ಚಿಕ್ಕಮಗಳೂರು: ಪಶು, ಪಕ್ಷಿಗಳೊಂದಿಗಿನ ಒಡನಾಟವು ಮಾನಸಿಕ ನೆಮ್ಮದಿಯನ್ನು ನೀಡುತ್ತದೆ. ಪ್ರತಿಯೊಬ್ಬರು ಪ್ರಾಣಿ, ಪಕ್ಷಿಗಳನ್ನು ಪ್ರೀತಿಸಿ ಅವುಗಳನ್ನು ಸಂರಕ್ಷಿಸಬೇಕು ಎಂದು ಚಿಕ್ಕಮಗಳೂರು ವಿಧಾನ ಸಭಾ ಕ್ಷೇತ್ರದ ಶಾಸಕ ಹೆಚ್.ಡಿ ತಮ್ಮಯ್ಯ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಪಶುಪಾಲನಾ ಮತ್ತು ಪಶು ವೈದಕೀಯ ಸೇವಾ ಇಲಾಖೆ ಚಿಕ್ಕಮಗಳೂರು, ಕರ್ನಾಟಕ ಪಶುವೈದಕೀಯ ಸಂಘ(ರಿ), ಚಿಕ್ಕಮಗಳೂರು ಜಿಲ್ಲೆ ಹಾಗೂ ಚಿಕ್ಕಮಗಳೂರು ಕೆನಲ್ ಕ್ಲಬ್ ವತಿಯಿಂದ ಚೈತ್ರೋತ್ಸವದ ಅಂಗವಾಗಿ ಇಂದು ನಗರದ ನೇತಾಜಿ ಸುಭಾಷ್ ಚಂದ್ರಬೋಸ್ ಜಿಲ್ಲಾ ಆಟದ ಮೈದಾನದಲ್ಲಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ಶ್ವಾನ ಪ್ರದರ್ಶನದ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಭೂಮಿಯು ಪ್ರತಿಯೊಂದು ಜೀವಿಗೂ ಆಶ್ರಯ ತಾಣವಾಗಿದೆ. ಪ್ರತಿಯೊಂದು ಜೀವಿಗೂ ಜೀವಿಸುವ ಹಕ್ಕಿದೆ. ಮನುಷ್ಯನ ದುರಾಸೆ ಹಾಗೂ ಸ್ವಾರ್ಥದಿಂದ ಹಲವಾರು ಜೀವಿಗಳು ಅವನತಿ ಹೊಂದುತ್ತಿವೆ. ಇಂತಹ ಸಂದರ್ಭದಲ್ಲಿ ಪ್ರಾಣಿಗಳನ್ನು ಪ್ರೀತಿಸಿ ಅವುಗಳನ್ನು ರಕ್ಷಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು.
ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರಲ್ಲೂ ಮನುಷ್ಯರಿಗಿಂತ ಪ್ರಾಣಿಗಳ ಮೇಲಿನ ಒಲವು ಹೆಚ್ಚುತ್ತಿದೆ. ಇಂದಿನ ಯುವ ಜನತೆಗೆ ಶ್ವಾನದಲ್ಲಿರುವ ವಿಶೇಷ ತಳಿಗಳನ್ನು ಪರಿಚಯಿಸುವುದು ನಮ್ಮ ಜವಾಬ್ದಾರಿಯಾಗಿದೆ. ಆದ್ದರಿಂದ ಶ್ವಾನ ಪ್ರದರ್ಶನದ ಕಾರ್ಯಕ್ರಮ ಆಯೋಜಿಸಿದ್ದು, ಈ ಕಾರ್ಯಕ್ರಮದ ಮೂಲಕ ಶ್ವಾನಗಳ ವಿವಿಧ ತಳಿಗಳನ್ನು ಪರಿಚಯಿಸಲು ಇದು ಉತ್ತಮ ವೇದಿಕೆಯಾಗಿದೆ ಎಂದ ಅವರು ಪ್ರತಿಯೊಬ್ಬರು ಪ್ರಾಣಿ ಸಂರಕ್ಷಣೆಗೆ ಒಂದಾಗಿ ಎಂದರು
ಜಿ.ಪಂ. ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಕೀರ್ತನಾ ಹೆಚ್.ಎಸ್. ಮಾತನಾಡಿ ಇತ್ತೀಚಿನ ದಿನಗಳಲ್ಲಿ ಸಾರ್ವಜನಿಕರಲ್ಲಿ ರಾಷ್ಟ್ರೀಯ ಹಬ್ಬಗಳ ಮೇಲಿನ ಒಲವು ಕ್ಷೀಣಿಸುತ್ತಿದೆ. ಪ್ರತಿಯೊಬ್ಬರು ರಾಷ್ಟ್ರೀಯ ಹಬ್ಬಗಳನ್ನು ಆಚರಿಸುವ ಹಿನ್ನಲೆಯನ್ನು ಅರಿತು ಕೊಳ್ಳಬೇಕು. ಕೇವಲ ಅಧಿಕಾರಿಗಳು ಜನ ಪ್ರತಿನಿಧಿಗಳ ಶ್ರಮದಿಂದ ಕಾರ್ಯಕ್ರಮಗಳು ಯಶಸ್ವಿಯಾಗುವುದಿಲ್ಲ.
ಇದರಲ್ಲಿ ಸಾರ್ವಜನಿಕರ ತೊಡಗಿಸಿಕೊಳ್ಳುವಿಕೆಯು ಬಹುಮುಖ್ಯವಾಗಿದೆ. ಆದ್ದರಿಂದ ರಾಷ್ಟ್ರೀಯ ಹಬ್ಬದ ಸಂದರ್ಭದಲ್ಲಿ ಚೈತ್ರೋತ್ಸವದಂತಹ ಕಾರ್ಯಕ್ರಮಗಳು ಸಾರ್ವಜನಿಕರ ಗಮನ ಸೆಳೆಯಲು ಸಹಕಾರಿಯಾಗಿವೆ ಎಂದ ಅವರು. ಪ್ರತಿಯೊಬ್ಬ ಸಾರ್ವಜನಿಕರು ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದರು.
ಶ್ವಾನ ಉತ್ಸವದಲ್ಲಿ ಪೊಲೀಸ್ ಶ್ವಾನಗಳ ಪ್ರದರ್ಶನವು ವಿಶೇಷತೆಯಿಂದ ಕೂಡಿದ್ದು, ಪ್ರೇಕ್ಷಕರ ಗಮನ ಸೆಳೆದಿತ್ತು. ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷೆ ಸುಜಾತ ಶಿವಕುಮಾರ್, ಪಶುಪಾಲನಾ ಮತ್ತು ಪಶು ವೈದಕೀಯ ಸೇವಾ ಇಲಾಖೆ ಉಪನಿರ್ದೇಶಕ ಡಾ. ಮೋಹನ್ ಕುಮಾರ್, ತೋಟಗಾರಿಕಾ ಇಲಾಖೆ ಉಪನಿರ್ದೇಶಕಿ ಪೂರ್ಣಿಮಾ, ಕೆನಲ್ ಕ್ಲಬ್ ಅಧ್ಯಕ್ಷ ಕವೀಶ್ ಕುಮಾರ್, ನಳಿನ ಡೀಸಾ ಸೇರಿದಂತೆ ಮುಂತಾದವರಿದ್ದರು.
District level dog show