ಚಿಕ್ಕಮಗಳೂರು: ರಾಜ್ಯ ಸರ್ಕಾರದ ಬಜೆಟ್ ಪೂರ್ವ ಸಭೆಯಲ್ಲಿ ಅಕ್ಷರದಾಸೋಹ ಬಿಸಿಯೂಟ ಕಾರ್ಯಕರ್ತೆಯರಿಗೆ ಮಾಸಿಕ ಕನಿಷ್ಟ ವೇತನ ೧೫ ಸಾವಿರ ರೂ ನಿಗಧಿಗೊಳಿಸುವಂತೆ ಒತ್ತಾಯಿಸಿ ಫೆ.೨೧ ರಿಂದ ಜಿಲ್ಲೆಯಾದ್ಯಂತ ಬಿಸಿಯೂಟ ಬಂದ್ಗೊಳಿಸಿ ಜಿಲ್ಲಾಧಿಕಾರಿಗಳ ಕಚೇರಿ ಎದುರು ಅಹೋರಾತ್ರಿ ಧರಣಿ ನಡೆಸಲು ನಿರ್ಧರಿಸಲಾಗಿದೆ ಎಂದು ಅಕ್ಷರದಾಸೋಹ ಬಿಸಿಯೂಟ ಕಾರ್ಯಕರ್ತೆಯರ ಫೆಡರೇಷನ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿಜಯಕುಮಾರ್ ತಿಳಿಸಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿ, ಇಂದಿನ ಬೆಲೆ ಏರಿಕೆಗೆ ತಕ್ಕಂತೆ ಸುಮಾರು ೭ ಗಂಟೆಗಳ ಕಾಲ ದುಡಿಯುತ್ತಿರುವ ಕಾರ್ಯಕರ್ತೆಯರಿಗೆ ಫೆ.೪ ರಂದು ನಡೆಯಲಿರುವ ಬಜೆಟ್ ಪೂರ್ವಭಾವಿ ಸಭೆಯಲ್ಲಿ ವೇತನ ನಿಗಧಿಗೊಳಿಸುವಂತೆ ಆಗ್ರಹಿಸಿದರು.
ಕಳೆದ ೨೩ ವರ್ಷಗಳಿಂದ ರಾಜ್ಯದ ಶಾಲಾ ಮಕ್ಕಳ ಬಿಸಿಯೂಟ ಕಾರ್ಯಕ್ರಮದಲ್ಲಿ ಸೇವೆ ಸಲ್ಲಿಸುತ್ತಿರುವ ಕಾರ್ಯಕರ್ತೆಯಿರಿಗೆ ೩೭೦೦ ರೂಗಳನ್ನು ಮಾಸಿಕ ಗೌರವಧನ ನೀಡಲಾಗುತ್ತಿದ್ದು, ಈ ವೇತನದಿಂದ ಜೀವನ ಸಾಗಿಸಲು ಕಷ್ಟಕರವಾಗಿರುತ್ತದೆ. ಜೊತೆಗೆ ಕಳೆದ ೧೦ ವರ್ಷಗಳಿಂದ ಕೇಂದ್ರಸರ್ಕಾರ ತನ್ನ ಪಾಲಿನ ಶೇ.೬೦ ರಷ್ಟು ವೇತನವನ್ನು ನೀಡದೆ ತೊಂದರೆಯಾಗಿದೆ ಎಂದು ಆರೋಪಿಸಿದರು.
ಸರ್ಕಾರಗಳು ಜಾರಿಗೆ ತರುವ ಹೊಸ ಹೊಸ ಯೋಜನೆಗಳಿಗೆ ತಕ್ಕಂತೆ ಕಾರ್ಯಕರ್ತೆಯರು ಹೆಚ್ಚಿನ ಕೆಲಸದ ಹೊರೆ ಬೀಳುತ್ತಿದ್ದು, ಏಳು ಗಂಟೆಗೂ ಹೆಚ್ಚು ಕಾಲ ಕೆಲಸ ಮಾಡಿಸಿಕೊಂಡು ಕಡಿಮೆ ಸಂಬಳ ನೀಡಿ ಶೋಷಣೆ ಮಾಡಲಾಗುತ್ತಿದೆ. ರಾಜ್ಯಸರ್ಕಾರ ಚುನಾವಣಾ ಪೂರ್ವದಲ್ಲಿ ಘೋಷಿಸಿದ್ದ ಆರನೇ ಗ್ಯಾರಂಟಿಯನ್ನು ಇದೂವರೆಗೆ ಜಾರಿ ಮಾಡಿಲ್ಲ ಎಂದು ದೂರಿದರು.
ಶಾಲೆಗಳಲ್ಲಿ ಅಡುಗೆ ಕೆಲಸ ಮಾಡುತ್ತಿರುವ ಕಾರ್ಯಕರ್ತೆಯರಿಗೆ ಅಪಘಾತ, ಅನಾಹುತಗಳಾದರೆ ಯಾವುದೇ ರೀತಿಯ ವೈದ್ಯಕೀಯ ತುರ್ತು ಚಿಕಿತ್ಸೆಗೆ ಸರ್ಕಾರದ ನಿಧಿಯಲ್ಲಿ ಅವಕಾಶವಿಲ್ಲ, ಇದರಿಂದಾಗಿ ರಾಜ್ಯಾದ್ಯಂತ ಹಲವಾರು ಕಾರ್ಯಕರ್ತೆಯರು ಮೃತಪಟ್ಟಿದ್ದು ಕೂಡಲೇ ಪಿಎಫ್ ಹಾಗೂ ಇಎಸ್ಐ ನಂತಹ ಸೌಲಭ್ಯಗಳನ್ನು ನೀಡುವ ಜೊತೆಗೆ ನಿವೃತ್ತಿ ವೇತನವನ್ನು ಜಾರಿ ಮಾಡಬೇಕೆಂದು ಒತ್ತಾಯಿಸಿದರು.
ಜಿಲ್ಲಾಧ್ಯಕ್ಷ ಜಿ. ರಘು ಮಾತನಾಡಿ, ಕಳೆದ ೧೦ ವರ್ಷಗಳಿಂದ ಕೇಂದ್ರ ಸರ್ಕಾರ ತನ್ನ ಪಾಲಿನ ಶೇ.೬೦ ರಷ್ಟು ವೇತನವನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ಸಂಸದ ಕೋಟಾ ಶ್ರೀನಿವಾಸ ಪೂಜಾರಿ ಅವರನ್ನು ಒತ್ತಾಯಿಸಿದ ಅವರು, ಜಿಲ್ಲಾಧಿಕಾರಿಗಳ ಕಚೇರಿ ಸುತ್ತಮುತ್ತ ಹಾಗೂ ಹನುಮಂತಪ್ಪ ವೃತ್ತದಲ್ಲಿ ಪ್ರತಿಭಟನೆ ನಡೆಸದಂತೆ ಜಿಲ್ಲಾಡಳಿತ ನೀಡಿರುವ ಆದೇಶವನ್ನು ಕೂಡಲೇ ವಾಪಾಸ್ ಪಡೆಯಬೇಕೆಂದು ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ತಾಲ್ಲೂಕು ಅಧ್ಯಕ್ಷೆ ಇಂದುಮತಿ, ಕಾರ್ಯದರ್ಶಿ ಶಮೀನಾ ಬಾನು, ಉಪಾಧ್ಯಕ್ಷೆ ನಾಗಮಣಿ, ತಾಲ್ಲೂಕು ಕಾರ್ಯದರ್ಶಿ ಸುನಂದ, ಶೋಭ, ಸ್ವಪ್ನ, ಪುಷ್ಪಾವತಿ, ಮರಿಯಮ್ಮ, ಸುಧಾ, ಲಕ್ಷ್ಮಿ ಮತ್ತಿತರರು ಉಪಸ್ಥಿತರಿದ್ದರು.
Protest demanding salary hike for hot meal workers on Feb. 21