ಚಿಕ್ಕಮಗಳೂರು: ಕಾಫಿನಾಡಿನಲ್ಲಿ ಮಾನವ ಮತ್ತು ವನ್ಯಜೀವಿಗಳ ಸಂಘರ್ಷದಿಂದ ಕಾರ್ಮಿಕರು, ತೋಟಗಳ ಮಾಲೀಕರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಕಳಸ ತಾಲೂಕು ಹಳುವಳ್ಳಿ ಸಮೀಪದ ಲಲಿತಾದ್ರಿ ಗ್ರಾಮದ ರಘುಪತಿ ಕಾಫಿತೋಟದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಕಾಡುಕೋಣ ತಿವಿದು ಮೃತಪಟ್ಟ ಬೆನ್ನಲ್ಲೆ ತಣಗೆಬೈಲು ವನ್ಯಜೀವಿ ವ್ಯಾಪ್ತಿಯ ಕತ್ಲೆಖಾನ್ ಎಸ್ಟೇಟ್ನಲ್ಲಿ ಕಾಫಿ ಕೊಯ್ಯಲು ತೆರಳುತ್ತಿದ್ದ ವಿನೋಬ ಬಾಯಿ (೪೦) ಎಂಬುವರ ಮೇಲೆ ಕಾಡಾನೆ ದಾಳಿ ನಡೆಸಿದ್ದು ಕಾರ್ಮಿಕ ಮಹಿಳೆ ಸ್ಥಳದಲ್ಲೇ ಮೃತಪಟ್ಟಿದ್ದಾಳೆ.
ನರಸಿಂಹರಾಜಪುರ ತಾಲೂಕು ತರೀಕೆರೆ ಅರಣ್ಯ ವ್ಯಾಪ್ತಿಯಲ್ಲಿನ ಭದ್ರಾ ಅರಣ್ಯ ವಲಯಕ್ಕೆ ಸೇರಿದ ಕತ್ಲೇಖಾನ್ ಎಸ್ಟೇಟ್ನಲ್ಲಿ ಕಾಫಿ ಕೊಯ್ಲು ಮಾಡಲು ತೆರಳುತ್ತಿದ್ದ ವಿನೋಬ ಬಾಯಿ ಅವರ ಮೇಲೆ ಕಾಡಾನೆ ದಿಢೀರ್ ದಾಳಿ ನಡೆಸಿದೆ. ಈ ವೇಳೆ ಕಾರ್ಮಿಕ ಮಹಿಳೆ ಜತೆ ಇಬ್ಬರು ಮಹಿಳೆಯರಿದ್ದು, ಅವರು ಸ್ವಲ್ಪದರಲ್ಲೇ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಮೃತ ಮಹಿಳೆ ವಿನೋಬ ಬಾಯಿ ಹರಪನಹಳ್ಳಿ ತಾಲೂಕಿನ ಶಿವಪುರ ಗ್ರಾಮಕ್ಕೆ ಸೇರಿದವರಾಗಿದ್ದು, ಉದ್ಯೋಗ ಅರಸಿ ಚಿಕ್ಕಮ ಗಳೂರು ಜಿಲ್ಲೆಗೆ ಬಂದಿದ್ದರು. ಶನಿವಾರ ಬೆಳಿಗ್ಗೆ ನಡೆದ ಘಟನೆಯಿಂದ ಕಾರ್ಮಿಕ ಮಹಿಳೆ ಮೃತಪಟ್ಟಿದ್ದಾಳೆ. ಮಾನವ ಮತ್ತು ವನ್ಯಜೀವಿಗಳ ಸಂಘರ್ಷದಿಂದ ಕಾರ್ಮಿಕರು, ತೋಟಗಳ ಮಾಲೀಕರು ಪ್ರಾಣಕಳೆದುಕೊಳ್ಳುತ್ತಿದ್ದು, ವನ್ಯಜೀವಿಗಳ ಹಾವಳಿಯನ್ನು ತಡೆಗಟ್ಟುವಲ್ಲಿ ಅರಣ್ಯ ಇಲಾಖೆ ವಿಫಲವಾಗಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇತ್ತೀಚಿನ ವರ್ಷಗಳಲ್ಲಿ ಕಾಡಾನೆ ದಾಳಿಯಿಂದ ಅನೇಕರು ಪ್ರಾಣ ಕಳೆದುಕೊಂಡಿದ್ದಾರೆ. ೨೦೧೮ರಿಂದ ಇಲ್ಲಿಯವರೆಗೆ ಜಿಲ್ಲೆಯಲ್ಲಿ ಇಲ್ಲಿಯವರೆಗೆ ೧೮ ಜನ ಕಾಡಾನೆ ದಾಳಿಗೆ ಸಲುಕಿ ಮೃತಪಟ್ಟಿದ್ದಾರೆ. ಇನ್ನೂ ಅನೇಕರು ವನ್ಯಜೀವಿಗಳ ದಾಳಿಗೆ ಸಿಲುಕಿ ಅಂಗಾಂಗಳನ್ನು ಕಳೆದುಕೊಂಡು ನರಕ ಸದೃಶ್ಯ ಜೀವನ ನಡೆಸುತ್ತಿದ್ದಾರೆ. ಘಟನೆ ನಡೆಸದ ಸಂದರ್ಭದಲ್ಲಿ ಅರಣ್ಯ ಇಲಾಖೆ ಮೃತ ಕುಟುಂಬಕ್ಕೆ ಪರಿಹಾರ ನೀಡಿ ಕೈ ತೊಳೆದುಕೊಳ್ಳುತ್ತದೆ ಹೊರತು ವನ್ಯಜೀವಿಗಳ ಹಾವಳಿ ನಿಯಂತ್ರಣಕ್ಕೆ ಮುಂದಾಗುತ್ತಿಲ್ಲವೆಂಬ ಆರೋಪ ಪದೇ ಪದೇ ಕೇಳಿ ಬರುತ್ತಿದೆ.
ಪರಿಹಾರದ ಚಕ್ ವಿತರಣೆ: ಕತ್ಲೆಖಾನ್ ಎಸ್ಟೇಟ್ನಲ್ಲಿ ಕಾಫಿ ಕೊಯ್ಯಲು ತೆರಳುತ್ತಿದ್ದ ವಿನೋಬ ಬಾಯಿ (೪೦) ಎಂಬುವರ ಮೇಲೆ ಕಾಡಾನೆ ದಾಳಿಯಿಂದ ಮೃತಪಟ್ಟಿದ್ದಾಳೆ ಕಾರ್ಮಿಕ ಮಹಿಳೆಯ ಕುಟುಂಬಕ್ಕೆ ಪರಿಹಾರದ ಚೆಕ್ ವಿತರಣೆ ಮಾಡಲಾಯಿತು. ಶಾಸಕರಾದ ಟಿ.ಡಿ.ರಾಜೇಗೌಡ ಹಾಗೂ ಜಿ.ಎಚ್.ಶ್ರೀನಿವಾಸ್ ೧೫ ಲಕ್ಷ ಪರಿಹಾರದ ಚೆಕ್ ವಿತರಣೆ ಮಾಡಿ ಸಂತ್ವಾನ ಹೇಳಿದರು.
Woman worker killed in wild attack