ಚಿಕ್ಕಮಗಳೂರು: ಗುರಿ ಹೊಂದಿರುವ ವಿದ್ಯಾರ್ಥಿಗಳಿಗೆ ದಾರಿ ತೋರುವುದು ಶಿಕ್ಷಕರ ಕರ್ತವ್ಯವಾಗಿದೆ. ಶಿಕ್ಷಣ ಕೇವಲ ನೌಕರಿಗಲ್ಲ ಉತ್ತಮ ಜೀವನ ನಿರ್ವಹಣೆಗೂ ಅತ್ಯವಶ್ಯಕ ಎಂದು. ಶಾಸಕ ಹೆಚ್.ಡಿ ತಮ್ಮಯ್ಯ ಹೇಳಿದರು.
ನಗರದ ಕುವೆಂಪು ಕಲಾ ಮಂದಿರದಲ್ಲಿ ಯುನೈಟೆಡ್ ಇಂಟರ್ ನ್ಯಾಷನಲ್ ಸ್ಕೂಲ್ಯಿಂದ ನಡೆದ ಉಪನ್ಯಾಸ ಕಾರ್ಯಕ್ರಮದ ಉದ್ಘಾಟನೆ ನಡೆಸಿ ಮಾತನಾಡಿದ ಅವರು ಮಕ್ಕಳು ಕಲಿಕೆಯಲ್ಲಿ ಹೆಚ್ಚು ಆಸಕ್ತಿ ವಹಿಸಬೇಕು. ಬಾಲ್ಯದಲ್ಲಿ ಮಕ್ಕಳ ಮನಸ್ಸು ಮತ್ತು ಬುದ್ಧಿಶಕ್ತಿ ಹೆಚ್ಚು ಕ್ರೀಯಾಶೀಲತೆಯಿಂದ ಕೂಡಿರುತ್ತದೆ. ಯಾವುದೇ ವಿಷಯವನ್ನು, ಕಲೆಯನ್ನು ಕರಗತ ಮಾಡಿಕೊಳ್ಳುವಂತ ಶಕ್ತಿ ಪ್ರತಿಯೊಂದು ಮಕ್ಕಳಲ್ಲಿ ಅಡಗಿರುತ್ತದೆ. ಪೋಷಕರು ಇವುಗಳನ್ನು ಅರಿತು ಮಕ್ಕಳನ್ನು ಪ್ರೋತ್ಸಾಹಿಸಬೇಕು ಎಂದರು.
ವಿದ್ಯೆ ಎಂಬುದು ಪ್ರಬಲ ಅಸ್ತ್ರ ಇದನ್ನು ಸರಿಯಾದ ರೀತಿಯಲ್ಲಿ ಉಪಯೋಗಿಸಿಕೊಂಡಲ್ಲಿ ಪ್ರಪಂಚವನ್ನೇ ಬದಲಾಯಿಸಬಹುದು. ಮಕ್ಕಳು ವಿದ್ಯೆಯ ಜೊತೆಗೆ ಸಂಸ್ಕಾರವನ್ನು ಕಲಿತು ತಂದೆ-ತಾಯಿ, ಗುರು, ಹಿರಿಯರಿಗೆ ಗೌರವ ನೀಡುವುದನ್ನು ಕಲಿಯಬೇಕು ಎಂದ ಅವರು ಸುಮಾರು ೨೩ ವರ್ಷಗಳಿಂದ ಉತ್ತಮ ಶಿಕ್ಷಣ ನೀಡಿ, ಮಕ್ಕಳ ಭವಿಷ್ಯ ರೂಪಿಸುತ್ತಿರುವ ಈ ಸಂಸ್ಥೆಯು ಇನ್ನಷ್ಟು ಬೆಳವಣಿಗೆ ಹೊಂದಲಿ ಎಂದು ಹಾರೈಸಿದರು.
ಯುನೈಟೆಡ್ ಶಾಲೆಯ ಅಧ್ಯಕ್ಷ ಜಮೀರ್ ಅಹಮದ್ ಮಾತನಾಡಿ. ಶಿಕ್ಷಣ ಕೇವಲ ಪುಸ್ತಕ ಹಾಗೂ ಪರೀಕ್ಷೆಗೆ ಸೀಮಿತವಲ್ಲ. ಶಿಕ್ಷಣವೂ ಮಕ್ಕಳಲ್ಲಿ ವ್ಯಕ್ತಿತ ರೂಪಿಸುತ್ತದೆ. ಬದುಕು ನಿರ್ವಹಿಸುವ ಶಕ್ತಿ ನೀಡುತ್ತದೆ. ಒಬ್ಬ ಉತ್ತಮ ವಿದ್ಯಾರ್ಥಿ ಶಿಕ್ಷಣ ಸಂಸ್ಥೆಗೆ ಜೊತೆಗೆ ಸಾಮಾಜದಲ್ಲೂ ಉನ್ನತ ಸ್ಥಾನ ಗಳಿಸುತ್ತಾನೆ. ನಮ್ಮ ಸಂಸ್ಥೆಯ ಶಿಕ್ಷಕರು ಪ್ರತಿಯೊಂದು ಮಗುವಿನ ಉತ್ತಮ ಭವಿಷ್ಯಕ್ಕಾಗಿ ಶ್ರಮಿಸುತ್ತಿದ್ದಾರೆ. ವಿದ್ಯಾರ್ಥಿಗಳಲ್ಲಿ ಗುರಿ ಮುಖ್ಯ. ಪ್ರಸ್ತುತ ಸಮಾಜದಲ್ಲಿ ಜ್ಞಾನಕ್ಕೆ ಹೆಚ್ಚು ಪ್ರಾಮುಖ್ಯತೆ ದೊರಕುತ್ತಿದೆ ತಮ್ಮ ಆಸಕ್ತಿಯ ಕ್ಷೇತ್ರಗಳಲ್ಲಿ ಹೆಚ್ಚಿನ ಜ್ಞಾನ ಹೊಂದುವುದರ ಮೂಲಕ ತಮ್ಮ ಗುರಿ ತಲುಪಿ ಎಂದರು.
ಶಾಲೆಯ ಪ್ರಾಂಶುಪಾಲ ಆಯಿಶಾ ಜಮೀರ್ ಅಹಮದ್ ಮಾತನಾಡಿ ಶಾಲೆಯೂ ವಿದ್ಯೆ ಜೊತೆಗೆ ಸಮಾಜದ ಅರಿವನ್ನು ಮೂಡಿಸುತ್ತದೆ. ಪೋಷಕರು ಮಕ್ಕಳಲ್ಲಿ ವಿನಯತೆ, ಮನುಷ್ಯತ್ವ, ಸಂಸ್ಕೃತಿಗಳನ್ನು ಮನೆಯಲ್ಲೇ ಕಲಿಸಬೇಕು ಹಾಗೂ ಮಕ್ಕಳ ಸ್ವಯಂ ಕಲಿಕೆಗೆ ಅವಕಾಶ ಮಾಡಿಕೊಡಬೇಕು. ಅಂಕಗಳನ್ನು ಪ್ರತಿಯೊಂದು ಮಗುವು ಗಳಿಸಬಹುದು ಆದರೆ ಮಕ್ಕಳಲ್ಲಿ ನೈತಿಕ ಶಿಕ್ಷಣ ನೀಡಿ ಅವರನ್ನು ಸಮಾಜದ ಗೌರವಯುತ ವ್ಯಕ್ತಿಯಾಗಿ ರೂಪಿಸುವುದು ನಮ್ಮ ಕರ್ತವ್ಯ ಎಂದ ಅವರು ತಮ್ಮ ಮಕ್ಕಳ ಆಸಕ್ತಿಗಳನ್ನು ಅರಿತು ಅವರ ಮುಂದಿನ ಭವಿಷ್ಯ ನಿರ್ಮಿಸಿಕೊಳ್ಳಲು ಸಹಕರಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ನಜೀರ್ ಅಹಮದ್. ಶೇಖ್ ಇಸ್ಮಾಯಿಲ್, ಮುಖ್ಯ ಶಿಕ್ಷಕಿ ಇಂಪಾಗೌಡ, ಶಿಕ್ಷಕಿ ವನಿತ ಹೆಚ್. ಎಂ ಸೇರಿದಂತೆ ಪೋಷಕರು , ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
United International School