ಚಿಕ್ಕಮಗಳೂರು: ತಾಲ್ಲೂಕು ಮುಗುಳುವಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ನಾಲ್ಕನೇ ಬಾರಿಗೆ ಎಂ.ಎಸ್.ನಿರಂಜನ್, ಉಪಾಧ್ಯಕ್ಷರಾಗಿ ಬಲರಾಮ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಇಂದು ನಡೆದ ಪತ್ತಿನ ಸಹಕಾರ ಸಂಘದ ಚುನಾವಣೆಯಲ್ಲಿ ಬಿಜೆಪಿಯ ಒಮ್ಮತದ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಮೇಲ್ಕಂಡ ಈ ಇಬ್ಬರನ್ನು ಚುನಾವಣಾಧಿಕಾರಿ ಸುಮ.ಜಿ.ಪಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆಂದು ಘೋಷಿಸಿದರು.
ನೂತನ ಅಧ್ಯಕ್ಷರು ಮತ್ತು ಉಪಾಧ್ಯಕ್ಷರನ್ನು ಅಭಿನಂದಿಸಿ ಮಾತನಾಡಿದ ಬಿಜೆಪಿ ರೈತ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಹೆಚ್.ಸಿ. ಕಲ್ಮರುಡಪ್ಪ ಸಹಕಾರಿ ಕ್ಷೇತ್ರದಲ್ಲಿ ಸರ್ವರನ್ನೂ ಒಗ್ಗೂಡಿಸುವ ಕೆಲಸ ಅದು ಕೃಷಿಪತ್ತಿನಲ್ಲಿದೆ. ಇದನ್ನು ಕೇಂದ್ರಸ್ಥಾನದಲ್ಲಿದ್ದುಕೊಂಡು ಶ್ರಮಿಸುತ್ತಿರುವ ಎಂ.ಎಸ್. ನಿರಂಜನ್ರವರು ನಾಲ್ಕನೇ ಬಾರಿಗೆ ಆಯ್ಕೆಯಾಗಿ ಶ್ರಮ ವಹಿಸುತ್ತಿರುವ ಅವರ ತಂಡ ರೈತರಿಗೆ ಅನುಕೂಲ ಮಾಡುವ ಉದ್ದೇಶ ಹೊಂದಿದ್ದಾರೆ ಎಂದರು.
ಪತ್ತಿನ ಸಹಕಾರ ಸಂಘದಲ್ಲಿ ನಂಬಿಕೆ ಬಹಳ ಮುಖ್ಯವಾಗಿದ್ದು, ಇದರ ವ್ಯಾಪ್ತಿಗೆ ಒಳಪಡುವ ಎಲ್ಲಾ ಗ್ರಾಮಗಳ ನಂಬಿಕೆಯನ್ನು ಈ ತಂಡ ಉಳಿಸಿಕೊಂಡಿದೆ, ನೂತನವಾಗಿ ಆಯ್ಕೆಯಾಗಿರುವ ಪದಾಧಿಕಾರಿಗಳ ತಂಡಕ್ಕೆ ಅಭಿನಂದನೆ ಸಲ್ಲಿಸಿದರು.
ಮುಗುಳುವಳ್ಳಿ ಕೃಷಿ ಪತ್ತಿನ ಸಹಕಾರ ಸಂಘದ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳಲ್ಲಿ ಅತೀ ಹೆಚ್ಚು ರೈತರು ತರಕಾರಿ ಬೆಳೆಯುತ್ತಿದ್ದು, ಅವರ ಮನವೊಲಿಸಿ ನಿಶ್ಚಿತ ಠೇವಣಿ ಸಂಗ್ರಹಿಸುವ ಮೂಲಕ ಈ ಪತ್ತಿನ ಸಹಕಾರ ಸಂಘವನ್ನು ಆರ್ಥಿಕ ಸದೃಢಗೊಳಿಸುವ ನಿಟ್ಟಿನಲ್ಲಿ ಅಭಿವೃದ್ಧಿ ಸಾಧಿಸಿ ಎಂದು ಕಿವಿಮಾತು ಹೇಳಿದರು.
ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಸೋಮಣ್ಣ ಮಾತನಾಡಿ, ಎಂ.ಎಸ್. ನಿರಂಜನ್ರವರು ಡಿಸಿಸಿ ಬ್ಯಾಂಕಿನ ನಿರ್ದೇಶಕರಾಗಿ ಸಾಕಷ್ಟು ರೈತರಿಗೆ ಸಾಲಸೌಲಭ್ಯ ನೀಡುವಲ್ಲಿ ಮುಂಚೂಣಿಯಲ್ಲಿದ್ದು ಮುಗುಳುವಳ್ಳಿ ಪತ್ತಿನ ಸಹಕಾರ ಸಂಘದಲ್ಲಿಯೂ ಅತೀ ಹೆಚ್ಚು ರೈತರು ಸಾಲಸೌಲಭ್ಯ ಪಡೆಯಲು ಕಾರಣೀಭೂತರಾಗಿದ್ದಾರೆ ಎಂದು ಶ್ಲಾಘಿಸಿದರು.
ಜನಪರ, ರೈತರ ಬಡವರ ಪರವಾಗಿ ಕೆಲಸ ಮಾಡಲು ನೂತನ ಪದಾಧಿಕಾರಿಗಳು ಶ್ರಮಿಸಲಿ ಎಂದು ಶುಭ ಹಾರೈಸಿದರು. ನೂತನ ಅಧ್ಯಕ್ಷ ಎಂ.ಎಸ್. ನಿರಂಜನ್ ಮಾತನಾಡಿ, ಗುಡಿಯಲ್ಲಿ ಒಂದು ಮೂರ್ತಿ ಸಿದ್ದವಾಗಬೇಕಾದರೆ ಸಾವಿರಾರು ಉಳಿಪೆಟ್ಟು ತಿಂದಾಗ ಮಾತ್ರ ಸುಂದರ ಮೂರ್ತಿಯಾಗಿ ಪೂಜೆಗೆ ಪಾತ್ರರಾಗುವಂತೆ ನನ್ನನ್ನು ಇಂದು ನಾಲ್ಕನೇ ಬಾರಿಗೆ ಅವಿರೋಧ ಆಯ್ಕೆ ಮಾಡಿರುವ ಎಲ್ಲಾ ಸಹಕಾರಿ ಬಂಧುಗಳಿಗೆ ತುಂಬು ಹೃದಯದ ಧನ್ಯವಾದಗಳನ್ನು ಅರ್ಪಿಸಿದರು.
ಹಿರಿಯರ ಮಾರ್ಗದರ್ಶನದಲ್ಲಿ ಸಮಾಜ ಸೇವೆಯನ್ನು ಮಾಡುತ್ತಿದ್ದು, ಸದಾ ನನ್ನೊಂದಿಗೆ ಇದ್ದು, ಹಗಲಿರುಳು ನನ್ನ ತಂಡ ಶ್ರಮಿಸುತ್ತಿದೆ. ಅಧಿಕಾರ ಶಾಶ್ವತವಲ್ಲ, ಸಿಕ್ಕಿರುವ ಅಧಿಕಾರವಧಿಯಲ್ಲಿ ಮಾಡಿದ ಕೆಲಸ ಜನಮಾನಸದಲ್ಲಿ ಉಳಿಯಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಡಿಸಿಸಿ ಬ್ಯಾಂಕ್ ನಿರ್ದೇಶಕರುಗಳಾದ ಬಸವರಾಜು, ಪರಮೇಶ್ವರಪ್ಪ, ಉಪಾಧ್ಯಕ್ಷರಾದ ಬಲರಾಮ ಬಿಜೆಪಿ ಮುಖಂಡರುಗಳಾದ ದಿನೇಶ್, ರಘುನಂದನ, ಶಿವಣ್ಣ, ಉಮೇಶ್, ಸಿಇಓ ಶಿವಕುಮಾರ್, ನಿರ್ದೇಶಕರುಗಳಾದ ನಳಿನಾಕ್ಷಿ ಧರ್ಮರಾಜು, ರವಿ, ಧರ್ಮಯ್ಯ, ಪ್ರದೀಪ್ ಕುಮಾರ ಎಂ.ಕೆ,ನವೀನ ಎಂ.ಜೆ, ತಮ್ಮೆಗೌಡ, ರಮೇಶ್ ಎಂ.ಸಿ, ಸಿದ್ಧಮ್ಮ, ಗಂಗಣ್ಣ ಉಪಸ್ಥಿತರಿದ್ದರು.
M.S. Niranjan elected unopposed as President of Muguluvalli Agricultural Cooperative Society