ಚಿಕ್ಕಮಗಳೂರು: ಮೂಡಿಗೆರೆ ತಾಲೂಕು ಸರ್ವೆ ಇಲಾಖೆಯ ಅಧಿಕಾರಿ ಶಿವಕುಮಾರ್ (೫೨) ನೇಣು ಬಿಗಿದುಕೊಂಡು ಅತ್ಮಹತ್ಯೆಗೆ ಶರಣಾಗಿದ್ದಾರೆ.
ಮೂಡಿಗೆರೆ ಪಟ್ಟಣದ ತನ್ನೊಳ ರಸ್ತೆಯಲ್ಲಿ ಬಾಡಿಗೆಗಿದ್ದ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಅವರ ಮೃತ ದೇಹ ಪತ್ತೆಯಾಗಿದೆ. ಗುರುವಾರ ಅವರು ತಾವಿದ್ದ ಬಾಡಿಗೆ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿರುವುದು ಕಂಡುಬಂದಿದೆ. ಬೆಳಗ್ಗೆ ಸಮೀಪದ ಟೀ ಅಂಗಡಿಯಲ್ಲಿ ಟೀ ಕುಡಿದು ಮನೆಗೆ ತೆರಳಿದ್ದರೂ, ನಂತರ ಅವರು ಮನೆಯಲ್ಲಿ ನೇಣಿಗೆ ಶರಣಾಗಿದ್ದಾರೆ ಎನ್ನಲಾಗಿದೆ.
ಮೂಡಿಗೆರೆ ಸರ್ವೆ ಇಲಾಖೆಯಲ್ಲಿ ಕಳೆದ ಕೆಲವು ವರ್ಷಗಳಿಂದ ಹಿರಿಯ ಸರ್ವೆಯರಾಗಿ ಶಿವಕುಮಾರ್ ಕಾರ್ಯನಿರ್ವಹಿಸುತ್ತಿದ್ದರು. ತುಮಕೂರು ಜಿಲ್ಲೆ, ಗುಬ್ಬಿ ಮೂಲದವರಾದ ಶಿವಕುಮಾರ್ ಮೂಡಿಗೆರೆಯಲ್ಲಿ ಬಾಡಿಗೆ ಮನೆಯಲ್ಲಿ ಒಂಟಿಯಾಗಿ ವಾಸವಾಗಿದ್ದರು ಅವರ ಪತ್ನಿ ಮತ್ತು ಮಗಳು ಬೆಂಗಳೂರಿನಲ್ಲಿದ್ದು ಮಗಳು. ಬೆಂಗಳೂರಿನಲ್ಲಿ ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದಾಳೆ ಎಂದು ತಿಳಿದು ಬಂದಿದೆ.
ಶಿವಕುಮಾರ್ ಅವರ ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ. ಅವರು ಕಳೆದ ಕೆಲದಿನಗಳಿಂದ ಖಿನ್ನತೆಗೆ ಒಳಗಾಗಿದ್ದರು ಎನ್ನಲಾಗಿದೆ. ಬುಧವಾರ ಕಚೇರಿಯಲ್ಲಿ ತೀವ್ರ ವಿಚಲಿತರಾಗಿದ್ದರು ಎಂದು ತಿಳಿದುಬಂದಿದ್ದು, ನಡುರಾತ್ರಿವರೆಗೆ ಕಚೇರಿಯ ಕೆಲ ಸಿಬ್ಬಂದಿಗಳು ಅವರೊಂದಿಗಿದ್ದು ಧೈರ್ಯ ತುಂಬುವ ಕೆಲಸ ಮಾಡಿದ್ದರು ಎನ್ನಲಾಗಿದೆ.
ಮೂಡಿಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಪ್ರಕರಣದ ಬಗ್ಗೆ ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದು ಬರಬೇಕಾಗಿದೆ. ಶಿವಕುಮಾರ್ ಅವರು ಮೂಡಿಗೆರೆ ತಾಲ್ಲೂಕು ಸರ್ಕಾರಿ ನೌಕರರ ಸಂಘದ ನಿರ್ದೇಶಕರಾಗಿಯೂ ಕಾರ್ಯನಿರ್ವಹಿಸುತ್ತಿದ್ದರು.
Taluk Survey Department Officer commits suicidev