ಚಿಕ್ಕಮಗಳೂರು: ಸರ್ವರಿಗೂ ಸಾಮಾಜಿಕ, ಆರ್ಥಿಕ, ರಾಜಕೀಯ ನ್ಯಾಯವನ್ನು, ಸ್ಥಾನಮಾನ ಮತ್ತು ಅವಕಾಶಗಳ ಸಮಾನತೆಯನ್ನು ಹಾಗೂ ವಿಚಾರ, ಅಭಿವ್ಯಕ್ತಿ ಜೊತೆಗೆ ತಮ್ಮ ಇಚ್ಚೆಯ ಧರ್ಮವನ್ನು ಪಾಲಿಸುವ ಸ್ವಾತಂತ್ರ್ಯವನ್ನು ನೀಡಿ ಸರ್ವೇಜನೋ ಸುಖಿನೋ ಭವಂತು ಎಂದು ಹೇಳುವ ಮಾತಿನ ತಾತ್ವಿಕ ರೂಪವೇ ಭಾರತದ ಸಂವಿಧಾನ ಎಂದು ರಾಜ್ಯ ಬಿಜೆಪಿ ಉಪಾಧ್ಯಕ್ಷ ಎನ್. ಮಹೇಶ್ ಹೇಳಿದರು.
ಸಂವಿಧಾನ ಸಮ್ಮಾನ್ ಅಭಿಯಾನದ ಅಂಗವಾಗಿ ವಿಧಾನ ಪರಿಷತ್ ಶಾಸಕ ಸಿ.ಟಿ ರವಿ ನಿವಾಸದಲ್ಲಿ ಇಂದು ಆಯೋಜಿಸಿದ್ದ ಭೀಮ ಸಂಗಮ ಕಾರ್ಯಕ್ರಮದಲ್ಲಿ ಡಾ. ಬಿ.ಆರ್ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ವಿಕಾಸ್ ಪುತ್ತೂರು ಬರೆದಿರುವ ಸಂವಿಧಾನ ಬದಲಾಯಿಸಿದ್ದು ಯಾರು ಎಂಬ ಪುಸ್ತಕವನ್ನು ಬಿಡುಗಡೆ ಮಾಡುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ಭಾರತವು ಸರ್ವಧರ್ಮಗಳನ್ನು ಹೊಂದಿರುವ ಜಾತ್ಯಾತೀತ ರಾಷ್ಟ್ರ. ಇಲ್ಲಿ ಹಿಂದುಗಳು ಭಗವತ್ ಗೀತೆಯನ್ನು, ಮುಸ್ಲಿಂರು ಕುರಾನ್, ಕ್ರೈಸ್ತರು ಬೈಬಲ್ ಹಾಗೂ ಬೌದ್ಧರು ಧಮ್ಮವನ್ನು ಸೇರಿದಂತೆ ಎಲ್ಲ ಧರ್ಮಿಯರು ತಮ್ಮ ತಮ್ಮ ಧರ್ಮಗ್ರಂಥಗಳನ್ನು ಓದಿ ಅನುಸರಿಸುತ್ತಾರೆ. ಆದರೆ ಸರ್ವ ಧರ್ಮಿಯರು ಮೆಚ್ಚುವ, ಭಾರತದ ಪ್ರತಿಯೊಬ್ಬ ಪ್ರಜೆಯು ತಿಳಿದು ಅನುಸರಿಸಬೇಕಾದ ಮಹಾ ಗ್ರಂಥಾ ಭಾರತೀಯ ಸಂವಿಧಾನ. ಸರ್ವರಿಗೂ ಅನುಕೂಲಕರವಾದ ಸಂವಿಧಾನವನ್ನು ರಚಿಸಿರುವ ಭಾರತ ರತ್ನ, ಸಂವಿಧಾನ ಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ್ ಅವರಲ್ಲಿ ದೈವತ್ವ ಅಡಗಿದೆ ಎಂದರು.
ಸಮಾಜದ ಕೆಳಸ್ಥರ ಕುಟುಂಬದಲ್ಲಿ ಜನಿಸಿ ಬಾಲ್ಯದಲ್ಲೇ ಜಾತಿ ನಿಂದನೆಯನ್ನು ಅನುಭವಿಸಿ. ಹೋರಾಟದ ಮೂಲಕ ಶಿಕ್ಷಣ ಪಡೆದು ವಿಶ್ವವೆ ಮೆಚ್ಚುವ ಮಹಾ ಮನಾವತವಾದಿಯಾದರು. ಆದರೂ ಸಂವಿಧಾನದಲ್ಲಿ ತಮ್ಮ ಜಾತಿ ನಿಂದನೆ ಮಾಡಿದ ಯಾವುದೇ ಮೇಲ್ವರ್ಗದವರ ವಿರುದ್ಧ ದ್ವೇಷ ಸಾರುವ ಕಾಯ್ದೆ ಕಾನೂನುಗಳು ರಚಿಸದೆ ಪ್ರತಿಯೊಬ್ಬರೂ ಗೌರವಿಸುವ ರೀತಿಯ ಸಮಾನತೆಯ ಸಂವಿಧಾನವನ್ನು ರಚಿಸಿ ನಮಗೆ ನಿಡಿದ್ದಾರೆ.
ಅಂಬೇಡ್ಕರ್ ಈ ದೇಶದ ಆಸ್ತಿ ಪ್ರತಿಯೊಬ್ಬರು ಅವರ ತತ್ವ ಸಿದ್ಧಾಂತಗಳನ್ನು ಅನುಸರಿಸಬೇಕು ಎಂದ ಅವರು ಸಂವಿಧಾನದ ಮೂಲ ಆಶಯಗಳ ಪೂರಕವಾಗಿ ಭಿಮ ಸಂಗಮ ಕಾರ್ಯಕ್ರಮವನ್ನು ಆಯೋಜನೆ ಮಾಡಿ ಸಮಾನತೆಯ ಶಿಕ್ಷಣವನ್ನು ಪ್ರತಿಯೊಬ್ಬರಿಗೂ ತಿಳಿಸುವ ಉದ್ದೇಶ ಹೊಂದಲಾಗಿದೆ. ಎಲ್ಲರೂ ಸಹೋದರತ್ವ ಗುಣಗಳನ್ನು ಅನುಸರಿಸಿ ದೇಶದ ಐಕ್ಯತೆಯನ್ನು ರಕ್ಷಿಸೋಣ ಎಂದು ತಿಳಿಸಿದರು.
ವಿಧಾನ ಪರಿಷತ್ ಶಾಸಕ ಸಿ.ಟಿ ರವಿ ಮಾತನಾಡಿ ಅಂಬೇಡ್ಕರ್ ಅವರ ಜೀವನ ಸಾಧನೆಗಳನ್ನು ಸಂಕ್ಷಿಪ್ತವಾಗಿ ನಿಮಿಷಗಳಲ್ಲಿ ವಿವರಿಸುವುದು ಅಸಾಧ್ಯ ಅವರ ಬದುಕಿನ ರೀತಿ ಪ್ರತಿಯೊಬ್ಬರಿಗೂ ಮಾರ್ಗದರ್ಶನವಾಗಿದೆ. ನಾವು ರಾಜಕಾರಣ ಆಯ್ಕೆ ಮಾಡಿರುವುದು ಕೇವಲ ಅಧಿಕಾರದ ಆಸೆಗಲ್ಲ. ಅಧಿಕಾರ ಒಂದು ಸಾಧನ ಮಾತ್ರ. ಸಮಾಜದಲ್ಲಿ ಪರಿವರ್ತನೆ ಹಾಗೂ ದೇಶದ ಉತ್ತಮ ಅಭಿವೃದ್ಧಿ ಕಾಣುವುದು ಮುಖ್ಯ ಉದ್ದೇಶವಾಗಿದೆ. ಆದರೆ ಇಂದಿಗೂ ಕೆಲ ವ್ಯಕ್ತಿಗಳು ಭಾರತೀಯ ಜನತ ಪಾರ್ಟಿಯ ವಿರುದ್ಧ ಸಂವಿಧಾನ ವಿರೋಧಿಗಳು, ಅಂಬೇಡ್ಕರ್ ವಿರೋಧಿಗಳು, ನೀವು ಮನುವಾದಿಗಳು, ಜಾತಿವಾದಿಗಳು ಜಾತಿಯತೆಯನ್ನು ಪ್ರೋತ್ಸಾಹಿಸುತ್ತೆವೆಂಬ ಅನೇಕ ಆರೋಪಗಳನ್ನು ಸಾರ್ವಜನಿಕವಾಗಿ ಹಾಗೂ ಖಾಸಗಿಯಾಗಿಯೂ ಹೇಳುತ್ತಿದ್ದಾರೆ.
ಭಾರತೀಯ ಜನತ ಪಾರ್ಟಿಯು ಪ್ರತಿಯೊಬ್ಬರಲ್ಲೂ ಸಹೋದರತ್ವ, ಸಾಮರಸ್ವವನ್ನು ಬೆಳೆಸಲು ಸಾಮಾಜಿಕ ಪರಿವರ್ತನೆ ತರುವ ಉದ್ಧೇಶದಿಂದ ಕೇವಲ ಸಾರ್ವಜನಿಕವಾಗಿ ಅಲ್ಲದೇ ಮನೆಗಳಲ್ಲಿ ಈ ರೀತಿಯ ಕಾರ್ಯಕ್ರಮಗಳನ್ನು ಆಯೋಜಿಸಲು ನಿರ್ಧರಿಸಿ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ. ಇಂತಹ ಕಾರ್ಯಕ್ರಮಗಳು ಜಾತಿಯತೆಯ ಬೇಲಿಯನ್ನು ಒಡೆದು ಹಾಕಲು ಉತ್ತಮ ಮಾರ್ಗವಾಗಿದೆ ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ದೇವರಾಜ್ ಶೆಟ್ಟಿ ಮಾತನಾಡಿ. ಪಕ್ಷದಲ್ಲಿ ಕಾರ್ಯನಿರ್ವಹಿಸುವ ಪ್ರತಿಯೊಬ್ಬ ಕಾರ್ಯಕರ್ತನು ಯಾವುದೇ ತಾರತಮ್ಯವಿಲ್ಲದೇ ಸೋದರತ್ವ ಗುಣದಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ದೇಶದ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾದ ಜೆ.ಪಿ ನಡ್ಡರವರು ದೇಶದ ಪ್ರತಿಯೊಬ್ಬ ಪ್ರಜೆಯು ಸಹೋದರತ್ವ ಗುಣದಿಂದ ಒಂದು ಕುಟುಂಬದ ರೀತಿಯಲ್ಲಿ ಜೀವಿಸಬೇಕು ಎಂದು ಉದ್ದೇಶದಿಂದ ದೇಶದುದ್ದಗಲಕ್ಕು ಸಂವಿಧಾನ ಸಮ್ಮಾನ್ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಸಂವಿಧಾನದ ಅಡಿಯಲ್ಲಿ ಪ್ರತಿಯೊಬ್ಬರು ಜೀವಿಸುತ್ತಿದ್ದೇವೆ ಅದರ ಮಹತ್ವವನ್ನು ಎಲ್ಲರಿಗೂ ಸಾರುವ ಹಾಗೂ ಒಗ್ಗಟ್ಟಿನ ಬಲವನ್ನು ಪ್ರದರ್ಶಿಸುವ ಮಹದಾಸೆಯಿಂದ ಜಿಲ್ಲೆಯಲ್ಲಿ ೧೦೦ಕ್ಕು ಅಧಿಕ ಕಾರ್ಯಕ್ರಮಗಳನ್ನು ಮಾಡಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ಕೆ.ಪಿ ವೆಂಕಟೇಶ್, ವಿಜಯ್ ಕುಮಾರ್, ಕಲ್ಮುರುಡಪ್ಪ, ಪುಷ್ಪರಾಜ್ ಹಾಗೂ ಇತರರು ಉಪಸ್ಥಿತರಿದ್ದರು.
The Indian Constitution is the great scripture that every citizen of India must follow.