ಚಿಕ್ಕಮಗಳೂರು: ರಾಜ್ಯ ಸರ್ಕಾರ ಬಡ ಹಾಗೂ ಮಧ್ಯಮ ವರ್ಗದವರ ಅನುಕೂಲಕ್ಕಾಗಿ ಜಾರಿಗೊಳಿಸಿರುವ ಪಂಚ ಗ್ಯಾರಂಟಿ ಯೋಜನೆಗಳು ಸಮರ್ಪಕವಾಗಿ ಅನುಷ್ಠಾನವಾಗಬೇಕು. ಇವುಗಳಿಂದ ಜನರ ಬದುಕಿನಲ್ಲಿ ಬೆಳಕು ಮೂಡಬೇಕು ಎಂದು ಗ್ಯಾರಂಟಿ ಯೋಜನೆಗಳ ಜಿಲ್ಲಾ ಮಟ್ಟದ ಅನುಷ್ಠಾನ ಸಮಿತಿಯ ಜಿಲ್ಲಾ ಅಧ್ಯಕ್ಷರಾದ ಎಂ.ಸಿ. ಶಿವಾನಂದ ಸ್ವಾಮಿ ಹೇಳಿದರು.
ಜಿಲ್ಲಾ ಪಂಚಾಯಿತಿ ಮಿನಿ ಸಭಾಂಗಣದಲ್ಲಿ ಇಂದು ನಡೆದ ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ ಅಸಹಾಯಕ ಮತ್ತು ಬಡ ಕುಟುಂಬಗಳಿಗೆ ವರದಾನವಾಗಿರುವ ಪಂಚ ಗ್ಯಾರಂಟಿ ಯೋಜನೆಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸಲುವಲ್ಲಿ ಜಿಲ್ಲೆಯು ರಾಜ್ಯದಲ್ಲೇ ಪ್ರಥಮ ಸ್ಥಾನ ಗಳಿಸಿದೆ. ರಾಜ್ಯ ಸರ್ಕಾರವು ಸಮಾಜದ ಹಿಂದುಳಿದ ವರ್ಗದ ಜನರನ್ನು ಆರ್ಥಿಕವಾಗಿ ಸಬಲರನ್ನಾಗಿಸಲು ಅವರ ಜೀವನ ಮಟ್ಟ ಸುಧಾರಿಸಲು ಹಲವಾರು ಜನಪರ ಯೋಜನೆಗಳನ್ನು ಜಾರಿ ಮಾಡಿ ಅವರನ್ನು ಸಮಾಜದ ಮುಖ್ಯವಾಹಿನಿಗೆ ತರಲು ಶ್ರಮಿಸುತ್ತಿದೆ. ಈ ಕಾರ್ಯಕ್ಕೆ ಬೆಂಬಲವಾಗಿ ಗೃಹಲಕ್ಷ್ಮಿ, ಗೃಹಜ್ಯೋತಿ, ಅನ್ನಭಾಗ್ಯ, ಯುವನಿಧಿ ಹಾಗೂ ಶಕ್ತಿ ಯೋಜನೆಗಳು ಸಹಕಾರಿಯಾಗಿವೆ ಎಂದರು.
ಜಿಲ್ಲೆಯಾದ್ಯಂತ ೨೦೨೪ರ ಅಕ್ಟೋಬರ್ ವರೆಗೆ ಗೃಹಲಕ್ಷ್ಮಿ ಯೋಜನೆಯಡಿ ೨,೭೦,೨೭೩ ಫಲಾನುಭವಿಗಳು ನೋಂದಾಯಿಸಿಕೊಂಡಿದ್ದ್ದು ಒಟ್ಟು ರೂ. ೫೨,೫೯,೩೨,೦೦೦ ಹಣ ನೇರವಾಗಿ ಫಲಾನುಭವಿಗಳ ಖಾತೆಗೆ ವರ್ಗಾಹಿಸಲಾಗಿದ್ದು, ಶೇ ೯೬.೨೦ ರಷ್ಟು ಪ್ರಗತಿಯಾಗಿದೆ. ತಿದ್ದುಪಡಿಯಾದ ಪಡಿತರ ಚೀಟಿಗಳ, ಆದಾಯ ತೆರಿಗೆ ಪಾವತಿದಾರರಲ್ಲದ ಫಲಾನುಭವಿಗಳ ಪಟ್ಟಿಯನ್ನು ಸರಿಪಡಿಸಲು ಕೇಂದ್ರ ಕಛೇರಿಗೆ ಕಳುಹಿಸಲಾಗಿದೆ. ೪೪ ಓPಅI Iಟಿಚಿಛಿಣive ಫಲಾನುಭವಿಗಳ ಮಾಹಿತಿಯನ್ನು ಸರಿಪಡಿಸಲು ಕ್ರಮವಹಿಸಲಾಗುತ್ತಿದೆ ಎಂದ ಅವರು. ‘ಮಹಿಳೆಯರಿಗಲ್ಲದೇ ತೃತೀಯ ಲಿಂಗಿಗಳಿಗೂ ಯೋಜನೆಯನ್ನು ವಿಸ್ತರಿಸಿದ್ದು, ಜಿಲ್ಲಾಧಿಕಾರಿಗಳ ಕಛೇರಿಯಿಂದ ಪಡೆದ ಗುರುತಿನ ಚೀಟಿ ಹೊಂದಿರುವ ತೃತೀಯ ಲಿಂಗಿಗಳು ಈ ಯೋಜನೆಯಡಿ ನೊಂದಾಯಿಸಿಕೊಳ್ಳಬಹುದಾಗಿದ್ದು, ಜಿಲ್ಲೆಯಲ್ಲಿ ೩೮೧ ತೃತೀಯ ಲಿಂಗಿಗಳು ಇದ್ದಾರೆ. ಈವರೆಗೆ ೨೦ ಜನ ತೃತೀಯ ಲಿಂಗಿಗಳು ನೊಂದಾಯಿಸಿಕೊಂಡಿರುತ್ತಾರೆ. ಈಗಾಗಲೇ ಇಲಾಖೆಯಿಂದ ಈ ಯೋಜನೆಯಡಿ ನೊಂದಾಯಿಸಿಕೊಳ್ಳುವಂತೆ ಅವರಿಗೆ ಉತ್ತೇಜನ ನೀಡುತ್ತಿದ್ದು, ಗ್ಯಾರಂಟಿ ಸಮಿತಿಯ ಪ್ರತಿನಿಧಿಗಳು ತಮ್ಮ ಗಮನಕ್ಕೆ ಬಂದಂತಹ ತೃತೀಯ ಲಿಂಗಿಗಳನ್ನು ಯೋಜನೆಗೆ ನೊಂದಾಯಿಸಿಕೊಳ್ಳುವಂತೆ ತಿಳಿಸಬೇಕೆಂದು ಹೇಳಿದರು.
ಶಕ್ತಿ ಯೋಜನೆಯಡಿ ಜೂನ್ ೨೦೨೩ ರಿಂದ ಡಿಸೆಂಬರ್ ೨೦೨೪ರವರೆಗೆ ಒಟ್ಟು ೩,೨೭,೯೧,೭೮೫ ಮಹಿಳಾ ಪ್ರಯಾಣಿಕರು ಕೆ.ಎಸ್.ಆರ್.ಟಿ.ಸಿ. ಬಸ್ಗಳಲ್ಲಿ ಪ್ರಯಾಣ ಮಾಡಿದ್ದು, ಈ ಬಾಬ್ತು ರೂ. ೧೨೪.೪೫ ಕೋಟಿ ಹಣ ಸರ್ಕಾರದಿಂದ ನಿಗಮಕ್ಕೆ ಬಿಡುಗಡೆ ಮಾಡಲಾಗಿದೆ ಎಂದು ವಿಭಾಗೀಯ ನಿಯಂತ್ರಕರು, ಕೆ.ಎಸ್.ಆರ್.ಟಿ.ಸಿ. ಚಿಕ್ಕಮಗಳೂರು ವಿಭಾಗ ಇವರು ಸಭೆಗೆ ಮಾಹಿತಿ ನೀಡಿದರು.
ಯುವನಿಧಿ ಯೋಜನೆಯಡಿ ಜನವರಿ ೨೦೨೪ ರಿಂದ ಡಿಸೆಂಬರ್ ೨೦೨೪ ರವರೆಗೆ ೧೩,೮೨೩ ಡಿಪ್ಲೋಮೊ ಮತ್ತು ಪದವಿ ಪಡೆದ ನಿರುದ್ಯೋಗಿಗಳು ನೊಂದಾಯಿಸಿಕೊಂಡಿದ್ದು, ರೂ. ೪,೧೪,೬೯,೦೦೦ ನಿರುದ್ಯೋಗ ಭತ್ಯೆಯನ್ನು ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ಡಿಬಿಟಿ ಮೂಲಕ ವರ್ಗಾವಣೆಯಾಗಿರುತ್ತದೆ. ಜಿಲ್ಲಾ ಉದ್ಯೋಗಾಧಿಕಾರಿಯವರು ಸಭೆಗೆ ಮಾಹಿತಿ ನೀಡಿದರು.
೨೦೨೩ ಹಾಗೂ ೨೦೨೪ರಲ್ಲಿ ಪದವಿ/ಸ್ನಾತಕೋತ್ತರ ಪದವಿ/ಡಿಪ್ಲೋಮಾ ಉತ್ತೀರ್ಣರಾದ ವಿದ್ಯಾರ್ಥಿಗಳು ನೊಂದಣಿ ಮಾಡಿಸಲು ನೋಂದಣಿ ಪ್ರಕ್ರಿಯೆ ಆರಂಭಿಸಲು ಸರ್ಕಾರದಿಂದ ನಿರ್ದೇಶನವಿದ್ದು, ೨೦೨೫ರ ಫೆಬ್ರವರಿ ೧೫ರವರೆಗೆ ಎಲ್ಲಾ ತಾಲ್ಲೂಕು ಮಟ್ಟದಲ್ಲಿ ನೊಂದಣಿ ಅಭಿಯಾನ ಕೈಗೊಳ್ಳಲಾಗಿದೆ. ಸರ್ಕಾರದಿಂದ ಸರಬರಾಜು ಆಗಿರುವ ಬ್ಯಾನರ್, ಪೋಸ್ಟರ್ಗಳನ್ನು ಕಾಲೇಜು, ಜನಸಂದಣಿ ಹಾಗೂ ಬಸ್ ನಿಲ್ದಾಣಗಳಲ್ಲಿ ಅಳವಡಿಸಿ ವ್ಯಾಪಕ ಪ್ರಚಾರ ಕಾರ್ಯಕೈಗೊಳ್ಳಲಾಗಿದೆ. ಪ್ರಾಧಿಕಾರದ ಎಲ್ಲ ಪ್ರತಿನಿಧಿಗಳು ಅರ್ಹ ಫಲಾನುಭವಿಗಳನ್ನು ಈ ಯೋಜನೆಯಡಿ ನೊಂದಣಿ ಮಾಡಿಸುವಲ್ಲಿ ಸಹಕಾರ ನೀಡಬೇಕೆಂದು ಜಿಲ್ಲಾ ಉದ್ಯೋಗಾಧಿಕಾರಿಗಳು ಮನವಿ ಮಾಡಿದರು.
ಗ್ಯಾರಂಟಿ ಯೋಜನೆಯ ಫಲಾನುಭವಿಗಳಿಗೆ ಮತ್ತು ಉಳಿದ ಎಲ್ಲಾ ನಿರುದ್ಯೋಗಿಗಳಿಗೆ ಸ್ವಯಂ ಉದ್ಯೋಗಕ್ಕಾಗಿ ವಿವಿಧ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಈಗಾಗಲೇ ೦೯ ತರಬೇತಿ ಕೇಂದ್ರಗಳನ್ನು ಗುರುತಿಸಲಾಗಿದೆ. ತಮ್ಮ ವ್ಯಾಪ್ತಿಯ ನಿರುದ್ಯೋಗಿಗಳನ್ನು ಈ ತರಬೇತಿ ಕಾರ್ಯಕ್ರಮಕ್ಕೆ ನೊಂದಣಿ ಮಾಡಿಸಿಕೊಳ್ಳಲು ಉತ್ತೇಜನ ನೀಡಬೇಕೆಂದು ಜಿಲ್ಲಾ ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆ ಇಲಾಖಾಧಿಕಾರಿಗಳು ಹೇಳಿದರಲ್ಲದೆ ಇಲಾಖೆಯಿಂದ ನೀಡುವ ವಿವಿಧ ತರಬೇತಿ ಕಾರ್ಯಕ್ರಮಗಳ ಬಗ್ಗೆ ಹಾಗೂ ತರಬೇತಿ ಪೂರ್ಣಗೊಳಿಸಿದ ಅಭ್ಯರ್ಥಿಗಳಿಗೆ ಬ್ಯಾಂಕ್ಗಳಿಂದ ದೊರಕುವ ಸಾಲ ಸೌಲಭ್ಯಗಳ ಬಗ್ಗೆ ಸಭೆಗೆ ಮಾಹಿತಿ ನೀಡಿದರು.
ಜಿಲ್ಲೆಯಲ್ಲಿ ಒಟ್ಟು ೨,೫೮,೯೮೧ ಪಡಿತರ ಚೀಟಿದಾರರಿದ್ದಾರೆ ಇವುಗಳಲ್ಲಿ ೨,೪೨,೭೦೩ ಪಡಿತರ ಚೀಟಿಗಳು ಡಿಬಿಟಿ ಯೋಜನೆಗೆ ಅರ್ಹವಾಗಿದೆ. ಡಿಸೆಂಬರ್ ಅಂತ್ಯದವರೆಗೆ ೨,೪೨,೭೦೩ ಪಡಿತರದಾರರಿಗೆ ೧೯೧.೮೮ ಕೋಟಿ ಅಕ್ಕಿ ಬಾಬ್ತಿನ ಹಣ ಪಡಿತರದಾರರ ಬ್ಯಾಂಕ್ ಖಾತೆಗಳಿಗೆ ಡಿಬಿಟಿ ಮೂಲಕ ವರ್ಗಾವಣೆಯಾಗಿದೆ. ಬ್ಯಾಂಕ್ ಖಾತೆಗೆ ಆಧಾರ್ ಜೋಡಣೆ ಸಮಸ್ಯೆಯಿಂದಾಗಿ ೬೦೯೫ ಪಡಿತರದಾರರಿಗೆ ಹಣ ವರ್ಗಾವಣೆಯಾಗಿರುವುದಿಲ್ಲ. ಇವುಗಳನ್ನು ಪರಿಶೀಲಿಸಿ ಶೇಕಡ ೧೦೦ರ? ಫಲಾನುಭವಿಗಳಿಗೆ ಹಣ ವರ್ಗಾವಣೆಗೆ ಕ್ರಮವಹಿಸಲಾಗುವುದೆಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.
ಅಧ್ಯಕ್ಷರು ಮಾತನಾಡಿ ಯಾವ ಯಾವ ಪಡಿತರದಾರರಿಗೆ ಅನ್ನಭಾಗ್ಯ ಯೋಜನೆಯ ಹಣ ವರ್ಗಾವಣೆಯಾಗಿಲ್ಲ ಅಂತಹ ಪಡಿತರದಾರರ ಹಾಗೂ ಅವರುಗಳು ಯಾವ ನ್ಯಾಯಬೆಲೆ ಅಂಗಡಿ ವ್ಯಾಪ್ತಿಗೆ ಬರುತ್ತಾರೆಂಬ ಮಾಹಿತಿಯನ್ನು ಆಯಾ ಭಾಗದ ಪ್ರಾಧಿಕಾರದ ಪ್ರತಿನಿಧಿಗಳಿಗೆ ನೀಡಬೇಕು, ಪ್ರತಿನಿಧಿಗಳಿಗೆ ಯೋಜನೆ ಸಂಬಂಧ ಸಹಕರಿಸುವಂತೆ ಆಹಾರ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳ ಮಾಹಿತಿಯನ್ನು ಜಿಲ್ಲೆಯ ಪ್ರತಿ ನಾಗರೀಕರಿಗೂ ತಲುಪಿಸಲು ಕಾರ್ಯಕ್ರಮಗಳನ್ನು ಆಯೋಜಿಸಿ ವ್ಯಾಪಕ ಪ್ರಚಾರ ಮಾಡಿ ಅರಿವು ಮೂಡಿಸಲಾಗುತ್ತಿದೆ. ಯುವ ಜನತೆಗೆ ಉದ್ಯೋಗ ಸೃಷ್ಠಿಸಿ ಹಾಗೂ ಸ್ವಾವಲಂಭಿ ಬದುಕು ನಿರ್ಮಿಸಿಕೊಡುವ ಉದ್ದೇಶದಿಂದ ಆಸಕ್ತಿ ಇರುವ ಕ್ಷೇತ್ರಗಳಲ್ಲಿ ತರಬೇತಿ ನೀಡಿ ನಿರುದ್ಯೋಗ ಸಮಸ್ಯೆಯನ್ನು ಹೋಗಲಾಡಿಸಲು ಕ್ರಮವಹಿಸಲಾಗುತ್ತಿದೆ ಎಂದ ಅವರು ಸಾರ್ವಜನಿಕ ಸ್ಥಳಗಳಲ್ಲಿ ಭಿತ್ತಿ ಪತ್ರಗಳು ಹಾಗೂ ಬ್ಯಾನರ್ಗಳನ್ನು ಆಳವಡಿಸಿ ಯೋಜನೆಗಳ ಕುರಿತು ಅರಿವು ಮೂಡಿಸಲಾಗುತ್ತಿದೆ ಎಂದರು.
ಗ್ಯಾರಂಟಿ ಯೋಜನೆಗಳ ತಾಲ್ಲೂಕು ಅಧ್ಯಕ್ಷರು ಹಾಗೂ ಸದಸ್ಯರು ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.
District level guarantee scheme progress review meeting