ಚಿಕ್ಕಮಗಳೂರು: ಗೋಮಾಳ ಜಾಗಗಳನ್ನು ಅಕ್ರಮವಾಗಿ ಖಾತೆ ಮಾಡಿಕೊಟ್ಟಿರುವುದು ಸೇರಿದಂತೆ ಹಣ ದುರುಪಯೋಗ, ಇನ್ನಿತರೆ ಅವ್ಯವಹಾರಗಳ ಬಗ್ಗೆ ತಾವು ಹೋರಾಟ ನಡೆಸಿದ ಪರಿಣಾಮವಾಗಿ ಚಿಕ್ಕಮಗಳೂರು ತಾಲ್ಲೂಕು ಹರಿಹರದಳ್ಳಿ ಗ್ರಾ.ಪಂ.ನ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಲಕ್ಷ್ಮಣ್ ಅವರು ಅಮಾನತುಗೊಂಡಿದ್ದಾರೆ ಎಂದು ಮಾಹಿತಿ ಹಕ್ಕು ಹೋರಾಟಗಾರ ಸಿ.ಎನ್.ದೇವರಾಜ್ ಅರಸ್ ತಿಳಿಸಿದರು.
ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಮಾನತುಗೊಂಡಿರುವ ಪಿ.ಲಕ್ಷ್ಮಣ್ ಅವರು ಈ ಹಿಂದೆ ತೇಗೂರು ಗ್ರಾ.ಪಂ.ನಲ್ಲಿ ಕರ್ತವ್ಯ ನಿರ್ವಹಿಸುವಾಗ ಕಂದಾಯ ಇಲಾಖೆಗೆ ಸೇರಿದ ಗೋಮಾಳದ ಜಾಗಗಳನ್ನು ಖಾಸಗಿಯವರಿಗೆ ಅಕ್ರಮವಾಗಿ ಖಾತೆ ಮಾಡಿಸಿಕೊಟ್ಟಿದ್ದಾರೆ. ಅಲ್ಲದೆ ಕೆಎಟಿ ಆದೇಶದ ಪ್ರಕಾರ ಅವರು ಹರಿಹರದಳ್ಳಿ ಗ್ರಾ.ಪಂ.ನಲ್ಲಿ ಕರ್ತವ್ಯ ನಿರ್ವಹಿಸಬೇಕಾಗಿದ್ದರೂ ತಮ್ಮ ಅಕ್ರಮವನ್ನು ಮುಂದುವರಿಸುವ ಸಲುವಾಗಿ ಪ್ರಭಾವಿಗಳಿಂದ ಮೇಲಾಧಿಕಾರಿಗಳಿಗೆ ಒತ್ತಡ ತಂದು ತೇಗೂರಿನಲ್ಲೇ ಮುಂದುವರಿದಿದ್ದರು. ಈ ಅಕ್ರಮಗಳ ವಿರುದ್ಧ ನಾವು ಹೋರಾಟ ನಡೆಸಿದ್ದೆವು ಎಂದು ಹೇಳಿದರು.
ಈ ಬಗ್ಗೆ ಜಿ.ಪಂ. ಸಿಇಓ ಸೇರಿದಂತೆ ರಾಜ್ಯ ಸರ್ಕಾರದ ಪಂಚಾಯಿತ್ ರಾಜ್ ಮತ್ತು ಗ್ರಾಮೀಣ ಅಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಹಾಗೂ ಕಂದಾಯ ಸಚಿವ ಕೃಷ್ಣಭೈರೇಗೌಡ ಮತ್ತು ಹಲವು ಅಧಿಕಾರಿಗಳಿಗೆ ದೂರು ಸಲ್ಲಿಸಿ ಪಿಡಿಓ ಲಕ್ಷ್ಮಣ್ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದೆವು ಎಂದು ತಿಳಿಸಿದರು.
ಇದರ ಪರಿಣಾಮವಾಗಿ ಜಿ.ಪಂ. ಉಪ ಕಾರ್ಯದರ್ಶಿಯವರು ಲಕ್ಷ್ಮಣ್ ವಿರುದ್ಧದ ದೂರುಗಳ ಬಗ್ಗೆ ತನಿಖೆ ಮಾಡಿ, ವರದಿ ಸಲ್ಲಿಸುವಂತೆ ಚಿಕ್ಕಮಗಳೂರು ತಾ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯವರಿಗೆ ಆದೇಶ ನೀಡಿದ್ದರು. ತಾ.ಪಂ. ಇಓ ಅವರು ನೀಡಿದ ತನಿಖಾ ವರದಿಯಲ್ಲಿ ಗೋಮಾಳದ ಜಾಗ ಅಕ್ರಮ ಖಾತೆ ಮಾಡಿರುವುದು ಸೇರಿಂದತೆ ಇನ್ನಿತರೆ ಆರೋಪಗಳು ಮೇಲ್ನೋಟಕ್ಕೆ ಸಾಬೀತಾಗಿರುವ ಹಿನ್ನೆಲೆಯಲ್ಲಿ ಲಕ್ಷ್ಮಣ್ ಅವರ ವಿರುದ್ಧ ಶಿಸ್ತು ಕ್ರಮ ಜರುಗಿಸಬಹುದು ಎಂದು ತಿಳಿಸಿದ್ದರು.
ಈ ಹಿನ್ನೆಲೆಯಲ್ಲಿ ಜಿ.ಪಂ. ಸಿಇಓ ಕೀರ್ತನಾ ಅವರು ಹರಿಹರದ ಹಳ್ಳಿ ಗ್ರಾ.ಪಂ. ಪಿಡಿಓ ಪಿ.ಲಕ್ಷ್ಮಣ್ ಅವರನ್ನು ಅಮಾನತು ಪಡಿಸಿ ಆದೇಶಿಸಿದ್ದಾರೆ ಎಂದು ತಿಳಿಸಿದರು.
ಇದೇ ರೀತಿ ಚಿಕ್ಕಮಗಳೂರು ನಗರಸಭೆಯಲ್ಲೂ ಅಕ್ರಮಗಳು ನಡೆದಿದ್ದು, ಅದರ ವಿರುದ್ಧವೂ ಹೋರಾಟ ಮುಂದುವರಿಸುತ್ತೇವೆ. ಭೂ ಕಂದಾಯ ಕಾಯ್ದೆ ಉಲ್ಲಂಘಿಸಿ ಕಳೆದ ೧೦ ವರ್ಷಗಳಿಂದ ಸುಮಾರು ೫೦೦ ಕೋಟಿ ರೂ.ನ ಸರ್ಕಾರಿ ಜಮೀನು ಅಕ್ರಮ ಪರಭಾರೆ ನಡೆದಿದ್ದು, ಈ ಬಗ್ಗೆ ರಾಜ್ಯಪಾಲರಿಗೂ ದೂರು ನೀಡುತ್ತೇವೆ ಎಂದರು.
ಚಿಕ್ಕಮಗಳೂರು ಕಸಬಾ ಹಾಗೂ ಅಂಬಳೆ ಹೋಬಳಿಗಳಲ್ಲಿ ಕೃಷಿ ಭೂಮಿ, ಭೂ ಪರಿವರ್ತನೆ ಅಕ್ರಮ ನಡೆದಿದೆ. ಇದರಲ್ಲಿ ತಾಲ್ಲೂಕು ಪಂಚಾಯ್ತಿ ಅಧಿಕಾರಿಗಳು, ರಿಯಲ್ ಎಸ್ಟೇಟ್ ಉದ್ಯಮಿಗಳು ಭಾಗಿಯಾಗಿದ್ದು, ಇದರ ವಿರುದ್ಧವೂ ಹೋರಾಟ ರೂಪಿಸುತ್ತೇವೆ ಎಂದು ತಿಳಿಸಿದರು.
ಇಷ್ಟೆಲ್ಲಾ ಆರೋಪಗಳು, ಅಕ್ರಮಗಳನ್ನು ಬಯಲಿಗೆ ತಂದ ಕಾರಣಕ್ಕೆ ನಮ್ಮ ಕುಟುಂಬದ ಮೇಲೆ ಲಕ್ಷ್ಮಣ್ ಅವರು ವಾಮಾಚಾರ ಮಾಡಿ, ಬೆದರಿಕೆ ಒಡ್ಡುತ್ತಿದ್ದಾರೆ ಎಂದು ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಜಯದೇವರಾಜ್ ಅರಸ್ ಮತ್ತು ರಂಗನಾಥ್ ಉಪಸ್ಥಿತರಿದ್ದರು.
Hariharadalli Gram Panchayat Panchayat Development Officer Laxman suspended