ಚಿಕ್ಕಮಗಳೂರು: ಶಾಸಕಾಂಗ ಹಾಗೂ ಕಾರ್ಯಾಂಗ ಸೇರಿ ಕಾರ್ಯನಿರ್ವಹಿಸಿದಲ್ಲಿ ಸರ್ಕಾರದ ಯೋಜನೆಗಳನ್ನು ಜನ ಸಾಮಾನ್ಯರಿಗೆ ತಲುಪಿಸಲು ಸಹಕಾರಿಯಾಗುತ್ತವೆ. ಸರ್ಕಾರದ ಯೋಜನೆಗಳನ್ನು ಕ್ಷೇತ್ರದ ಪ್ರತಿಯೊಬ್ಬ ಸಾರ್ವಜನಿಕರಿಗೂ ತಲುಪಿಸಿ ಅವರ ಸಮಸ್ಯೆಗಳಿಗೆ ಸ್ಪಂಧಿಸಿ ಬಗೆಹರಿಸುವುದೇ ನನ್ನ ಕರ್ತವ್ಯ ಎಂದು ಶಾಸಕ ಹೆಚ್.ಡಿ ತಮ್ಮಯ್ಯ ಹೇಳಿದರು.
ಶನಿವಾರ ಜಿಲ್ಲಾ ಪಂಚಾಯಿತಿ ಹಾಗೂ ತಾಲ್ಲೂಕು ಪಂಚಾಯಿ ಲಕ್ಕಮ್ಮನಹಳ್ಳಿ ಮತ್ತು ಬಿಳೇಕಲ್ಲಹಳ್ಳಿ ಗ್ರಾಮ ಪಂಚಾಯಿತಿ ವತಿಯಿಂದ ಲಕ್ಕಮ್ಮನಹಳ್ಳಿ ಗ್ರಾಮ ಪಂಚಾಯಿತಿ ಆವರಣದಲ್ಲಿ ಆಯೋಜಿಸಿದ್ದ ಜನ ಸಂಪರ್ಕ ಸಭೆಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಸಾರ್ವಜನಿಕರು ತಮ್ಮ ಸಮಸ್ಯೆಗಳನ್ನು ಹಿಡಿದು ಜಿಲ್ಲಾ ಹಾಗೂ ತಾಲ್ಲೂಕು ಕೇಂದ್ರಗಳಿಗೆ ಪ್ರತಿದಿನ ತಿರುಗಿದರು ಕೆಲವೊಮ್ಮೆ ಅಧಿಕಾರಿಗಳು ಸಂಪರ್ಕಕ್ಕೆ ಸಿಗದೇ ತಮ್ಮ ಸಮಸ್ಯೆಗಳನ್ನು ಅವರಲ್ಲಿ ವಿವರಿಸಲಾಗದೇ ಸಮಸ್ಯೆಗಳು ಬಗೆಹರಿಸಿಕೊಳ್ಳಲು ಕಷ್ಟಕರವಾಗುತ್ತದೆ ಎಂಬ ಉದ್ದೇಶದಿಂದ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಜನ ಸಂಪರ್ಕ ಸಭೆಯನ್ನು ಆಯೋಜಿಸಿ ಅಧಿಕಾರಿಗಳೆ ಸ್ವತಹ ಜನ ಸಾಮಾನ್ಯರ ಮನೆ ಬಾಗಿಲಿಗೆ ಬಂದು ಅವರ ಸಮಸ್ಯೆಗಳನ್ನು ಆಲಿಸಿ ಪರಿಹರಿಸಲು ಕಾರ್ಯಕ್ರಮ ಉತ್ತಮ ವೇಧಿಕೆಯಾಗಿದೆ ಎಂದರು.
ಈ ಜನ ಸಂಪರ್ಕ ಕಾರ್ಯಕ್ರಮದಲ್ಲಿ ತಾಲ್ಲೂಕು ಮಟ್ಟದ ಎಲ್ಲಾ ಅಧಿಕಾರಿಗಳು ಭಾಗವಹಿಸಿದ್ದು ಸಾರ್ವಜನಿಕರು ಯಾವುದೇ ಇಲಾಖೆಗೆ ಸಂಬಂಧಿಸಿದ ಸಮಸ್ಯೆಗಳಿದ್ದರು ಅವುಗಳನ್ನು ಬಿತ್ತರಿಸಿ ಪರಿಹಾರ ಕಂಡುಕೊಳ್ಳಬಹುದಾಗಿದೆ. ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಬಗೆಹರಿಯಬಹುದಾದ ಎಲ್ಲಾ ಸಮಸ್ಯೆಗಳಿಗೆ ಸ್ಥಳದಲ್ಲೆ ಸೂಕ್ತ ಪರಿಹಾರ ನೀಡಿ ಬಗೆಹರಿಸಲಾಗುವುದು. ಅಧಿಕಾರಿಗಳು ಒಮ್ಮೆ ಸಾರ್ವಜನಿಕರು ಸಮಸ್ಯೆಗಳನ್ನು ಹೊತ್ತು ತಂದರೆ ಶೀಘ್ರವಾಗಿ ಪರಿಹಾರ ಕ್ರಮ ಕೈಗೊಂಡು ಸಮಸ್ಯೆಗಳ ಅಹವಾಲುಗಳು ಪುನರಾವರ್ತಿ ಆಗದಂತೆ ಕ್ರಮ ವಹಿಸಬೇಕು ಎಂದರು.
ಸರ್ಕಾರವು ರಾಜ್ಯದ ಜನತೆಯ ಹಿತದೃಷ್ಠಿಯಿಂದ ಹಸಿವು, ಬಡತನ ನಿರುದ್ಯೋಗ ಸಮಸ್ಯೆಯನ್ನು ಹೋಗಲಾಡಿಸಿ ಮಹಿಳೆಯರನ್ನು ಸಬಲೀಕರಣಗೊಳಿಸಿ, ಎಲ್ಲಾ ಬಡ ಹಾಗೂ ಹಿಂದುಳಿದ ವರ್ಗಗಳು ಉತ್ತಮ ಜೀವನ ನಿರ್ವಹಿಸಬೇಕು ಎಂಬ ಉದ್ದೇಶದಿಂದ ಅನ್ನಭಾಗ್ಯ, ಗೃಹಲಕ್ಷ್ಮಿ, ಗೃಹಜ್ಯೋತಿ, ಶಕ್ತಿ ಯೋಜನೆ ಹಾಗೂ ಯುವ ನಿಧಿಯಂತಹ ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದು ಜನರ ಏಳಿಗೆಗೆ ಶ್ರಮಿಸುತ್ತಿದೆ.
ಈ ಯೋಜನೆಗಳನ್ನು ಜನರಿಗೆ ಸಮರ್ಪಕವಾಗಿ ತಲುಪಿಸುವ ಕಾರ್ಯವನ್ನು ಅಧಿಕಾರಿಗಳು ಕ್ರಮ ಬದ್ಧವಾಗಿ ನಿರ್ವಹಿಸಬೇಕು. ಪ್ರತಿ ಗ್ರಾಮದಲ್ಲಿ ರಸ್ತೆ, ಕುಡಿಯುವ ನೀರು, ವಿದ್ಯುತ್ ಹಾಗೂ ಸ್ವಚ್ಚತೆ ಸೇರಿದಂತೆ ವಿವಿಧ ಮೂಲ ಭೂತ ಸೌಕರ್ಯಗಳನ್ನು ವ್ಯವಸ್ಥಿತವಾಗಿ ಪೂರೈಸಬೇಕು ಎಂದ ಅವರು ಅಧಿಕಾರಿಗಳು ತಮ್ಮ ಕಚೇರಿಗೆ ಸಮಸ್ಯೆಗಳನ್ನು ಹೊತ್ತು ತರುವ ಸಾರ್ವಜನಿಕರಿಗೆ ಸೂಕ್ತ ರೀತಿಯಲ್ಲಿ ಸ್ಪಂಧಿಸಬೇಕು ಎಂದರು.
ಸರ್ಕಾರವು ವಿವಿಧ ಕಾರ್ಯಕ್ರಮಗಳನ್ನು ಯೋಜನೆ ಮೂಲಕ ನೀಡಿ ಜನರ ಏಳಿಗೆಗೆ ಶ್ರಮಿಸುವುದರೊಂದಿಗೆ ರಾಜ್ಯದ ಸಾರ್ವತೋಮುಖ ಅಭಿವೃದ್ಧಿಗೆ ಯೋಜನೆಗಳನ್ನು ರೂಪಿಸಿದೆ ಕ್ಷೇತ್ರದ ಅಭಿವೃದ್ಧಿ ಕಾರ್ಯಗಳಿಗಾಗಿ ೨೫ ಕೋಟಿ ರೂಗಳ ವಿಶೇಷ ಅನುದಾನವನ್ನು ನೀಡಲಾಗಿದೆ ಈ ಅನುದಾನದಲ್ಲಿ ಹಲವಾರು ಕಾಮಗಾರಿಗಳನ್ನು ಕೈಗೊಂಡು ಅಭಿವೃದ್ಧಿ ಕಾರ್ಯಗಳನ್ನು ಗುಣಮಟ್ಟದಿಂದ ನಿರ್ವಹಿಸಲಾಗುತ್ತಿದೆ ಸದ್ಯ ಲಕ್ಕಮ್ಮನಹಳ್ಳಿ ಹಾಗೂ ಬಿಳೇಕಲ್ಲಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಸ್ತೆ, ಸಮುದಾಯ ಭವನ, ದೇವಸ್ತಾನ, ಸೇರಿದಂತೆ ಒಟ್ಟು ೨ ಕೋಟಿ ೨೫ ಲಕ್ಷ ರೂಗಳ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ ಎಂದ ಅವರು ಕಾಮಗಾರಿಗಳನ್ನು ಶೀಘ್ರವಾಗಿ ಪೂರ್ಣಗೊಳಿಸಿ ಸಾರ್ವಜನಿಕರಿಗೆ ಲೋಕಾರ್ಪಣೆ ಮಾಡಲಾಗುವುದು ಎಂದರು
ಕುನ್ನಾಳು ಗ್ರಾಮದಲ್ಲಿ ವಿದ್ಯುತ್ ತಂತಿ ಕೈಗೆ ಎಟುಕುವ ರೀತಿಯಲ್ಲಿ ಜೋತು ಬಿದ್ದಿವೆ ಇದರಿಂದ ಸಾರ್ವಜನಿಕರಿಗೆ ತೊಂದರೆ ಉಂಟಾಗುತ್ತಿದೆ ಹಾಗೂ ಗ್ರಾಮದಲ್ಲಿ ವಿದ್ಯುತ್ ಸಮಸ್ಯೆ ಇದೆ ಎಂದು ಗ್ರಾಮಸ್ಥರು ಆರೋಪಿಸಿದರು ಶಾಸಕ ತಮ್ಮಯ್ಯ ಮೆಸ್ಕಾಂ ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡು ಕೆಲಸ ಮಾಡಿ ಇಲ್ಲ ಗಂಟು ಮೂಟೆ ಕಟ್ಟಿ ಎಂದು ಅಧಿಕಾರಿಗಳಿಗೆ ಎಚ್ಚರಿಸಿದರು.
ಈ ಸಂದರ್ಭದಲ್ಲಿ ಬಿಳೇಕಲ್ಲಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ, ಬಾನು ಪ್ರಕಾಶ್ ಲಕ್ಕಮ್ಮನಹಳ್ಳಿ ಗ್ರಾ.ಪಂ ಅಧ್ಯಕ್ಷೇ ಶಶಿಕಲಾ, ಉಪಾಧ್ಯಕ್ಷ ಲಕ್ಷಣ್ ಗೌಡ, ಚಂದ್ರಶೇಕರ್, ಸಣ್ಣ ಕಾಟೇಗೌಡ ಹರೀಶ್, ಯಶೋಧ, ಲತಾ, ರತ್ನಮ್ಮ, ಜಗದೀಶ್, ನಾಗರತ್ನ, ಗೋಪಿಕೃಷ್ಣ, ಲೋಲಾಕ್ಷಿ, ದೌರ್ಜನ್ಯ ಸಮಿತಿ ಸದಸ್ಯ ರಮೇಶ್ ಯು.ಸಿ., ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ವಿಜಯಕುಮಾರ್, ತಹಶೀಲ್ದಾರ್ ಸುಮಂತ್, ಲಕ್ಕಮ್ಮನಹಳ್ಳಿ ಗ್ರಾ.ಪಂ ಪಿಡಿಒ ಲೀಲಾ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
Public relations meeting organized at Lakkammanahalli Gram Panchayat premises