮಿತ್, ಪಾಪಣ್ಣ ಉಪಸ್ಥಿತರಿದ್ದರು.
Demand for action to prevent new worship practices at Datta Peetha