ಚಿಕ್ಕಮಗಳೂರು: ಮನುಷ್ಯನ ಜೀವನದಲ್ಲಿ ಆರೋಗ್ಯವು ಬಹುಮುಖ್ಯ ಪಾತ್ರ ವಹಿಸುತ್ತದೆ. ಉತ್ತಮ ಆರೋಗ್ಯ ಒಂದಿದ್ದರೆ ಏನನ್ನಾದರು ಸಾಧಿಸಬಹುದು ಎಂದು ಕಡೂರು ಪುರಸಭೆ ಅಧ್ಯಕ್ಷರಾದ ಬಂಡಾರಿ ಶ್ರೀನಿವಾಸ್ ಹೇಳಿದರು.
ಸಖರಾಯ ಪಟ್ಟಣ ಹೋಬಳಿ ನಾಗೇನಹಳ್ಳಿ ಗ್ರಾಮದ ಶ್ರೀ ಆಂಜನೇಯ ವಿದ್ಯಾ ಸಂಸ್ಥೆ,ಆವರಣದಲ್ಲಿ ರಾಜೀವ್ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆ, ಹಾಸನ ಇವರ ಸಂಯಕ್ತಾಶ್ರಯದಲ್ಲಿ ಕಡೂರಿನ ಮಾಜಿ ಶಾಸಕ ದಿ. ಎನ್.ಕೆ ಹುಚ್ಚಪ್ಪ, ದಿ. ಶಂಕರಮ್ಮ ಹಾಗೂ ದಿ. ಎನ್.ಎಸ್ ಚಂದ್ರಪ್ಪ ಇವರುಗಳ ಸ್ಮರಣಾರ್ಥವಾಗಿ ಉಚಿತ ಬೃಹತ್ ಆರೋಗ್ಯ ತಪಾಸಣೆ ಮತ್ತು ಮೂಳೆ ಸಾಂದ್ರತೆ ಪರೀಕ್ಷಾ ಶಿಬಿರ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪ್ರತಿಯೊಬ್ಬ ವ್ಯಕ್ತಿಗೂ ಆರೋಗ್ಯ ಬಹು ಮುಖ್ಯವಾಗಿದೆ. ಅನಾರೋಗ್ಯವು ಸಾಧನೆಗೆ ಅಡ್ಡಿಪಡಿಸುತ್ತದೆ. ಇತ್ತೀಚಿನ ದಿನಗಳಲ್ಲಿ ಆಹಾರ ಪದ್ಧತಿಯಲ್ಲಿನ ಬದಲಾವಣೆಯು ಅನಾರೋಗ್ಯಕ್ಕೆ ಮುಖ್ಯ ಕಾರಣವಾಗಿದೆ. ಪ್ರತಿಯೊಬ್ಬರು ನಮ್ಮ ಸಾಂಸ್ಕೃತಿಕ ಆಹಾರ ಪದ್ಧತಿಯನ್ನು ಅನುಸರಿಸಿ ಆರೋಗ್ಯವನ್ನು ಉತ್ತಮವಾಗಿರಿಸಿಕೊಳ್ಳಿ ಎಂದರು.
ನಾವು ದಿನನಿತ್ಯ ಸೇವಿಸುವ ಆಹಾರ ಪದಾರ್ಥಗಳು ವಿವಿಧ ರಾಸಾಯನಿಕಗಳಿಂದ ಕೂಡಿ ವಿಷವಾಗಿ ಹೋಗಿದೆ. ಇವುಳಿಂದ ಹಣ್ಣು, ತರಕಾರಿ ಸೇರಿದಂತೆ ವಿವಿಧ ಆಹಾರ ಪದಾರ್ಥಗಳಲ್ಲಿರಬೇಕಾದ ಉತ್ತಮ ಅಂಶವು ಸಾಯುತ್ತಿದೆ. ಕೃಷಿಯಲ್ಲಿ ರಾಸಾಯನಿಕ ಗೊಬ್ಬರಗಳನ್ನು ಕಡಿಮೆ ಮಾಡಿ ಸಾವಯವ ಕೃಷಿ ಪದ್ಧತಿಯನ್ನು ಅನುಸರಿಸಿದರೆ ಆರೋಗ್ಯವನ್ನು ಸುಧಾರಿಸಿಕೊಳ್ಳಬಹುದು ಎಂದರು.
ಇಂದಿನ ಯುವ ಜನತೆಯು ಆಹಾರದಲ್ಲಿನ ಪೌಷ್ಠಿಕಾಂಶದ ಕೊರತೆಯಿಂದ ಸಣ್ಣ ತಲೆ ನೋವಿಗೂ ಆಸ್ಪತ್ರೆಗೆ ಹೋಗುವ ಪ್ರಸಂಗಗಳು ಉಂಟಾಗುತ್ತದೆ. ಮನೆ ಮದ್ದುಗಳಿಂದ ಅನೇಕ ಕಾಯಿಲೆಗಳನ್ನು ಗುಣ ಪಡಿಸಿಕೊಳ್ಳಬಹುದು ಎಂದ ಅವರು ವಿದ್ಯಾರ್ಥಿಗಳು ಪಾಠದ ಜೊತೆಗೆ ಕ್ರೀಡೆಯಲ್ಲೂ ಹೆಚ್ಚು ಅಸಕ್ತಿ ವಹಿಸಿ ತಮ್ಮ ದೇಹ ಮತ್ತು ಮನಸ್ಸನ್ನು ಸಧೃಡವಾಗಿಸಿಕೊಳ್ಳಿ ಎಂದು ತಿಳಿಸಿದರು
ರಾಜೀವ್ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ನಿತಿನ್ ರಾಜು ಮಾತನಾಡಿ. ಆರೋಗ್ಯದ ವಿಷಯದಲ್ಲಿ ಚಿಕಿತ್ಸೆಗಿಂತ ತಡೆಗಟ್ಟುವಿಕೆಯು ಬಹು ಮುಖ್ಯ ಪಾತ್ರ ವಹಿಸುತ್ತದೆ. ಗ್ರಾಮೀಣ ಭಾಗದಲ್ಲಿ ಪೋಷಕರು ತಮ್ಮ ದಿನನಿತ್ಯದ ಕೆಲಸದ ಒತ್ತಡದಲ್ಲಿ ಮಕ್ಕಳ ಆರೋಗ್ಯದ ಮೇಲೆ ಹೆಚ್ಚು ಕಾಳಜಿ ವಹಿಸಲು ಸಾಧ್ಯವಾಗುತ್ತಿಲ್ಲ ಇದರಿಂದ ಮಕ್ಕಳು ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ಹಾಗೂ ಯುವಕರು ವೃತ್ತಿ ಅರಸಿ ಹಳ್ಳಿ ತೊರೆದು ಪಟ್ಟಣ ಸೇರುತ್ತಿಸುವುದರಿಂದ ವೃದ್ಧರ ಆರೋಗ್ಯ ಗಮನಿಸುವುದು ಕಡಿಮೆಯಾಗುತ್ತಿದೆ. ಆದ್ಧರಿಂದ ಗ್ರಾಮೀಣ ಭಾಗಗಳಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಿ ಅವರ ಆರೋಗ್ಯ ಸುಧಾರಿಸಿ ಉತ್ತಮ ಜೀವನ ನಿರ್ವಹಣೆಗೆ ಸಹಕರಿಸುವುದು ನಮ್ಮ ಕರ್ತವ್ಯ ಎಂದರು.
ಶ್ರೀ ಆಂಜನೇಯ ವಿದ್ಯಾ ಸಂಸ್ಥೆಯ ಅಧ್ಯಕ್ಷ ಎನ್.ಹೆಚ್ ಮೋಹನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ. ವೃದ್ಧರು ಸೇರಿದಂತೆ ಗ್ರಾಮೀಣ ಭಾಗದಲ್ಲಿನ ಸಾರ್ವಜನಿಕರು ತಮ್ಮ ಆರೋಗ್ಯ ತಪಾಸಣೆಗಾಗಿ ದೂರದ ನಗರಕ್ಕೆ ತೆರಳುವುದು ಆಯಾಸಕರ ಹಾಗೂ ಕಷ್ಟಕರ ಸಂಗತಿಯಾಗಿದೆ. ಇಂತವರಿಗಾರಿ ಗ್ರಾಮೀಣ ಭಾಗದಲ್ಲಿಯೇ ಆರೋಗ್ಯ ತಪಾಸಣಾ ಶಿಬಿರವನ್ನು ಏರ್ಪಡಿಸುವುದು ಒಂದು ಉತ್ತಮ ಕಾರ್ಯವಾಗಿದೆ ಇದರಿಂದ ಎಂದ ಅವರು ಪ್ರತಿಯೊಬ್ಬ ಸಾರ್ವಜನಿಕರು ಶಿಬಿರದ ಸದುಪಯೋಗ ಪಡೆದುಕೊಳ್ಳಿ ಎಂದರು.
ಕಾರ್ಯಕ್ರಮದಲ್ಲಿ ಪಂಚಕರ್ಮ ಚಿಕಿತ್ಸಾ ತಜ್ಞ ಡಾ. ಉದಯ್ ಗಣೇಶ್, ಚರ್ಮರೋಗ ತಜ್ಞೆ ಡಾ.ಶಿಲ್ಪ ಕೆ.ಎನ್., ಪ್ರಸೂತಿ ಹಾಗೂ ಸ್ತ್ರೀ ರೋಗ ತಜ್ಞೆ ಡಾ.ದೀಪಾಶ್ರೀ, ಮೂಳೆ ಮತ್ತು ಕೀಲು ರೋಗ ತಜ್ಞ ಡಾ.ಗೋವರ್ದನ್, ಮದುಮೇಹ ತಜ್ಞ ಡಾ,ವೇಣು ಎಸ್., ನಾಗೇನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶ್ರೀಮತಿ ಚಂದ್ರಮ್ಮ, ಹಾಗೂ ವಿವಿಧ ವಿಭಾಗದ ವೈದ್ಯರು, ತಜ್ಞರು ಸೇರಿದಂತೆ ವಿದ್ಯಾರ್ತಿಗಳು, ಸಾರ್ವಜನಿಕರು ಉಪಸ್ಥಿತರಿದ್ದರು.
Free mass health check-up and bone density testing camp