ಚಿಕ್ಕಮಗಳೂರು: ಜಲ್ ಜೀವನ್ ಮಿಷನ್ ಯೋಜನೆಯಡಿ ಮೊದಲು ನೀರಿನ ಮೂಲವನ್ನು ಗುರುತಿಸದೆ ಪೈಪ್ಲೈನ್, ಟ್ಯಾಂಕ್ ನಿರ್ಮಾಣ ಇನ್ನಿತರೆ ಕಾಮಗಾರಿಗಳನ್ನು ಕೈಗೊಂಡರೆ ಜಿಲ್ಲಾಧಿಕಾರಿಗಳ ಮೂಲಕ ಸಂಬಂಧಪಟ್ಟ ಇಂಜಿನೀಯರ್ ಮತ್ತು ಗುತ್ತಿಗೆದಾರರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುವುದು ಎಂದು ಉಡುಪಿ-ಚಿಕ್ಕಮಗಳೂರು ಸಂಸದ ಕೋಟಾ ಶ್ರೀನಿವಾಸ ಪೂಜಾರಿ ಎಚ್ಚರಿಸಿದರು.
ಅವರು ಶುಕ್ರವಾರ ಚಿಕ್ಕಮಗಳೂರು ಪ್ರೆಸ್ ಕ್ಲಬ್ ವತಿಯಿಂದ ನಡೆದ ತಿಂಗಳ ಅತಿಥಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾಧ್ಯಮ ಪ್ರತಿನಿಧಿಗಳ ಜೊತೆ ಸಂವಾದದಲ್ಲಿ ಪಾಲ್ಗೊಂಡು ಮಾತನಾಡಿ ಬಹಳಷ್ಟು ಕಡೆ ನೀರಿನ ಮೂಲವೇ ಇಲ್ಲದಿದ್ದರೂ ಪೈಪ್ಲೈನ್ ಕಾಮಗಾರಿ ಮಾಡಿ, ನಲ್ಲಿಗಳನ್ನೂ ಅಳವಡಿಸಲಾಗಿದೆ. ಕಾಮಗಾರಿ ಬಿಲ್ ಪಾವತಿ ಆಗಿದ್ದರೂ ನೀರು ಮಾತ್ರ ಪೂರೈಕೆ ಆಗುತ್ತಿಲ್ಲ ಎನ್ನುವ ದೂರುಗಳಿರುವ ಬಗ್ಗೆ ಪ್ರತಿಕ್ರಿಯಿಸಿದರು.
ಯೋಜನೆ ಆರಂಭಿಸುವ ಮುನ್ನ ಗ್ರಾ.ಪಂ.ಗಮನಕ್ಕೆ ತರಬೇಕು. ಇಂಜಿನೀಯರುಗಳು ಹೇಳಿದ ರೀತಿ ಗುತ್ತಿಗೆದಾರರು ಕೆಲಸ ಮಾಡಬೇಕು. ಈ ಸಂದರ್ಭದಲ್ಲಿ ನೀರಿನ ಮೂಲವನ್ನು ಮೊದಲು ಖಾತ್ರಿಪಡಿಸಿಕೊಂಡು ಉಳಿದೆಲ್ಲ ಕಾಮಗಾರಿ ಕೈಗೊಳ್ಳಬೇಕು ಇಲ್ಲವಾದಲ್ಲಿ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುವುದು ಎಂದು ಎಚ್ಚರಿಸಲಾಗಿದೆ. ಈಗ ದೂರುಗಳು ಕಡಿಮೆಯಾಗಿವೆ ಎಂದು ತಿಳಿಸಿದರು.
ತಳಮಟ್ಟದ ಕುಶಲಕರ್ಮಿಗಳನ್ನು ಆರ್ಥಿಕವಾಗಿ ಸ್ವಾವಲಂಬಿಗಳಾಗಿಸುವ ಉದ್ದೇಶದಿಂದ ಕೇಂದ್ರ ಜಾರಿಗೆ ತಂದಿರುವ ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆಯಡಿ ಜಿಲ್ಲೆಯಲ್ಲಿ ೪೫೦೦ ಮಂದಿಗೆ ಕೌಶಲಾಭಿವೃದ್ಧಿ ತರಬೇತಿ ನೀಡಲಾಗಿದೆ. ಟೈಲರಿಂಗ್ ತರಬೇತಿಗೆಂದೇ ೧೯ ಸಾವಿರ ಅರ್ಜಿಗಳು ಬಂದಿವೆ. ಅವರಲ್ಲದೆ ಇತರೆ ಕುಲಕಸುಬುದಾರರಿಗೂ ತರಬೇತಿ ಹಾಗೂ ಸಾಲಸೌಲಭ್ಯಗಳಿದ್ದು ಸದುಪಯೋಗಪಡಿಸಿಕೊಳ್ಳಬೇಕು ಎಂದರು.
ನಮ್ಮ ರಾಜ್ಯದಲ್ಲಿ ಉಚಿತ್ ವಿದ್ಯುತ್ನ ಗೃಹಜ್ಯೋತಿ ಯೋಜನೆ ಜಾರಿಯಲ್ಲಿರುವುದರಿಂದ ಕೇಂದ್ರದ ಸೂರ್ಯಘರ್ ಯೋಜನೆಯಡಿ ಸೋಲಾರ್ ಪ್ಯಾನಲ್ ಅಳವಡಿಸಕೊಳ್ಳುವ ಸಬ್ಸಿಡಿ ಯೋಜನೆಗೆ ಬೇಡಿಕೆ ಕಡಿಮೆ ಇದೆ. ಗೃಹ ಜ್ಯೋತಿಯಿಂದ ಹೊರಗಿರುವ ಸುಮಾರು ೯೦ ಸಾವಿರ ಕುಟುಂಬಗಳಿವೆ ಅಂತಹವರಿಗೆ ೨ ಲಕ್ಷ ರೂ. ಸಾಲ, ೭೮ ಸಾವಿರ ರೂ. ಸಬ್ಸಿಡಿ ನೀಡಲಾಗುವುದು. ಈಗಾಗಲೇ ಜಿಲ್ಲೆಯಲ್ಲಿ ೩೧೨ ಜನರ ಮನೆಗಳಿಗೆ ರೂಫ್ ಅಳವಡಿಸುವ ಕೆಲಸ ಆಗುತ್ತಿದೆ. ಚಿಕ್ಕಮಗಳೂರು ತಾಲ್ಲೂಕಿನಲ್ಲಿ ೨೪ ಜನರಿಗೆ ಮೊದಲ ಹಂತದ ಸಬ್ಸಿಡಿ ಬಂದಿದೆ ಎಂದರು.
ತಾವು ಸಂಸದರಾದ ನಂತರ ಕೇಂದ್ರ ಸರ್ಕಾರವು ರಾಜ್ಯದ ಬಿಎಸ್ಎನ್ಎಲ್ಗೆ ೯೭ ಬ್ಯಾಟರಿಗಳನ್ನು ಪೂರೈಸಿದೆ. ಅದರಲ್ಲಿ ೫೨ ಬ್ಯಾಟರಿಗಳು ಚಿಕ್ಕಮಗಳೂರು ಜಿಲ್ಲೆಗೆ ಬಂದಿವೆ. ೨೮ ಹೊಸ ಟವರ್ಗಳು ಮಂಜೂರಾಗಿವೆ. ಈ ಪೈಕಿ ೨೫ ಕ್ಕೆ ಜಿಲ್ಲಾಧಿಕಾರಿಗಳು ಸ್ಥಳ ನೀಡಿದ್ದಾರೆ. ೧೯ ಟವರ್ ನಿರ್ಮಾಣ ಪೂರ್ಣಗೊಂಡಿದೆ. ಈ ಪೈಕಿ ೧೬ ಟವರ್ಗಳಿಗೆ ೪ಜಿ ಸಂಪರ್ಕ ನೀಡಲಾಗಿದೆ. ಉಳಿದವರು ಪ್ರಗತಿಯಲ್ಲಿದೆ ೩ ಟವರ್ಗಳ ಅಳವಡಿಕೆಗೆ ಜಾಗ ಮಂಜೂರಾಗಬೇಕಿದೆ ಎಂದು ವಿವರಿಸಿದರು.
ಇದಲ್ಲದೆ ೪೩ ಹೊಸ ಟವರ್ಗಳಿಗೆ ಸ್ಥಳ ಗುರುತಿಸುವ ಕೆಲಸ ಆಗುತ್ತಿದೆ. ಎಲ್ಲ ಟವರ್ಗಳನ್ನು ೪ಜಿಗೆ ಉನ್ನತೀಕರಿಸುವ ಕೆಲಸ ಆಗುತ್ತಿದೆ. ಈಗಾಗಲೇ ೧೫೯ ಟವರ್ಗಳಿಗೆ ಸಲಕರಣೆಗಳು ಪೂರೈಕೆಯಾಗಿದೆ. ೧೨೬ ಟವರ್ಗಳಿಗೆ ೪ಜಿ ಸಂಪರ್ಕ ಕಲ್ಪಿಸಲಾಗಿದೆ ಎಂದು ತಿಳಿಸಿದರು.
ಹೊರನಾಡಿನಲ್ಲಿ ಒಂದು ಟವರ್ಗೆ ಸ್ಯಾಟಲೈಟ್ ಸಂಪರ್ಕ ನೀಡಲಾಗಿದೆ. ಜಿಲ್ಲೆಯು ನಕ್ಸಲ್ಪೀಡಿತವಾಗಿರುವುದರಿಂದ ಬಿಎಸ್ಎನ್ಎಲ್ ಸಂಪರ್ಕ ಜಾಲ ಬಲಪಡಿಸುವ ಸಲುವಾಗಿ ಎಲ್ಲಾ ಟವರ್ಗಳಿಗೆ ಸ್ಯಾಟಲೈಟ್ ಸಂಪರ್ಕ ಕಲ್ಪಿಸಬೇಕು ಎಂದು ಕೇಂದ್ರಕ್ಕೆ ಮನವಿ ಮಾಡಿದ್ದೇವೆ ಎಂದರು.
ಇತ್ತೀಚೆಗೆ ಬಿಎಸ್ಎನ್ಎಲ್ನಿಂದ ಏರ್ಟೆಲ್, ಜಿಯೋ ಇನ್ನಿತರೆ ಸಂಪರ್ಕಕ್ಕೆ ಜಿಗಿಯುತ್ತಿರುವವರ ಸಂಖ್ಯೆ ಕಡಿಮೆಆಗಿದೆ. ಬದಲಿಗೆ ಪ್ರತಿದಿನ ಸುಮಾರು ೧೦೦ ಮಂದಿ ಬೇರೆ ಕಂಪನಿಗಳಿಂದ ಹೊರಬಂದು ಬಿಎಸ್ಎನ್ಎಲ್ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ ಎಂದರು.
ಈ ಬಾರಿ ಕೇಂದ್ರ ಬಜೆಟ್ನಲ್ಲಿ ಚಿಕ್ಕಮಗಳೂರು-ಸಕಲೇಶಪುರ ರೈಲ್ವೇ ಮಾರ್ಗಕ್ಕೆ ೭೨ ಕೋಟಿ ರೂ. ಅನುದಾನ ಮೀಸಲಿಡಲಾಗಿದೆ. ಇದಕ್ಕಾಗಿ ರೈಲ್ವೇ ಸಚಿವರನ್ನು ಅಭಿನಂದಿಸುತ್ತೇವೆ. ಚಿಕ್ಕಮಗಳೂರಿನಿಂದ ಬೆಂಗಳೂರಿಗೆ ರಾತ್ರಿ ರೈಲಿಗೆ ಬೇಡಿಕೆ ಇಡಲಾಗಿದೆ. ಚಿಕ್ಕಮಗಳೂರಿನಿಂದ ಬೆಂಗಳೂರು ಮಾರ್ಗವಾಗಿ ತಿರುಪತಿಗೆ ರೈಲು ಓಡಿಸಲು ಪ್ರಸ್ತಾವನೆ ಸಲ್ಲಿಸಲಾಗಿದ್ದು, ಅನುಮತಿ ಸಿಗುವ ಭರವಸೆ ಇದೆ ಎಂದರು.
ಚಿಕ್ಕಮಗಳೂರು-ಬೇಲೂರು ಹೆದ್ದಾರಿ ಅಭಿವೃದ್ಧಿ ಬಹು ಬೇಡಿಕೆಯದ್ದಾಗಿದ್ದು, ಈ ವಾರದಲ್ಲಿ ಹಾಸನದಿಂದ ಬೇಲೂರು ವರೆಗಿನ ಕಾಮಗಾರಿ ಆರಂಭವಾಗಲಿದೆ. ಚಿಕ್ಕಮಗಳೂರು-ಬೇಲೂರು ರಸ್ತೆ ಕಾಮಗಾರಿ ಟೆಂಡರ್ ಹಂತದಲ್ಲಿದೆ ಎಂದು ತಿಳಿಸಿದರು.
ಎನ್ಎಚ್ ೧೬೯ ರ ಗಡಿಕಲ್-ಎಸ್ಕೆ ಬಾರ್ಡರ್ ರಸ್ತೆ ೫೨೦ ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ ಹೊಂದುತ್ತಿದೆ. ಇದಕ್ಕೆ ಭೂ ಸ್ವಾಧೀನ ಪ್ರಕ್ರಿಯೆ ಮುಗಿಯಬೇಕಿದ್ದು, ಜಿಲ್ಲಾಧಿಕಾರಿಗಳೊಂದಿಗೆ ಸಭೆ ನಡೆಸಿ ಅಂತಿಮಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.
ಚಿಕ್ಕಮಗಳೂರಿನ ನಂದೀಪುರದಿಂದ ಕಡೂರಿನ ಎನ್ಎಚ್-೧೭ ರ ಕಾಮಗಾರಿಗೆ ೭೦ ಕೋಟಿ ರೂ. ಪ್ರಸ್ತಾವನೆ ಸಲ್ಲಿಸಲಾಗಿದೆ. ಇದು ತುಮಕೂರು ವಿಭಾಗಕ್ಕೆ ಸೇರಲಿದೆ ಎಂದು ಹೇಳಿದರು. ಪ್ರತಿ ಕ್ಷೇತ್ರದಲ್ಲಿ ಶಾಸಕರೊಂದಿಗೆ ಚರ್ಚಿಸಿ ಜಲ್ ಜೀವನ್ ಮಿಷನ್ ಸೇರಿದಂತೆ ಕೇಂದ್ರ ಸರ್ಕಾರದ ಯೋಜನೆಗಳ ಪ್ರಗತಿ ಪರಿಶೀಲನೆ ಸಭೆಗಳನ್ನು ನಡೆಸಲು ಉದ್ದೇಶಿಸಲಾಗಿದೆ ಎಂದರು.
ಪ್ರೆಸ್ ಕ್ಲಬ್ ಅಧ್ಯಕ್ಷ ಪಿ.ರಾಜೇಶ್ ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ತಾರಾನಾಥ ನಿರೂಪಿಸಿದರು. ಉಪಾಧ್ಯಕ್ಷ ಸಿ.ಡಿ.ಚಂದ್ರೇಗೌಡ ಉಪಸ್ಥಿತರಿದ್ದರು. ಎ.ಎನ್.ಮೂರ್ತಿ ಪ್ರಾರ್ಥಿಸಿದರು. ಸಿ.ಸುರೇಶ್ ಸ್ವಾಗತಿಸಿದರು. ಬಿಜೆಪಿ ಮುಖಂಡರುಗಳಾದ ಎಚ್.ಸಿ.ಕಲ್ಮರುಡಪ್ಪ, ದೀಪಕ್ ದೊಡ್ಡಯ್ಯ, ಹಿರೇಮಗಳೂರು ಪುಟ್ಟಸ್ವಾಮಿ, ಪ್ರದೀಪ್ ಇತರರು ಇದ್ದರು.
Guest of the Month program hosted by the Press Club