ಚಿಕ್ಕಮಗಳೂರು: ತೃಪ್ತಿ ಮತ್ತು ಮಾನವೀಯತೆ ಎಂಬೆರಡು ಮೌಲ್ಯಗಳನ್ನು ಬದುಕಿನಲ್ಲಿ ಎಲ್ಲರೂ ಅನುಸರಿಸಿದರೆ ಸಮಾಜದಲ್ಲಿ ಶಾಂತಿ-ನೆಮ್ಮದಿ-ಸೌಹಾರ್ದತೆ ಮೂಡುತ್ತದೆ ಎಂದು ಕರ್ನಾಟಕ ವಿಶ್ರಾಂತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷಹೆಗ್ಡೆ ಅಭಿಪ್ರಾಯಿಸಿದರು.
ಶಿರವಾಸೆಯ ವಿವೇಕಾನಂದ ವಿದ್ಯಾಸಂಸ್ಥೆಯ ಸುವರ್ಣಮಹೋತ್ಸವ ಸಮಾರಂಭವನ್ನು ಶಖರ್ಶೆಟ್ಟಿ ಸಭಾಮಂಟಪದಲ್ಲಿ ಉದ್ಘಾಟಿಸಿ ಮಾತನಾಡಿದ ಅವರು, ಸಮಾಜದ ಬಹುತೇಕ ಅವ್ಯಸ್ಥೆಗಳಿಗೆ ಲಂಚಾ ಮತ್ತು ಸ್ವಾರ್ಥತತೆ ಕಾರಣವೆಂದು ಬೊಟ್ಟುಮಾಡಿದರು.
ಜೀವನಪಥದಲ್ಲಿ ಮಾನವೀಯತೆ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು. ಲಂಚ ತೆಗೆದುಕೊಳ್ಳುವುದರ ಜೊತೆಗೆ ಲಂಚ ಕೊಡುವುದು ಅಪರಾಧ ಎಂಬುದನ್ನು ಅರಿಯಬೇಕು. ಸರಿದಾರಿಯಲ್ಲಿ ನಡೆಯುವ ಸಂಕಲ್ಪವನ್ನು ವಿದ್ಯಾರ್ಥಿ ಯುವಜನತೆ ಮಾಡಿದರೆ ಮಾತ್ರ ದೇಶಕ್ಕೆ ಭವಿಷ್ಯವಿದೆ ಎಂದರು.
ಹಲವಾರು ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿದರೂ ಸಮಾಜದ ಆಗು-ಹೋಗುಗಳ ಬಗ್ಗೆ ಗೊತ್ತಿರದ ಕೂಪಮಂಡೂಕದಂತೆ ಇದ್ದ ತಾವು ಲೋಕಾಯುಕ್ತಕ್ಕೆ ಬಂದಮೇಲೆ ಸಮಾಜದಲ್ಲಿ ನಡೆಯುವ ಅನ್ಯಾಯ ಗೊತ್ತಾಯಿತು. ಸಂವಿಧಾನದ ಸಂಸ್ಥೆಗಳಿಂದಲೂ ವಂಚನೆ ನೋಡುವಂತಾಯಿತು. ಇದಲ್ಲಾ ವ್ಯಕ್ತಿಗಳ ತಪ್ಪಲ್ಲ. ಸಮಾಜದ ತಪ್ಪು ಎಂದು ವಿಶ್ಲೇಷಿಸಿದ ಸಂತೋಷಹೆಗ್ಡೆ, ಅಧಿಕಾರ ಮತ್ತು ಶ್ರೀಮಂತಿಕೆ ಪೂಜಿಸುವ ಸಮಾಜ ನಮ್ಮದೆಂದರು.
ಒಳ್ಳೆಯ ಕೆಲಸ ಮಾಡಿದವನ್ನು ಗೌರವಿಸಿ ಕೆಟ್ಟಕೆಲಸ ಮಾಡಿದವರನ್ನು ದೂರವಿಡುವ ಸಮಾಜ ಹಿಂದೆ ಇತ್ತು. ಜೈಲಿಗೆ ಹೋಗಿಬಂದವರ ಕುಟುಂಬದಿಂದಲೇ ಅಂತರ ಕಾಪಾಡುವ ವ್ಯವಸ್ಥೆ ಇತ್ತು. ತಪ್ಪು ಮಾಡಿದವರಿಗೆ ಶಿಕ್ಷೆಯ ಜೊತೆಗೆ ಕುಟುಂಬವೂ ತೊಂದರೆಗೊಳಗಾಗುತ್ತಿತ್ತು. ಆದ್ದರಿಂದ ತಪ್ಪು ಮಾಡಲು ಜನ ಹಿಂಜರಿಯುತ್ತಿದ್ದರು. ಆದರೆ ಈಗ ಅಧಿಕಾರ ಮತ್ತು ಶ್ರೀಮಂತಿಕೆಯ ಓಲೈಕೆ ಹೆಚ್ಚಾಗಿದೆ. ದೊಡ್ಡಹುದ್ದೆ ಮತ್ತು ಸಂಪತ್ತಿನ ಕ್ರೋಢೀಕರಣದಲ್ಲಿ ಪೈಪೋಟಿ. ತೃಪ್ತಿ ಎಂಬುದೇ ಇಲ್ಲ. ಮತ್ತಷ್ಟು ಬೇಕೆಂಬ ದಾಹ. ದೇಶದಲ್ಲಿ ಸಾಕಷ್ಟು ಅಭಿವೃದ್ಧಿಕಾರ್ಯಗಳು ಆದರೂ ಜನರ ದಾಹದಿಂದಾಗಿ ದೇಶ ಹಿಂದುಳಿದಿದೆ ಎಂದರು.
ನೂರಾರು ಹಗರಣಗಳು ಕೋಟಿ ಕೋಟಿ ಹಣದ ಲೂಟಿ ನಿರಂತರವಾಗಿ ನಡೆದಿದೆ. ೫೦ರ ದಶಕದಲ್ಲಿ ೫೨ಲಕ್ಷರೂ.ಗಳ ಜೀಪ್ ಹಗರಣ ಗಮನ ಸೆಳೆದಿತ್ತು. ನಂತರ ೬೪ಕೋಟಿರೂ.ಗಳ ಬೋಪೋರ್ಸ್ ಹಗರಣ, ತದನಂತರ ೭೦,೦೦೦ಕೋಟಿರೂ.ಗಳ ಕಾಮನ್ವೆಲ್ತ್ ಹಗರಣ, ೧.೭೬ಲಕ್ಷಕೋಟಿಯ ೨ಜಿ ಹಗರಣ, ರೆಫೆಲ್ ಹಗರಣದಲ್ಲಿ ೨ಲಕ್ಷಕೋಟಿಯ ಲೂಟಿ ನಡೆದಿದೆ. ಹಿಂದೆ ಪ್ರಧಾನಿಯಾಗಿದ್ದ ರಾಜೀವಗಾಂಧಿ ಮೈಸೂರಿನ ಸಮಾರಂಭವೊಂದರಲ್ಲಿ ಅಭಿವೃದ್ಧಿಕಾರ್ಯಕ್ಕಾಗಿ ಸರ್ಕಾರ ೧ರೂ.ವ್ಯಯಿಸಿದರೆ ೧೫ಪೈಸೆ ಮಾತ್ರ ಜನರಿಗೆ ತಲುಪುತ್ತದೆ ಎಂದಿದ್ದರು ಎಂದು ಸ್ಮರಿಸಿದ ನ್ಯಾ.ಸಂತೋಷಹೆಗ್ಡೆ ದುರಾಸೆಗೆ ಮದ್ದಿಲ್ಲ, ಕಾನೂನುನಿಗೆ ಹೆದರುವುದಿಲ್ಲ ಎಂದು ವಿಷಾದಿಸಿದರು.
ವಿದ್ಯಾಸಂಸ್ಥೆಯ ರೂವಾರಿ ‘ಸಿರಿವಾಸೆಯ ಸಿರಿಗಂಧ ಎಸ್.ಬಿ.ಮುಳ್ಳೇಗೌಡ’ ಮಲೆನಾಡು ಐಸಿರಿಯ ವಿಶೇಷ ಸಂಚಿಕೆಯನ್ನು ಇದೇ ಸಂದಭದಲ್ಲಿ ಲೋಕಾರ್ಪಣೆಗೊಳಿಸಿದ ಸಂತೋಷಹೆಗ್ಡೆ, ಮಕ್ಕಳಿಗೆ ನೀತಿ ಪಾಠವನ್ನು ಹೇಳಬೇಕು. ತೃಪ್ತಿ ಪರೋಪಕಾರದಂತಹ ಮೌಲ್ಯಗಳನ್ನು ಪರಿಚಯಿಸಬೇಕೆಂದರು.
ರಾಜ್ಯಸಭಾಸದಸ್ಯ ಜಯರಾಮರಮೇಶ್ ಶುಭಹಾರೈಸಿ ಸುವರ್ಣಮಹೋತ್ಸವ ಸ್ಮರಣಸಂಚಿಕೆ ಲೋಕಾರ್ಪಣೆ ಗೊಳಿಸಿದರು.
ಸಮಾರಂಭದ ಅಧ್ಯಕ್ಷತೆಹಿಸಿದ್ದ ವಿದ್ಯಾಸಂಸ್ಥೆಯ ಅಧ್ಯಕ್ಷ ಬಿ.ಎಂ.ಭೋಜೇಗೌಡ ೫೦ವರ್ಷ ಶಾಲೆಕ್ರಮಿಸಿದ ಹಾದಿಪರಿಚಯಿಸಿದರು. ಶಿರಿವಾಸೆ ಮಂಡಲಪಂಚಾಯಿತಿ ಪ್ರಥಮ ಅಧ್ಯಕ್ಷರಾಗಿದ್ದ ಎಂ.ಎಲ್.ಮೂರ್ತಿ ಮಾತನಾಡಿ ಈ ಭಾಗದ ಶೈಕ್ಷಣಿಕ ಕ್ರಾಂತಿಗೆ ವಿವೇಕಾನಂದ ವಿದ್ಯಾಸಂಸ್ಥೆಯ ಕೊಡುಗೆ ಅಪಾರ ಎಂದರು.
ಹೊರನಾಡು ಕ್ಷೇತ್ರ ಧರ್ಮಕರ್ತ ಡಾ.ಭೀಮೇಶ್ವರಜೋಷಿ ಎಸ್.ಬಿ.ಮುಳ್ಳೇಗೌಡರ ಕಂಚಿನಪುತ್ಥಳಿಯನ್ನು ಅನಾವರಣಗಳಿಸಿ ಸಮಾರಂಭದ ಸಾನಿಧ್ಯವಹಿಸಿ ಮಾತನಾಡಿ ಆಚಾರಕ್ಕೆ ಅರಸಾಗಿ, ನೀತಿಗೆಪ್ರಭುವಾಗಿ, ಮಾತಿನಲ್ಲಿ ಚೂಡಾಮಣಿಯಾಗಿ, ಲೋಕಕ್ಕೆ ಬೆಳಕಾಗಿ ಬಾಳಿ ಬದುಕಿದವರ ಸ್ಮರಣೆ ಬೆಳೆಯುವ ಯುವಜನರಿಗೆ ಆದರ್ಶಪ್ರಾಯ ಎಂದರು.
ಶಿಕ್ಷಣದ ಜೊತೆಗೆ ಆರೋಗ್ಯ, ಸಾರಿಗೆ, ದೂರಸಂಪರ್ಕ, ಸಹಕಾರ, ವಿದ್ಯುಚ್ಛಕ್ತಿ, ರಸ್ತೆ ಸೌಕರ್ಯ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಶ್ರಮಿಸಿ ಬದಲಾವಣೆಯ ಹರಿಕಾರರಾಗಿ ಜನಮಾನಸದಲ್ಲಿ ಉಳಿದಿರುವ ಮುಳ್ಳೇಗೌಡರು, ಯೋಗ ಮತ್ತು ಯೋಗ್ಯತೆ ಎರಡನ್ನೂ ಸಂಪಾದಿಸಿ ವ್ಯಕ್ತಿ ಶಕ್ತಿಯಾಗಿ ರೂಪುಗೊಂಡವರು. ಯಶೋಗಾಥೆ ಸಾಕ್ಷೀಕರಿಸುವ ವ್ಯವಸ್ಥೆಯಿಂದ ಸಮಾಜದಲ್ಲಿ ಸಂಸ್ಕಾರ ಪ್ರೇರೇಪಣೆಗೊಳ್ಳುತ್ತದೆ. ಅಂತರಂಗ ಮೆಚ್ಚಿಸುವ ಬದುಕಿಗೆ ಮಾದರಿಯಾಗುತ್ತದೆ ಎಂದು ಡಾ.ಭೀಮೇಶ್ವರಜೋಷಿ ನುಡಿದರು.
ಸಾಧಕರಾದ ಶಾರದಮ್ಮ ಮುಳ್ಳೇಗೌಡ, ಮಹಾಚಂದ್ರ ಪ್ರತಿಷ್ಠಾನದ ರವಿಶಂಕರ್ ದಂಪತಿಗಳು, ಕೆ.ವಿ.ಬಸವನಗೌಡ, ಸಂಸ್ಥೆಯ ನಿರ್ದೇಶಕ ಅಣ್ಣೆಗೌಡ, ವೈಶ್ಯಾಹಾಸ್ಟೆಲ್ ಮುಖ್ಯಸ್ಥ ಕೆ.ಎಸ್.ರಮೇಶ್, ಬಿ.ಎಂ.ಭೋಜೇಗೌಡ, ನಿಕಟಪೂರ್ವ ಮುಖ್ಯಶಿಕ್ಷಕಿ ಅನುಸೂಯವಿಶ್ವನಾಥ್ರನ್ನು ಸನ್ಮಾನಿಸಲಾಯಿತು.
ಎಸ್.ಎಂ.ಪ್ರಸನ್ನಕುಮಾರ್ ಸ್ವಾಗತಿಸಿ, ಬಸವರಾಜು ವಂದಿಸಿದರು. ನಿರ್ದೇಶಕ ಬಿ.ಎ.ಶಿವಶಂಕರ್ ಕಾರ್ಯಕ್ರಮ ನಿರೂಪಿಸಿದರು. ಖ್ಯಾತಹಿನ್ನಲೆಗಾಯಕ ರಾಜೇಶ್ಕೃಷ್ಣನ್, ಡಾ.ಶಮಿತಾ ಮಲೆನಾಡು, ಗಿಚ್ಚಿಗಿಲಿಗಿಲಿಯ ರಾಘವೇಂದ್ರ ತಂಡದಿಂದ ಸಂಗೀತಸಂಜೆ ಆಕರ್ಷಕವಾಗಿತ್ತು. ಸ್ವಾಗತಸಮಿತಿ ಸಂಚಾಲಕ ಬಿ.ನೀ.ವಿಶ್ವನಾಥ್ ಸಾಂಸ್ಕೃತಿಕ ಸಂಜೆ ನಿರೂಪಿಸಿದರು.
Golden Jubilee Celebration of Vivekananda Educational Institute Shirvase