ಚಿಕ್ಕಮಗಳೂರು: : ಜನವರಿ ೨೬ರಂದು ಗಣರಾಜ್ಯೋತ್ಸವ ದಿನವನ್ನು ಜಿಲ್ಲಾಡಳಿತದ ವತಿಯಿಂದ ಅರ್ಥಪೂರ್ಣವಗಿ ಅಚರಿಸಲು ನಿರ್ಧರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಮೀನಾ ನಾಗರಾಜ್ ಸಿ.ಎನ್. ತಿಳಿಸಿದರು.
ಜಿಲ್ಲಾಧಿಕಾರಿಗಳ ಕಛೇರಿ ಸಭಾಂಗಣದಲ್ಲಿ ಇಂದು ನಡೆದ ಗಣರಾಜ್ಯೋತ್ಸವ ಪೂರ್ಣಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ ಗಣರಾಜ್ಯೋತ್ಸವವನ್ನು ನಗರದ ನೇತಾಜಿ ಸುಭಾಷ್ಚಂದ್ರ ಬೋಸ್ ಜಿಲ್ಲಾ ಆಟದ ಮೈದಾನದಲ್ಲಿ ಆಯೋಜಿಸಲಾಗುತ್ತಿದ್ದು, ಬೆಳಗ್ಗೆ ೯:೦೦ ಗಂಟೆಗೆ ಜಿಲ್ಲಾ ಉಸ್ತುವಾರಿ ಸಚಿವರಿಂದ ಧ್ವಜಾರೋಹಣ ನೆರವೇರಿಸುವರು. ಧ್ವಜಾರೋಹಣ ಕಾರ್ಯಕ್ರಮದಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳು, ಸಿಬ್ಬಂದಿಗಳು ಕಡ್ಡಾಯವಾಗಿ ಭಾಗವಹಿಸಬೇಕು ಎಂದು ಸೂಚಿಸಿದ ಅವರು ಜಿಲ್ಲೆಯಾದ್ಯಂತ ಅರ್ಥಪೂರ್ಣ ಗಣರಾಜ್ಯೋತ್ಸವ ಆಚರಣೆಗೆ ಕ್ರಮಕೈಗೊಳ್ಳಬೇಕು ಎಂದು ನಿರ್ದೇಶಿಸಿದರು.
ಶಿಷ್ಟಾಚಾರ ಪಾಲನೆ ಮತ್ತು ವೇದಿಕೆ ನಿರ್ಮಾಣ ಸೇರಿದಂತೆ ಮೈದಾನ ಸ್ವಚ್ಚತೆ, ಕಛೇರಿಗಳಿಗೆ ದೀಪಾಲಂಕಾರ ವ್ಯವಸ್ಥೆ ಮಾಡುವಂತೆ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳಿಗೆ ತಿಳಿಸಿದರು. ಧ್ವಜಾರೋಹಣ ಪ್ರಯುಕ್ತ ರಾಷ್ಟ್ರಗೀತೆ, ನಾಡಗೀತೆ, ಧ್ವಜಾರೋಹಣ. ಪಥಸಂಚಲನ, ಶಿಷ್ಟಾಚಾರದಂತೆ ಅತಿಥಿ ಗಣ್ಯರನ್ನು ಆಹ್ವಾನಿಸಲು ಅಗತ್ಯ ಸಿದ್ದತೆಗಳನ್ನು ಮಾಡಿ ಅಚ್ಚುಕಟ್ಟಾಗಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ಹೇಳಿದರು.
ಪೊಲೀಸ್ ಇಲಾಖೆ ಅಬಕಾರಿ ಇಲಾಖೆ, ಅಗ್ನಿಶಾಮಕದಳ ಸೇರಿದಂತೆ ಕವಾಯಿತು ತಂಡಗಳ ಪಥಸಂಚಲನಕ್ಕೆ ಸಿದ್ಧತೆ ಮಾಡಿಕೊಳ್ಳುವಂತೆ ತಿಳಿಸಿದ ಅವರು ಸೂಕ್ತ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲು ಪೊಲೀಸ್ ಇಲಾಖೆ ಅಧಿಕಾರಿಗಳಿಗೆ ತಿಳಿಸಿದರು. ತೋಟಗಾರಿಕೆ ಇಲಾಖೆ ಉಪನಿರ್ದೇಶಕರ ಕಛೇರಿ ಆವರಣದಲ್ಲಿ ಹಮ್ಮಿಕೊಳ್ಳಲಾಗುತ್ತಿದ್ದ ಫಲಪುಷ್ಪ ಪ್ರದರ್ಶನವನ್ನು ಈ ಬಾರಿ ನಗರದ ಸುಭಾಷಚಂದ್ರ ಬೋಸ್ ಜಿಲ್ಲಾ ಆಟದ ಮೈದಾನದಲ್ಲಿ ಹಮ್ಮಿಕೊಳ್ಳಲಾಗುತ್ತಿದ್ದು, ಮುಖ್ಯ ವೇದಿಕೆ ಕಾರ್ಯಕ್ರಮದ ನಂತರ ಫಲ ಪುಷ್ಪ ಪ್ರದರ್ಶನದ ಉದ್ಘಾಟನೆ ನಡೆಯಲಿದೆ. ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳು ಸುಭಾಷಚಂದ್ರ ಬೋಸ್ ಜಿಲ್ಲಾ ಆಟದ ಮೈದಾನದಲ್ಲಿಯೇ ಹಮ್ಮಿಕೊಳ್ಳಲು ಸಭೆಯಲ್ಲಿ ನಿರ್ಧರಿಸಲಾಯಿತು.
ಸಭೆಯಲ್ಲಿ ಜಿ.ಪಂ. ಮುಖ್ಯ ಕಾರ್ಯನಿರ್ವಣಾಧಿಕಾರಿ ಹೆಚ್.ಎಸ್. ಕೀರ್ತನಾ, ಅಪರ ಜಿಲ್ಲಾಧಿಕಾರಿ ನಾರಾಯಣ ರಡ್ಡಿ ಕನಕ ರಡ್ಡಿ, ಉಪವಿಭಾಗಾಧಿಕಾರಿ ದಲ್ಜಿತ್ ಕುಮಾರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ. ರಮೇಶ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಉಪನಿರ್ದೇಶಕಿ ಡಾ. ಮಂಜುಳ ಹುಲ್ಲಹಳ್ಳಿ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಶಿವಾನಂದ ಸ್ವಾಮಿ, ದಲಿತ ಸಂಘದ ಮುಖಂಡ ಕೆ.ಟಿ. ರಾಧಾಕೃಷ್ಣ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು.
Preparatory meeting on Republic Day