ಚಿಕ್ಕಮಗಳೂರು: ರಾಜನೀತಿಯೊಂದಿಗೆ ಧರ್ಮನೀತಿ ಸಮ್ಮಿಲನವಾದಾಗ ದೇಶದಲ್ಲಿ ಶಾಂತಿ-ಸುಸಂಸ್ಕೃತವಾಗುತ್ತದೆ ಎಂದು ಶಾಸಕ ಹೆಚ್.ಡಿ ತಮ್ಮಯ್ಯ ಅಭಿಪ್ರಾಯಿಸಿದರು.
ಅವರು ಇಂದು ಇಲ್ಲಿನ ತೇರಾಪಂಥ್ ಭವನದಲ್ಲಿ ತೇರಾಪಂಥ್ ಸಭಾ ವತಿಯಿಂದ ಏರ್ಪಡಿಸಲಾಗಿದ್ದ ತೇರಾಪಂಥ್ ಧರ್ಮಸಂಘದ ೧೬೧ನೇ ಮರ್ಯಾದ ಮಹೋತ್ಸವದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.
ಭಾರತ ದೇಶದಲ್ಲಿ ಚಾರ್ತುಮಾಸ ಪೂಜೆ ಮಾಡುವ ಮೂಲಕ ಹಿಂದೆ ರಾಜರ ಕಾಲದಲ್ಲಿ ಧರ್ಮನೀತಿ ಅಳವಡಿಸಿಕೊಳ್ಳುತ್ತಿದ್ದರು ಎಂದು ಹೇಳಿದರು.
ಭಾರತ ದೇಶದಲ್ಲಿ ಸುಮಾರು ೮೦೦ ಕ್ಕೂ ಹೆಚ್ಚು ಸಾಧು-ಸಾಧ್ವಿಗಳನ್ನು ಹೊಂದಿರುವ ಜೈನ ಸಮಾಜದಲ್ಲಿ ಆಚಾರ್ಯರು ಚಾತುರ್ಮಾಸ ಪೂಜೆ ಮಾಡಲು ದಿನಾಂಕ ನಿಗಧಿ ಮಾಡುವ ಇಂದು ಶುಭದಿನವಾಗಿದೆ ಎಂದು ಎಲ್ಲಾ ಜೈನ್ ಸಮುದಾಯದ ಬಾಂಧವರಿಗೆ ಶುಭಾಶಯ ಕೋರಿದರು.
ಅಹಿಂಸಾತ್ಮಕವಾದ ಪವಿತ್ರ ಜೈನ ಧರ್ಮವಾಗಿದ್ದು, ಅವರ ಊಟ-ಉಪಹಾರ ಸಂಪೂರ್ಣ ಸಸ್ಯಹಾರಿಯಾಗಿದ್ದು, ಹಿಂಸೆಯ ಮಾರ್ಗವನ್ನು ದೂರವಿರಿಸಿ ನಡೆಯುತ್ತಿರುವ ಜೈನ್ ಸಮಾಜದ ಆಚಾರ-ವಿಚಾರಗಳ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದರು. ಹೂವಿನೊಂದಿಗೆ ನಾರು ಸ್ವರ್ಗಕ್ಕೆ ಹೋದಂತೆ ಜೈನ್ ಸಮಾಜದ ಎಲ್ಲಾ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಮೂಲಕ ಆಶೀರ್ವಚನ ಮತ್ತು ಆಶೀರ್ವಾದ ಕೊಡುತ್ತಿದ್ದೀರಿ ಎಂದು ಪ್ರಶಂಸೆ ವ್ಯಕ್ತಪಡಿಸಿದರು.
ತಾವು ನಗರಸಭಾಧ್ಯಕ್ಷರಾಗಿದ್ದಾಗ ತೇರಾಪಂಥ್ ರಸ್ತೆಗೆ ಆಚಾರ್ಯ ತುಳಸಿ ಮಾರ್ಗ ಎಂದು ನಾಮಕರಣ ಮಾಡಿರುವುದನ್ನು ಇದೇ ಸಂದರ್ಭದಲ್ಲಿ ಸ್ಮರಿಸಿದರು.
ತೇರಾಪಂಥ್ ಮಹಾಸಭಾ ಅಧ್ಯಕ್ಷ ಮಹೇಂದ್ರ ಡೋಸಿ, ಮಾತನಾಡಿ ತೇರಾಪಂಥ್ ಧರ್ಮಸಂಘದ ೧೬೧ನೇ ಮರ್ಯಾದ ಮಹೋತ್ಸವ ಎಂದರೆ ಭಾರತ ಸಂವಿಧಾನದ ಮಾದರಿಯಲ್ಲಿ ಜೈನ್ ಸಮುದಾಯ ತೇರಾಪಂಥ್ ಸಾಧು-ಸಾಧ್ವಿಯರಿಗೆ ನೀಡಲಾದ ಸಂವಿಧಾನವಾಗಿದೆ ಎಂದು ಹೇಳಿದರು.
ತೇರಾಪಂಥ್ ಸಂಸ್ಥಾಪಕ ಆಚಾರ್ಯ ಶ್ರೀ ಭಿಕ್ಷುರವರು ಎಲ್ಲಾ ಸಾಧು-ಸಾಧ್ವಿಯರಿಗೆ ಸಂವಿಧಾನ ರಚನೆ ಮಾಡಿದ್ದು, ಇದರ ಮೂಲಕ ಎಲ್ಲಾ ಸಾಧು-ಸಾಧ್ವಿಯರು ನಡೆದುಕೊಳ್ಳಬೇಕಾಗಿದೆ ಎಂದು ತಿಳಿಸಿದರು.
ಆಚಾರ್ಯರ ಶಿಷ್ಯರಾದ ಸುಮಾರು ೭೦೦ ಸಾಧು-ಸಾಧ್ವಿಯರು ಅನುಯಾಯಿಗಳಾಗಿದ್ದು ಎಲ್ಲೆಲ್ಲಿ ಚಾತುರ್ಮಾಸ ಕಾರ್ಯಕ್ರಮಗಳು ಆಯೋಜನೆಗೊಳ್ಳುತ್ತವೆ ಎಲ್ಲಿ ಭಕ್ತರಿಗೆ ಜೈನ್ ಧರ್ಮದ ಬಗ್ಗೆ ಉಪದೇಶ ಪ್ರಚಾರ ನೀಡಬೇಕು ಎಂದರು.
ಒಂದು ವರ್ಷದಲ್ಲಿ ೪ ತಿಂಗಳು ಒಂದೇ ಕಡೆ ಚಾತುರ್ಮಾಸ ಕಾರ್ಯಕ್ರಮವನ್ನು ಆಯೋಜಿಸಿ ನಡೆಸಲಾಗುವುದು. ಉಳಿದ ದಿನಗಳಲ್ಲಿ ದೇಶ ಸಂಚಾರ ಮಾಡಿ ಧರ್ಮ ಪ್ರಚಾರ ಮಾಡುವ ಸಾಧು-ಸಾಧ್ವಿಯರಿಗೆ ಮನೆ ಮಠಗಳಿರುವುದಿಲ್ಲ ಎಂದು ತಿಳಿಸಿದರು.
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ೧೧ನೇ ಆಚಾರ್ಯ ಶಿಷ್ಯರಾದ ಸಯಂ ಲತಾಜಿ ವಹಿಸಿ ಆಶೀರ್ವಚನ ನೀಡಿದರು. ಇವರೊಂದಿಗೆ ಮೂವರು ಶಿಷ್ಯರು ಭಾಗವಹಿಸಿದ್ದರು. ಮುಖ್ಯ ಭಕ್ತರಾಗಿ ಹಾಸನದ ಎಂ.ಎಸ್. ರಾಮಯ್ಯ ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲರಾದ ಡಾ. ವೇಣುಗೋಪಾಲ್ ರಾವ್ ಹಾಗೂ ಇದೇ ಕಾಲೇಜಿನ ಹೆಚ್.ಓ.ಡಿ ಡಾ. ಬಬಿತಾ ಜೈನ್, ನಗರಸಭೆ ಸದಸ್ಯ ವಿಫುಲ್ ಕುಮಾರ್ ಜೈನ್ ಪಾಲ್ಗೊಂಡಿದ್ದರು.
Terapanth Dharma Sangh’s 161st Maryada Mahotsav program