ಚಿಕ್ಕಮಗಳೂರು: ತಾಲ್ಲೂಕು ಲಕ್ಯಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಡಿ.ಎಂ ಕೃಷ್ಣೇಗೌಡ, ಉಪಾಧ್ಯಕ್ಷರಾಗಿ ಜಯಣ್ಣ ಅವಿರೋಧ ಆಯ್ಕೆಯಾದರು.
ಇಂದು ನಡೆದ ಸಹಕಾರ ಸಂಘದ ಚುನಾವಣೆಯಲ್ಲಿ ಚುನಾವಣಾಧಿಕಾರಿ ನೂತನ ಪದಾಧಿಕಾರಿಗಳ ಆಯ್ಕೆಯನ್ನು ಘೋಷಿಸಿ ನಂತರ ಅಧ್ಯಕ್ಷರು, ಉಪಾಧ್ಯಕ್ಷರನ್ನು ಅಭಿನಂದಿಸಿ ಮಾತನಾಡಿದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೆಚ್.ಪಿ ಮಂಜೇಗೌಡ ಮಾತನಾಡಿ ಸಹಕಾರ ಸಂಘದಲ್ಲಿ ರಾಜಕೀಯ ಬೆರಸದೆ ಎಲ್ಲರು ಒಗ್ಗಟ್ಟಿನಿಂದ ರೈತರ ಸೇವೆ ಮಾಡಲು ಶ್ರಮಿಸಬೇಕೆಂದು ಹೇಳಿದ ಅವರು ಸರ್ಕಾರದಿಂದ ದೊರೆಯುವ ಅನುದಾನವನ್ನು ಪಡೆದು ಶೂನ್ಯ ಬಡ್ಡಿ ದರದಲ್ಲಿ ರೈತರಿಗೆ ಸಾಲ ಸೌಲಭ್ಯ ನೀಡಲು ಮುಂದಾಗಬೇಕೆಂದು ತಿಳಿಸಿದರು.
ಸಹಕಾರ ಸಂಘದಲ್ಲಿ ಸರ್ವರನ್ನು ವಿಶ್ವಾಸಕ್ಕೆ ಪಡೆದು ಜನಪರ ಆಡಳಿತ ಕೊಡುವಲ್ಲಿ ಮುಂದಾಗಬೇಕು, ಕೆಲವರು ವೈಯಕ್ತಿಕ ವಿಚಾರದಲ್ಲಿ ರಾಜಕೀಯ ದ್ವೇಷ ನೆಡೆಸುವುದರಿಂದ ಸಹಕಾರ ಸಂಘಗಳು ನಾಶವಾಗುತ್ತದೆ ಇದನ್ನು ಅವರು ಅರಿಯದೆ ಮಾಡುತ್ತಿರುವ ಮೂರ್ಖತನ ಎಂದು ಆರೋಪಿಸಿದರು.
ಲಕ್ಯಾ ಜಿಲ್ಲಾ ಪರಿಷತ್ ಕ್ಷೇತ್ರದ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಡಿ.ಹೆಚ್ ಮರೀಗೌಡರು ಈ ಭಾಗದಲ್ಲಿ ಜನಪರ ಕೆಲಸ ಮಾಡುವ ಮೂಲಕ ಜನ ಮಾನಸದಲ್ಲಿ ಉಳಿದಿದ್ದಾರೆ, ಇಂದು ಅವರ ಪುತ್ರ ಡಿ.ಎಂ ಕೃಷ್ಣೇಗೌಡ ಅಧ್ಯಕ್ಷರಾಗಿದ್ದು ತಂದೆಯವರಷ್ಟೇ ಹೆಸರು ಸಂಪಾದಿಸುವ ನಿಟ್ಟಿನಲ್ಲಿ ಜನಪರ ಕೆಲಸ ಮಾಡಲಿ ಎಂದು ಶುಭ ಹಾರೈಸಿದರು.
ರಾಜ್ಯ ಸರ್ಕಾರದಲ್ಲಿ ಮುಖ್ಯ ಮಂತ್ರಿ ಸಿದ್ಧರಾಮಯ್ಯ, ಉಪ ಮುಖ್ಯ ಮಂತ್ರಿ ಡಿ.ಕೆ.ಶಿವಕುಮಾರ್, ಸಹಕಾರ ಸಚಿವ ರಾಜಣ್ಣ ಇವರುಗಳು ನೇರವಾಗಿ ರೈತರಿಗೆ ನೆರವಾಗಲು ಸಾಲ ಸೌಲಭ್ಯ ನೀಡಲು ಮುಂದಾಗಿದ್ದಾರೆ, ಶಾಸಕ ಹೆಚ್.ಡಿ ತಮ್ಮಯ್ಯನವರ ಮಾರ್ಗದರ್ಶನದಲ್ಲಿ ಉತ್ತಮ ಕೆಲಸ ಮಾಡುವಂತೆ ನೂತನ ಪದಾಧಿಕಾರಿಗಳಿಗೆ ಶುಭಕೋರಿದರು.
ಅಧಿಕಾರ ಶಾಶ್ವತವಲ್ಲ ಸಿಕ್ಕಿರುವ ಅವಧಿಯಲ್ಲಿ ಜನಪರ ಕಾರ್ಯ ಕೈಗೊಳ್ಳಿ ಎಂದು ಸಲಹೆ ನೀಡಿದ ಅವರು ಮುಂದಿನ ಜಿಪಂ, ತಾಪಂ ಚುನಾವಣೆಯಲ್ಲಿ ಪಕ್ಷದ ಉತ್ತಮ ಅಭ್ಯರ್ಥಿಗಳನ್ನು ಆಯ್ಕೆ ಮಾಡುವಂತೆ ಕಿವಿಮಾತು ಹೇಳಿದರು.
ನೂತನ ಅಧ್ಯಕ್ಷ ಡಿ.ಎಂ ಕೃಷ್ಣೇಗೌಡ ಮಾತನಾಡಿ ನಮ್ಮನ್ನು ಆಯ್ಕೆಮಾಡಿರುವ ಎಲ್ಲಾ ಸದಸ್ಯರುಗಳಿಗೆ ತುಂಬು ಹೃದಯದ ಧನ್ಯವಾದಗಳನ್ನು ಸಲ್ಲಿಸಿದ ಅವರು ಪ್ರಾಮಾಣಿಕವಾಗಿ ಒಗ್ಗಟ್ಟಿನಿಂದ ಕೆಲಸ ಮಾಡುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ನಿರ್ದೇಶಕರುಗಳಾದ ಬಸವರಾಜು, ಕೃಷ್ಣಶೆಟ್ಟಿ, ಜಗದೀಶ್, ಮರಿಗೌಡ, ಈಶ್ವರಯ್ಯ, ಗೋಪಾಲಸ್ವಾಮಿ, ಲೋಲಾಕ್ಷಿ, ನಾಗರತ್ನಮ್ಮ, ಕೃಷ್ಣಮೂರ್ತಿ, ಕಾಂಗ್ರೆಸ್ ಮುಖಂಡರುಗಳಾದ ಭರತೇಶ್, ಸಿದ್ದೇಶ್, ಶಶಿಕುಮಾರ್, ಮೊಹಮ್ಮದ್ ಹನೀಫ್, ನಾಗಣ್ಣ, ಪ್ರಕಾಶ್ ರೈ, ಕಾಂತರಾಜ್, ರಾಮೇಗೌಡ, ಲಕ್ಕೇಗೌಡ, ಮಲ್ಲೇಗೌಡ, ಮಲ್ಲಿಕಾರ್ಜುನ, ನಾಗೇಶ್, ಲಕ್ಯಾ ಜಗದೀಶ್, ಮತ್ತಿತರರು ಉಪಸ್ಥಿತರಿದ್ದರು.
D.M. Krishnagowda elected as new president of Lakya Agricultural Cooperative Society